ಅಮೆರಿಕಾದಲ್ಲಿ ಜೈಲುವಾಸ (ಓಷೋ ರಜನೀಶ್ ಅನುಭವಗಳು)
೨೪ರ ಮಾರ್ಚ್ ೧೯೮೧ರಿಂದ ಮೂರುವರೆ ವರ್ಷಗಳ ಕಾಲ ನಾನು ಮೌನದ ಮೊರೆ ಹೋದೆ. ಈ ಅವಧಿಯಲ್ಲಿ ಅಲರ್ಜಿಯೊಂದಿಗೆ ವಿಪರೀತ ಬೆನ್ನುನೋವು ಕಾಣಿಸಿಕೊಂಡಿತು. ಲಂಡನ್ನಿನಿಂದ ತಜ್ಞವೈದ್ಯರು ಬಂದು ತಪಾಸಣೆ ಮಾಡಿ, ಈ ಬೆನ್ನು ನೋವಿಗೆ ಪಶ್ಚಿಮ ದೇಶದಲ್ಲಿ ಮಾತ್ರ ಚಿಕಿತ್ಸೆ ಇದೆ ಎಂದು ತಿಳಿಸಿದರು. ಅಮೆರಿಕಾದ ನನ್ನ ಸನ್ಯಾಸಿಗಳೂ ಒಂದೇ ಸಮನೆ ಆಹ್ವಾನಿಸುತ್ತಿದ್ದುದರಿಂದ ೧ನೇ ಜೂನ್ ೧೯೮೧ರಂದು ಮುಂಬಯಿ ವಿಮಾನ ನಿಲ್ದಾಣದಿಂದ ನ್ಯೂಯಾರ್ಕಿಗೆ ತೆರಳಿದೆ. ಹೊಸ ಧಾರ್ಮಿಕ ಪಂಥಗಳು ತಲೆಯೆತ್ತುವುದನ್ನು ಇಷ್ಟಪಡದ ಅಮೆರಿಕಾದ ಅಧ್ಯಕ್ಷ ರೊನಾಲ್ಡ್ ರೇಗನ್‌ರ ಸರ್ಕಾರವು ೧೯೮೫ರಲ್ಲಿ ನನ್ನನ್ನು ಹಾಗು ನನ್ನ ಕಾರ್ಯದರ್ಶಿ ಶೀಲಾರನ್ನು ಬಂಧಿಸುವ ಪ್ರಯತ್ನ ನಡೆಸಿತು. ಓರೆಗಾನ್‌ನ ರಾಜ್ಯಮಟ್ಟದ ಗವರ್ನರ್ ಚುನಾವಣೆಯಲ್ಲಿ ಬಹುಮತವನ್ನು ಪಡೆಯಲು ರಜನೀಶ್‌ಪುರಂನ ವಿರುದ್ಧ ಅಮೆರಿಕನ್ ಪ್ರಜೆಗಳನ್ನು ಎತ್ತಿಕಟ್ಟಿದನು. ಅಮೆರಿಕಾದ ನ್ಯಾಯಾಲಯಗಳಲ್ಲಿ ಹೋರಾಡುತ್ತಲೇ ನನ್ನ ವೀಸಾ ಅವಧಿಯು ಮುಗಿಯಿತು. ಅಮೆರಿಕನ್ ಸರ್ಕಾರ ನನ್ನನ್ನು ಬಂಧಿಸಲು ಹವಣಿಸುತ್ತಿದೆ ಎಂಬ ಸುದ್ದಿ ಆಗಾಗ ಬರುತ್ತಿತ್ತು. ಇದರಲ್ಲಿ ಹವಣಿಸುವುದೇನು ಬಂತು? ನಾನು ಒಂದು ಕಾಗದದ ಕತ್ತಿಯನ್ನೂ ಇಟ್ಟುಕೊಳ್ಳುವವನಲ್ಲ. ಅಮೆರಿಕನ್ ಸರ್ಕಾರವು ಮಿಲಿಟರಿ ಸೈನ್ಯದ ನೆರವಿನಿಂದ ನನ್ನನ್ನು ಬಂಧಿಸಲು ಎಫ್‌ಬಿಐಗೆ ಆದೇಶಿಸಿದಾಗ ಸೇನಾಧಿಕಾರಿ ನಕ್ಕುಬಿಟ್ಟನಂತೆ. “ಒಬ್ಬ ನಿರುಪದ್ರವಿ ವ್ಯಕ್ತಿಯನ್ನು ಬಂಧಿಸಲು ಅಮೆರಿಕನ್ ಸೇನಾಪಡೆ ಹೋಗುವುದೆಂದರೇನು? ಹೊರಜಗತ್ತಿನೆದುರು ನಮ್ಮ ಸೈನ್ಯ ನಗೆಗೀಡಾಗುತ್ತದೆ” ಎಂದು ಸೇನಾ ಮುಖ್ಯಸ್ಥ ನಿರಾಕರಿಸಿದನಂತೆ. ವೀಸಾ ಅವಧಿ ಮುಗಿದಿರುವ ಕಾರಣ ಬಂಧಿಸಬಹುದಾದರೂ ನಾನು ಮತ್ತೆ ವೀಸಾಗೆ ಅರ್ಜಿ ಸಲ್ಲಿಸಿದ್ದರಿಂದ ಆ ಆಧಾರದ ಮೇಲೆ ಬಂಧಿಸಲು ಸಾಧ್ಯವಿರಲಿಲ್ಲ. “ವೀಸಾ ಸಿಗದಿದ್ದರೆ ಅದನ್ನಾದರೂ ಹೇಳಿ, ಹೊರಟು ಹೋಗುತ್ತೇನೆ” ಎಂದೂ ಅರ್ಜಿಯಲ್ಲಿ ಉಲ್ಲೇಖಿಸಿದ್ದೆ. ಆದರೆ ಅವರು ನನ್ನ ಅರ್ಜಿಗೆ ಆತನಕ ಪ್ರತಿಕ್ರಿಯಿಸಿರಲಿಲ್ಲ. “ಕ್ರಿಶ್ಚಿಯನ್ ಚರ್ಚುಗಳು ಒತ್ತಡ ಹೇರುತ್ತಿವೆ ಅದಕ್ಕಾಗಿ ಬಂಧಿಸುತ್ತಿದ್ದೇವೆ” ಎಂಬ ನಿಜವನ್ನು ಬಾಯಿಬಿಟ್ಟು ಹೇಳುವಂತಿರಲಿಲ್ಲ. ಅಮೆರಿಕಾ ಸರ್ಕಾರದ ಬಳಿ ನನ್ನನ್ನು ಬಂಧಿಸಲು ಸರಿಯಾದ ಪುರಾವೆಗಳಿಲ್ಲದ್ದರಿಂದ ಹೀಗೆ ಬಳಸು ದಾರಿಯಲ್ಲಿ ಬಂಧಿಸಲು ಹವಣಿಸುತ್ತಿತ್ತು. ಅವರು ನೇರವಾಗಿ ನನ್ನ ಆಶ್ರಮವನ್ನು ಪ್ರವೇಶಿಸಿ “ಅಧ್ಯಕ್ಷರ ಅತಿಥಿಗೃಹಕ್ಕೆ, ಅಂದರೆ ಜೈಲಿಗೆ, ನಿಮ್ಮನ್ನು ಆಹ್ವಾನಿಸಲಾಗಿದೆ, ದಯವಿಟ್ಟು ಬನ್ನಿ” ಎಂದು ಹೇಳಿದ್ದರೂ ನಾನು ಎರಡನೆಯ ಮಾತಿಲ್ಲದೆ ಅವರೊಂದಿಗೆ ನಡೆದುಬಿಡುತ್ತಿದ್ದೆ.
