ಅಮೆರಿಕದ ‘ಬೆಂಕಿಯ ಮಳೆಗೆ’ ಭಗ್ನವಾದ ಲಾವೋಸ್

Submitted by T R Bhat on Wed, 04/01/2020 - 20:28

ಶಾಲೆಯಿಂದ ಮರಳುತ್ತಿದ್ದ 10 ವರ್ಷದ ಲಾ ಲೀ ದಾರಿಯಲ್ಲಿ ಟೆನಿಸ್ ಚೆಂಡಿನಂತೆ ಕಂಡ ವಸ್ತುವೊಂದನ್ನು ಹೆಕ್ಕಿಕೊಂಡು ಮನೆಗೆ ಬಂದಳು. ಕುಟುಂಬದ ಅನೇಕ ಮಂದಿ ಮನೆಯ ಕಾರ್ಯಕ್ರಮಕ್ಕೆಂದು ಅಲ್ಲಿ ನೆರೆದಿದ್ದರು. ಊರಿನ ಜನಪ್ರಿಯ ಆಟ ‘ಪೆಟಾಂಕ್’ ಗೆ ಉಪಯೋಗವಾಗುವ ಲೋಹದ ಚೆಂಡಿನಂತೆ  ಕಾಣುತ್ತಿದ್ದ ಆ ಆಟಿಗೆಯನ್ನು ತನ್ನ ಲಂಗದ ಜೇಬಿನಿಂದ ಹೊರ ತೆಗೆದು ಅಂಗಳದಲ್ಲಿದ್ದ ಓರಗೆಯವಳಿಗೆ ತೋರಿಸಿದಳು.  ಹೊರ ತೆಗೆದ ತಕ್ಷಣ ಆ ಚೆಂಡು ಸ್ಫೋಟಿಸಿತು. ಮುಗ್ಧೆ ಲೀ ಅಲ್ಲಿಯೇ ಮೃತಳಾದಳು; ನೆರೆದಿದ್ದವರಲ್ಲಿ 13 ಮಂದಿ ತೀವ್ರವಾಗಿ ಗಾಯಗೊಂಡರು. 2017ರ ಆರಂಭದಲ್ಲಿ ಸಂಭವಿಸಿದ ಈ ದುರ್ಘಟನೆ ಅಮೆರಿಕವು 1964-73ರ ಅವಧಿಯಲ್ಲಿ ಲಾವೋಸಿನಲ್ಲಿ ಹಾಕಿ  ಸ್ಫೋಟಿಸದೇ ಉಳಿದ 8 ಕೋಟಿ ಬಾಂಬುಗಳಿಂದಾಗುತ್ತಿರುವ ದುರಂತಕ್ಕೆ ಒಂದು ಉದಾಹರಣೆ.
೨೦೧೯ರ ನವಂಬರದಲ್ಲಿ ವಿದೇಶ ಸುತ್ತಲೆಂದು ಸಮೀಪದ ಬಂಧುಗಳೊಂದಿಗೆ ಲಾವೋಸಿಗೆ ಹೋಗಿದ್ದ ನನಗೆ ಈ ದುರಂತ ನಡೆದ ಮತ್ತು ನಿರಂತರ ನಡೆಯುತ್ತಲೇ ಇರುವ ರಂಗಭೂಮಿಯ ಪ್ರತ್ಯಕ್ಷ ದರ್ಶನವಾಯಿತು. ಎರಡು ದಿನ ದೇಶದ ರಾಜಧಾನಿ ವಿಯೆಂಚಿಯೆನ್ ಮತ್ತು ಇನ್ನೊಂದು ಪ್ರವಾಸೀ ತಾಣವಾದ ವಾಂಗ್ ವಿಯೆಂಗ್‍ಗಳಲ್ಲಿ ಸಂತೋಷದಿಂದ ಕಳೆದು ಮೂರನೇ ದಿನ ಬೆಳಿಗ್ಗೆಯೇ ಹೊರಟು ಅಪರಾಹ್ನ 3 ಗಂಟೆಗೆ ಈಶಾನ್ಯದಲ್ಲಿರುವ ಕ್ಸಿಯಾಂಗ್ ಕೊವಾಂಗ್ ಗೆ ತಲಪಲಿದ್ದೆವು. ಹಸುರು