ಅಮೆಜಾನಿನ ಭಯಾನಕ ಪ್ರಾಣಿಗಳು (ಭಾಗ ೧)

ಅಮೆಜಾನಿನ ಭಯಾನಕ ಪ್ರಾಣಿಗಳು (ಭಾಗ ೧)

ಅಮೆಜಾನ್ ದಕ್ಷಿಣ ಅಮೇರಿಕಾದಲ್ಲಿರುವ ಪ್ರಪಂಚದ ಅತ್ಯಂತ ದೊಡ್ದ ನದಿ. ಉದ್ದವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅದರಲ್ಲಿ ಅಮೆಜಾನ್ ಗೆ ಎರಡನೇ ಸ್ಥಾನ. ಇದರ ಅಗಾಧತೆಯ ಅರಿವಾಗಬೇಕಾದರೆ ಇಲ್ಲಿ ಕೇಳಿ, ಇದರ ನಂತರ ಬರುವ ಉಳಿದ ಏಳು ನದಿಗಳ ಒಟ್ಟು ವಿಸ್ತಾರದಷ್ಟು ಇದೊಂದೇ ನದಿ- ಅದೇ ಅಮೆಜಾನ್! ಈ ನದಿ ಆವರಿಸಿರುವ ಪ್ರದೇಶವೇ ಎಪ್ಪತ್ತು ಲಕ್ಷದ ಐವತ್ತು ಸಾವಿರ ಚದರ ಕಿಲೋಮೀಟರ್ ಗಳು ! ಅಂದರೆ ಪ್ರಪಂಚದಲ್ಲಿರುವ ಎಲ್ಲಾ ನದಿಗಳು ಆವರಿಸಿರುವ ಒಟ್ಟು ವಿಸ್ತಾರದ ಐದನೇ ಭಾಗವನ್ನು ಈ ನದಿಯೊಂದೇ ಆವರಿಸಿದೆ. ಈ ನದಿ ಒಟ್ಟು ಏಳು ದೇಶಗಳಲ್ಲಿ ಹರಿಯುತ್ತದೆ. ಇದರ ಅಗಲ ೧.೬ ರಿಂದ ೧೦ ಕಿ.ಮೀ. ಗಳಾಗಿದ್ದು, ಮಳೆಗಾಲದಲ್ಲಿ ಸುಮಾರು ೫೦ ಕಿ,ಮೀ ಗಳವರೆಗೂ ಹರಡಿರುತ್ತದೆ. ಅಟ್ಲಾಂಟಿಕ್ ಸಾಗರದ ಬಳಿ ಇದು ಸೇರುವ ಜಾಗ ಸುಮಾರು ೨೪೦ ಕಿ ಮೀ ಗಳವರೆಗೆ ಹರಡಿದೆ. ಈ ನದಿಗೆ ಅಡ್ಡಲಾಗಿ ಸೇತುವೆಗಳೇ ಇಲ್ಲ. ಈ ನದಿಯನ್ನು ‘ಸಮುದ್ರ ನದಿ' ಎಂದೇ ಕರೆಯಲಾಗುತ್ತದೆ. ಇದರ ಉದ್ದ ೬,೪೦೦ ಕಿಲೋಮೀಟರ್ ಗಳು. ಇಂತಹ ಭವ್ಯ ನದಿ ಮತ್ತು ನದಿಯ ತೀರದಲ್ಲಿ ವಾಸಿಸುವ ಭಯಾನಕ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಅನಕೊಂಡ (Anaconda) : ಇವು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಹಾವುಗಳಾಗಿವೆ. ಇವು ಸುಮಾರು ೩೦ ಅಡಿಗಳವರೆಗೆ ಉದ್ದವಾಗಿದ್ದು, ೫೦೦ ಪೌಂಡ್ ತೂಗಬಲ್ಲವು. ಇದೊಂದು ಆಕ್ರಮಣಕಾರಿ ಪ್ರಾಣಿ. ಇವುಗಳಿಗೆ ಇಂತಹ ಪ್ರಾಣಿಯೇ ಆಹಾರ ಎನ್ನುವಂತಿಲ್ಲ. ಯಾವ ಪ್ರಾಣಿಯಾದರೂ ಸೈ! ಆಡು, ಕತ್ತೆ, ಹಕ್ಕಿ, ಮೀನು, ಕೆಲವೊಮ್ಮೆ ಮನುಷ್ಯರನ್ನೂ ಕೂಡ ಇದು ತಿಂದು ತೇಗಬಲ್ಲದು ! ಈ ಅನಕೊಂಡಗಳು ತಮ್ಮ ಬೇಟೆಯನ್ನು ಮೊದಲು ಸುತ್ತಿ ಉಸಿರುಗಟ್ಟಿಸಿಕೊಂಡು ಕೊನೆಗೆ ಅಗಿಯದೆ ಹಾಗೆಯೇ ಇಡಿಯಾಗಿ ನುಂಗಿಬಿಡುತ್ತದೆ. ಇದು ದೈತ್ಯಹಾವು ನಿಜ. ಆದರೆ ಅನಕೊಂಡ ವಿಷಕಾರಿಯಲ್ಲ.(ಚಿತ್ರ ೧)

