ಅಮೃತವರ್ಷಿಣಿ , ದುರ್ಯೋಧನ , ಕರ್ಣ , ಭಾನುಮತಿ ಮತ್ತು ಬಿದ್ದು ಹೋದ ಮುತ್ತುಗಳು

ಅಮೃತವರ್ಷಿಣಿ , ದುರ್ಯೋಧನ , ಕರ್ಣ , ಭಾನುಮತಿ ಮತ್ತು ಬಿದ್ದು ಹೋದ ಮುತ್ತುಗಳು

ಬರಹ

(ಸ್ವಲ್ಪ ದೊಡ್ಡದೇ ಆದ ಬರಹ ಇದು.  ನಿಮಗೆ ಓದಲು ಹೆಚ್ಚು ಪುರುಸೊತ್ತು ಇಲ್ಲದಿದ್ದರೆ ಕೊನೆಗೆ ಸಾರಾಂಶವನ್ನು ಕೊಟ್ಟಿದ್ದೇನೆ , ಅದನ್ನು  ತಪ್ಪದೇ ಓದಿ)

ನೀವು ಅಮೃತವರ್ಷಿಣಿ ಚಲನಚಿತ್ರ ನೋಡಿರಬಹುದು . ಅಲ್ಲಿ ಈ ಪ್ರಸಂಗದ ಉಲ್ಲೇಖ ಇದೆ. ಮೊನ್ನೆ ನಾನು ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ಸೇಡಿಯಾಪು ಕೃಷ್ಣಭಟ್ಟರ ಲೇಖನಗಳ ಸಂಗ್ರಹ 'ವಿಚಾರ ಪ್ರಪಂಚ' ಕೊಂಡುಕೊಂಡೆ.

ಅದರಲ್ಲಿ ಭಾನುಮತಿಯ ನೆತ್ತ ಎಂಬ ಲೇಖನದಲ್ಲಿ ಈ ಬಗ್ಗೆ ಇತ್ತು. ಪಂಪಭಾರತದಲ್ಲಿ ಈ ಕುರಿತಾದ ಪದ್ಯ ಭಾಗವಿದೆ . ಅದನ್ನು ಅನೇಕ ವಿದ್ವಜ್ಜನರು ೧೭-೧೮ ಬಗೆಯಾಗಿ ಅರ್ಥವಿವರಣ ಮಾಡಿದ್ದಾರೆ. ಅವೆಲ್ಲವನ್ನು ಗಮನಿಸಿ ಈ ಪದ್ಯವನ್ನು ಸೇಡಿಯಾಪುರವರು ಸೂಕ್ಷ್ಮವಾಗಿ ಪರೀಕ್ಷಿಸಿ ಸರಿಯಾದ ಅರ್ಥವನ್ನು ತಿಳಿಸಿದ್ದಾರೆ.

ಈ ಪ್ರಸಂಗದ ಹಿನ್ನೆಲೆ ಹೀಗಿದೆ. ಮಹಾಭಾರತ ಯುದ್ಧಕ್ಕೆ ಮೊದಲು ಕರ್ಣನನ್ನು ಪಾಂಡವರ ಕಡೆಗೆ ಸೇರಿಕೊಳ್ಳುವಂತೆ ಶ್ರೀಕೃಷ್ಣ ಮನ ಒಲಿಸಹೋದಾಗ ಕರ್ಣನು ಹೇಳುವ ಮಾತಿದು .

ಪದ್ಯ ಹೀಗಿದೆ . ( ಪದವಿಭಾಗದ ನಂತರ) ನೆತ್ತಮನಾಡಿ ಭಾನುಮತಿ ಸೋತೊಡೆ ಸೋಲಮನೀವುದೆಂದು ಕಾಡುತ್ತಿರೆ ಲಂಬಣಂ ಪಱಿಯೆ ಮುತ್ತಿನ ಕೇಡನೆ ನೋಡಿ ನೋಡಿ ಬಳ್ಕುತ್ತಿರೆ ಏವಮಿಲ್ಲದಿವನಾವುದೊ ತಪ್ಪದೆ ಪೇೞಿಮೆಂಬ ಭೂಪೋತ್ತಮನಂ ಬಿಸುಟ್ಟು ಇರದೆ ನಿಮ್ಮೊಳೆ ಪೊಕ್ಕೊಡೆ ಬೇಡನಲ್ಲನೇ ?

