ಅಮೃತ ಕಾಲ

ಅಮೃತ ಕಾಲ

ಪುಸ್ತಕದ ಲೇಖಕ/ಕವಿಯ ಹೆಸರು
ರಾಹುಲ್ ಅಶೋಕ ಹಜಾರೆ
ಪ್ರಕಾಶಕರು
ಜಯಲಕ್ಷ್ಮೀ ಪ್ರಕಾಶನ, ಇಂಡಿ.
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೪

ಭಾರತ ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕೆಲವರು ಮನಸ್ಸಿದ್ದು ಮತ್ತು ಕೆಲವರು ಮನಸ್ಸಿಲ್ಲದೇ. ಆದರೆ ಭಾರತ ಯಾವೆಲ್ಲಾ ಕ್ಷೇತ್ರಗಳಲ್ಲಿ, ಹೇಗೆ ಬದಲಾಗಿದೆ ಎನ್ನುವುದನ್ನು ಹೇಳ ಬಲ್ಲ ಅಂಕಿ ಅಂಶಗಳ ಹುಡುಕಾಟ ನಡೆಸುವುದು ಬಹಳ ಕಷ್ಟ. ಭಾರತ ಯಾವೆಲ್ಲಾ ವಿಷಯಗಳಲ್ಲಿ ಬದಲಾಗಿ, ವಿಶ್ವದ ಭೂಪಟದಲ್ಲಿ ತನ್ನದೇ ಆದ ಉನ್ನತ ಸ್ಥಾನವನ್ನು ಹೇಗೆ ಅಲಂಕರಿಸಿದೆ ಎನ್ನುವುದನ್ನು ತಿಳಿಸಲು ಯೂಟ್ಯೂಬರ್ ಹಾಗೂ ಉದಯೋನ್ಮುಖ ಲೇಖಕರಾದ ರಾಹುಲ್ ಅಶೋಕ್ ಹಜಾರೆ ಇವರು ‘ಅಮೃತ ಕಾಲ' ಎನ್ನುವ ಬಹಳ ಸೊಗಸಾದ, ಮಾಹಿತಿಪೂರ್ಣ ಪುಸ್ತಕವನ್ನು ಹೊರತಂದಿದ್ದಾರೆ. 

ರಾಹುಲ್ ಹಜಾರೆಯವರು ತಮ್ಮ ಮಾತಿನಲ್ಲಿ “ ಈ ಕಾಲ ಅಕ್ಷರಶಃ ‘ಅಮೃತ ಕಾಲ'. ನರೇಂದ್ರ ಮೋದಿಯವರು ಪ್ರಧಾನಿಯಾದಾಗ ಸ್ಥಿತಿಗತಿಗಳು ಹೀಗಿರಲಿಲ್ಲ. ಭಾರತದ ಆರ್ಥಿಕತೆ ಅಳಿದು ಹೋಗಬಹುದಾದ ಐದು ಆರ್ಥಿಕ ವ್ಯವಸ್ಥೆಗಳಲ್ಲಿ ಒಂದಾಗಿತ್ತು. ಸದ್ಯ ಭಾರತ ವಿಶ್ವದ ಐದನೆಯ ಅತಿ ದೊಡ್ಡ ಅರ್ಥ ವ್ಯವಸ್ಥೆಯಾಗಿದೆ. ಹೀಗೆ ತೌಲನಿಕವಾಗಿ ನೋಡುತ್ತಾ ಹೋದರೆ ಅರವತ್ತು ವರ್ಷದ ಭಾರತಕ್ಕೂ ಹತ್ತೇ ವರ್ಷಗಳಲ್ಲಾದ ಬದಲಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಈ ಎಲ್ಲಾ ಬದಲಾವಣೆಗಳನ್ನೂ ಹಂಚಿಕೊಳ್ಳಲು ನನಗೆ ಒಂದು ಮಾಧ್ಯಮದ ಜರೂರತ್ತಿತ್ತು. ಕೆಲವು ಪತ್ರಿಕೆಗಳನ್ನು ಅರಸಿದೆ. ಒಂದು ರೆಗ್ಯೂಲರ್ ಅಂಕಣ ಸಿಗಬಹುದಾ ಎಂದು ಪ್ರಯತ್ನಿಸಿದೆ. ಅದು ಸಾಧ್ಯವಾಗಲಿಲ್ಲ. ಪತ್ರಿಕೆಯಲ್ಲಿ ಅವಕಾಶ ಸಿಕ್ಕರೂ ಇಷ್ಟೊಂದು ಸುದೀರ್ಘವಾಗಿ ನನಗೆ ಬೇಕಾದ ಹಾಗೆ ಬರೆಯುವ ಸ್ವಾತಂತ್ರ್ಯ ಇರುತ್ತಿತ್ತಾ ಅನ್ನುವುದೇ ಅನುಮಾನ. ನನ್ನ ಯೂಟ್ಯೂಬ್ ಚಾನಲ್ ‘ಹಜಾರ್ ಮಾತು'ವಿನಲ್ಲಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿದೆನಾದರೂ ಯೂಟ್ಯೂಬ್ ಚಾನೆಲ್ಲಿಗೆ ಬೇಕಾಗುವ ತಾಂತ್ರಿಕ ಸೌಕರ್ಯಗಳಿಲ್ಲದ ಕಾರಣ ಸಾಧ್ಯವಾಗಲಿಲ್ಲ.