ಬೆಟ್ಟ, ಹರಿಯುವ ತೊರೆಗಳು, ಅಲ್ಲಲ್ಲಿ ವಿಶಾಲವಾದ ನಳನಳಿಸುತ್ತಿರುವ ಬತ್ತದ ಗದ್ದೆಗಳು, ಮರದ ಅಟ್ಟದ ಮೇಲೆ ನಿರ್ಮಿಸಿದ ಪುಟ್ಟ ಪುಟ್ಟ ಮನೆಗಳು, ರಸ್ತೆಯ ಇಕ್ಕೆಲದಲ್ಲಿ ಹಳದಿ ಹೂವುಗಳ ರಂಗೋಲಿ, ತಣ್ಣಗಿನ ಗಾಳಿ, ತಿರುವುಗಳಿದ್ದರೂ ಉಬ್ಬುತಗ್ಗುಗಳಿಲ್ಲದ ರಸ್ತೆ - ಎಲ್ಲವೂ ಪ್ರಯಾಣದ ಆಯಾಸವನ್ನು ತಣಿಸಿದ್ದವು.
ನಿಗದಿತ ಸ್ಥಾನಕ್ಕೆ ಬರುವ ಸ್ವಲ್ಪ ಮೊದಲೇ ನಮ್ಮ ಸ್ಥಳೀಯ ಮಾರ್ಗದರ್ಶಕ ಸ್ಯಾಲಿ ವಾಹನದಿಂದ ನಮ್ಮನ್ನೆಲ್ಲ ಇಳಿಸಿ, ‘ಬನ್ನಿ, ಇಲ್ಲಿನ ಜಾಡಿಗಳ ಮೈದಾನ (ಪ್ಲೈನ್ ಆಫ್ ಜಾರ್ಸ್) ತೋರಿಸುತ್ತೇನೆ; ಕ್ಸಿಯಾಂಗ್ ಕೊವಾಂಗ್‍ಗೆ ಆಮೇಲೆ ಹೋಗೋಣ’ ಎಂದ.  ಅವನನ್ನು ಹಿಂಬಾಲಿಸಿದೆವು.
ವಿಶಾಲವಾದ ಮೈದಾನ; ಅಲ್ಲಲ್ಲಿ ದೊಡ್ಡ ದೊಡ್ಡ ಕಲ್ಲಿನ ಅನೇಕ ಜಾಡಿಗಳು ಕಾಣಸಿಕ್ಕವು. ಸುಮಾರು ಒಂದರಿಂದ ಎರಡು ಮೀಟರು ಎತ್ತರ ಹಾಗೂ ಸುಮಾರು ಒಂದು ಮೀಟರು ವ್ಯಾಸದ ಹಳೆಕಾಲದ ಜಾಡಿಗಳು (ಭಾವಚಿತ್ರಗಳನ್ನು ಗಮನಿಸಿ).  ಕೆಲವಕ್ಕೆ ಕಲ್ಲಿನ ಮುಚ್ಚಳಗಳಿದ್ದವು; ಕೆಲವು  ಮುಚ್ಚಳಗಳು ಪಕ್ಕದಲ್ಲಿ ಬಿದ್ದಿದ್ದವು. ಒಂದೆರಡರಲ್ಲಿ ಮಳೆ ನೀರು ತುಂಬಿತ್ತು. 3000 ವರ್ಷ ಹಿಂದೆ  ನಿರ್ಮಿತವಾದ ಜಾಡಿಗಳು ಅವು. ಅವುಗಳ ಉದ್ದೇಶದ ಕುರಿತಂತೆ ಒಮ್ಮತ ಇನ್ನೂ ಇಲ್ಲ. ಮೃತರಾದ ರಾಜರನ್ನು ಹೂಳಲು, ಮಳೆನೀರನ್ನು ಸಂಗ್ರಹಿಸಿಡಲು ಮತ್ತು ಅಲ್ಲಿ ಧಾರಾಳವಾಗಿ ಬೆಳೆಯುತ್ತಿದ್ದ ಅಕ್ಕಿಯಿಂದ ಮಾಡುತ್ತಿದ್ದ ಮದ್ಯವನ್ನು ಕಾಯ್ದಿಡಲು - ಹೀಗೆ ಮೂರು ಮುಖ್ಯ ಉದ್ದೇಶಗಳಿಗಾಗಿ ಅವುಗಳನ್ನು ಮಾಡಿರಬಹುದು ಎಂದು ಪುರಾತತ್ವಶಾಸ್ತ್ರಜ್ಞರ ಅಭಿಪ್ರಾಯ.  