ಅಮೆರಿಕದೇಶದ ಜನಜೀವನದಲ್ಲಿ ಯಂತ್ರಗಳ ಪಾತ್ರ

ಅಮೆರಿಕದೇಶದ ಜನಜೀವನದಲ್ಲಿ ಯಂತ್ರಗಳ ಪಾತ್ರ

ಬರಹ

ಇದು ನಮಗೆ ಬಹುದೊಡ್ಡದಾಗಿ ಕಾಣಿಸುವ ದೃಷ್ಯ. ದಿನನಿತ್ಯದ ಜೀವನದ ಕಾರ್ಯಾಚರಣೆಗಳಾದ, ಅಡುಗೆ, ಊಟ, ಪಾತ್ರೆಪದಾರ್ಥಗಳ ಶುಚಿತ್ವ, ಸಾಗಾಣಿಕೆ, ಪ್ರಯಾಣ, ಮುಂತಾದ ಯಾವುದೇಕ್ಷೇತ್ರದಲ್ಲಿ ಮಾನವ-ಕೈಗಳ ಸಹಾಯ ನಮ್ಮದೇಶದಲ್ಲಿದ್ದಂತೆ ಅಮೆರಿಕದಲ್ಲಿಲ್ಲ. ಇದರಿಂದ ಹಲವು ಸಮಸ್ಯೆಗಳು ಪರಿಹಾರವಾಗಿವೆ ; ಕೆಲವೊಂದು ಸನ್ನಿವೇಷಕ್ಕೆ ನಾಂದಿಯಾಗಿರಲೂ ಉಂಟು. ನಿರುದ್ಯೋಗವೆಂಬ ನಮ್ಮದೇಶದ ಬೃಹದಾಕಾರದ ಪಿಡುಗಿಗೆ ಯಂತ್ರೀಕರಣಮಾರಕವಲ್ಲವೆ ! ಅಲ್ಲಿನ ಕಟ್ಟಡನಿರ್ಮಾಣದಲ್ಲಿ ಕೂಲಿಗಳಿಲ್ಲ ; ಕೆಲಸ ಅತ್ಯಂತ ಅಚ್ಚುಕಟ್ಟಾಗಿಯೂ ತ್ವರಿತವಾಗಿಯೂ ನೆರವೇರುತ್ತದೆ. ಕಡಿಮೆ ದಿನ-ಗೂಲಿಯ ಆಸೆಗೆ ಅಮೆರಿಕಕ್ಕೆ ದಾಳಿಯಿಡುವ ಜನರಿಗೆ ಅದೊಂದು ಸ್ವರ್ಗ. ಬಹುಶಃ, ಬಂಗ್ಲಾದೇಶ, ಭಾರತ, ಪಾಕೀಸ್ತಾನದವರು, ನಾನುಮುಂದೆ- ತಾನುಮುಂದೆ ಎಂದು ಬಂದಾರು ! ಅಂತೆಯೇ ಅಂತಹ ವ್ಯವಸ್ಥೆಗಳಿಂದ ’ ಕೊಳೆಗೇರಿ ’ ಗಳನ್ನು ಹುಟ್ಟುಹಾಕಿ, ಅದರಿಂದ ಉದ್ಭವಿಸುವ ಸಾಮಾಜಿಕ ಅಸಮಾನೆತೆ, ಅವ್ಯವಸ್ಥೆಗಳ ಅನಂತ ಪರಿಸರಮಾಲೀನ್ಯತೆ, ಮುಂತಾದ ಅನಿಷ್ಟಗಳನ್ನು ನಿರ್ಮೂಲಿಸುವಲ್ಲಿ ಆ ದೇಶ, ಜಯವನ್ನು ಪಡೆದಿದೆ.