ಹೀಗಾಗಿ ಎಲ್ಲವನ್ನೂ ಬಿಟ್ಟು ಒಂದು ಒಂದೂವರೆ ತಿಂಗಳು ಸಮಯ ಕೊಟ್ಟು ಹತ್ತು ವರ್ಷಗಳಲ್ಲಿ ದೇಶದಲ್ಲಾದ ಬಹು ಮುಖ್ಯ ಘಟನೆಗಳನ್ನು, ಅಭಿವೃದ್ಧಿಯನ್ನು ಭಾರತ ಬೆಳೆದ ರೀತಿಯನ್ನು ಲೇಖನಗಳಾಗಿಸಿ ಅದರ ಸಂಗ್ರಹದ ಪುಸ್ತಕ ತರಲು ಯೋಚಿಸಿದೆ. ಆ ಯೋಚನೆಯ ಸಾರ್ಥಕ ರೂಪವೇ ಈ ‘ಅಮೃತ ಕಾಲ' ಪುಸ್ತಕ. ಈ ಪುಸ್ತಕ ಹಲವು ಲೇಖನಗಳ ಗುಚ್ಛಗಳನ್ನೊಳಗೊಂಡಿದೆ.” ಎಂದು ತಮ್ಮ ಪುಸ್ತಕ ಹುಟ್ಟಿದ ಬಗೆಯನ್ನು ವಿವರಿಸಿದ್ದಾರೆ.