ನೂರಾರು ಜಾಡಿಗಳು ಹಾಗೆಯೇ ಉಳಿದಿವೆ, ಅಮೆರಿಕದ ಬಾಂಬು ದಾಳಿಯಿಂದಲೂ ಹಾನಿಯಾಗದೆ! ಜುಲಾಯಿ 2019ರಲ್ಲಿ ಯುನೆಸ್ಕೊ ಸಂಸ್ಥೆ ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಪರಿಗಣಿಸಿದೆ.

ತಾಣವನ್ನು ಪರಿಚಯಿಸುತ್ತಾ ಸ್ಯಾಲಿ ನಮ್ಮನ್ನು ಸನಿಹದಲ್ಲಿಯೇ ಕಾಣುತ್ತಿದ್ದ ದೊಡ್ಡ ಗುಂಡಿಗಳನ್ನು ಗಮನಿಸಲು ಹೇಳಿದ. ವಿಭಿನ್ನ ಗಾತ್ರದ ಹಳ್ಳಗಳು ಅವು. ಕೆಲವದರ ಮಧ್ಯೆ ಸಣ್ಣ ಮರಗಳು ಬೆಳೆದಿದ್ದವು, ಇನ್ನು ಕೆಲವದರಲ್ಲಿ ಕುರುಚಲು ಗಿಡಗಳು. ಒಂದೆರಡು ಬೃಹತ್ತಾದ ಗುಂಡಿಗಳಲ್ಲಿ ಇಂಗ್ಲೀಷ್ ಮತ್ತು ಲಾವೋ ಭಾಷೆಯ ಫಲಕಗಳಿದ್ದವು. ಅವುಗಳ ಒಕ್ಕಣೆ ಹೀಗಿತ್ತು: ‘ಬಾಂಬ್ ಕ್ರೇಟರ್ಸ್ ಡ್ಯೂರಿಂಗ್ ವಾರ್ 1964-73’ (1964-73ರ ಯುದ್ಧದ ಬಾಂಬುಗಳ ಹಳ್ಳಗಳು (ಭಾವಚಿತ್ರಗಳನ್ನು ನೋಡಿ). ನಾವು ಬೇರೆ ಗುಂಡಿಗಳನ್ನು ನೋಡಬೇಕೆಂದಾಗ ಸ್ಯಾಲಿ ಎಚ್ಚರಿಸಿದ: ‘ಸ್ಫೋಟಗೊಂಡಿಲ್ಲದ ಬಾಂಬುಗಳು ಕೆಲವು ಕಡೆ ಇವೆ. ಅವುಗಳ ಶೋಧ ಇನ್ನೂ ನಡೆಯುತ್ತಾ ಇದೆ. ಗುರುತು ಹಾಕಿದ ದಾರಿಯಲ್ಲಿ ಮಾತ್ರ ಹೋಗೋಣ’. ಅವನನ್ನು ಅನುಸರಿಸಿ ಮುಂದುವರಿದಾಗ  ನಮ್ಮ ಪ್ರಶ್ನೆಗಳಿಗೆ  ಉತ್ತರಗಳು ತಡೆಯಿಲ್ಲದೆ ಬರುತ್ತಿದ್ದವು. ಲಾ ಲೀಯಂಥಹ ಕಂದಮ್ಮಗಳ, ಅನೇಕ ರೈತರ, ಜನಸಾಮಾನ್ಯರ ದುರಂತಗಳ ಬಗ್ಗೆ ಹೇಳುತ್ತಿದ್ದ ಕತೆಗಳನ್ನು ಹೇಳುತ್ತಿದ್ದಂತೆ  ಅವನ ಮುಖದಲ್ಲಿ  ದುಃಖದ ಛಾಯೆಯೂ ಸ್ಪಷ್ಟವಾಗಿತ್ತು. ಮನುಷ್ಯನ ಕ್ರೌರ್ಯಕ್ಕೆ ಎಲ್ಲೆಯೇ ಇಲ್ಲವೆಂಬ ಭಾವನೆಯನ್ನು ಬೆಳೆಸುತ್ತಿತ್ತು.