ಪೆಟ್ರೋಲ್ ತುಂಬಿಸಲು ಜನರ ಸಹಾಯವೇಕೆ ? ಅತ್ಯಂತ ಸಮರ್ಪಕವಾಗಿ ಕೆಲಸಮಾಡುವ ಯಂತ್ರಗಳಿರುವಾಗ ! ಇದೊಂದು ಅಧ್ಬುತವಾದ ಕಲ್ಪನೆ. ಅಮೆರಿಕದ ರಸ್ತೆಯ ವ್ಯವಸ್ಥೆಯನ್ನು ಪ್ರೆಸಿಡೆಂಟ್ ಡ್ವೈಟ್ ಐಸನ್ ಹೋವರ್ ಸಮಯದಲ್ಲಿ ಮಾಡಿದರಂತೆ ! ಅಮೆರಿಕದ ಹಳ್ಳಿಹಳ್ಳಿಗಳನ್ನು ನಗರಗಳಿಗೆ ಸೇರಿಸಿ ಸಮಗ್ರ ದೇಶಕ್ಕೆ ಎಂತಹ ಅತ್ಯುತ್ತಮ ರಾಷ್ಟ್ರೀಯ ಹೆದ್ದಾರಿಗಳನ್ನು ಕೊಟ್ಟಿದ್ದಾರಲ್ಲ, ಅವರ ದೂರದೃಷ್ಟಿಗೆ ನಮಿಸಬೇಕು. ಹಳ್ಳಿ, ನಗರ, ಭಾರಿ-ಮೆಟ್ರೋನಗರಗಳನ್ನು ಎಷ್ಟು ಸುವ್ಯವಸ್ಥಿತವಾಗಿ ನಿರ್ಮಿಸಿದ್ದಾರೆ. ಈಗಲೂ ಸೂರ್ಯಕಿರಣ, ಗಾಳಿಗಳಂತಹ ಶಕ್ತಿಗಳ ಉಪಯೋಗಪಡೆದು ಪಡೆಯುತ್ತಿರುವ ಇಂಥನಶಕ್ತಿ, ಅನುಮೋದನೆಗೆ ಪಾತ್ರವಾಗಿದೆ.

ಅಮೆರಿಕದ ನಗರದ ನೈರ್ಮಲ್ಯೀಕರಣಕ್ಕೆ ಮಾಡಿರುವ ವ್ಯವಸ್ಥೆ, ಹಾಗೂ ಅದನ್ನು ಚಾಚೂ ತಪ್ಪದೆ ಅನುಮೋದಿಸುತ್ತಿರುವ ಅಲ್ಲಿನ ಜವಾಬ್ದಾರಿಯುತ ನಾಗರಿಕ ಬಂಧುಗಳಿಗೆ, ಪ್ರತಿದಿನವೂ ಕೈಮುಗಿಯಬೇಕು.