ಈ ಪದವಿಭಾಗವನ್ನು ಎಲ್ಲರೂ ಒಪ್ಪುತ್ತಾರೆ ಆದರೂ ಬೇರೆ ಬೇರೆ ಬೇರೆ ವಿಧವಾಗಿ ಅರ್ಥ ಮಾಡಿಕೊಂದಿದ್ದರೆ . ನೆತ್ತ = ಲೆತ್ತ= ಪಗಡೆ ಲಂಬಣ = ಹಾರ ಈ ಮಾತನ್ನು ಹೇಳುತ್ತಿರುವನು ಕರ್ಣ . ಅಲ್ಲಿ ಕರ್ಣ , ದುರ್ಯೋಧನ , ಭಾನುಮತಿ ಇದ್ದರು . ಇದು ಸ್ಪಷ್ಟ . ಭಾನುಮತಿ ಸೋತೊಡೆ - ಯಾರೊಂದಿಗೆ ಆಟವಾಡಿ ಸೋತಳು ? ಸ್ಪಷ್ಟವಿಲ್ಲ . ಸೋಲಮನಂ ಈವುದು - ಪಣಕ್ಕಿಟ್ಟದ್ದನ್ನು ಕೊಡು ಎಂದು ಕಾಡುತ್ತಿರಲು - ಏನು ಪಣದ ವಸ್ತು ? ಸ್ಪಷ್ಟವಿಲ್ಲ .ಯಾರು ಕಾಡಿದವರು ? ಗೆದ್ದವನು ತಾನೇ? ಅದು ಯಾರು ? ಸೋತ ಭಾನುಮತಿ ಪಣವನ್ನೊಪ್ಪಿಸದಿರಲು ಕಾರಣವೇನು? ( ಪಣದ ವಸ್ತು ಮುತ್ತಿನ ಹಾರ . ಸ್ತ್ರೀ ಸಹಜ ಲೋಭದಿಂದ ಅವಳು ಒಪ್ಪಿಸಲಿಲ್ಲ ಎಂದು ಅನೇಕರು ಅರ್ಥ ಮಾಡಿಕೊಂಡಿದ್ದಾರೆ) ಕ್ರೀಡಾನಿಯಮವನ್ನು ಏಕೆ ಅವಳು ಉಲ್ಲಂಘಿಸಿಯಾಳು ? ಆ ನೆತ್ತದಾಟಕ್ಕೆ ಪಣವಾಗಿದ್ದುದು 'ಅಲ್ಲಿ' ಅವಳು ಕೊಡಲಾರದ ವಸ್ತುವಾಗಿತ್ತು. ಏವಮಿಲ್ಲದೆ ಇವನು ಆವುದೋ ತಪ್ಪದೆ ಪೇಳಿಂ ಈ ಸಾಲು ಅನೇಕರನ್ನು ದಾರಿತಪ್ಪಿಸಿದೆ .