ಅಮೆರಿಕ ಯಾಕೆ ಈ ಪ್ರದೇಶದಲ್ಲಿ ಬಾಂಬು ದಾಳಿ ನಡೆಸಿತು ಎಂಬುದನ್ನು ಅರಿತುಕೊಳ್ಳುವ ಮೊದಲು  ಲಾವೋಸ್  ಬಗ್ಗೆ  ಕಿರು ಮಾಹಿತಿಯನ್ನು ಉಲ್ಲೇಖಿಸಬೇಕು. ಲಾವೋಸ್ ಎಂಬುದು ಆಗ್ನೇಯ ಏಶ್ಯಾದ ಒಂದು ಸಣ್ಣ ದೇಶ. ಪೂರ್ತಿಯಾಗಿ ಭೂಮಿಯಿಂದಲೇ ಆವೃತವಾಗಿ ವಿಯೆಟ್ನಾಮ್, ಚೀನಾ, ಬರ್ಮಾ (ಮ್ಯಾನ್ಮಾರ್), ಥಾಯ್ಲೆಂಡ್ ಮತ್ತು ಕಾಂಬೋಡಿಯಾಗಳಿಂದ ಸುತ್ತುವರಿದಿದೆ. ಹಿಂದೆ ರಾಜರ ಆಳ್ವಿಕೆಯಲ್ಲಿದ್ದ ಲಾವೋಸ್ 19ನೇ ಶತಮಾನದಲ್ಲಿ ಫ್ರಾನ್ಸ್ ದೇಶದ ವಸಾಹತು ಆಗಿ, ಮುಂದೆ 1954ರಲ್ಲಿ   ಸ್ವತಂತ್ರವಾಯಿತು.  ಅದರ ಬೆನ್ನಿಗೇ ರಾಜಕೀಯ ಅಸ್ಥಿರತೆ ಉಂಟಾಗಿ 1975ರಲ್ಲಿ ರಾಜರ ಅಧಿಕಾರ ಕೊನೆಗೊಂಡು ಕಮ್ಯುನಿಸ್ಟ್ ಸರಕಾರ ಆಳ್ವಿಕೆಗೆ ಬಂತು. ಬಹುತೇಕ ಗುಡ್ಡಗಾಡುಗಳನ್ನು ಹೊಂದಿರುವ ಲಾವೋಸಿನ ಜನಸಂಖ್ಯೆ ಸುಮಾರು 67 ಲಕ್ಷ (ಬೆಂಗಳೂರಿನ ಜನಸಂಖ್ಯೆ: 104ಲಕ್ಷ!).  ಅಲ್ಲಿಯ ರಾಜಧಾನಿ ಈಗ ವಿಯೆಂಚಿಯೆನ್. ದೇಶದ ರಾಜಭಾಷೆ, ಲಾವೊ; ಫ್ರಾನ್ಸಿನ ವಸಾಹತುವಾಗಿದ್ದರಿಂದ ಫ್ರೆಂಚ್ ಭಾಷೆ ಮುಖ್ಯನಗರಗಳಲ್ಲಿ ಇನ್ನೂ ಬಳಕೆಯಲ್ಲಿದೆ. ಬೌದ್ಧಮತ ಇಂದಿಗೂ ಆಚರಣೆಯಲ್ಲಿದೆ. ಆರ್ಥಿಕವಾಗಿ ಬಹಳ ಹಿಂದುಳಿದ ದೇಶ.
