ಅಮೃತ ಬಿಂದುಗಳು
ಇದೊಂದು ಅಪರೂಪದ ಪುಸ್ತಕ. ಇದರಲ್ಲಿವೆ ನಮ್ಮ ಬದುಕನ್ನು ಬೆಳಗಿಸಬಲ್ಲ ನೀತಿಯ ಮಾತುಗಳು. ಇದರ 10,000 ಪ್ರತಿಗಳನ್ನು 10 ಸಪ್ಟಂಬರ್ 1973ರಲ್ಲಿ ಮುದ್ರಿಸಲಾಗಿತ್ತು ಎಂದರೆ ನಂಬುತ್ತಿರಾ? ಈಗ ಕನ್ನಡದ ಹಲವು ಪುಸ್ತಕಗಳ ಕೇವಲ 500 ಪ್ರತಿಗಳನ್ನು ಮುದ್ರಿಲಾಗುತ್ತಿದೆ. ಇದನ್ನು ಗಮನಿಸಿದಾಗ, ಐವತ್ತು ವರುಷಗಳ ಮುಂಚೆ, ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಹಲವು ಪಟ್ಟು ಜಾಸ್ತಿಯಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ, ಅಲ್ಲವೇ?
ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ಗ್ರಂಥಗಳಿಂದ ಆಯ್ದ ನೈತಿಕ ದೃಷ್ಟಿಯಿಂದ ಅರ್ಥಪೂರ್ಣವಾದ ಉಕ್ತಿಗಳನ್ನು ಓದುವವರು ಸಂಖ್ಯೆಯೂ ಐವತ್ತು ವರುಷಗಳ ಮುಂಚೆ ಸಾಕಷ್ಟು ಇತ್ತು ಎಂಬುದೂ ಇದರಿಂದ ಸ್ಪಷ್ಟವಾಗುತ್ತದೆ.
ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟು ಇಂತಹ ಪುಸ್ತಕದ ರಚನೆಗಾಗಿ ಈ ನಾಲ್ಕು ಸದಸ್ಯರಿರುವ ಸಂಪಾದಕ ಮಂಡಲಿಯನ್ನು ನಿಯಮಿಸಿತು: ಡಾ. ಆರ್.ಸಿ. ಹಿರೇಮಠ (ಅಧ್ಯಕ್ಷರು), ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಕನ್ನಡ ಅಧ್ಯಯನ ಪೀಠ ಮತ್ತು ಮೂವರು ಸದಸ್ಯರು: ಡಾ. ಕೆ. ಕೃಷ್ಣಮೂರ್ತಿ, ಡಾ. ಎಂ.ಕೆ. ನಾಯಿಕ, ಪ್ರೊ. ಕೆ.ಜೆ. ಶಹಾ. ಈ ಮೂವರು ಸದಸ್ಯರು ಅನುಕ್ರಮವಾಗಿ ಸಂಸ್ಕೃತ ವಿಭಾಗ, ಇಂಗ್ಲಿಷ್ ವಿಭಾಗ ಮತ್ತು ತತ್ವಜ್ನಾನ ವಿಭಾಗಗಳ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು. ಇದರಲ್ಲಿರುವ ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ನೀತಿಯ ಉಕ್ತಿಗಳನ್ನು ಆಯಾ ಭಾಷಾ ವಿಭಾಗದ ಮುಖ್ಯಸ್ಥರು ಸಂಗ್ರಹಿಸಿದ್ದು, ಅವುಗಳ ಕನ್ನಡ ಅನುವಾದವನ್ನೂ ಅವರೇ ಮಾಡಿಕೊಟ್ಟಿರುವರು.
ಪುಸ್ತಕದ ಮುನ್ನುಡಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಎ.ಎಸ್. ಅಡಕೆ ಅವರು ಹೀಗೆಂದು ಬರೆದಿದ್ದಾರೆ: "ನಮ್ಮ ನಾಡಿನಲ್ಲಿ ಶಿಕ್ಷಣ ಬಹುಮುಖವಾಗಿ ಬೆಳೆಯುತ್ತಿದೆ. ಶಿಕ್ಷಣ ಸಂಸ್ಥೆಗಳು ಹೆಚ್ಚು ಹೆಚ್ಚಾಗಿ ಉದಯವಾಗುತ್ತಿವೆ. ವಿಧವಿಧದ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ವರುವರುಷ ಅಧಿಕವಾಗುತ್ತಿದೆ. ವಿದ್ಯಾರ್ಥಿಗಳು ಪಡೆಯುತ್ತಿರುವ ಶಿಕ್ಷಣ ಯಾವುದೇ ಕ್ಷೇತ್ರಕ್ಕೆ ಸಂಬಂಧ ಪಟ್ಟಿರಲಿ, ಅದು ಅವರ ಪರಿಪೂರ್ಣ ವ್ಯಕ್ತಿತ್ವದ ವಿಕಾಸಕ್ಕೆ ನೆರವಾಗಬೇಕು. ವಿಜ್ನಾನ ಸುಜ್ನಾನಗಳೆರಡೂ ನಮ್ಮ ಶಿಕ್ಷಣ ಕ್ರಮದಲ್ಲಿ ಮೈಗೂಡಿದರೆ ಶಿಕ್ಷಣದ ನಿಜವಾದ ಗುರಿಯನ್ನು ಸಾಧಿಸಬಹುದು.