ಇದರ ಸರಿಯಾದ ಅರ್ಥ - "ತುಚ್ಛವೆಂಬ ಭಾವನೆ ಇಲ್ಲದೆ ಇವುಗಳನ್ನು ( ಈ ಮುತ್ತುಗಳನ್ನು) ತಪ್ಪದೆ ( ಬಿಡದೆ/ ಕಳೆದುಕೊಳ್ಳದೆ) ಆಯ್ದುಕೊಳ್ಳುವದೋ ? ಅಂತ" ಇದು ದುರ್ಯೋಧನನ ಉದ್ಗಾರ . ಇವನ್ನಾದರೂ ಬಿಡದೆ ಆಯ್ದುಕೊಳ್ಳುತ್ತೇನೆ ಎಂದರೆ ಪಣವಾಗಿದ್ದುದು ಇವಕ್ಕಿಂತ ಎಷ್ಟೋ ಮಿಗಿಲಾದ ಮುತ್ತುಗಳು ಎಂಬರ್ಥ . ಹಾಗಾದರೆ ಪಣವಾಗಿದ್ದ ಆ ಶ್ರೇಷ್ಠವಾದ ಮುತ್ತುಗಳು ಯಾವುವು ? ಅವು ಅಮೂಲ್ಯವಾದ ಮುತ್ತುಗಳು! ( ಚುಂಬನಗಳು) . ( ಆ ಕಾಲಕ್ಕೂ ಮುತ್ತು ಶಬ್ದಕ್ಕೆ ಎರಡೂ ಅರ್ಥಗಳು ಇದ್ದವು. ) ಭಾನುಮತಿ ಸೋತಿದ್ದಾಳೆ . ಪಣದಂತೆ ಚುಂಬನಗಳನ್ನು ಕೊಡಲು ಅಲ್ಲಿ ಇನ್ನೊಬ್ಬ ವ್ಯಕ್ತಿ ಇರುವುದರಿಂದ ಅವಳಿಗೆ ಸಂಕೋಚ . ಗೆದ್ದವನ ಒತ್ತಾಯ . ಈ ಎಳೆದಾಟ/ ಕೊಸರಾಟದಲ್ಲಿ ಹಾರವು ಹರಿದು , ಮುತ್ತುಗಳು ನೆಲದ ಮೇಲೆ ಚೆಲ್ಲಾಪಿಲ್ಲಿ. ತನಗೆ ಸಿಗಬೇಕಾಗಿದ್ದ ಮುತ್ತುಗಳಿಗೆ ಈ ಮುತ್ತುಗಳು ಬೆಲೆಯಲ್ಲಿ ಸಮವಲ್ಲದಿದ್ದರೂ ಇವೂ ಭಾನುಮತಿಯ ಮುತ್ತುಗಳೇ ಆಗಿರುವುದರಿಂದ ಇವನ್ನು ಆಯ್ದು ತನ್ನ ವಿಜಯ ಘೋಷಿಸಿಕೊಳ್ಳುವಾಸೆ ಭೂಪೋತ್ತಮ ದುರ್ಯೋಧನನಿಗೆ ! ಅಂಥ ದುರ್ಯೋಧನನನ್ನು ( ) ಬಿಟ್ಟು ಇರದೆ ( ಹಿಂದೆ ಮುಂದೆ ನೋಡದೆ ) ನಿಮ್ಮನ್ನು ಹೊಕ್ಕೊಡೆ - ನಿಮ್ಮನ್ನು ಸೇರಿದರೆ ಬೇಡನಲ್ಲನೇ ( ಈ ಕರ್ಣನು )-ಅನಾಗರಿಕ ( ಬೇಡ ಶಬ್ದವನ್ನು ಜಾತಿವಾಚಕವಾಗಿ ತೆಗೆದುಕೊಳ್ಳಬಾರದು . ಅನಾರ್ಯ ಶಬ್ದವನ್ನು ಅನಾಗರಿಕ ಎಂಬರ್ಥದಲ್ಲಿ ಸಂಸ್ಕೃತದಲ್ಲಿ ಬಳಸುವ ಹಾಗೆ ) ನಾಗುವನಲ್ಲವೇ ? ಪಣವನ್ನು ಗೆದ್ದವರಾರು ಎಂಬುದು ಈ ಪದ್ಯದಲ್ಲಿ ಹೇಳಿರುವದಿಲ್ಲವಾದ್ದರಿಂದ ಅನೇಕರು ಕರ್ಣ ಭಾನುಮತಿ ಆಟವಾಡುತ್ತಿದ್ದರು ಎಂದೆಲ್ಲ ತಪ್ಪು ಅರ್ಥ ಮಾಡಿದ್ದಾರೆ. ಪಣ ಏನೆಂದು ಇಲ್ಲಿ ಹೇಳಿಲ್ಲ . ಮುತ್ತಿನ ಹಾರವು ಹರಿದುಹೋದದ್ದನ್ನು ಹೇಳಿದೆಯೇ ಹೊರತು ಹಾರವು ಪಣವಾಗಿತ್ತೆಂದು ಹೇಳಿಯೇ ಇಲ್ಲ. ಗಂಡನ ಸೊತ್ತು ಹೆಂಡತಿಯದೂ , ಹೆಂಡತಿಯ ಸೊತ್ತು ಗಂಡನದೂ ಆಗಿರುವಾಗ ದಂಪತಿಗಳು 'ಕೊಡುವುದೇನು? ಕೊಂಬುದೇನು?' ಯಾವುದಾದರೂ ವಸ್ತುವನ್ನು