1960ರ ದಶಕದಲ್ಲಿ ಅಮೆರಿಕವು ವಿಯೆಟ್ನಾಮಿನೊಂದಿಗೆ ಯುದ್ಧದಲ್ಲಿ ತೊಡಗಿತ್ತು. ಆಗ ಅಲ್ಲಿನ ಗೆರಿಲ್ಲಾಗಳು ಗುಡ್ಡಗಾಡುಗಳಿಂದ ತುಂಬಿದ ನೆರೆಯ  ಲಾವೋಸಿನ ಈ ಪ್ರದೇಶದಲ್ಲಿ ಅವಿತುಕೊಂಡಿದ್ದಾರೆಂಬ ಶಂಕೆ "ದೊಡ್ಡಣ್ಣ"ನಿಗೆ ಉಂಟಾಯಿತು. ದುರ್ಗಮವಾದ ಈಶಾನ್ಯ ಲಾವೋಸಿನಲ್ಲಿ ಅಮೆರಿಕದ ಸೈನಿಕರಿಗೆ ಪ್ರವೇಶವು ಕಷ್ಟಸಾಧ್ಯವಾದುದರಿಂದ, ಅವರ ಹುಟ್ಟಡಗಿಸಲು ವಿಮಾನಗಳ ಮೂಲಕ ಅಲ್ಲಿ ಬಾಂಬುಗಳ ಮಳೆಯನ್ನು ಆರಂಭಿಸಿತು. 1964ರಲ್ಲಿ ಆರಂಭವಾದ ಈ ಬೆಂಕಿಯ ಮಳೆ 9 ವರ್ಷ ಸಾಗಿತು. 8 ನಿಮಿಷಕ್ಕೆ ಒಂದು ವಿಮಾನದ ತುಂಬ, ದಿನಕ್ಕೆ 24 ಗಂಟೆ, ವರ್ಷದ 12 ತಿಂಗಳು-ಒಟ್ಟು ಸುಮಾರು 5,80,000 ದಾಳಿಗಳಲ್ಲಿ 26,20,00,000- ಎರಡನೇ ವಿಶ್ವ ಮಹಾಯುದ್ಧದಲ್ಲಿ ತಾನು ಸುರಿಸಿದ ಬಾಂಬುಗಳಿಗಿಂತ ಹೆಚ್ಚು ಬಾಂಬುಗಳನ್ನು ಬಾನಿನಿಂದ ಕ್ಸಿಯಾಂಗ್ ಕೊವಾಂಗ್ ಪ್ರದೇಶದಲ್ಲಿ ಅಮೆರಿಕ ಸುರಿಸಿತು. ಬಿದ್ದ ಬಾಂಬುಗಳಲ್ಲಿ ಸುಮಾರು 8 ಕೋಟಿ ಸಿಡಿದಿರಲಿಲ್ಲ. ಅಮೆರಿಕದ ಈ ಗೋಪ್ಯ ಯುದ್ಧದ (ಅಮೆರಿಕಾಸ್ ಸೀಕ್ರೆಟ್ ವಾರ್) ಬಗ್ಗೆ ಅದರ ನಾಗರಿಕರಿಗೇ ತಿಳಿದಿರಲಿಲ್ಲ.
ಇಂಗ್ಲೆಂಡಿನ ಪ್ರತಿಷ್ಠಿತ ವಾರಪತ್ರಿಕೆ "ದ ಎಕಾನಮಿಸ್ಟ್"ನ ವರದಿಯಂತೆ 1973ರಲ್ಲಿ ಯುದ್ಧ ಮುಗಿದಾಗ, ಲಾವೋಸಿನ ಹತ್ತನೇ ಒಂದಂಶ ಜನರು ಸತ್ತಿದ್ದರು. ಭೂಮಿಯಲ್ಲಿ ಮುಚ್ಚಿಹೋದ, ಸ್ಫೋಟಿಸದ ಬಾಂಬುಗಳು ಆಗಾಗ ಸಿಡಿದು ಸಾವಿರಾರು ಮಂದಿ ಮಡಿದರು. ಗದ್ದೆಯಲ್ಲಿ ಓಡಾಡುವ ಮಕ್ಕಳು, ಉಳುವ ರೈತರು ಬಾಂಬುಗಳ ಸಂಪರ್ಕಕ್ಕೆ ಬಂದಾಗ ಆಗುವ ಅನಾಹುತ ಇಂದಿಗೂ ಮುಗಿದಿಲ್ಲ. ವರ್ಷಂಪ್ರತಿ ಸರಾಸರಿ 300 ಮಂದಿ- ಅದರಲ್ಲಿ ಶೇ.30 ಮಕ್ಕಳು-ಬಾಂಬುಗಳ ಸಂಪರ್ಕಕ್ಕೆ ಬಂದು ಅಸುನೀಗುತ್ತಾರೆ. ವರದಿಗಳ ಪ್ರಕಾರ ಲಾವೋಸಿನ ಭೂಪ್ರದೇಶದ ಶೇಕಡಾ 35ರಷ್ಟು ಭಾಗ ಬಾಂಬುಗಳಿಂದ ಕೆಟ್ಟುಹೋಗಿದೆ. ಫಲವತ್ತಾಗಿದ್ದ ಭೂಮಿ ಇಂದು ಬರಡಾಗಿದೆ. ಯುನೆಸ್ಕೋದ ಮಾರ್ಗದರ್ಶನದಲ್ಲಿ ಎಂ.ಎ.ಜಿ (ಮೈನ್ಸ್ ಎಡ್ವೈಸರಿ ಗ್ರೂಪ್) ಎಂಬ ಸರ್ಕಾರೇತರ ಸಂಸ್ಥೆ ಉಳಿದಿರುವ ಬಾಂಬುಗಳನ್ನು ಹುಡುಕಿ ನಿಷ್ಕ್ರಿಯಗೊಳಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದೆ.  
ಮೂರು ವರ್ಷದ ಹಿಂದೆ ನಾನು ನೋಡಿದ್ದ ಅಮೆರಿಕದ ವಾಷಿಂಗ್ಟನ್ ನಗರದ ವಿಯೆಟ್ನಾಮ್ ಸ್ಮಾರಕದಲ್ಲಿ ಹೂಗುಚ್ಛ ಇಟ್ಟು ಮೌನವಾಗಿ ಅಳುವ ದುರ್ಭಾಗ್ಯರ ನೆನಪು ಬಂತು. ಯಾರದೋ ಪ್ರತಿಷ್ಠೆ ಕಾಯಲು ಅಮೆರಿಕದಿಂದ ವಿಯೆಟ್ನಾಂಗೆ  ಹೋಗಿ  ಅಲ್ಲಿ ಪ್ರಾಣಕಳಕೊಂಡ ಸೈನಿಕರಿಗೆ ವಾಷಿಂಗ್ಟನ್‍ನಲ್ಲಿ ಸ್ಮಾರಕವಿದೆ; ಆದರೆ ತಾವೇನೂ ಮಾಡದೆ ಅಮೆರಿಕದ ಅಹಂಗೆ ತುತ್ತಾಗಿ ಮಡಿದ ಲಾವೋಸಿನ ಸಹಸ್ರಾರು ಅಮಾಯಕರಿಗೆ ಎಲ್ಲಿದೆ ಸ್ಮಾರಕ?
ಅಮೆರಿಕದ ಗೋಜಿಗೇ ಹೋಗಿರದ  ಒಂದು ಸಣ್ಣ ದೇಶವನ್ನು ನಾಶಮಾಡಿದ  ದೊಡ್ಡಣ್ಣನ ‘ದಾದಾಗಿರಿ’ ಯ ಪರಿಣಾಮವನ್ನು ನೋಡಿ, ಅದರ ಬಗ್ಗೆ ಅಲ್ಲಿಯೇ ಕೇಳಿ, ಊರಿಗೆ ಬಂದ ಮೇಲೆ ಇನ್ನಷ್ಟು ಮಾಹಿತಿ ಸಂಗ್ರಹಿಸಿದೆ.  ಯುದ್ಧ ಯಾರಿಗೋಸ್ಕರ ಎಂಬ ಪ್ರಶ್ನೆ ಕಾಡಿತು. ಈ ಲೇಖನದ ಆರಂಭದಲ್ಲಿ ತಿಳಿಸಿದ ಘಟನೆಯನ್ನು ವರದಿ ಮಾಡಿದ “ಐರಿಶ್ ಟೈಮ್ಸ್” ಪತ್ರಿಕೆಯ ಲೇಖಕಿ, ಅಮೆರಿಕದ ಇಬ್ಬರು ಪ್ರವಾಸಿಗಳು ಜಾಡಿಗಳ ಮೈದಾನಕ್ಕೆ ಭೇಟಿ ನೀಡಿದ ಬಳಿಕ ಸಂದರ್ಶಕರ ಪುಸ್ತಕದಲ್ಲಿ ಬರೆದ ಮಾತುಗಳನ್ನು ಉದ್ಧರಿಸಿದ್ದಳು. ಒಬ್ಬಳು ಹೀಗೆ ಬರೆದಿದ್ದಳು: ‘ಒಬ್ಬ ಅಮೆರಿಕದ ಪ್ರಜೆಯಾಗಿ ನನ್ನ ದೇಶ ಅಮಾಯಕ ಲಾವೋಸಿಯನರ ಮೇಲೆ ನಡೆಸಿದ ಹಿಂಸೆಗೆ ನಾನು ಅತೀವ ನಾಚಿಕೆ ಪಡುತ್ತೇನೆ. ಇದು ಮನುಜಕುಲಕ್ಕೆ ನಡೆಸಿದ ಘೋರ ಅಪರಾಧ’. 2017ರಲ್ಲಿ ಲಾವೋಸಿಗೆ ಭೇಟಿ ನೀಡಿದ ಅಮೆರಿಕದ ಅಧ್ಯಕ್ಷ ಬಾರಕ್ ಒಬಾಮ ತನ್ನ ದೇಶವು ಮಾಡಿದ ಅಪರಾಧಕ್ಕೆ ಆ ದೇಶದ ಕ್ಷಮೆ ಕೇಳುವ ಸೌಜನ್ಯವನ್ನೂ ತೋರಲಿಲ್ಲ.
ಮನುಷ್ಯ ಸಾಧಿಸಿದುದನ್ನು ಅನೇಕ ಪ್ರವಾಸಗಳಲ್ಲಿ ಗಮನಿಸಿ ಮೆಚ್ಚಿಕೊಂಡ ನಮಗೆ, ಅದೇ ಮನುಷ್ಯ ತನ್ನ ಅಹಂನಿಂದ ಮನುಜಕುಲಕ್ಕೆ ಎಷ್ಟು ಹಾನಿಯನ್ನು ಮಾಡಬಲ್ಲ ಎಂಬುದು ಲಾವೋಸಿನ ಪ್ರವಾಸದ ಅಪೂರ್ವ ಅನುಭವ.
ಚಿತ್ರ 1: ಹರಡಿರುವ ಜಾಡಿಗಳು:

ಚಿತ್ರ 2:  ಜಾಡಿಗಳ ಸಮೀಪದ ನೋಟ (ನಡುವೆ ದಿನೇಶ)
ಚಿತ್ರ 3: ಬಾಂಬಿನಿಂದಾದ ಹಳ್ಳ