ಅಮೂಲ್ಯ ರತ್ನಗಳು

ಅಮೂಲ್ಯ ರತ್ನಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಎಲ್ ಪಿ ಕುಲಕರ್ಣಿ
ಪ್ರಕಾಶಕರು
ಅಮೂಲ್ಯ ಪುಸ್ತಕ, ವಿಜಯನಗರ, ಬೆಂಗಳೂರು - ೫೬೦೦೪೦
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೩

ವಿಶ್ವ ಶ್ರೇಷ್ಟ ಸಾಧಕರ ಸಾಧನೆಗಳ ಬಗ್ಗೆ ಸವಿವರವಾಗಿ ತಿಳಿಸುವ ಪುಸ್ತಕವೇ ‘ಅಮೂಲ್ಯ ರತ್ನಗಳು' ಈ ಪುಸ್ತಕದಲ್ಲಿ ಲೇಖಕರಾದ ಎಲ್ ಪಿ ಕುಲಕರ್ಣಿ ಇವರು ವಿಶ್ವಕಂಡ ಅತ್ಯದ್ಭುತ ಸಾಧಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಖ್ಯಾತ ವೈದ್ಯರೂ, ಬರಹಗಾರರೂ ಆಗಿರುವ ಡಾ. ಕರಮವೀರಪ್ರಭು ಕ್ಯಾಲಕೊಂಡ ಇವರು. ಇವರು ತಮ್ಮ ಬೆನ್ನುಡಿಯಲ್ಲಿ “ ಅಮೂಲ್ಯ ರತ್ನಗಳು ಪುಸ್ತಕದಲ್ಲಿ ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿ ಬದುಕಿದವರ ಜೀವನ ಚರಿತ್ರೆಗಳಿವೆ. ಮನುಕುಲದ ಉದ್ಧಾರಕ್ಕಾಗಿ ಹಗಲಿರುಳು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಸಂಶೋಧನೆಯಲ್ಲಿ ಕಾಲಕಳೆದ ವಿಜ್ಞಾನಿಗಳ ಬದುಕು ಬರಹಗಳಿವೆ. ನೊಬೆಲ್ ಪ್ರಶಸ್ತಿ ವಂಚಿತ ಭಾರತದ ವಿಜ್ಞಾನಿ ಜಗದೀಶ್ ಚಂದ್ರ ಬೋಸ್, ಗಣಿತಜ್ಞ ಶ್ರೀನಿವಾಸ ರಾಮಾನುಜನ್, ಆಧುನಿಕ ದಾನಶೂರ ಕರ್ಣ ಖ್ಯಾತಿಗೆ ಪಾತ್ರರಾದ ಅಜೀಂ ಪ್ರೇಮ್ ಜಿ, ನಡೆದಾಡುವ ಕಂಪ್ಯೂಟರ್ ಖ್ಯಾತಿಯ ಶಕುಂತಲಾ ದೇವಿಯ ದಾಖಲೆ ಮುರಿದ ೨೧ರ ಪೋರ, ಕಾರ್ಗಿಲ್ ಕಲಿ ಕ್ಯಾಪ್ಟನ್ ನವೀನ್ ನಾಗಪ್ಪ... ಇತ್ಯಾದಿ ಅಮೂಲ್ಯ ರತ್ನಗಳ ಪರಿಚಯ ಈ ಪುಸ್ತಕದಲ್ಲಿದೆ.