ನಮ್ಮ ಮುಂಬೈನಲ್ಲಿರುವಂತೆಯೇ ಅಲ್ಲಿಯೂ ಕೊಳಚೆ-ಕಸಯೆತ್ತುವ ಯಾಂತ್ರಿಕ-ವ್ಯವಸ್ಥೆ ಇದೆ. ಆದರೆ, ಅವುಗಳ ಕಾರ್ಯವಿಧಾನಗಳಲ್ಲಿನ ಅಂತರವೆಷ್ಟು ? ಆಕಾಶ-ಭೂಮಿಯಷ್ಟೆನ್ನಬಹುದು. ಇದನ್ನು ಸ್ವಲ್ಪ ವಿವರಿಸುವುದು ಅಗತ್ಯ. ನಾಗರಿಕರು ತಮ್ಮ ಮನೆಗಳ ಮುಂದಿನ ಪುಟ್ಪಾತಿನಲ್ಲಿ ಒಂದೊ ಎರಡೋ ಬ್ಯಾಗ್ ಗಳ ಕಚಡಾವನ್ನು ಚೆನ್ನಾಗಿ ಬ್ಯಾಗಿನಮೂತಿಗೆ ಹಗ್ಗಬಿಗಿದು ಇಟ್ಟಿರುತ್ತಾರೆ( ಚೆಲ್ಲಾಪಿಲ್ಲಿಯಾಗಿ ನಮ್ಮಂತೆ ಎಸೆದಿರುವುದಿಲ್ಲ) ಅವುಗಳು ಎರಡು-ಮೂರುವಿಧಗಳಲ್ಲಿ ಇರುತ್ತವೆ. ಪ್ಲಾಸ್ಟಿಕ್ ಚೂರುಪಾರುಗಳು, ದಪ್ಪ ಮಲಿನವಸ್ತುಗಳು, ಕೊಳೆತ ಕಿಚನ್ ಆಹಾರಪದಾರ್ಥಗಳು, ಇತ್ಯಾದಿಗಳು. ಅಮೆರಿಕದ ನಗರಪಾಲಿಕೆ ಅಥವಾ ಖಾಸಗೀವಲಯದ ವ್ಯವಸ್ಥಾಪಕರುಗಳು, ತಮ್ಮ ವಾಹನಗಳಲ್ಲಿ ಸರಿಯಾದ ಕಾಲಕ್ಕೆಬಂದು, ಅವನ್ನು ಸರಿಯಾಗಿ ವಿಂಗಡಿಸಿ ತಮ್ಮ ವ್ಯಾನಿನಲ್ಲಿ ಸರಿಯಾಗಿ ಪೇರಿಸಿಡುತ್ತಾರೆ. ವಾಹನಗಳು ಕಸ-ಗೊಬ್ಬರ, ಮುಂತಾದ ಮಾಲೀನ್ಯದಿಂದ ನಮ್ಮಲ್ಲಿದ್ದಂತೆಯೇ ಅಲ್ಲೂ ಕೊಳೆಯಿಂದಕೂಡಿದ್ದರೂ, ಅಲ್ಲಿನ ನೌಕರರ ಸಹಕಾರ ಹಾಗೂ ಕಾರ್ಯದಲ್ಲಿನ ಪ್ರಮಾಣಿಕತೆ, ಹಾಗೂ ದಕ್ಷತೆಯಿಂದ ಕಚಡಾ-ವಾಹನ ನೋಡಬಹುದಾಗಿರುತ್ತದೆ. ತಮ್ಮ ಆರಿಸಿಕೊಂಡ ಕೆಲಸದ ವಲಯದಲ್ಲಿ ತಮ್ಮ ೧೫೦ % ಶ್ರಮವನ್ನು ಇಟ್ಟು ಕೆಲಸಮಾಡುವ ಅವರ ಶ್ರದ್ಧೆಗೆ ನಮಿಸಬೇಕು. ಒಂದುವೇಳೆ ಆ ಕೆಲಸ ಇಷ್ಟವಾಗದಿದ್ದರೆ, ಸ್ವಲ್ಪವೂಗೊಣಗದೇ ಬೇರೆದಾರಿ ನೋಡಿಕೊಳ್ಳುತ್ತಾರೆ. ಇಂತಹ ನೂರಾರು ಉದಾಹರಣೆಗಳು ನಮ್ಮ ಕಣ್ಣಿಗೆಬೀಳುತ್ತವೆ.