ಪಣವಾಗಿಟ್ಟು ಆಡುವದೂ ಒಂದೇ ಪಣವಿಲ್ಲದೆ ಹುಸಿಯಾಟವಾಡುವದೂ ಒಂದೇ . ಅಂಥ ಆಟದಲ್ಲಿ ದ್ಯೂತಕ್ಕೆ ಉದ್ದೀಪನವೇ ಇಲ್ಲದಂತಾಗುತ್ತದೆ. ಆದ್ದರಿಂದ ದಂಪತಿಗಳ ಆ ನೆತ್ತದಲ್ಲಿ ಪಣವಾಗಿದ್ದುದು ದ್ರವ್ಯರೂಪವಾದ ಮುತ್ತು ಅಲ್ಲ , ಕ್ರಿಯಾರೂಪವಾದ 'ಮುತ್ತು'! ಅಲ್ಲಿ ಸಂಭಾವ್ಯತೆಯೂ ಹೆಚ್ಚು, ಔಚಿತ್ಯವೂ ಹೆಚ್ಚು , ಸರಸತೆಯೂ ಹೆಚ್ಚು! ಬಳ್ಕುತ್ತಿರೆ - ಇಲ್ಲಿ ಬಳ್ಕು ಎಂಬುದನ್ನು ಬಾಗು ಎಂಬರ್ಥದಲ್ಲಿ ತೆಗೆದುಕೊಳ್ಳದೆ 'ಹೆದರಿ ನಡುಗುತ್ತಿರೆ ಅಂದು ಇತರರು ಅರ್ಥೈಸಿದ್ದಾರೆ . ಈ ಮೂಲಕವಾಗಿ ಕರ್ಣನು ಹೆದರಿ ನಡುಗಿದನು , ಗಂಡ ಏನು ತಿಳಿದುಕೊಂಡನೋ ಎಂದು ಭಾನುಮತಿ ಅಂಜಿದಳು ಹೀಗೆಲ್ಲ ಪಂಡಿತರು ದಾರಿ ತಪ್ಪಿದ್ದಾರೆ! ಪಂಪನು ತನ್ನ ಕಾವ್ಯದುದ್ದಕ್ಕೂ ಚಿತ್ರಿಸಿರುವ ಕರ್ಣನ ಧೀರತೆಯಲ್ಲಿಯೂ ಉದಾತ್ತತೆಯಲ್ಲಿಯೂ ದುರ್ಯೋಧನ ಭಾನುಮತಿಯರ ಪರಸ್ಪರ ನಿಃಶಂಕಿತವಾದ ಪ್ರೇಮನಿಷ್ಠೆಯಲ್ಲಿಯೂ ಕೊರತೆ ಈ ಬಗೆಯ ಅರ್ಥವಿವರಣೆಯಿಂದ ಉಂಟಾಗುವದಲ್ಲವೇ? ರಾಜರಾಜನ ಪಟ್ಟಮಹಿಷಿಯ ಶೀಲದಲ್ಲಿ ಇಂಥ ಮುಚ್ಚುಮರೆಯ ವರ್ತನೆಯನ್ನು ಕಾಣಿಸುವದು ಉದಾತ್ತಚರಿತವಾದ ತನ್ನ ಕಾವ್ಯಕ್ಕೆ ಶೋಭೆಯೆಂದು ತಿಳಿದನೇ ಮಹಾಕವಿ ಪಂಪ? " ಅಯ್ಯೋ ಶಾಪಗ್ರಸ್ತ ಪದ್ಯರತ್ನವೇ ! ಎಂತೆಂತಹ ನಮ್ಮ ವಿದ್ವನ್ಮಣಿಗಳಿಂದ ಏನೇನೆಲ್ಲ ಹೇಳಿಸಿಬಿಟ್ಟೆ ನೀನು!" ಎಂದು ಸೇಡಿಯಾಪು ಕೃಷ್ಣಭಟ್ಟರು ಹಳಹಳಿಸಿದ್ದಾರೆ. ಈ ಖಾಸಗೀ ವಿಷಯವನ್ನು ಕರ್ಣನೇಕೆ ಕೃಷ್ಣನ ಮುಂದೆ ಹೇಳುತ್ತಿದ್ದಾನೆ? ತನ್ನೊಡನೆ ದುರ್ಯೋಧನನ ಸ್ನೇಹ ಎಂತಹುದೆಂದರೆ ಅವನ ಏಕಾಂತಸ್ಥಾನದಲ್ಲೂ ತನಗೆ ಪ್ರವೇಶವಿತ್ತು . ತನ್ನ ನಿಷ್ಠೆಯಲ್ಲಿ , ನಿಶ್ಕಲಂಕತೆಯಲ್ಲಿ ಅಷ್ಟು ವಿಶ್ವಾಸ ಅವನಿಗೆ. ಅಂಥವನನ್ನು ಹೇಗೆ ಬಿಟ್ಟು ಬರುವದು . ಅದು ಅನಾಗರಿಕತನ ಅಲ್ಲವೇ ಎಂದು ಕೇಳುತ್ತಿದ್ದಾನೆ ಕರ್ಣ. ಅವನದು ಸ್ವಗತ ಮತ್ತು ಪ್ರಕಾಶಗಳೆರಡೂ ಮೇಳೈಸಿದ ಲೌಡ್ ಥಿಂಕಿಂಗ್ ( ವ್ಯಕ್ತ ಚಿಂತನ) ದಿಂದಾಗಿ ಅಸ್ಪಷ್ಟತೆ ಇಣುಕಿದೆ . ಆದರೆ ಈ ಅಸ್ಪಷ್ಟತೆ ವಿದ್ವಜ್ಜನರನ್ನೂ ದಾರಿತಪ್ಪಿಸಿದೆ.