ನಾನು ಅಮೆರಿಕಾಗೆ ಯಾವ ರೀತಿಯ ಹಾನಿ ಮಾಡಿದ್ದೇನೆಂದು ನನಗರ್ಥವಾಗಲಿಲ್ಲ. ನನ್ನ ಸನ್ಯಾಸಿಗಳು ನೂರಿಪ್ಪತ್ತು ಚದರ ಮೈಲಿ ವಿಸ್ತೀರ್ಣದ ಮರುಭೂಮಿಯನ್ನು ವಾಸಯೋಗ್ಯ ಪ್ರದೇಶವನ್ನಾಗಿ ಪರಿವರ್ತಿಸಿದ್ದರು. ಆ ಪ್ರದೇಶದಲ್ಲಿ ನಾವು ಮನೆಗಳನ್ನು, ಸಣ್ಣ ಸಣ್ಣ ಜಲಾಶಯಗಳನ್ನು, ಅಣೆಕಟ್ಟುಗಳನ್ನು, ಕಟ್ಟಿದ್ದೆವು. ಐದುವರ್ಷಗಳ ಕಾಲ ಮಳೆ ಬೀಳದಿದ್ದರೂ ಸಾಕಾಗುವಷ್ಟು ನೀರಾವರಿಯನ್ನು ಅಭಿವೃದ್ಧಿ ಪಡಿಸಿದ್ದೆವು. ಅಲ್ಲದೆ ಮಳೆಯ ಮೋಡಗಳನ್ನು ಆಕರ್ಷಿಸಬಲ್ಲ ಲಕ್ಷಾಂತರ ಮರಗಳನ್ನು ಬೆಳೆಸಿದ್ದೆವು. ನೀರಾವರಿ, ಹೊಲಗದ್ದೆ, ಹೈನುಗಾರಿಕೆ, ಹಣ್ಣು ತರಕಾರಿಗಳ ತೋಟ, ವಿದ್ಯುದುತ್ಪಾದನೆ, ಹೀಗೆ ಯಾವ ಮೂಲಭೂತ ಅಗತ್ಯದ ವಿಷಯದಲ್ಲೂ ಸರ್ಕಾರದ ಮುಲಾಜಿಲ್ಲದೆ ಬದುಕುತ್ತಿದ್ದೆವು. ಆ ಭೂಮಿಯನ್ನೂ ತಕ್ಕ ಬೆಲೆ ಕೊಟ್ಟು ಖರೀದಿಸಿದ್ದೆವು. ಆದರೂ ಸರ್ಕಾರದ ಚಿಲ್ಲರೆ ಕೇಸುಗಳ ವಿರುದ್ಧ ಕೋರ್ಟಿನಲ್ಲಿ ಹೋರಾಡುವ ಪರಿಸ್ಥಿತಿ ಏರ್ಪಟ್ಟಿತ್ತು. ನನ್ನ ಬಳಿ ಅಮೆರಿಕಾದ ಕಾನೂನಿನ ವಿಷಯದಲ್ಲಿ ಪರಿಣತಿ ಹೊಂದಿದ ನಾನೂರಕ್ಕೂ ಹೆಚ್ಚು ವಕೀಲ ಸನ್ಯಾಸಿಗಳಿದ್ದರು, ಆನಂದೋ ಹಾಗು ಸಂಗೀತ್ ಎಂಬ ಇಬ್ಬರು ಅಟಾರ್ನಿ ಜನರಲ್‌ಗಳಿದ್ದರು. ನ್ಯಾಯಸಮ್ಮತವಾಗಿ ಅಮೆರಿಕಾ ಸರ್ಕಾರ ನಮ್ಮ ವಿರುದ್ಧ ಹೋರಾಟ ನಡೆಸಿದ್ದರೆ ನಮ್ಮ ಆಶ್ರಮ ಹಾಗೆ ನಾಶವಾಗುತ್ತಿರಲಿಲ್ಲ.
ಆಶ್ರಮವನ್ನು ನೆಲಸ ಮಾಡಲು ಹೊರಟಾಗ ನಾನು “ನಿಮಗೆ ನಿಜವಾಗಿಯೂ ಇಸ್ರೇಲ್‌ಗೆ ನೆರವು ನೀಡಬೇಕೆಂಬ ಬಯಕೆ ಇದ್ದರೆ ನಮ್ಮ ಆಶ್ರಮವನ್ನು ನಾಶ ಮಾಡದೇ ಆ ಸಾವಿರಾರು ಎಕರೆ ಭೂಮಿಯೊಂದಿಗೆ ಇಡೀ ಓರೆಗಾನ್‌ನನ್ನು ಹೊಸ ಇಸ್ರೇಲ್ ಎಂದು ಘೋಷಿಸಿ ಇಸ್ರೇಲ್‌ಗೆ ಕೊಟ್ಟುಬಿಡಿ. ಅಲ್ಲಿನ ಯಹೂದಿಗಳನ್ನೂ ಇಲ್ಲಿ ಕರೆಸಿಕೊಂಡು ಇಸ್ರೇಲನ್ನು ಮುಸ್ಲಿಮರಿಗೆ ಬಿಟ್ಟುಕೊಡಿ. ಆ ಭೂಮಿ ನ್ಯಾಯವಾಗಿ ಮುಸ್ಲಿಮರಿಗೆ ಸೇರಿದ್ದು. ನಾನು ಹಾಗು ನನ್ನ ಸನ್ಯಾಸಿಗಳು ನಮ್ಮ ಸಾವಿರಾರು ಎಕರೆ ಭೂಮಿಯನ್ನು ಜೊತೆಗೆ ಅಲ್ಲಿ ನಾವು ನಿರ್ಮಿಸಿರುವ ರಸ್ತೆಗಳು, ಹೋಟೆಲ್‌ಗಳು, ಮನೆಗಳು, ಸೇತುವೆಗಳು, ಅಣೆಕಟ್ಟುಗಳು, ಹೊಲಗದ್ದೆಗಳು ಇವೆಲ್ಲದರ ಸಮೇತ ಸ್ನೇಹಪೂರ್ವಕವಾಗಿ ಇಸ್ರೇಲಿನ ಯಹೂದಿಗಳಿಗೆ ಬಿಟ್ಟುಕೊಡಲು ಸಿದ್ಧರಿದ್ದೇವೆ. ಹೀಗೆ ನಮ್ಮ ನೆಲ ಅವರ ಹೊಸ ರಾಜಧಾನಿಯಾಗಲಿ. ಓರೆಗಾನ್‌ನ ಅರ್ಧ ಭೂಮಿ ನಮಗೆ ಸೇರಿದ್ದರೆ ಇನ್ನರ್ಧ ಭೂಮಿ ಫೆಡರಲ್ ಸರ್ಕಾರಕ್ಕೆ ಸೇರಿದೆ. ಸರ್ಕಾರಕ್ಕೆ ಇಸ್ರೇಲ್ ಬಗ್ಗೆ ನಿಜವಾದ ಕಾಳಜಿ ಇದ್ದರೆ ತಮ್ಮ ಜಾಗವನ್ನೂ ಬಿಟ್ಟುಕೊಡಲಿ. ಅದೇನೂ ಅಂತಹ ಜನನಿಬಿಡ ಪ್ರದೇಶವಲ್ಲ. ಈಗಲಾದರೂ ಅಮೆರಿಕಾ ತನ್ನ ನಿಜವಾದ ಬಣ್ಣ ತೋರಿಸಲಿ” ಎಂದು ಪತ್ರಿಕಾ ಹೇಳಿಕೆ ನೀಡಿದ್ದೆ.
ಇಸ್ರೇಲ್ ಸಮಸ್ಯೆಯು ಯಹೂದಿಗಳನ್ನು ನಾಶಪಡಿಸಲು ಅಮೆರಿಕಾ ಹುಟ್ಟುಹಾಕಿದ ಒಂದು ರಾಜಕೀಯ ಪಿತೂರಿಯಾಗಿತ್ತು. ತಮ್ಮ ಕೈಗಳು ರಕ್ತಸಿಕ್ತವಾಗದಂತೆ ಆ ಕೆಲಸವನ್ನು ಅಲ್ಲಿ ಅವರು ಮುಸ್ಲಿಮರಿಂದ ಮಾಡಿಸಿ ತಾವು ಶತ್ರುಗಳಿಗೂ ಎಷ್ಟೊಂದು ಕರುಣೆ ತೋರಿಸುತ್ತಿದ್ದೇವೆ ಎಂದು ಜಗತ್ತಿಗೆಲ್ಲ ಪ್ರಚಾರ ಮಾಡಿಕೊಳ್ಳುತ್ತಿದ್ದರು. ತಮ್ಮ ತುಕ್ಕು ಹಿಡಿದ ಯುದ್ಧ ಶಸ್ತ್ರಗಳನ್ನು ದುಬಾರಿ ಬೆಲೆಗೆ ಇಸ್ರೇಲಿನ ಮುಸ್ಲಿಮರಿಗೆ ಮಾರಾಟ ಮಾಡುತ್ತಿದ್ದರು. ಅಮೆರಿಕಾದ ಬಹುಪಾಲು ಶ್ರೀಮಂತರುಗಳು ಯಹೂದಿಗಳಾದ ಕಾರಣ ಅವರು ಇಸ್ರೇಲನ್ನು ರಕ್ಷಿಸುವ ನಾಟಕ ಆಡುತ್ತಿದ್ದ ಅಮೆರಿಕನ್ ಸರ್ಕಾರಕ್ಕೆ ಮಿಲಿಯನ್ ಗಟ್ಟಲೆ ಡಾಲರ್ ಸುರಿಯುತ್ತಿದ್ದರು. ಯಹೂದಿಗಳ ಹಣವನ್ನು ಬಳಸಿಕೊಂಡೇ ಯಹೂದಿಗಳನ್ನು ಕೊಲೆ ಮಾಡುತ್ತಿತ್ತು. ಹಿಂದಿನ ದಿನವಷ್ಟೇ ಸರ್ವೋಚ್ಚ ನ್ಯಾಯಾಲಯವು ಅಮೆರಿಕನ್ ಸರ್ಕಾರಕ್ಕೆ ಕಮ್ಯೂನಿನ ಸಮಸ್ತ ಆಸ್ತಿಯನ್ನೂ ನಮಗೆ ಹಿಂದಿರುಗಿಸಬೇಕು ಎಂದು ಆದೇಶಿಸಿತ್ತು. ಹೀಗೆ ನಮ್ಮ ಸಾವಿರಾರು ಎಕರೆ ಭೂಮಿ ಮತ್ತೆ ನಮ್ಮ ಕೈಸೇರಿದ್ದರಿಂದ ನಾನು ಅಮೆರಿಕನ್ ಸರ್ಕಾರಕ್ಕೆ ಈ ಸವಾಲನ್ನೆಸೆದಿದ್ದೆ.