ಏರ್ಪೋರ್ಟ್ ಗಳಲ್ಲಿಯೂ ಅಷ್ಟೆ. ಕಚಡಾ ಡಬ್ಬಗಳನ್ನು ನಮ್ಮಮುಂದೆಯೇ ಸಮಾಧಾನದಿಂದ, ನಗುಮುಖದೊಂದಿಗೆ, ಹಳೆಯ ಮಲಿನವನ್ನು ಎತ್ತಿ ತಮ್ಮ ಬ್ಯಾಗಿನಲ್ಲಿ ಸುರಿದು, ಬೇರೆ ಪ್ಲಾಸ್ಟಿಕ್ ಬ್ಯಾಗನ್ನು ಹಳೆಯಡಬ್ಬಕ್ಕೆ ತೊಡಿಸಿ, ಸ್ವಲ್ಪವೂ ಕೆಳಗೆ ಚೆಲ್ಲಿ ಮುಖಕೆಡಸಿಕೊಳ್ಳದೆ, ಶ್ರದ್ಧೆಯಿಂದ ಮಾಡುವ ಕೆಲಸವನ್ನು ನಾವುಗಳು ಅನುಕರಿಸಬೇಕು. ವಿಮಾನದಒಳಗಡೆ ಎಷ್ಟುವಿನಯದಿಂದ, ಸಮಾಧಾನದಿಂದ, ಕುಡಿದ ಲೋಟ-ತಟ್ಟೆಗಳನ್ನು ನಮ್ಮಿಂದಪಡೆದು, ಕೇಳಿದಕೂಡಲೇ ನಮಗೆಬೇಕಾದ ಪದಾರ್ಥಗಳನ್ನು ನಗುಮುಖದಿಂದ ಒದಗಿಸುತ್ತಾರಲ್ಲ; ಆ ಕೆಲಸಮಾಡುವ ಜನ ಭಾರಿ-ಕಾಯದ, ಆಕರ್ಷಕ ವ್ಯಕ್ತಿತ್ವದ ಜನ ; ಅವರೆಲ್ಲಾ ಯಾರೋ ಸಮರ್ಥ ಅಧಿಕಾರಿಗಳಾಗುವ ಯೋಗ್ಯತೆಯುಳ್ಳವರುಗಳು. ಅದೆಷ್ಟು ಸಂತೋಷದಿಂದ ತಮ್ಮ ಕೆಲಸಗಳನ್ನು ನಿರ್ವಹಿಸುತ್ತಾರೆ ! ಅದನ್ನು ನೋಡಿ, ನಾವುಗಳು ಯೇಕೆ ಪಾಠಕಲಿಯಬಾರದು ?

ಮತ್ತೊಂದು ಉದಾಹರಣೆಯೊಂದಿಗೆ ಅಮೆರಿಕನ್ ಜನಸಮುದಾಯದ ಗುಣಗಾನಮಾಡಲು ನನಗೆ ಅತ್ಯಂತ ಹರ್ಷವಾಗುತ್ತದೆ. ’ಗುಣಕ್ಕೆ ಮಾತ್ಸರ್ಯವೇ ? ! ನಾವು ಅಮೆರಿಕದಿಂದ ಫ್ರಾಂಕ್ಫರ್ಟ್ ನಗರದ ಮುಖಾಂತರ ಮುಂಬೈಗೆ ಬಂದೆವು. ಫ್ರಾಂಕ್ಫರ್ಟ್ ನಗರದಿಂದ ಮುಂಬೈ ನಗರಕ್ಕೆ ಬಂದವರಲ್ಲಿ ನಮ್ಮ ಭಾರತೀಯರೆ ಹೆಚ್ಚಾಗಿದ್ದರು. ಆದರೆ ಅಲ್ಲಿನ ಕಂಟರ್ ನ ಮುಂದ ನಡೆದುಕೊಂಡರೀತಿ ಎಂಥವರಿಗೂ ನಾಚಿಗೆತರಿಸುವಂತಿತ್ತು. ಲೈನ್ ನಲ್ಲಿ ಒಬ್ಬರೂನಿಲ್ಲದೆ, ಒಟ್ಟಿಗೆ ದನಗಳ ತರಹ ನುಗ್ಗಿದ್ದು, ಮುಂಬೈ ಬರುತ್ತಿದ್ದಂತೆಯೇ ತಮ್ಮ ತಮ್ಮ ಸೂಟ್ಕೇಸ್ ಎತ್ತಿಕೊಂಡು, ಎಲ್ಲರಿಗಿಂತ ಹಿಂದಿದ್ದ ಭಾರತೀಯರೆಲ್ಲಾ ಛಂಗನೆ ನೆಗೆದು, ಜೋರಾಗಿ ಬಡಬಡಿಸುತ್ತಾ ಎಲ್ಲರನ್ನೂ ತಳ್ಳಿಕೊಂಡು ಹೋದದೃಷ್ಯ- ಈಗಲೂ ನನ್ನ ಕಣ್ಣಿನಲ್ಲಿ ಕಟ್ಟಿದಂತಿದೆ.

