ಅಮೃತಾತ್ಮನು ನೀನು
ಬರಹ
ಈ ದೇಹ ನೀನೆಂದು
ತಿಳಿದಿರುವೆ ನೀನು
ನಿಜತಿಳಿಯಬೇಕೇನು
ದೇಹವಲ್ಲವು ನೀನು||
ಶಿಶುವಾಗಿ ಜನಿಸಿ
ಬೆಳೆದು ಯೌವ್ವನ ಪಡೆದು
ವೃದ್ಧಾಪ್ಯದೆಡೆಗೆ
ದಿನದಿನವು ಸಾಗಿ
ಮುಪ್ಪು, ಮರಣವು ಬರಲು
ನಿನಗೇಕೆ ಚಿಂತೆ?
ಹುಟ್ಟಿದಾ ದೇಹಕೆ
ಅಂತ್ಯವಿದೆಯಂತೆ||
ಮೊದಲು ಬಾಲ್ಯದ ಆಟ
ನಡುನಡುವೆ ಹುಡುಗಾಟ
ಯೌವ್ವನವು ಕಾಲಿಡಲು
ಸಂಸಾರದಾಟ|
ಆಡಿದವನಾರು?
ಆಡಿಸಿದವನಾರು?
ಆಡುವಾ ದೇಹದೊಳು
ಇರುವ ನೀನಾರು?
ನೀ ಹುಟ್ಟಲಿಲ್ಲ
ತಾರುಣ್ಯ ನಿನದಲ್ಲ
ವೃದ್ಧಾಪ್ಯ ಬರಲಿಲ್ಲ
ಸಾವೆಂಬ ಸುಳಿವಿಲ್ಲ|
ಅಂಗಿ ಬದಲಿಸಿದಂತೆ
ದೇಹ ಬದಲಿಸಿದೆ ನೀನು
ಚೈತನ್ಯವೇ ನೀನು
ಅಮೃತಾತ್ಮನು ನೀನು||