ಸೇಡಿಯಾಪುರವರು ಹೀಗೆ ಹೇಳುತ್ತಾರೆ. "ಈಗ ಇಲ್ಲಿ ಇಣುಕಿ ನೋಡಿರಿ . ಕಾಣುವದಿಲ್ಲವೇ ಮಹಾಕವಿತ್ವದ ಆಳ ? ಶಕ್ತಿ ಇದ್ದರೆ ನಾವು ಅದರೊಳಗೆ ಇಳಿಯಬಲ್ಲೆವು . ಈಜಬಲ್ಲೆವು , ಮುಳುಗಲೂ ಬಲ್ಲೆವು. ಆದರೆ ತಳವನ್ನು ಮುಟ್ಟಲಾರೆವು . ಅದಕ್ಕೆ ತಳವಿಲ್ಲ! ಈ ಪದ್ಯದೊಳಗೆ ಅಡಕವಾಗಿರುವ ಲೆತ್ತದ ಪ್ರಸಂಗವು ಹಳಗನ್ನಡಸಾಹಿತ್ಯದಲ್ಲಿ ಮತ್ತೆಲ್ಲೂ ಕಾಣದ ಒಂದು ಅಪೂರ್ವ ಶೃಂಗಾರಪಿಂಡ. ಹೀಗಿದ್ದರೂ ಕರ್ಣನಲ್ಲಿ ಕೌರವನಿಗಿದ್ದ ಸೌಹಾರ್ದಾತಿಶಯದ ಪ್ರತಿಪಾದನೆಗಾಗಿ ಇಲ್ಲಿ ಇದರ ಕ್ಷೇಪಣವಾಗಿರುವುದರಿಂದ , ಶೃಂಗಾರವು ನೀರೊಳಗಿಟ್ಟ ಹೂವಾಗಿದೆ; ಹೂವನ್ನು ನಾವು ಕಾಣಬಹುದು. ಆದರೆ ಸುಗಂಧವನ್ನು ಯಥೇಷ್ಟವಾಗಿ ಆಸ್ವಾದಿಸಲಾರೆವು. ಅಥವಾ ಇದೊಂದು ತೆರೆಮರೆಯ ನೃತ್ಯ ; ಹೆಜ್ಜೆಯ ದನಿ , ಗೆಜ್ಜೆಯ ದನಿ ಕೇಳುತ್ತಿದೆ ; ಆದರೆ ಹಾವ ಬಾವ ರೂಪವಿಲಾಸ ಎಲ್ಲ ಅದೃಶ್ಯ! ಏನೀ ಮೋಡಿ? ಕರ್ಣನ ಆರ್ಜವದ ಅರುಣಪ್ರಭೆಯಲ್ಲಿ ಕ್ಷಣಕಲ ಮಿನುಗಿ ಮರೆಯಾಗುವ ಬೆಳಗಿನ ' ಬೆಳ್ಳಿ' ಈ ಶೃಂಗಾರ! ಈ ನನ್ನ ಲೇಖನದಿಂದ ಈ ಪದ್ಯಪಾಷಾಣದ ವಿಮೋಚನೆಯಾದರೆ ನಾನು ಮಾಡಿದ್ದೊಂದು ಪುಣ್ಯಕಾರ್ಯವೆನಿಸುತ್ತದೆ"