ಅರಾಪೈಮಾ (Arapaima) : ಇದೊಂದು ವಿಶೇಷ ಜಾತಿಯ ದೊಡ್ದ ಮೀನು. ಇದರ ಇನ್ನೊಂದು ಹೆಸರು ಪೈರಾರುಕು (Pirarucu) ಇದರ ವಿಶೇಷವೆಂದರೆ, ಇದೊಂದು ಗಾಳಿಯಲ್ಲಿ ಉಸಿರಾಡುವ ಮೀನು ! ಇದು ಸಿಹಿನೀರಿನಲ್ಲಿ ವಾಸಿಸುವ ದೈತ್ಯ ಮೀನು. ಇದು ಸುಮಾರು ೧೦ ಅಡಿ ಉದ್ದವಿದ್ದು, ೪೪೦ ಪೌಂಡ್ ವರೆಗೂ ಇದರ ತೂಕ ಇರುತ್ತದೆ. ಇದು ಗಾಳಿಗಾಗಿ ೧೫-೨೦ ನಿಮಿಷಕ್ಕೊಂದು ಸಲ ನೀರಿನಿಂದ ಆಚೆಗೆ ಬರುತ್ತದೆ. ಇದರ ಕೈಗೆ ಸಿಕ್ಕ ಯಾವುದೇ ಪ್ರಾಣಿಗೆ ಉಳಿಗಾಲವಿಲ್ಲ. ಜೀವಂತವಿರುವ ಯಾವ ಪ್ರಾಣಿ ಸಿಕ್ಕಿಹಾಕಿಕೊಂಡರೂ, ಅರಾಪೈಮಾ ಅದನ್ನು ಸಲೀಸಾಗಿ ಸ್ವಾಹಾ ಮಾಡಿಬಿಡುತ್ತವೆ. ಇದರ ಬೇಟೆಗೆ ಮೀನುಗಳು, ಹಾವು, ಕಪ್ಪೆ ಮತ್ತು ಇತರೆ ಉಭಯವಾಸಿಗಳು, ಕೊನೆಗೆ ಮನುಷ್ಯರು ಸಿಕ್ಕರೂ ಸರಿಯೇ ! ಇದರ ಹೆಗ್ಗಳಿಕೆಯೆಂದರೆ, ಇದು ಇಂದಿಗೂ ಬದುಕಿರುವ ಪ್ರಾಚೀನ ಜಲಚರ. ಇದು ೨೦೦ ದಶಲಕ್ಷ ವರ್ಷಗಳ ಹಿಂದೆ ಜೀವಿಸಿದ್ದ ಡೈನೋಸಾರ್ ಗಳ (ಮಹಾ ಉರಗಗಳು) ಸಮಕಾಲೀನ ಜೀವಿಯಾಗಿದೆ. ಈ ಕಾರಣಕ್ಕೇ ಇದನ್ನು ಸಮುದ್ರದ ಡೈನೋಸಾರಸ್ ಎನ್ನುತ್ತಾರೆ. (ಚಿತ್ರ ೨)

ಕಪ್ಪು ಕೈಮಾನ್ (Black Caiman): ಇದು ಅಮೆಜಾನ್ ನದಿಯಲ್ಲಿ ಕಂಡು ಬರುವ ಇನ್ನೊಂದು ಅತ್ಯಂತ ಆಕ್ರಮಣಕಾರಿ ಪ್ರಾಣಿ. ಇದೊಂದು ಮಾಂಸಹಾರಿ ಸರೀಸೃಪ. (ನಾವು ದಿನನಿತ್ಯ ನೋಡುವ ಹಲ್ಲಿ, ಓತಿಕೇತ, ಹಾವುರಾಣಿ, ಹಾವುಗಳೆಲ್ಲವೂ ಸರೀಸೃಪಗಳ ಜಾತಿಗೆ ಸೇರಿದ ಪ್ರಾಣಿಗಳೇ ಆಗಿವೆ.) ಕೈಮಾನ್ ಗೆ ಮನುಷ್ಯನನ್ನು ಬಿಟ್ಟರೆ ಬೇರೆ ಶತ್ರುಗಳಿಲ್ಲ. ಇಂದು ಇಡೀ ಪ್ರಪಂಚದಲ್ಲಿ ಬದುಕುಳಿದಿರುವ ಕೈಮಾನ್ ಗಳ ಸಂಖ್ಯೆ ೨ ಸಾವಿರಕ್ಕೂ ಕಡಿಮೆ. ಈ ಪೈಕಿ ಸುಮಾರು ೨೦ ಅಡಿ ಉದ್ದವಿದ್ದು, ೩೦೦೦ ಪೌಂಡ್ ಗಳವರೆಗೆ ತೂಗಬಲ್ಲವು. ನದಿಯಲ್ಲಿರುವ ಯಾವುದೇ ಪ್ರಾಣಿ ಕ್ಷಣಮಾತ್ರದಲ್ಲಿ ಈ ಪ್ರಾಣಿಗೆ ರಸದೌತಣವಾಗಿ ಪರಿಣಮಿಸುತ್ತದೆ. ಇದು ಮೊಸಳೆಯದ್ದೇ ಒಂದು ಭಿನ್ನ ಪ್ರಕಾರ.(ಚಿತ್ರ ೩)

(ಇನ್ನೂ ಇದೆ)

-ಕೆ. ನಟರಾಜ್, ಬೆಂಗಳೂರು

ಚಿತ್ರಕೃಪೆ: ಇಂಟರ್ನೆಟ್ ತಾಣ