ಪುಸ್ತಕದ 'ಅಮೃತ ಗುಟುಕುಗಳು' (ಪರಿವಿಡಿ) ನಲ್ಲಿ ಆರು ವಿಭಾಗಗಳಿವೆ. ವಿಕಾಸ, ವನವಾಸಿ, ವಿಶ್ವಗುರು, ವಿಶ್ವಾಸ, ವಿರೋಧ ಮತ್ತು ವೈರಾಣು. ವಿಕಾಸದಲ್ಲಿ ಪ್ರವಾಸೋದ್ಯಮ, ಬಾಹ್ಯಾಕಾಶ, ಅಗ್ನಿಪಥ್ ಮೊದಲಾದ ಬರಹಗಳಿದ್ದರೆ, ವನವಾಸಿಯಲ್ಲಿ ಆದಿವಾಸಿಗಳ ಬದುಕಿನಲ್ಲಿ ನವಕಿರಣ, ಮಣಿಪುರ ಬಗ್ಗೆ ಮಾಹಿತಿ ಇದೆ. ವಿಶ್ವಗುರುನಲ್ಲಿ ಭಾರತ ಹಾವಾಡಿಗರ ದೇಶವಲ್ಲ, ಉಕ್ರೇನ್ ಯುದ್ಧದ ಬಗ್ಗೆ ಲೇಖನಗಳಿವೆ. ವಿಶ್ವಾಸದಲ್ಲಿ ಬಹಳಷ್ಟು ಮಂದಿಯ ಮನದಲ್ಲಿರುವ ಸಂಶಯಗಳಿಗೆ ಉತ್ತರ ನೀಡಲಾಗಿದೆ. ಮೋದಿ ಮುಸ್ಲಿಂ ವಿರೋಧಿಯೇ? ಕಾಶ್ಮೀರದಲ್ಲಿನ ಇಂದಿನ ಪರಿಸ್ಥಿತಿ, ಪಾಕಿಸ್ತಾನದ ಬಗ್ಗೆ ಸೊಗಸಾದ ಅರ್ಥಪೂರ್ಣ ವಿವರಣೆಗಳಿವೆ. ವಿರೋದದಲ್ಲಿ ರೈತರನ್ನು ಅಳುವಂತೆ ಮಾಡಿದರೇ ಮೋದಿ? ಎನ್ನುವ ಪ್ರಶ್ನೆಗೆ ಉತ್ತರವಿದೆ. ಕೊನೆಯ ಭಾಗವಾದ ವೈರಾಣುವಿನಲ್ಲಿ ಲಕ್ಷದ್ವೀಪದತ್ತ ನಮ್ಮ ಲಕ್ಷ್ಯ ಹರಿಯಲಿ, ಆತ್ಮನಿರ್ಭರ ಭಾರತ ಕೇವಲ ಘೋಷಣೆಯಾಗಿಯಷ್ಟೇ ಉಳಿದಿಲ್ಲ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.

ರಾಹುಲ್ ಹಜಾರೆ ಅವರು ಕೇವಲ ಲೇಖನ ಬರೆದಿಲ್ಲ. ಅದಕ್ಕೆ ಸೂಕ್ತವೆನಿಸುವ ಅಂಕಿ ಅಂಶಗಳನ್ನೂ, ಚಿತ್ರಗಳನ್ನೂ ಪುಸ್ತಕದ ತುಂಬೆಲ್ಲಾ ನೀಡಿದ್ದಾರೆ. ಸುಮಾರು ೧೩೫ ಪುಟಗಳಷ್ಟಿರುವ ಈ ಪುಸ್ತಕವನ್ನು ರಾಹುಲ್ ಅವರು “ದೈವೀ ಶಕ್ತಿಯೊಂದು ಜೊತೆಗಿದ್ದರೆ ಜಗತ್ತಿನ ಯಾವ ದುಷ್ಟ ಶಕ್ತಿಗಳೂ ಏನೂ ಮಾಡಲಾರವು’ ಎಂಬ ಮಾತಿಗೆ ಉದಾಹರಣೆಯಂತೆ ಬದುಕುತ್ತಿರುವ ; ಸಜ್ಜನಿಕೆ, ಪ್ರಾಮಾಣಿಕತೆಗಳೆರಡಿದ್ದರೆ ಎಂಥ ದುರುಳರನ್ನೂ ಸೋಲಿಸಬಹುದೆಂದು ಸಾಧಿಸಿ ತೋರಿಸಿದ ಅಪ್ರತಿಮ ರಾಷ್ಟ್ರಭಕ್ತ ಶ್ರೀ ಚಕ್ರವರ್ತಿ ಸೂಲಿಬೆಲೆಯವರಿಗೆ ‘ಅಮೃತ ಕಾಲ' ವೆಂಬ ಈ ಕೃತಿಯನ್ನು ಪ್ರೀತಿ ಪೂರ್ವಕವಾಗಿ ಅರ್ಪಿಸಿದ್ದಾರೆ.