( ಈ ಬರಹದ ಒಟ್ಟು ಸಾರಾಂಶ ಹೀಗೆ

ಪಗಡೆ ಆಡುತ್ತಿದ್ದವರು ದುರ್ಯೋಧನ ಮತ್ತು ಅವನ ಹೆಂಡತಿ ಭಾನುಮತಿ , ಪಣವಾಗಿದ್ದುದು ಮುತ್ತಿನ ಹಾರವಲ್ಲ ,ಮುತ್ತು(ಚುಂಬನ)ಗಳ ಹಾರ! ಸೋತಿರುವ ಭಾನುಮತಿ ಸ್ತ್ರೀಸಹಜ ನಾಚಿಕೆಯಿಂದ ಮತ್ತು ಕರ್ಣನು ಅಲ್ಲಿರುವುದರಿಂದ ಮುತ್ತುಗಳನ್ನು ಕೊಡಲು ಹಿಂಜರಿದ್ದ್ದಾಳೆ, ದುರ್ಯೋಧನನ ಒತ್ತಾಯದಲ್ಲಿ , ಕೊಸರಾಟದಲ್ಲಿ ಅವಳ ಮುತ್ತಿನ ಹಾರವು ಹರಿದು ಮುತ್ತುಗಳು ಚಲ್ಲಾಪಿಲ್ಲಿ. ದುರ್ಯೋಧನನು ಆ ಮುತ್ತುಗಳ ಸಮ ಈ ಮುತ್ತುಗಳಲ್ಲವಾದರೂ ಇವನ್ನಾದರೂ ಆರಿಸಿಕೊಳ್ಳುತ್ತೇನೆ ಎನ್ನುತ್ತಾನೆ. ಈ ಪ್ರಸಂಗವನ್ನು ನೆನೆಯುತ್ತಿರುವನು ಕರ್ಣಈ ಖಾಸಗೀ ವಿಷಯವನ್ನು ಕರ್ಣನೇಕೆ ಕೃಷ್ಣನ ಮುಂದೆ ಹೇಳುತ್ತಿದ್ದಾನೆ? ತನ್ನೊಡನೆ ದುರ್ಯೋಧನನ ಸ್ನೇಹ ಎಂತಹುದೆಂದರೆ ಅವನ ಏಕಾಂತಸ್ಥಾನದಲ್ಲೂ ತನಗೆ ಪ್ರವೇಶವಿತ್ತು . ತನ್ನ ನಿಷ್ಠೆಯಲ್ಲಿ , ನಿಶ್ಕಲಂಕತೆಯಲ್ಲಿ ಅಷ್ಟು ವಿಶ್ವಾಸ ಅವನಿಗೆ. ಅಂಥವನನ್ನು ಹೇಗೆ ಬಿಟ್ಟು ಬರುವದು . ಅದು ಅನಾಗರಿಕತನ ಅಲ್ಲವೇ ಎಂದು ಕೇಳುತ್ತಿದ್ದಾನೆ ಕರ್ಣ.

ಈ ಪದ್ಯವನ್ನು  ಬಹುತೇಕ ಜನರು ತಪ್ಪಾಗಿ ಅರ್ಥೈಸಿ ದುರ್ಯೋಧನ ಮತ್ತು ಕರ್ಣನ ಸ್ನೇಹವನ್ನು ವಿಜೃಂಭಿಸುವ ಭರದಲ್ಲಿ ಭಾನುಮತಿ ಯನ್ನು ಗೌಣಗೊಳಿಸಿದ್ದಾರೆ)