ರಾಜಕಾರಿಣಿಗಳು ಹಾಗು ಚರ್ಚಿನ ಪಾದ್ರಿಗಳು ನನ್ನನ್ನು ಬಂಧಿಸಲು ಒಂದೇ ಸಮನೆ ಒತ್ತಡ ಹೇರುತ್ತಿದ್ದರಂತೆ. ಯಾವುದಾದರೂ ತಪ್ಪನ್ನು ಕಂಡುಹಿಡಿದು ನನ್ನನ್ನು ನ್ಯಾಯಾಂಗ ಬಂಧನದಲ್ಲಿಡಲು ಅಮೆರಿಕನ್ ಸರ್ಕಾರ ಐದು ವರ್ಷಗಳಲ್ಲಿ ಐದೂವರೆ ಮಿಲಿಯನ್ ಡಾಲರ್ ಖರ್ಚು ಮಾಡಿತ್ತು. ಕೋಣೆಯಿಂದ ಹೊರಬರದ, ಕೂತಿರುವ ಕುರ್ಚಿಯನ್ನು ಬಿಟ್ಟು ಮೇಲೇಳದ, ಒಂದು ಲೋಟ ಚಹಾವನ್ನು ಮಾಡಿಕೊಳ್ಳಲೂ ಗೊತ್ತಿಲ್ಲದ ನಾನು ಯಾವ ಅಪರಾಧವನ್ನು ತಾನೇ ಮಾಡಬಲ್ಲೆ? ವಿನಾಕಾರಣ ದೇಶದಿಂದ ಉಚ್ಚಾಟನೆ ಮಾಡಿದರೆ ನಾನು ಸುಪ್ರೀಂ ಕೋರ್ಟಿನಲ್ಲಿ ದೂರು ದಾಖಲಿಸುತ್ತೇನೆ ಎಂದು ಅವರಿಗೆ ಗೊತ್ತಿತ್ತು. “ಯೇಸುಕ್ರಿಸ್ತ ದೇವರ ಪುತ್ರನಲ್ಲ” ಎಂದು ಹೇಳಿದ್ದರಿಂದ ಅಲ್ಲಿನ ಕ್ರಿಶ್ಚಿಯನ್ನರು ನನ್ನ ವಿರುದ್ಧ ಕೆಂಡಾಮಂಡಲವಾದರು. ಒಮ್ಮೆ ನಾನು “ಯೇಸುಕ್ರಿಸ್ತನು “ನಾನು ದೇವರ ಏಕಮಾತ್ರ ಪುತ್ರ”, “ನಾನು ಜಗತ್ತನ್ನು ರಕ್ಷಿಸಲು ಬಂದಿದ್ದೇನೆ” ಇತ್ಯಾದಿ ಮೂರ್ಖ ಹೇಳಿಕೆಗಳನ್ನು ನೀಡುತ್ತ ತಲೆಕೆಟ್ಟವನಂತೆ ರಸ್ತೆಯಲ್ಲಿ ಓಡಾಡುತ್ತಿದ್ದ. ಅವನು ಹಾಗೆ ಹೇಳಿದಾಗ ಇವರಾದರೂ ಸುಮ್ಮನಿದ್ದು “ಹೌದೇ, ಹಾಗಿದ್ದರೆ ನಿನ್ನ ಮಾತೇ ನಿಜ” ಎಂದು ತಮಾಷೆ ಮಾಡಿ ಮುಂದೆ ಹೋಗದೇ ಅವನನ್ನು ಶಿಲುಬೆಗೇರಿಸುವುದೇ? ಈ ಜನ ಇನ್ನೂ ಮೂರ್ಖರು” ಎಂದಿದ್ದೆ. ಅದಕ್ಕಾಗಿ ಹೀಗೆಲ್ಲ ಕಿರುಕುಳ ನೀಡಿದರು.
ಅಮೆರಿಕಾ ಹೊಸದೇಶ, ಸಮೃದ್ಧ ದೇಶ, ಹಾಗು ವಿದ್ಯಾವಂತ ದೇಶ ಎಂದೆಲ್ಲ ಭಾವಿಸಿಕೊಂಡಿದ್ದ ನನಗೆ ನಿಜಕ್ಕೂ ನಿರಾಶೆಯಾಯಿತು. ಆ ಸರ್ಕಾರ ನಮ್ಮನ್ನು ಸಂಪೂರ್ಣ ನೆಲಸಮ ಮಾಡಲು ನಿರ್ಧರಿಸಿತ್ತು. ಏಕೆಂದರೆ ಅಮೆರಿಕಾದ ನನ್ನ ಲಕ್ಷಾಂತರ ಸನ್ಯಾಸಿಗಳು ಕ್ರಿಶ್ಚಿಯನ್ನರಾಗಿದ್ದರು ಇಲ್ಲವೆ ಯಹೂದಿಗಳಾಗಿದ್ದರು. ನಾನೇನೂ ಮತಾಂತರ ಮಾಡಲು ಅಲ್ಲಿಗೆ ಹೋದವನಲ್ಲ. ನಾನು ಹಾಗು ನನ್ನ ಸನ್ಯಾಸಿಗಳು ಸೇರಿ ಕಮ್ಯುನಿಸಂ ನಂತಹ ಒಂದು ವ್ಯವಸ್ಥೆಯನ್ನು ಸ್ಥಾಪಿಸಲಿರುವೆವು ಎಂದು ಅವರು ಹೆದರಿದರು. ಓರೆಗಾನ್‌ನ್ನು ಒಂದು ಪ್ರತ್ಯೇಕ ನಗರವನ್ನಾಗಿ ಘೋಷಿಸಬೇಕೆಂಬ ನಮ್ಮ ಮನವಿಯನ್ನು ಪರಿಶೀಲಿಸಲು ಮೂವರು ಮ್ಯಾಜಿಸ್ಟ್ರೇಟರುಗಳ ಒಂದು ಪೀಠವನ್ನು ಸ್ಥಾಪಿಸಲಾಗಿತ್ತು. ಆ ಮೂವರಲ್ಲಿ ಒಬ್ಬಾತ ಆಶ್ರಮದ ಪರವಾಗಿದ್ದ, ಆಗಾಗ ಆಶ್ರಮಕ್ಕೆ ಭೇಟಿ ನೀಡುತ್ತಿದ್ದ. ನನ್ನ ಸೆಕ್ರೇಟರಿಗೆ “ಹೊರಗಿನ ಬೆಳವಣಿಗೆಗಳು ಅನುಕೂಲಕರವಾಗಿಲ್ಲ, ನಿಮ್ಮ ಗುರು ಬೇರೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ, ಸ್ವಲ್ಪ ಹುಷಾರಾಗಿರಲು ಹೇಳಿ” ಎಂದು ಸಲಹೆ ನೀಡಿದ್ದ. ಆತನ ನೆರವಿನಿಂದ ಓರೆಗಾನ್‌ಗೆ ಪ್ರತ್ಯೇಕ ನಗರದ ಸ್ಥಾನಮಾನ ದೊರಕಿತು. ಎರಡು ವರ್ಷಗಳ ಕಾಲ ಸರ್ಕಾರದಿಂದ ನಮಗೆ ಅನುದಾನ ಸಿಕ್ಕಿತು, ಭೂಪಟಗಳಲ್ಲೂ ರಜನೀಶ್‌ಪುರಂನ ಚಿತ್ರವನ್ನು ಸೇರಿಸಲಾಗಿತ್ತು. ಆದರೆ ಅಮೆರಿಕನ್ ಸರ್ಕಾರ ಆ ಮ್ಯಾಜಿಸ್ಟ್ರೇಟ್‌ನನ್ನು ಇದ್ದಕ್ಕಿದ್ದಂತೆ ನೈಜೀರಿಯಾಗೆ ವರ್ಗಾವಣೆ ಮಾಡಿ ಅವನ ಜಾಗದಲ್ಲಿ ಸರ್ಕಾರದ ಪರವಾದ ಬೇರೊಬ್ಬ ನ್ಯಾಯಾಧೀಶನನ್ನು ಕೂರಿಸಿತು. ರೇಗನ್‌ನ ಕುತಂತ್ರವನ್ನು ಮುನ್ನವೇ ನಾನು ಊಹಿಸಿದ್ದೆ. ಪ್ರತ್ಯೇಕ ನಗರವೆಂಬ ಸ್ಥಾನಮಾನ ರದ್ದಾದರೆ ಇದನ್ನು ನೆಲಸಮ ಮಾಡುವುದು ಸುಲಭ ಎಂದು ಅವರ ಎಣಿಕೆ. ಆ ವ್ಯಕ್ತಿ ಅಧಿಕಾರಕ್ಕೆ ಬಂದ ಮರುದಿನವೇ ರಜನೀಶ್‌ಪುರಂಗೆ ಸಿಕ್ಕಿದ್ದ ಪ್ರತ್ಯೇಕ ನಗರದ ಸ್ಥಾನಮಾನ ರದ್ದಾಯಿತು. ಅವರ ಎಣಿಕೆಯಂತೆ ಆಶ್ರಮವೂ ನೆಲಸಮವಾಯಿತು. ಒರೆಗಾನ್‌ನ ಅಟಾರ್ನಿ ಜನರಲ್ ಡೇವಿಡ್ ಬಿ. ಫ್ರಾನ್‌ಮೆಯರ್ ಆಶ್ರಮವು ಚರ್ಚಿನ/ರಾಜ್ಯದ ಸಂವಿಧಾನವನ್ನು ಮನ್ನಿಸದ ಕಾರಣ ಇದೊಂದು ಅಕ್ರಮ ಪ್ರದೇಶವೆಂದು ಘೋಷಿಸಿ ಅಲ್ಲಿ ನಿಯೋಜಿಸಿದ್ದ ಪೊಲೀಸ್ ದಳವನ್ನು ಹಿಂದಕ್ಕೆ ಪಡೆದುಕೊಂಡ. ಅಮೆರಿಕಾದಂತಹ ಪ್ರಜಾಪ್ರಭುತ್ವ ದೇಶದಲ್ಲಿ ನ್ಯಾಯಾಲಯ ತೀರ್ಮಾನಿಸಬೇಕಾದ ವಿಚಾರವನ್ನು ಒಬ್ಬ ರಾಜಕಾರಿಣಿ ಹೇಗೆ ತೀರ್ಮಾನಿಸುವನೋ ನನಗರ್ಥವಾಗಲಿಲ್ಲ.