ಅದೇ ನ್ಯೂಯಾರ್ಕ್, ಚಿಕಾಗೋ ನಗರಕ್ಕೆ ಹೋದಾಗ , ಅಲ್ಲಿನ ಅಮೆರಿಕನ್ನರು ನಡೆದುಕೊಂಡರೀತಿ ಎಷ್ಟು ಸುಂದರ, ಸದಾ-ಅನುಕರಣೀಯ ! ಮಕ್ಕಳಿಗೆ, ಹೆಣ್ಣುಮಕ್ಕಳಿಗೆ, ವಯಸ್ಸಾದವರಿಗೆ ಎಷ್ಟು ಮರ್ಯಾದೆ, ಆದರ-ಅದೆಲ್ಲಾ ತಮ್ಮಸ್ವಂತ ಮನಸ್ಸಿನಿಂದ; ಯಾರೂ ಬಂದು ಗೈಡ್ ಮಾಡುತ್ತಿರಲಿಲ್ಲ. ಇವರೆ, ನಮ್ಮ ಅಪ್ಪಟಭಾರತೀಯರು -ಸದಾಗೊಣಗುವ, ತಮ್ಮಗುಣಗಾನಮಾಡಿಕೊಳ್ಳುವ, ಢಂಬಾಚಾರದ, ಜಂಬದಕೋಳಿಗಳು !

ನಮ್ಮದೇಶದ ಅಮೆರಿಕನ್ ನಾಗರೀಕರು, ಗ್ರೀನ್ ಕಾರ್ಡ್ ಪಡೆದಿದ್ದಾರೆ. ವ್ಯಾಪಾರ, ಉದ್ಯೋಗಮಾಡಿ ಹೆಚ್ಚುಹಣಗಳಿಸಿದ್ದಾರೆ, ಅನೇಕರು ಐಟಿಕ್ಷೇತ್ರದಲ್ಲಿ ಹೆಮ್ಮರಗಳಾಗಿ ಬೆಳೆದು ಅತ್ಯುತ್ತಮ ಹೆಸರುಮಾಡಿದ್ದಾರೆ. ಇದು ಸತ್ಯ. ಅವನ್ನು ಯಾರಾದರೂ ಅಲ್ಲಗಳೆಯಲು ಸಾಧ್ಯವೇ ? ಆದರೆ, ತಮ್ಮನ್ನು ತಾವು ನಡೆಸಿಕೊಳ್ಳುವ ಕಲೆಯಲ್ಲಿಮಾತ್ರ ಈ ಮಂದಿ, ಎಲ್ಲರಿಗಿಂತ ಹಿಂದೆ. ಅಥವಾ ಆ ಕಡೆಯಿಂದ ಇವರನ್ನೇ ಪ್ರಥಮರೆಂದು ಕರೆದು ಸಮಾಧಾನಪಟ್ಟುಕೊಳ್ಳೋಣವೇ ? ? ಇದೇ ಸರಿಯೆಂದು ನನ್ನ ಅಭಿಮತ !

ಇದೆಲ್ಲಾ, ನಾನು ನನ್ನ ಕಣ್ಣಲ್ಕಂಡಿದ್ದು, ಕಿವೀಲ್ಕೇಳಿದ್ದು ; ಯಾರೋ ಹೇಳಿದ್ದಂತೂ ಖಂಡಿತ ಅಲ್ಲ. ಮತ್ತೆ ಹೇಳುವುದಾದರೆ ನಾನು ನೋಡಿದ ಎರಡೂವರೆ ತಿಂಗಳ ಅನುಭವವೆನ್ನಲೇ ?

-ಚಿತ್ರ ನಾನೇತೆಗೆದದ್ದು.