ನೀತಿ, ತತ್ವಗಳು ಮಾನವ ಜೀವನದ ಪರಮಮೌಲ್ಯಗಳು. ಅವು ಆತನನ್ನು ಸನ್ಮಾರ್ಗಕ್ಕೆ ಹಚ್ಚಬಲ್ಲವು; ಅವನ ಬಾಳನ್ನು ಬೆಳಗಬಲ್ಲವು. ಕವಿಗಳ, ತತ್ವಜ್ನಾನಿಗಳ, ಧರ್ಮದ್ರಷ್ಟಾರರ ಉಕ್ತಿಗಳಲ್ಲಿ ಇಂತಹ ನೀತಿಬೋಧೆಯಿರುತ್ತದೆ. ಆ ಉಕ್ತಿಗಳು ನಮ್ಮ ವಿದ್ಯಾರ್ಥಿಗಳಿಗೆ ನಿತ್ಯವೂ ಉಪಯುಕ್ತವಾಗಬಲ್ಲವು. ವಿದ್ಯಾರ್ಥಿ ದೆಸೆಯಲ್ಲಿ ಇಂತಹ ಉಕ್ತಿಗಳ ಪರಿಚಯವಾದರೆ ಅವರ ಜೀವನದುದ್ದಕ್ಕೂ ಅವುಗಳ ಅರ್ಥ ಹಿಗ್ಗುತ್ತ ಹೋಗುತ್ತದೆ.”
ಜೀವನಕ್ಕೆ ದಾರಿದೀಪವಾಗಬಲ್ಲ ಈ ಪುಸ್ತಕದ ಉಕ್ತಿಗಳನ್ನು ವಿಷಯಾನುಗುಣವಾಗಿ ಸಂಗ್ರಹಿಸಲಾಗಿದೆ. ಪುಸ್ತಕದ ಕೊನೆಯಲ್ಲಿ ವಿಷಯಸೂಚಿಯನ್ನು ಕೊಟ್ಟಿರುವುದು ಪುಸ್ತಕದ ಉಪಯುಕ್ತತೆಯನ್ನು ಹೆಚ್ಚಿಸಿದೆ.
ಅನುಭವ - ಜ್ನಾನದ ಬಗೆಗಿನ ಎರಡು ಉಕ್ತಿಗಳು:
-ಅನುಭವವಿಲ್ಲದ ಜ್ನಾನದ ಫಲವೇನೊ - ಶ್ರೀ ವಿಜಯದಾಸರು
-ಅನುಭವವೆಂಬುದು ಅನುಭವಿಕಂಗಲ್ಲದೆ ಹೊತ್ತಗೆಯಲ್ಲಿಲ್ಲ - ಸಿದ್ಧರಾಮ
ಅರಿವಿನ ಬಗೆಗಿನ ಕೆಲವು ಉಕ್ತಿಗಳು:
-ಅಂಗವೆಂದಡೆ ಅಜ್ನಾನ ಲಿಂಗವೆಂದರೆ ಸುಜ್ನಾನ - ಸಿದ್ಧರಾಮ
-ಅರಿವಲ್ಲ ಮರವಲ್ಲ ಅರಿತಿದ್ದು ಸ್ಥಿರವಲ್ಲ ಅರಿತೇನು ಆಶೆ ತೀರದೆ! - ಮಧುರಚೆನ್ನ - ನನ್ನ ನಲ್ಲ
-ಅಜ್ನಾನಿಗಳ ಕೂಡ ಅಖಿಳ ಸ್ನೇಹಗಳಿಂದ ಸುಜ್ನಾನಿಗಳ ಕೂಡ ಜಗಳವೇ ಲೇಸು - ಶ್ರೀ ಪುರಂದರದಾಸರು
-ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ - ಸರ್ವಜ್ನ
-ಏನಾದಡೆಯೂ ಸಾಧಿಸಬಹುದು ಮತ್ತೇನನಾದೊಡೆಯೂ ಸಾಧಿಸಬಹುದಯ್ಯಾ
ತಾನಾರಂಬುದ ಸಾಧಿಸಬಾರದು - ಬಸವಣ್ಣ