ಒಂದು ವೇಳೆ ನಾನು ಅಮೆರಿಕಾದಿಂದ ಕಾಲ್ತೆಗೆದರೆ ನೇರವಾಗಿ ಜರ್ಮನಿಯನ್ನು ಪ್ರವೇಶಿಸುತ್ತೇನೆ ಎಂದು ಜರ್ಮನ್ ಸರ್ಕಾರ ಊಹಿಸಿತು. ಏಕೆಂದರೆ ಅಮೆರಿಕಾವನ್ನು ಬಿಟ್ಟರೆ ಜರ್ಮನಿಯಲ್ಲಿ ನಮ್ಮ ಆಶ್ರಮಗಳು ಅತಿ ಹೆಚ್ಚು ಸಂಖ್ಯೆಯಲ್ಲಿದ್ದವು. ನಾನು ಜರ್ಮನ್ ಪ್ರವೇಶಿಸದಂತೆ ಅಲ್ಲಿನ ಸರ್ಕಾರ ಎಲ್ಲ ರೀತಿಗಳಲ್ಲೂ ನಿರ್ಬಂಧ ಹೇರಿತು. ಅಧಿಕಾರಶಾಹಿಗಳ ಎದೆಗಳಲ್ಲಿ ನಡುಕ ಉಂಟಾಗಿದೆ ಎಂದು ತಿಳಿಯಲು ಇದಕ್ಕಿಂತ ಇನ್ನೇನು ಬೇಕು. ಆ ಸರ್ಕಾರ ನನ್ನ ವಿರುದ್ಧ ಹಲವು ದೂರುಗಳನ್ನು ದಾಖಲಿಸಿಕೊಂಡಿತಂತೆ. ನಾನು ಜರ್ಮನಿಯ ನೆಲದ ಮೇಲೆ ಆತನಕ ಕಾಲಿಟ್ಟವನೇ ಅಲ್ಲ. ನನ್ನಿಂದ ಜರ್ಮನಿಯಲ್ಲಿ ಹೇಗೆ ಅಪರಾಧ ಉಂಟಾದೀತೆಂದು ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಒಂದು ವೇಳೆ ಬಂದರೆ ಎಲ್ಲ ಮೊಕದ್ದಮೆಗಳನ್ನು ನಡೆಸಿ ಮುಗಿದ ಮೇಲೆಯೇ ನಿನ್ನನ್ನು ಆಚೆ ಕಳಿಸುವುದು ಎಂದು ಹೇಳಿತ್ತು. ಸರ್ಕಾರಗಳು ನನಗೆ ಹೆದರುವುದನ್ನು ಕಂಡು ನನ್ನ ಕೆಲಸ ನೆರವೇರುತ್ತಿದೆ ಎಂದು ಒಳಗೇ ಖುಷಿಯಾಗುತ್ತಿತ್ತು. ಜರ್ಮನಿಯ ನನ್ನ ಆಶ್ರಮಕ್ಕೆ ಪ್ರತಿದಿನ ಸಾವಿರಾರು ಜನ ಭೇಟಿ ನೀಡುತ್ತಿದ್ದರು, ಕ್ಯೂನಲ್ಲಿ ನಿಂತು ಅಲ್ಲಿನ ಧ್ಯಾನದ ತರಗತಿಗಳಲ್ಲಿ ಪಾಲ್ಗೊಳ್ಳುತ್ತಿದ್ದರಂತೆ. ಚರ್ಚುಗಳ ಹೊರಗೆ ಎಲ್ಲಿಯೂ ಕ್ಯೂ ಕಾಣಿಸುತ್ತಿಲ್ಲವೆಂದು ಅವರಿಗೆ ಭೀತಿಯಾಗಿತ್ತು. ನಮ್ಮ ಸ್ವಾತಂತ್ರ್ಯ, ಆಲೋಚನೆ, ಸ್ಫೂರ್ತಿಗಳು ಅಧಿಕಾರ ಶಾಹಿಗೆ ಎಂದೂ ಅರ್ಥವಾಗುವುದಿಲ್ಲ.
“ನಾವು ಯುವಕರನ್ನು ಆಕರ್ಷಿಸಿ ಅವರನ್ನು ಮತಾಂತರಿಸುವ ಕೆಲಸದಲ್ಲಿ ಭಾಗಿಗಳಾಗಿದ್ದೇವೆ” ಎಂದು ಜರ್ಮನಿಯ ಒಬ್ಬ ಮಂತ್ರಿ ನಮ್ಮ ವಿರುದ್ಧ ಮೊಕದ್ದಮೆ ಹೂಡಿದ್ದ. ಆ ಬಗ್ಗೆ ಒಂದೇ ಒಂದು ಸಾಕ್ಷ್ಯಾಧಾರವನ್ನು ಒದಗಿಸಲಾಗದೇ ಆ ಮೊಕದ್ದಮೆ ಬಿದ್ದುಹೋಯಿತು. ಆಗ ನಮ್ಮ ಜರ್ಮನಿಯ ಕಾನೂನು ತಜ್ಞ ನಮ್ಮ ನಿಯತಕಾಲಿಕೆಯಲ್ಲಿ ಈ ಕುರಿತು ಒಂದು ಲೇಖನವನ್ನು ಬರೆದು ಜರ್ಮನಿಯ ಆ ಮಂತ್ರಿಯನ್ನು ’ಸುಪ್ರಾ ಫ್ಯಾಸಿಸ್ಟ್’ ಎಂದು ಕರೆದಿದ್ದ. ಈ ಮಾತನ್ನೇ ದೊಡ್ಡದು ಮಾಡಿ ಆತ ಪುನಃ ನಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ. ಆತ ನಮಗೆ ಕಳಿಸಿದ್ದ ಲಾಯರ್ ನೋಟಿಸ್ ಹಾಗು ದೂರಿನಲ್ಲಿ ದಾಖಲಿಸಿದ್ದ ಮಾತುಗಳ ಆಧಾರದಿಂದಲೇ ಆತ ಹೇಗೆ ಅತ್ಯಂತ ಕುಶಲನಾದ ಫ್ಯಾಸಿಸ್ಟ್ ಎಂದು ಕೋರ್ಟಿನಲ್ಲಿ ವಾದಿಸಿದೆವು. ಆತ ನಿಜಕ್ಕೂ ನುರಿತ ಫ್ಯಾಸಿಸ್ಟ್ ಎಂದು ನಮ್ಮ ಪರವಾದ ತೀರ್ಪು ನೀಡಲು ಕೋರ್ಟು ೮ ತಿಂಗಳು ತೆಗೆದುಕೊಂಡಿತು. ಇಂಥ ಆಶ್ರಮದ ಮೇಲೆ ಕಿಡಿಗೇಡಿಗಳ ಒಂದು ಗುಂಪು ಇದ್ದಕ್ಕಿದ್ದಂತೆ ದಾಳಿ ನಡೆಸಿ ಕಿಟಕಿ ಗಾಜುಗಳನ್ನು ಒಡೆದುಹಾಕಿತು. ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ದೋಚಿ ಹತ್ತೇ ನಿಮಿಷದಲ್ಲಿ ಆಶ್ರಮವನ್ನು ಸುಟ್ಟು ಬೂದಿ ಮಾಡಿತು. ಜನರ ಆಕ್ರೋಶಕ್ಕೆ ಕಾರಣವೇನೆಂದು ಕೇಳಿದರೂ ಪೊಲೀಸರ ಬಳಿ ಉತ್ತರವಿರಲಿಲ್ಲ. ಜರ್ಮನಿಯ ಆ ಭಾಗದ ಪೊಲೀಸ್ ಅಧಿಕಾರಿ “ನಾವೂ ಎರಡು ವರ್ಷಗಳಿಂದ ನೋಡುತ್ತಿದ್ದೇವೆ, ಆ ಜನ ತುಂಬ ನಿರುಪದ್ರವಿಗಳು, ಯಾವುದೇ ರಾಜಕೀಯ ಸಂಘಟನೆಗೆ ಸೇರಿದವರಲ್ಲ, ಧರ್ಮ ಪ್ರಚಾರ ನಿರತರಲ್ಲ. ತಮ್ಮ ಪಾಡಿಗೆ ತಾವು ಹಾಡಿ, ನರ್ತಿಸಿ ಆನಂದಿಸಿಕೊಂಡಿದ್ದರು. ಈ ಅಚಾತುರ್ಯ ಅನಿರೀಕ್ಷಿತವಾದುದು” ಎಂದು ಹೇಳಿಕೆ ನೀಡಿದನಂತೆ.
ನಾನು ಮೂರುವರೆ ವರ್ಷಗಳ ಕಾಲ ಮೌನವ್ರತದಲ್ಲಿ ಇದ್ದುದರಿಂದ ಆ ಸನ್ನಿವೇಶವನ್ನು ನನ್ನ ಸನ್ಯಾಸಿನಿ ಹಾಗು ಕಾರ್ಯದರ್ಶಿಯಾಗಿದ್ದ ಶೀಲಾ ಹಾಗು ಅವಳ ಕೆಲವು ಸಂಗಡಿಗರು ದುರುಪಯೋಗ ಪಡಿಸಿಕೊಂಡರು. ಆಕೆ ನನ್ನ ಮೂರು ಜನ ಸನ್ಯಾಸಿಗಳನ್ನು ಕೊಲ್ಲಲು ಪ್ರಯತ್ನಿಸಿದಳು. ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದ ಪತಂಜಲಿ ಸರೋವರಕ್ಕೆ ವಿಷವನ್ನು ಬೆರೆಸಿದಳು. ಯಾರಿಗೇನೂ ಅಪಾಯವಾಗದಿದ್ದರೂ ೫೦೦೦ ಮೀನುಗಳು ಸತ್ತವು. ನನಗೂ ಹಾಲಿನಲ್ಲಿ ವಿಷ ಬೆರೆಸಿ ಕೊಲ್ಲಲು ಪ್ರಯತ್ನಿಸಿದ್ದರು. ಆಶ್ರಮಕ್ಕೆ ಸೇರಿದ ೨೦೦ ಮಿಲಿಯನ್‌ಗೂ ಅಧಿಕ ಹಣವನ್ನು ಸ್ವಿಸ್ ಬ್ಯಾಂಕಿನ ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದಳು. ಆ ಕಾಲದಲ್ಲಿ ನಾನು ಹೊರಗಿನ ಸಂಪರ್ಕದಲ್ಲಿ ಇರದಿದ್ದ ಕಾರಣ ನನ್ನ ಪರವಾಗಿ ಎಲ್ಲ ಟೀವಿ ಚಾನೆಲ್‌ಗಳಲ್ಲೂ ಅವಳೇ ಕಾಣಿಸಿಕೊಳ್ಳುತ್ತ ಸದಾ ಸುದ್ದಿಯಲ್ಲಿ ಇರುತ್ತಿದ್ದಳು. ನಾನು ಪುನಃ ಮಾತನಾಡಲಾರಂಭಿದ ಮೇಲೆ ಆಕೆಯ ಚಟುವಟಿಕೆಗಳಿಗೆ ಕಡಿವಾಣ ಬಿದ್ದಂತಾಗಿ ಅತೃಪ್ತಳಾದಳು. ಕೂಡಲೆ ಬೇರೆ ಬೇರೆ ನೆಪಗಳನ್ನೊಡ್ಡಿ ಆಸ್ಟ್ರೇಲಿಯಾ, ಯುರೋಪ್‌ಗಳ ಆಶ್ರಮಗಳಿಗೆ ಹೊರಟುಬಿಟ್ಟಳು. ಅಷ್ಟು ದಿನಗಳ ಕಾಲ ಶೀಲಾ ಆಶ್ರಮಕ್ಕೆ ಒಳ್ಳೆಯ ಕೆಲಸಗಳನ್ನೇ ಮಾಡಿದ್ದಳು. ಆಶ್ರಮವನ್ನು ಬೆಳೆಸಲು ಎಲ್ಲ ರೀತಿಯಲ್ಲೂ ಶ್ರಮಿಸಿದ್ದಳು. ಇಷ್ಟೆಲ್ಲ ಮಾಡಿದವಳು ಅಧಿಕಾರ ಲಾಲಸೆಯಿಂದ ಎಲ್ಲೋ ಎಡವಿಬಿಟ್ಟಳು, ಅದು ಮನುಷ್ಯ ಸಹಜವಾದ ಗುಣವಾದ್ದರಿಂದ ನಾನು ಆಕೆಯನ್ನು ಆಕ್ಷೇಪಿಸಲಿಲ್ಲ. ಒಂದು ದೃಷ್ಟಿಯಿಂದ ನಾವು ಆಕೆಗೆ ಆಭಾರಿಗಳಾಗಲೇ ಬೇಕು ಎಂದು ನನ್ನ ಸನ್ಯಾಸಿಗಳಿಗೆ ಹೇಳಿದೆ. ಆಕೆಗೆ ಈ ಜನ್ಮದಲ್ಲಂತೂ ಅಧ್ಯಾತ್ಮದಲ್ಲಿ ಆಸಕ್ತಿ ಇರಲಿಲ್ಲ, ೧೯೭೦ರಲ್ಲಿ ಮೊದಲ ಸಲ ಮುಂಬಯಿಯ ನನ್ನ ಕೋಣೆಯನ್ನು ಪ್ರವೇಶಿಸಿದಾಗಲೇ ಈಕೆ ಅಧ್ಯಾತ್ಮ ಪ್ರವೃತ್ತಿ ಇಲ್ಲದ ವ್ಯವಹಾರಸ್ಥೆ, ಆದರೆ ತುಂಬ ಗಟ್ಟಿ ಹೆಂಗಸು ಎಂದು ತೀರ್ಮಾನಿಸಿದ್ದೆ. ಆಶ್ರಮವನ್ನು ಬೆಳೆಸಲು ಇವಳಿಂದ ನೆರವಾಗಬಹುದು ಎಂದು ಅವಳನ್ನು ನನ್ನ ವಲಯದಲ್ಲಿ ಇರಿಸಿಕೊಂಡೆ. ನಾನು ವಿಧಿವಾದವನ್ನು ನಂಬುವವನಲ್ಲ, ಭವಿಷ್ಯವಾದಿಯೂ ಅಲ್ಲ. ಶೀಲಾ ನನ್ನ ಆಶ್ರಮದಲ್ಲಿದ್ದು ಅಪರಾಧ ಕೃತ್ಯಗಳಿಗೆ ಇಳಿಯಬಹುದು ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ. ಆಕೆ ಅವಕಾಶವಾದಿಯಾಗಲು ಅವಳೊಬ್ಬಳೇ ಕಾರಣಳೆಂದೂ ಹೇಳಲಾರೆ. ಓರೆಗಾನ್‌ನ ರಾಜಕಾರಿಣಿಗಳನ್ನು, ಗವರ್ನರ್‌ಗಳನ್ನು ಕಂಡು ಅವಳ ಅಂತರಂಗದ ಕೃಪಣತೆ ಜಾಗೃತವಾಗಿರಬೇಕು.
“ನೀವು ಆತ್ಮಜ್ಞಾನಿಗಳಾದ ಮೇಲೆ ಇವೆಲ್ಲ ನಿಮಗೆ ಮುನ್ನವೇ ತಿಳಿಯಲಿಲ್ಲವೇ?” ಎಂದು ತುಂಬ ಜನ ಕೇಳಿದರು. ಆತ್ಮಜ್ಞಾನಕ್ಕೂ ಕಾಲಜ್ಞಾನಕ್ಕೂ ಸಂಬಂಧವಿಲ್ಲ. ಆತ್ಮಜ್ಞಾನದಲ್ಲಿ ನಮ್ಮನ್ನು ಮಾತ್ರ ನಾವು ತಿಳಿಯುತ್ತೇವೆ. ಅಂಥವರಿಗೆ ಬೇರೆಯವರ ಮನಸ್ಸಾಗಲಿ, ಹಿಂದಿನ ಮುಂದಿನ ಘಟನೆಗಳಾಗಲಿ ಗೋಚರಿಸುತ್ತದೆ ಎಂಬುದು ಶುದ್ಧ ಸುಳ್ಳು. ಹಾಗೆ ನೋಡಿದರೆ ನಾನು ಆತ್ಮಜ್ಞಾನಿಯಾಗಿರದಿದ್ದರೆ ಇದಕ್ಕೆಲ್ಲ ಆಸ್ಪದ ನೀಡುತ್ತಿರಲಿಲ್ಲವೇನೋ. ಏಕೆಂದರೆ ಆತ್ಮಜ್ಞಾನವು ಎಲ್ಲರನ್ನೂ ಅಕಾರಣವಾಗಿ ಪ್ರೀತಿಸುವಂತೆ, ಎಲ್ಲರನ್ನೂ ಸುಲಭವಾಗಿ ನಂಬುವಂತೆ ಮಾಡಿಬಿಡುತ್ತದೆ. ಆತ್ಮಜ್ಞಾನವು ವ್ಯಕ್ತಿಗೆ ತನ್ನ ಬಾಲ್ಯವನ್ನು ಮತ್ತೆ ಹಿಂದಿರುಗಿಸುತ್ತದೆ. ನನಗೆ ಮೋಸ ಮಾಡಿದ ಆ ಜನರನ್ನು ಈಗಲೂ ನಾನು ನಂಬುತ್ತೇನೆ. ಅವರ ಮೋಸ ವಂಚನೆಗಳು ಅವರ ಸಮಸ್ಯೆಗಳು, ನನ್ನವಲ್ಲ. ಆ ಸಮಸ್ಯೆಗಳು ನನ್ನ ಅಂತರ್ಗತ ಸ್ವಭಾವವನ್ನು ಎಂದೂ ಬಾಧಿಸಲಾರವು. ನನ್ನನ್ನು ಕೊಲ್ಲುವವರನ್ನೂ ನಾನು ಪ್ರೀತಿಸದಿರಲಾರೆ. ಏಕೆಂದರೆ ಹಾಗೆ ಕೊಲ್ಲುವವರ ಕೈಲಿ ನನ್ನ ಪ್ರೀತಿ ಸಾಯುವುದಿಲ್ಲವೆಂದು ನನಗೆ ತಿಳಿದಿದೆ.
ಅಮೆರಿಕಾದ ಸರ್ಕಾರ ನನ್ನ ಆಶ್ರಮವನ್ನು ಮಣ್ಣುಗೂಡಿಸುವ ಮುನ್ನ ಹಿಮಾಲಯದಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಲು ತಕ್ಕ ಜಾಗವನ್ನು ನೋಡಿಕೊಂಡು ಬರಲೆಂದು ಶೀಲಾಳನ್ನು ಕಳಿಸಿದೆ. ಆಕೆ ಅಲ್ಲಿಂದ ಫೋನ್ ಮಾಡಿ “ಹಿಮಾಲಯದ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ, ಇಂದಿರಾ ಗಾಂಧಿಯ ಹತ್ಯೆಯಿಂದಾಗಿ ಹಿಮಾಲಯದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ ಈಗ ಅಲ್ಲಿ ಹೋಗುವುದು ಅಪಾಯಕರ” ಎಂದು ಹೇಳಿದಳು. ನಾನು ಅಪಾಯವಿದ್ದರೆ ಬೇಡ, ಕೂಡಲೆ ಹಿಂದಿರುಗು ಎಂದು ಆದೇಶಿಸಿದ್ದೆ. ಆದರೆ ಆಕೆ ಹಿಂದಿರುಗದೆ ದೆಹಲಿಯಲ್ಲಿದ್ದ ನನ್ನ ಸನ್ಯಾಸಿಯೊಬ್ಬನನ್ನು ಸಂಪರ್ಕಿಸಿ “ಶ್ರೀರಜನೀಶರು ಮತ್ತೆ ಭಾರತಕ್ಕೆ ಪ್ರವೇಶಿಸದಂತೆ ಸರ್ಕಾರದ ಮೂಲಕ ನಿರ್ಬಂಧ ಹೇರಲು ಸಾಧ್ಯವೇ, ವಿಚಾರಿಸಿ ನೋಡು” ಎಂದು ಕೇಳಿದ್ದಳಂತೆ. ಆತ ನನ್ನ ತಮ್ಮನ ಮಗಳನ್ನು ಮದುವೆಯಾಗಿದ್ದ ಎಂದು ಆಕೆಗೆ ತಿಳಿದಿರಲಿಲ್ಲ. ನಾನು “ಭಾರತಕ್ಕೆ ಹಿಂದಿರುಗಲು ಆಶ್ರಮವನ್ನು ಹುಡುಕಿಕೊಂಡು ಬಾ” ಎಂದು ಕಳಿಸಿದರೆ ಆಕೆ ಅಲ್ಲಿ ನಾನು ಮತ್ತೆ ಹಿಂದಿರುಗದಂತೆ ಸಂಚು ರೂಪಿಸುವಲ್ಲಿ ನಿರತಳಾಗಿದ್ದಳು. ಅಲ್ಲದೆ ದೊಡ್ಡ ಪ್ರಮಾಣದ ಹೆರಾಯಿನ್ ಧಂಧೆಯಲ್ಲೂ ತೊಡಗಿದ್ದಳು.
೨೦ನೇ ಸೆಪ್ಟೆಂಬರ್ ೧೯೮೫ರಂದು ಎಫ್‌ಬಿಐ ಹಾಗು ಪೊಲೀಸ್ ಅಧಿಕಾರಿಗಳು ಶೀಲಾಳ ಅಪರಾಧಗಳ ಕುರಿತ ಹೆಚ್ಚಿನ ತನಿಖೆಗೆ ರಜನೀಶ್‌ಪುರಂನಲ್ಲಿ ಕಛೇರಿಯನ್ನು ತೆರೆದಾಗ ಕೂಡಲೆ ಒಂದು ಪತ್ರಿಕಾಗೋಷ್ಠಿಯನ್ನೂ ಕರೆದೆ:
“ಎಲ್ಲರಿಗೂ ಸುಸ್ವಾಗತ. ಶೀಲಾಳ ಅಪರಾಧಗಳ ಕುರಿತು ಪೊಲೀಸ್ ಹಾಗು ಎಫ್‌ಬಿಐ ಅಧಿಕಾರಿಗಳು ಇಲ್ಲೇ ಇದ್ದು ತನಿಖೆ ನಡೆಸುತ್ತಿರುವುದರಿಂದ ನಿಮ್ಮನ್ನು ಇಲ್ಲಿಗೇ ಕರೆಸಬೇಕಾಯಿತು. ’ತನಿಖೆಗೆ ಮುನ್ನ ನನ್ನನ್ನು ಸಂಪರ್ಕಿಸಿ. ನಿಮ್ಮ ಪ್ರಶ್ನೆಗಳಿಗೆಲ್ಲ ಉತ್ತರಿಸುವೆ. ಬೇಕಾದ ಪ್ರಶ್ನೆಗಳನ್ನು ಕೇಳಿ, ಬೇಕಾದಂತೆ ವಿಚಾರಣೆ ಮಾಡಿ’ ಎಂದು ನಾಲ್ಕು ಬಾರಿ ಹೇಳಿ ಕಳಿಸಿದೆ. ಆದರೆ ನನ್ನ ಮಾತಿಗೆ ಅವರು ಕಿವಿಗೊಡಲಿಲ್ಲ. ಆಶ್ರಮದ ನಿಜವಾದ ಅಪರಾಧಿಗಳನ್ನು ರಕ್ಷಿಸಬೇಕಾದ ಹೊಣೆ ಅವರ ಮೇಲೆ ಇದ್ದುದರಿಂದ ಅವರು ನನ್ನೊಂದಿಗೆ ಮಾತುಕತೆಗೆ ಸಿದ್ಧರಿರಲಿಲ್ಲ. ಅಲ್ಲದೆ ’ವಿಚಾರಣೆಯ ಸಂದರ್ಭದಲ್ಲಿ ಧ್ವನಿ ಮುದ್ರಣ ಮಾಡಿಕೊಳ್ಳುವಂತಿಲ್ಲ’ ಎಂಬ ಷರತ್ತನ್ನು ಹಾಕಿದರು. ಆಗ ನಾನು ’ನನಗೆ ನಿಮ್ಮ ಯಾವ ಅಧಿಕಾರಿಯ ಮೇಲೆಯೂ ನಂಬಿಕೆ ಇಲ್ಲ, ಇಲ್ಲೊಂದು ಮಾತನಾಡುತ್ತೀರಿ ಕೋರ್ಟಿನಲ್ಲಿ ಬೇರೊಂದು ಹೇಳಿಕೆ ನೀಡುತ್ತೀರಿ. ಇವೆಲ್ಲ ತನಿಖೆಗೆ ಸಂಬಂಧಿಸಿದ ವಿಚಾರ, ಕೋರ್ಟಿಗೆ ಹಾಜರು ಪಡಿಸಬೇಕಾಗಬಹುದು. ಹಾಗಾಗಿ ಧ್ವನಿಮುದ್ರಣವಾಗಲೇ ಬೇಕು’ ಎಂದು ಒತ್ತಾಯ ಮಾಡಿದೆ. ಅಲ್ಲದೆ ’ಯಾವ ಕಾರಣಕ್ಕೂ ಧ್ವನಿಮುದ್ರಿಕೆಯನ್ನು ನಾವು ಬಹಿರಂಗ ಪಡಿಸುವುದಿಲ್ಲ. ಬೇಕಿದ್ದರೆ ಕಾಗದ ಪತ್ರದ ಮೇಲೆ ಬರೆದುಕೊಡುತ್ತೇವೆ. ನಾವಲ್ಲದಿದ್ದರೆ ನೀವೇ ಧ್ವನಿಮುದ್ರಣ ಮಾಡಿಕೊಳ್ಳಿ ನಮಗೇನೂ ಅಭ್ಯಂತರವಿಲ್ಲ ಕೊನೆಯ ಪಕ್ಷ ಪತ್ರಕರ್ತರ ಎದುರಲ್ಲಿ ತನಿಖೆ ನಡೆಸಿ ಆಗ ಇಡೀ ಪ್ರಕರಣಕ್ಕೆ ಪಾರದರ್ಶಕತೆ ಬರುತ್ತದೆ’ ಎಂದು ಕೇಳಿಕೊಂಡೆ. ಆದರೆ ಅವರು ವೀಡಿಯೋ ಚಿತ್ರಣಕ್ಕೆ ಹೆದರಿದರು, ಧ್ವನಿಮುದ್ರಣಕ್ಕೂ ಹೆದರಿದರು. ಕೊನೆಗೆ ನನ್ನ ಬಳಿ ಮಾತನಾಡುವುದಕ್ಕೇ ಹಿಂಜರಿದರು. ಪ್ರತಿಯೊಂದು ಮಾತಿಗೂ ಅಟಾರ್ನಿ ಜನರಲ್‌ಗೆ ಫೋನ್ ಮಾಡಿ ಅವರಿಂದ ಸೂಚನೆಗಳನ್ನು ತೆಗೆದುಕೊಳ್ಳುತ್ತಿದ್ದರು. ತನಿಖೆಗೊಳಗಾಗುತ್ತಿರುವವನು ನಾನೋ, ಅವರೋ ಎಂಬ ಸಂಶಯ ಉಂಟಾಗುವಂತೆ ವರ್ತಿಸಿದರು.
ಇವರ ಈ ವರ್ತನೆಯನ್ನು ಕಂಡು ತನಿಖೆಯ ನೆವದಲ್ಲಿ ಸರ್ಕಾರ ಆಶ್ರಮವನ್ನು ವ್ಯವಸ್ಥಿತವಾಗಿ ನೆಲಸಮ ಮಾಡುವ ಸಂಚು ನಡೆಸಿದೆ ಎಂದು ನನಗೆ ಅನುಮಾನ ಬಂದುಬಿಟ್ಟಿತು. ಇವರಿಗೆ ಬೇಕಾಗಿರುವುದು ನಿಜವಾದ ಅಪರಾಧಿಗಳಲ್ಲ, ತಮಗೆ ಅನುಕೂಲಕರವಾದ ಸತ್ಯಗಳನ್ನು ಅವರ ಬಾಯಿಂದ ಹೇಳಿಸಿ ಅವರಿಗೆ ವಿನಾಯಿತಿ ನೀಡಿ ಕಳಿಸಿಬಿಡುವುದು ಇವರ ಸಂಚಾಗಿತ್ತು. ಈ ಸಂಚನ್ನು ಬಯಲು ಮಾಡಬೇಕೆಂದು ನಿಮ್ಮನ್ನು ಇಲ್ಲಿ ಕರೆಸಿದ್ದೇನೆ. ನಾವು ಎಫ್‌ಬಿಐ ಹಾಗು ಪೊಲೀಸರಿಗೆ ಎಲ್ಲ ರೀತಿಯಲ್ಲೂ ಸಹಕರಿಸಲು ಸಿದ್ಧರಿದ್ದೇವೆ. ಈ ಮಾತುಗಳನ್ನೆಲ್ಲ ಎಫ್‌ಬಿಐಗಳ ಮುಂದೆ ಹೇಳಬೇಕು ಎಂದುಕೊಂಡಿದ್ದೆ. ಆದರೆ ಅವರಿಗೆ ನನ್ನೊಂದಿಗೆ ಕುಳಿತು ಮಾತನಾಡಲು ಮುಖವಿಲ್ಲ. ಹಾಗಾಗಿ ನಿಮ್ಮೆದುರು ಹೇಳಿಕೊಳ್ಳುತ್ತಿದ್ದೇನೆ. ಈ ಕೆಟ್ಟ ರಾಜಕೀಯ ಘರ್ಷಣೆಯಲ್ಲಿ ಪತ್ರಕರ್ತರು ನಮ್ಮ ಸಂಘಟನೆಯನ್ನು ಬೆಂಬಲಿಸುವರು ಎಂಬ ನಂಬಿಕೆಯಿಂದ ನಿಮ್ಮನ್ನು ಕರೆಸಿದ್ದೇನೆ. ಇಲ್ಲಿನ ನಿಜವಾದ ಅಪರಾಧಿಗಳಿಗೆ ವಿನಾಯಿತಿ ಸಿಗಬಾರದು, ನಿರಪರಾಧಿಗಳಿಗೆ ಅನ್ಯಾಯವಾಗಬಾರದು ಎಂದು ನಿಮ್ಮನ್ನು ಇಲ್ಲಿಗೆ ಕರೆಸಿದ್ದೇನೆ. ನಾವಂತೂ ಇಲ್ಲಿನ ಕಾನೂನನ್ನು ಗೌರವಿಸುತ್ತೇವೆ. ಈ ಕಾನೂನಿನ ದೃಷ್ಟಿಯಲ್ಲಿ ನಿಜವಾದ ಅಪರಾಧಿಗಳಾದ ಶೀಲಾ ಹಾಗು ಅವಳ ಇಪ್ಪತ್ತು ಮಂದಿ ಸಂಗಡಿಗರನ್ನು ಪತ್ತೆ ಮಾಡಲು ಎಲ್ಲ ರೀತಿಯಲ್ಲೂ ಸಹಕರಿಸಲು ಸಿದ್ಧರಿದ್ದೇವೆ. ಆ ಗುಂಪು ಈಗ ಎಲ್ಲಿದೆ ಎಂದೂ ನಮಗೆ ಗೊತ್ತಿದೆ. ಆದರೆ ಎಫ್‌ಬಿಐ ಇಂಟರ್‌ಪೋಲ್‌ನ್ನು ಸಂಪರ್ಕಿಸಿ ಅವರನ್ನು ಅಮೆರಿಕಾಗೆ ಹಿಡಿದು ತರುವ ಮನಸ್ಸು ಮಾಡುತ್ತಿಲ್ಲ. ಅವರಿಗೆಲ್ಲ ವಿನಾಯಿತಿ ನೀಡಿ ಓಡಿಹೋಗುವಂತೆ ಮಾಡಿ ಈಗ ನನ್ನ ಮುಗ್ಧ ಸನ್ಯಾಸಿಗಳ ಮೇಲೆ ಎರಗಿದ್ದಾರೆ. ಏಳು ದಿನಗಳಿಂದ ಇಲ್ಲೇ ಇದ್ದವರು ಈಗ ನನ್ನ ಪತ್ರಿಕಾಗೋಷ್ಠಿಯ ಸುದ್ದಿ ತಿಳಿದು ಗಂಟು ಮೂಟೆ ಕಟ್ಟಿಕೊಂಡು ಪಲಾಯನ ಮಾಡಿದ್ದಾರೆ. ಇವರೂ ಬಂದು ಪತ್ರಿಕಾಗೋಷ್ಠಿಯಲ್ಲಿ ಕೂರಬಾರದಿತ್ತೇ? ಆಶ್ರಮದ ಒಳಗಿನ ಅಪರಾಧಿಗಳಿಗೂ ಆಶ್ರಮದ ಹೊರಗಿನ ಪೊಲೀಸ್ ಅಧಿಕಾರಿಗಳಿಗೂ ನನಗೆ ವ್ಯತ್ಯಾಸವೇ ಕಾಣಿಸುತ್ತಿಲ್ಲ. ಉದ್ಯೋಗಸ್ಥ ಅಪರಾಧಿಗಳು ಎಫ್‌ಬಿಐ, ಕೆಜಿಬಿಗಳಲ್ಲಿ ಕೆಲಸ ಮಾಡುತ್ತಿದ್ದರೆ ನಿರುದ್ಯೋಗಿ ಅಪರಾಧಿಗಳು ಅಮೆರಿಕಾದ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ”.
ನನ್ನ ಮಾತುಗಳಿಗೆ ಪ್ರತಿಕ್ರಿಯಿಸಲು ಮುಖವಿಲ್ಲದ ಅಮೆರಿಕನ್ ಸರ್ಕಾರವು ೧೯೮೨ರಿಂದ ೧೯೮೫ರ ವರೆಗೆ ಮೂರು ಬಾರಿ ದಾಳಿ ನಡೆಸಿ ರಜನೀಶ್‌ಪುರಂನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಆಶ್ರಮದಲ್ಲಿ ಪೊಲೀಸರು, ಎಫ್‌ಬಿಐಗಳು ಹಲವು ದಿನಗಳಿಂದ ಒಂದೇ ಸಮನೆ ತನಿಖೆಗಳನ್ನು ನಡೆಸಿದರು. ಆ ವಾತಾವರಣದಲ್ಲಿ ಯಾವ ಗಲಭೆ, ಹಿಂಸಾಚಾರಗಳೂ ನಡೆಯುತ್ತಿರಲಿಲ್ಲ. ಆದರೂ ನಮ್ಮ ಆಶ್ರಮದ ಬಗ್ಗೆ ಅಸಂಗತವಾದ ಪ್ರಚಾರಗಳು ನಡೆಯಬೇಕು ಎನ್ನುವುದು ಅವರ ಉದ್ದೇಶವಾಗಿತ್ತು. “ರಜನೀಶ್‌ಪುರಂ ನಿಷೇಧಿತ ನಗರವಾಗಿದೆ. ಅಲ್ಲಿ ರಜನೀಶಿಸಂ ಎಂಬ ಧರ್ಮ ಹಾಗು ನಾಗರೀಕ ವ್ಯವಸ್ಥೆಗಳು ಮಿಶ್ರಗೊಂಡಿವೆ. ಇದು ಅಮೆರಿಕಾದ ಸಂವಿಧಾನಕ್ಕೆ ವಿರೋಧವಾದುದು” ಎಂದು ಕೋರ್ಟಿನಲ್ಲಿ ಮೊಕದ್ದಮೆ ಹೂಡಿದರು. ಇದಕ್ಕೆ ಪ್ರತಿಕ್ರಿಯಿಸಿ ಟೀವಿ ಸಂವಾದ ಕಾರ್ಯಕ್ರಮವೊಂದರಲ್ಲಿ “ರಜನೀಶಿಸಂ ಎಂಬ ಯಾವ ಧರ್ಮವೂ ಲೋಕದಲ್ಲಿಲ್ಲ. ನಾನು ಮೂವತ್ತು ವರ್ಷಗಳಿಂದ ಸಂಘಟಿತ ಧರ್ಮಗಳ ವಿರುದ್ಧ ಸಮರ ಸಾರುತ್ತ ಬಂದವನು. ನಾನು ಮೂರುವರೆ ವರ್ಷಗಳ ಕಾಲ ಮೌನಕ್ಕೆ ಶರಣಾದ ಕಾಲದಲ್ಲಿ ಶೀಲಾ ಮೊದಲಾದ ಅಪರಾಧಿಗಳಿಂದ ಈ ಎಲ್ಲ ಬೆಳವಣಿಗೆಗಳು ನಡೆದಿವೆ. ಮೂರುವರೆ ವರ್ಷಗಳಿಗೂ ಹಿಂದೆ ರಜನೀಶಿಸಂ ಇದ್ದುದಕ್ಕೆ ನಿಮ್ಮಲ್ಲೇನಾದರೂ ಪುರಾವೆಗಳಿದ್ದರೆ ತೋರಿಸಿ” ಎಂದು ಓರೆಗಾನ್‌ನ ಗವರ್ನರನ ಮೇಲೆ ನೇರ ವಾಗ್ದಾಳಿ ಮಾಡಿದೆ. ಅದಕ್ಕೆ ಅವರ ಬಳಿ ಉತ್ತರವಿರಲಿಲ್ಲ “ಸಮಯ ಹಾಗು ನ್ಯಾಯಾಲಯಗಳು ಎಲ್ಲಕ್ಕೂ ಉತ್ತರಿಸುತ್ತವೆ” ಎಂದು ಹೇಳಿದರು. “ಸಮಯ ಹಾಗು ನ್ಯಾಯಾಲಯಗಳು ಕೊಡುವ ಉತ್ತರ ಹಾಗಿರಲಿ, ನಿಮ್ಮ ಉತ್ತರವನ್ನು ತಿಳಿಸಿ. ರಜನೀಶಿಸಂ ಎಂಬ ಧರ್ಮವೇ ಇಲ್ಲದ ಮೇಲೆ ಕೋರ್ಟಿನಲ್ಲಿ ಮೊಕದ್ದಮೆಯನ್ನೇಕೆ ಮುಂದುವರೆಸುತ್ತಿರುವಿರಿ? ನೀವು ತುರ್ತು ಪರಿಸ್ಥಿತಿಯನ್ನು ಹೇರಿದರೆ ಅದಕ್ಕೆ ನಾವು ಕಾರಣರಲ್ಲ ಎಂಬುದು ನಿಮಗೇ ಚೆನ್ನಾಗಿ ಗೊತ್ತು” ಎಂದು ಹೇಳಿದೆ. ಇವರ ಸುಳ್ಳು ಆಪಾದನೆಗಳು ಜಗತ್ತಿಗೆ ತಿಳಿಯಲೆಂದು ತುರ್ತುಪರಿಸ್ಥಿತಿ ಇದ್ದಷ್ಟೂ ದಿನಗಳ ಕಾಲ ಪ್ರತಿದಿನ ವಿಶ್ವ ಪತ್ರಕರ್ತ ಸಮೂಹಕ್ಕೆ ಪ್ರತಿಯೊಂದು ಮಾಹಿತಿಯನ್ನೂ ನೀಡಿ ಚರ್ಚಿಸುತ್ತಿದ್ದೆ.
ಕೊನೆಗೆ ೨೫ನೇ ಅಕ್ಟೋಬರ್ ೧೯೮೫ರಂದು ವಾರೆಂಟ್ ಇಲ್ಲದೆ ನನ್ನನ್ನು ಬಂಧಿಸಲಾಯಿತು. ಕೈಗಳಿಗೆ ಬೇಡಿ ತೊಡಿಸಿ ಬಂದೂಕು ತೋರಿಸಿ ಎಳೆದೊಯ್ಯುತ್ತಿದ್ದ ಫೋಟೋಗಳು ಎಲ್ಲ ಪತ್ರಿಕೆಗಳಲ್ಲಿ ಪ್ರಕಟಗೊಂಡು ಅದೊಂದು ರಾಷ್ಟ್ರವ್ಯಾಪೀ ಸುದ್ದಿಯಾಯಿತು. ಎರಡು ವರ್ಷಗಳಿಂದ ನನ್ನನ್ನು ಬಂಧಿಸುವ ಸುದ್ದಿ ಕೇಳಿಬರುತ್ತಿದ್ದರೂ ಆತನಕ ನನ್ನನ್ನೇನೂ ಬಂಧಿಸಿರಲಿಲ್ಲ. ಆಶ್ರಮದಿಂದ ಹೊರಗೆ ಕಾಲಿಡದ ನನ್ನನ್ನು ಒಳಗೆ ಪ್ರವೇಶಿಸಿ ಬಂಧಿಸುವ ಧೈರ್ಯ ಅವರಿಗಿರಲಿಲ್ಲ. ಒಮ್ಮೆ ನಾನು ಕೆರೊಲಿನಾದ ಒಬ್ಬ ಸ್ನೇಹಿತರ ಮನೆಗೆ ಭೇಟಿ ನೀಡಲು ಹೊರಹೋದೆ. ಅದೇ ಅವಕಾಶಕ್ಕಾಗಿ ಕಾಯುತ್ತಿದ್ದ ಅವರು ನನ್ನನ್ನು ಬಂಧಿಸಿ ಬಿಟ್ಟರು. ಪೊಲೀಸ್ ಮಾಹಿತಿದಾರನಾದ ಒಬ್ಬ ಪತ್ರಕರ್ತನಿಂದ ಅವರಿಗೆ ನಾನು ಹೊರಗೆ ಬಂದಿರುವುದು ತಿಳಿಯಿತು. ಬಂಧನದ ವಾರೆಂಟ್ ತೋರಿಸಲಿಲ್ಲ. ಏಕೆ ