ಅಮೆಜಾನಿನ ಭಯಾನಕ ಪ್ರಾಣಿಗಳು (ಭಾಗ ೨)

ಅಮೆಜಾನಿನ ಭಯಾನಕ ಪ್ರಾಣಿಗಳು (ಭಾಗ ೨)

ಜಾಗ್ವಾರ್ (Jaguar) : ಇದೊಂದು ಅತ್ಯಂತ ಅಪಾಯಕಾರಿ ಸಸ್ತನಿ ಪ್ರಾಣಿ. (ಚಿತ್ರ ೧) ಅಮೆಜಾನ್ ನದಿಯ ಆಸುಪಾಸಿನಲ್ಲೇ ಇದರ ವಾಸ. ಇದೊಂದು ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿ. ಇದು ಸುಮಾರು ೬ ಅಡಿ ಉದ್ದವಿದ್ದು, ೨೫೦ ಪೌಂಡ್ ತೂಗಬಲ್ಲದು. ಇದು ಅತ್ಯಂತ ಚತುರ ಈಜುಗಾರನಾಗಿದ್ದು ಮರಗಳನ್ನು ಲೀಲಾಜಾಲವಾಗಿ ಹತ್ತುತ್ತದೆ. ಇದು ಅತ್ಯಂತ ವೇಗವಾಗಿ ಓಡಬಲ್ಲದು. ಅಲ್ಲದೆ ಯಾವುದೇ ಬೇಟೆಯನ್ನು ಹೊಂಚು ಹಾಕಿ ಕ್ಷಣ ಮಾತ್ರದಲ್ಲಿ ದಾಳಿ ಮಾಡಬಲ್ಲದು. ಈ ಜಾಗ್ವಾರ್ ಅನಾಮತ್ತಾಗಿ ತನ್ನ ಬೇಟೆಯ ಪ್ರಾಣಿಯ ಕೊರಳಿಗೇ ಬಾಯಿ ಹಾಕಿ ರಕ್ತವನ್ನು ಹೀರಿ ಕೆಲವೇ ಸೆಕೆಂಡ್ ಗಳಲ್ಲಿ ನಿಶ್ಚಲಗೊಳಿಸಿಬಿಡುತ್ತದೆ. ಅನೇಕ ಕಾರಣಗಳಿಂದ ಈ ಪ್ರಾಣಿ ಇತ್ತೀಚೆಗೆ ವಿನಾಶದ ಅಂಚಿನಲ್ಲಿದೆ. ಭಾರತದ ಸೇನಾ ಬತ್ತಳಿಕೆಯಲ್ಲಿರುವ ಒಂದು ಯುದ್ಧ ವಿಮಾನಕ್ಕೆ ‘ಜಾಗ್ವಾರ್' ಎಂದೇ ಹೆಸರಿಡಲಾಗಿದೆ.

ಪಿರಾನ್ಹಾ (Piranha) : ಕೇವಲ ೬ ರಿಂದ ೧೦ ಇಂಚು ಉದ್ದವಿರುವ, ಅತ್ಯಂತ ಭಯಾನಕ ಮೀನಿದು. ಇವು ಅಮೆಜಾನ್ ನದಿಯಲ್ಲಿ ಮಾತ್ರ ಕಂಡು ಬರುವ ವಿಶೇಷ ಜಾತಿಯ ಮೀನುಗಳಾಗಿವೆ. ಇವು ಅತ್ಯಂತ ಬಲವಾದ ದವಡೆಗಳನ್ನು ಹೊಂದಿದ್ದು, ಚೂಪಾದ ರೇಜರ್ ನಂತಹ ಹಲ್ಲುಗಳಿವೆ. ಸಾಮಾನ್ಯವಾಗಿ ಪಿರಾನ್ಹಾಗಳು ಗುಂಪು ಗುಂಪಾಗಿ ದಾಳಿ ನಡೆಸುತ್ತವೆ. ಒಮ್ಮೆ ಪ್ರವಾಸಿಗರೊಬ್ಬರು ಅಮೆಜಾನ್ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುವಾಗ ಎಚ್ಚರಿಕೆಯನ್ನೂ ಗಮನಿಸದೇ ನೀರಿನಲ್ಲಿ ಕೈ ಅದ್ದಿದ್ದರಂತೆ. ಏನೋ ಕಚ್ಚಿದಂತಾಯ್ತಲ್ಲ ಎಂದು ಅವರು ತಕ್ಷಣವೇ ಕೈಯನ್ನು ಸರಕ್ಕನೆ ಹಿಂತೆಗೆದುಕೊಂಡು ನೋಡಿದರೆ ಇಡೀ ಮುಂಗೈಗೆ ಮುಂಗೈಯೇ ಮಾಯವಾಗಿತ್ತಂತೆ! ಇವು ಕ್ಷಣ ಮಾತ್ರದಲ್ಲಿ ಬೇಟೆಯನ್ನು ಚೂರು ಚೂರು ಮಾಡಿ ತಿಂದುಬಿಡಬಲ್ಲವು. ಒಟ್ಟಿನಲ್ಲಿ ಅಮೆಜಾನ್ ನದಿಯಲ್ಲಿರುವ ಪ್ರಾಣಿಗಳಿಗೆ ಹಾಗೂ ಪ್ರಯಾಣ ಮಾಡುವವರಿಗೆ ಸಿಂಹಸ್ವಪ್ನ - ಈ ಪಿರಾನ್ಹಾ ಮೀನುಗಳು. ಈ ಮೀನಿನ ಬಗ್ಗೆ ಹಾಲಿವುಡ್ ನಲ್ಲಿ ಈಗಾಗಲೇ ಹಲವಾರು ಸಿನೆಮಾಗಳು ಬಂದಿವೆ. (ಚಿತ್ರ ೨)

(ಮುಗಿಯಿತು)

-ಕೆ. ನಟರಾಜ್, ಬೆಂಗಳೂರು

ಚಿತ್ರಕೃಪೆ: ಇಂಟರ್ನೆಟ್ ತಾಣ