-ಫಲ ಒಳಗೆ ಪಕ್ವವಾಗೆಯಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು ಮಹಾದೇವಿಯಕ್ಕ
-ಬುದ್ಧಿಯಿಂ ಹಿರಿದಿಲ್ಲ, ವಿದ್ಯಯಿಂದಧಿಕ ಧನವಿಲ್ಲ - ಸರ್ವಜ್ನ
-ಬೆಳಗ ಕಂಡವಗೆ ಕತ್ತಲೆಯ ಹಂಗುಂಟೆ - ಲಿಂಗಮ್ಮ
-ಮಾತಿನ ಹಂಗೇಕೆ, ಮನವೇಕಾಂತದಲ್ಲಿ ನಿಂದ ಬಳಿಕ -ನೀಲಮ್ಮ
-ಜ್ನಾನವಂತನಾಗು ಜ್ನಾನಿಗಳಿಗೆ ಬಾಗು ಜ್ನಾನ ಬೆಳಕಿನಿಂದಜ್ನಾನ ತಮವ ನೀಗು - ಶ್ರೀ ಗೋಪಾಲದಾಸರು
ಅಹಂಕಾರದ ಬಗೆಗಿನ ಉಕ್ತಿಗಳು:
-ಎನ್ನಿಂದಾಯಿತ್ತು ಎನ್ನಿಂದಾಯಿತ್ತು ಎನ್ನದಿರು ಮನವೆ! ನಾನು ಮಾಡಿದೆನೆನ್ನದಿರು ಮನವೆ - ಬಸವಣ್ಣ
-ಬಲ್ಲೆನೆಂಬುವ ಮಾತು ಎಲ್ಲವೂ ಹುಸಿ ಕಾಣೋ, ಸುಮ್ಮನಿರಬಲ್ಲವನೆ ಬಲ್ಲ - ಸರ್ವಜ್ನ
ಆಶೆಯ ಬಗೆಗಿನ ಕೆಲವು ಉಕ್ತಿಗಳು:
-ಅಂಗದಿಚ್ಛೆಗೆ ಹರಿದು ಭಂಗಗೊಳದಿರು ಮನುಜ - ಸರ್ವಜ್ನ
-ಆಸೆಗೆ ಸತ್ತುದು ಕೋಟಿ ಗುಹೇಶ್ವರ ನಿಮಗಾಗಿ ಸತ್ತವರನಾರನೂ ಕಾಣೆ - ಅಲ್ಲಮಪ್ರಭು
-ಇಷ್ಟು ದೊರಕಿದರು ಮತ್ತಿಷ್ಟು ಬೇಕೆಂಬಾಸೆ ಅಷ್ಟು ದೊರಕಿದರು ಮತ್ತಷ್ಟರಾಸೆ - ಶ್ರೀ ಪುರಂದರದಾಸರು
-ಇಂದು ನಾಳೆಗೆ ಎಂದು ತಂದು ಕೂಡಿಡಬೇಡ - ಸರ್ವಜ್ನ
-ಮನದ ಬಯಕೆಗೆ ಬಡತನಂಗಳೆ? - ಬತ್ತಲೇಶ
ಬೇರೆಲ್ಲ ವಿಷಯಗಳ ಜೊತೆಗೆ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನೂ ಒದಗಿಸಬೇಕಾದದ್ದು ಎಲ್ಲ ವಿದ್ಯಾಸಂಸ್ಥೆಗಳ ಕರ್ತವ್ಯ. ಆ ಶಿಕ್ಷಣ ಒದಗಿಸಲು ಬಳಸಬೇಕಾದ ಆಕರ ಪುಸ್ತಕಗಳ ಒಂದು ಉತ್ತಮ ಮಾದರಿ “ಅಮೃತ ಬಿಂದುಗಳು.” ಇಂತಹ ಪುಸ್ತಕಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಓದಿಗೆ ದಕ್ಕುವ ಕಾಲ ಬೇಗನೇ ಬರಲಿ ಎಂದು ಹಾರೈಸೋಣ.