ಅವರ ಜೀವನ ಚರಿತ್ರೆ ವ್ಯಕ್ತಿಯ ವ್ತಕ್ತಿತ್ವ ವಿಕಸನಕ್ಕೆ ಮೈಲುಗಲ್ಲುಗಳಾಗಿ ನಿಲ್ಲುವವು. ಬಡತನದ ಬೇಗುದಿಯಲ್ಲಿ ಬೆಂದು ಬಳಲಿ, ಧೈರ್ಯದಿಂದ ಎದುರಿಸಿ, ಅವಿರತ ಪರಿಶ್ರಮಪಟ್ಟು ತಲೆ ಎತ್ತಿ ನಿಂತು, ಹಿಗ್ಗದೆ-ಕುಗ್ಗದೆ ಬದುಕಿ, ಮಾರ್ಗದರ್ಶಕರಾಗಿ, ಬದುಕು ರೂಪಿಸುವಲ್ಲಿ ‘ಮಾಡೆಲ್’ ಗಳಾಗಿ ನಿಂತು, ಗೈಡ್ ಗಳಂತೆ ‘ಗೈಡ್' ಮಾಡುವುದರಿಂದಾಗಿ ಮಕ್ಕಳ ಬದುಕಿನ ಚಿತ್ರ ಬದಲಿಸಲು, ಅವರಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಇಲ್ಲಿನ ರತ್ನಗಳು ರೂವಾರಿಗಳಾಗುತ್ತಾರೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಪುಸ್ತಕದ ಲೇಖಕರಾದ ಎಲ್ ಪಿ ಕುಲಕರ್ಣಿ ಇವರು ತಮ್ಮ ಮಾತಿನಲ್ಲಿ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ...

“ಧೈರ್ಯ, ಕಷ್ಟ, ಸಹಿಷ್ಣುತೆ, ತಾಳ್ಮೆಗಳೆಂಬ ಅಮೂಲ್ಯ ಗುಣಗಳು ನಮ್ಮಲ್ಲಿದ್ದಾಗ ಮಾತ್ರ ನಾವು ಕಂಡ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬಹುದು' - ವಾಲ್ಟ್ ಡಿಸ್ನಿ

ಮತ್ತೊಂದೆಡೆ ಒಬ್ಬ ಸಾಧಕ ಹೀಗೆ ಹೇಳುತ್ತಾನೆ- 'ಆ ಮೊದಲ ಹೆಜ್ಜೆ ಇಡದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ, ಆ ಹೆಜ್ಜೆಯನ್ನು ಈಗಲೇ, ಈ ಕ್ಷಣದಲ್ಲೇ ಇಡಿ.'

ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದೆ. ರಸ್ತೆಯ ಪಕ್ಕದಲ್ಲಿ ಸುಮಾರು ಹನ್ನೆರಡು ವರ್ಷ ವಯಸ್ಸಿನ ಒಬ್ಬ ಹುಡುಗ, ಹೆಗಲ ಮೇಲೆ ದೊಡ್ಡದೊಂದು ಚೀಲವನ್ನು ಹಾಕಿಕೊಂಡು ಎಡಗೈಯಲ್ಲಿ ತನ್ನ ಒಂಬತ್ತು ವರ್ಷದ ತಂಗಿಯನ್ನು ಹಿಡಿದುಕೊಂಡು ಅಲ್ಲಿ-ಇಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ, ಯೂಜ್‌ ಆ್ಯಂಡ್ ಥ್ರೋ ಚಹಾ ಕಪ್‌ಗಳು ಮುಂತಾದವನ್ನು ಆರಿಸುತ್ತಾ, ಅವುಗಳನ್ನು ಹೆಗಲ ಮೇಲಿನ ಚೀಲದಲ್ಲಿ ಇಳಿಸುತ್ತಿದ್ದ. ಅದೇಕೋ ಅವನ ಕಡೆ ನನ್ನ ದೃಷ್ಟಿ ಹರಿಯಿತು. ಇಷ್ಟು ಚಿಕ್ಕ ವಯಸ್ಸಲ್ಲಿ ಶಾಲೆಗೆ ಹೊಗೋದು ಬಿಟ್ಟು ತಂಗಿಯನ್ನೂ ಕರೆದುಕೊಂಡು ಇದೇನು ಕೆಲಸ ಮಾಡುತ್ತಿದ್ದಿ? ಶಾಲೆ ಬಿಟ್ಟಿದ್ದೀಯಾ? ನೀನೇಕೆ ದುಡಿಯುತ್ತಿದ್ದಿ? ಮನೆಯಲ್ಲಿ ತಂದೆ-ತಾಯಿ ಇಲ್ವ?' ಎಂದು ಕೇಳಿದೆ. ಅದಕ್ಕವನು, 'ಮನೆಯಲ್ಲಿ ತಂದೆ-ತಾಯಿ ಇದ್ದಾರೆ ಸರ್.

ತಂದೆಗೆ ಲಿವರ್ ಕ್ಯಾನ್ಸರ್; ತಾಯಿಗೆ ಆ್ಯಕ್ಸಿಡೆಂಟಾಗಿ ಕಾಲು ಮುರಿದಿದೆ. ಇಬ್ಬರಿಗೂ ಅಡ್ಡಾಡೋಕೆ ಆಗಲ್ಲ. ಹೀಗಾಗಿ ವಾರದಲ್ಲಿ ಮೂರ್ನಾಲ್ಕು ದಿನ ಹೀಗೆ ದುಡಕೊಂಡು ಮನೆಗೆ ಹಣ ಒಯ್ತಿನಿ. ಸರ್, ಶಾಲೆ ಬಿಟ್ಟಿದ್ದಿಯಾ? ಅಂದ್ರಲಾ, ಇಲ್ಲಾ ಸರ್, ಸರಕಾರಿ ಶಾಲೆಗೆ ಹೋಗ್ತಿನಿ' ಎಂದು ತನ್ನ ಕಥೆ ಹೇಳಿದ. ನನಗೆ ಅಯ್ಯೋ ಪಾಪ ಎನಿಸಿ ನೂರು ರೂಪಾಯಿ ಕೊಡೋಕೆ ಹೋದೆ. ಆತ ಬೇಡ ಅಂದ. 'ನೀನು ಬರಿಗಾಲಲ್ಲಿ ನಡಿತಿದ್ದೀಯಾ ಏನಾದರೂ ಪ್ಲಾಸ್ಟಿಕ್, ಗಾಜಿನ ಚೂರುಗಳು ಚುಚ್ಚಿದರೆ ತೊಂದರೆ. ಈ ಹಣದಲ್ಲಿ ಒಂದು ಜೊತೆ ಚಪ್ಪಲಿ ತಗೋ' ಎಂದು ಒತ್ತಾಯ ಮಾಡಿ ಹಣ ಕೊಟ್ಟೆ. ಇದಾದ ಎರಡು ದಿನ ಬಿಟ್ಟು ಮತ್ತದೇ ಬಸ್‌ ಸ್ಟಾಪಿನ ಹತ್ತಿರ ನಿಂತಿದ್ದೆ. ಈ ಹುಡುಗ ನಾಲ್ಕು ಇಪ್ಪತ್ತು ರೂ. ನೋಟುಗಳು ಹಾಗೂ ಎರಡು ಹತ್ತು ರೂ. ನೋಟುಗಳನ್ನು ಹಿಡಿದುಕೊಂಡು ಬಂದು ನನ್ನ ಕೈಗಿತ್ತ. 'ಯಾಕೋ?' ಎಂದು ಕೇಳಿದೆ. 'ಬೇಡಿ ಸರ್, ನಾನು ಯಾರಿಂದಲೂ ಸುಮ್ಮನೆ ಹಣ ಪಡೆಯುವುದಿಲ್ಲ.' ಅಂದ, 'ಹಾಗಾದರೆ, ಈ ಹಣ ಎಲ್ಲಿಂದ ತಂದಿರುವೆ?' ಎಂದು ಕೇಳಿದೆ. 'ಎರಡು ದಿನ ಶಾಲೆ ಬಿಟ್ಟು ಸಾಕಷ್ಟು ಕಡೆ ಅಲೆದಾಡಿ ಪ್ಲಾಸ್ಟಿಕ್, ರದ್ದಿ ಆರಿಸಿ ತಂದೆ' ಅಂದ. ಇಂತಹ ಸ್ವಾಭಿಮಾನ, ಪ್ರಾಮಾಣಿಕತೆಯಿಂದ ಕೂಡಿದ ಮಕ್ಕಳೇ ನಾಳೆ ದೊಡ್ಡ ಸಾಧಕರಾಗುವುದು.

ಈ ಘಟನೆಯನ್ನೇಕೆ ಹೇಳಿದೆನೆಂದರೆ; ದಿನ ಬೆಳಗಾದರೆ ಇಂತಹ ಸಾಕಷ್ಟು ಮಕ್ಕಳು ನಮ್ಮ ಕಣ್ಣ ಮುಂದೆ ಬರುತ್ತಾರೆ. ಮುಂಜಾನೆ ದಿನಪತ್ರಿಕೆ ಹಂಚುವ, ಹಾಲು ಮಾರುವ, ಚಪ್ಪಲಿ-ಬೂಟ್ ಪಾಲಿಶ್ ಮಾಡುವ... ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಿ ತಮ್ಮ ಕುಟುಂಬ ನಿರ್ವಹಣೆಗೆ ಹಣ ಸಂಪಾದಿಸುತ್ತಾರೆ. ಮನುಷ್ಯನಲ್ಲಿ ಪರಿಶ್ರಮ, ಕಷ್ಟಪಟ್ಟು ದುಡಿಯುವ ಗುಣಗಳಿದ್ದರೆ ಆತ ಸಾಧಕನಾಗುತ್ತಾನೆ. ಅದಕ್ಕೆಂದೇ ನಮ್ಮ ಹಿರಿಯರು 'ನೋ ಪೇನ್ ನೋ ಗೇನ್' ಎಂದು ಹೇಳಿರುವುದು.

ಈ ಪುಸ್ತಕದಲ್ಲಿ ಅಂತಹುದೇ ಕೆಲವು ಸಾಧಕರ ಕುರಿತು ಹೇಳಲು ಹೊರಟಿರುವೆ. ಇಲ್ಲಿ ವಿಶ್ವಶ್ರೇಷ್ಠ ಗುರು ರಾಮಕೃಷ್ಣ ಪರಮಹಂಸ, ಸರಳತೆಯ ಸಾಕಾರಮೂರ್ತಿ ನಮ್ಮ ಬಾಪೂಜಿ, ಟ್ಯಾಗೋರರನ್ನು ಮರೆಯಲು ಸಾಧ್ಯವೇ?.... ಹೀಗೆ ಕೆಲವು ದಾರ್ಶನಿಕರು, ಸಮಾಜ ಸುಧಾರಕರ ಲೇಖನಗಳಿದ್ದರೆ, ವಿಜ್ಞಾನದ ಅದ್ಭುತ ಪ್ರತಿಭೆ, ವಿಜ್ಞಾನಿ ಮೇಡಮ್ ಕ್ಯೂರಿ, ಭಾರತದ ಬಾಹ್ಯಾಕಾಶ ಯೋಜನೆಗಳ ಜನಕ ವಿಕ್ರಂ ಸಾರಾಭಾಯ್ ಮುಂತಾದ ವಿಜ್ಞಾನಿಗಳು; ಗಣಿತದ ಅನಂತತೆ ಕಂಡಿದ್ದ ಶ್ರೀನಿವಾಸ ರಾಮಾನುಜನ್, ಸಸ್ಯ ರಾಮಾನುಜನ್ ಪ್ರಶಸ್ತಿ ಪುರಸ್ಕೃತ ಹಾಡಮ್ ಹಾರ್ಪರನ್ನೇ ಒಳಗೊಂಡ ಗಣಿತಜ್ಷರಿದ್ದಾರೆ. ನನ್ನ ಧ್ವನಿಯೇ ನನ್ನ ಅಸ್ಮಿತೆ ಎಂಬುದಕ್ಕೆ ಅನ್ವರ್ಥ ಲತಾ, ಬಾಲಿವುಡ್‌ನ 'ಬಿಗ್ ಬಿ' ಗೆ ಪ್ರಶಸ್ತಿಯ ಗರಿ ಹಾಗೆಯೇ ಕಾರ್ಗಿಲ್ ವೀರಯೋಧ ಕ್ಯಾಪ್ಟನ್ ನವೀನ್ ನಾಗಪ್ಪ, 'ಜೀವನ ದೊಡ್ಡದಾಗಿರಬೇಕೆ ಹೊರತು ದೀರ್ಘವಾಗಿರಬಾರದು' ಎಂದು ಹೇಳಿದ ಯೋಧ ಕಪಿಲ್ ಖುಂಡು ಅವರನ್ನೊಳಗೊಂಡ ಯೋಧರ ಸಾಹಸಗಾಥೆಗಳು ಹೀಗೆ ಹಿಂದಿನ ತಲೆಮಾರಿನ ಕೆಲವು ಸಾಧಕರನ್ನು ಒಳಗೊಂಡಂತೆ ಈಗಿರುವ ಸಾಧಕರ ಜೀವನವನ್ನು ಇಂದಿನ ವಿದ್ಯಾರ್ಥಿ ಸಮೂಹ, ಯುವಪೀಳಿಗೆಗೆ ತಿಳಿಸುವ ಒಂದು ಚಿಕ್ಕ ಪ್ರಯತ್ನ ಈ ಅಮೂಲ್ಯ ರತ್ನಗಳು ಪುಸ್ತಕದ್ದು.

ಇವೆಲ್ಲಾ ಲೇಖನಗಳು ಸಾಂದರ್ಭಿಕವಾಗಿ ವಿಶ್ವವಾಣಿ, ಹೊಸ ದಿಗಂತ, ಉದಯಕಾಲ, ಓ ಮನಸೆ, ವಿಕ್ರಮ.. ಮುಂತಾದ ನಿಯತಕಾಲಿಕೆಗಳಲ್ಲಿ ಪ್ರಕಟವಾದಂತಹವು, ಬರೆಯಲು ಅವಕಾಶಮಾಡಿಕೊಟ್ಟ ಈ ಎಲ್ಲಾ ಪತ್ರಿಕಾ ಸಂಪಾದಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿರುವೆ. ರವೀಂದ್ರನಾಥ ಟ್ಯಾಗೋರ್‌ರ ಜನ್ಮದಿನದ ನಿಮಿತ್ತವಾಗಿ ಲೇಖನ ಬರೆಯಲು ಮಾಹಿತಿ ಕಲೆಹಾಕುತ್ತಿರುವಾಗ 'ಸಂಪದ ನೆಟ್‌’ ನಲ್ಲಿ ಎಚ್. ಎ. ಶಾಸ್ತಿಯವರು ಬರೆದ 'ಮಾತೃಭೂಮಿಯ ಬಗ್ಗೆ ಅರಿವಿಲ್ಲದ ವಿದ್ಯಾರ್ಥಿ ಪಡೆ!' ಎಂಬ ಲೇಖನದ ಪ್ರಾರಂಭಿಕ ಪ್ಯಾರಾಗಳು ತುಂಬಾನೆ ಇಷ್ಟವಾದವು, ಅವುಗಳನ್ನು ಲೇಖನದಲ್ಲಿ ಬಳಸಿಕೊಂಡಿರುವೆ, ಈ ಸಂದರ್ಭದಲ್ಲಿ ಎಚ್‌. ಎ. ಶಾಸ್ತ್ರಿಯವರಿಗೂ, ಇನ್ನು ಕೆಲವು ಲೇಖನಗಳಿಗೆ ಮಾಹಿತಿ ಒದಗಿಸಿದ ಕೃತಿಗಳಾದ ಅಮೃತ ಜೋಗಿಯವರ 'ಶತಮಾನದ ಸಾಧಕರು ನಮ್ಮೊಡನಿರುವವರು', ಅರವಿಂದ ಗುಪ್ತರವರ 'ಉಜ್ವಲ ಕಿಡಿಗಳು' ಹಾಗೂ ಇನ್ನಷ್ಟು ಮಾಹಿತಿ, ಚಿತ್ರಗಳನ್ನು ಒದಗಿಸಿದ ಕೆಲವು ಅಂತರ್ಜಾಲ ತಾಣಗಳಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತಿರುವೆ.”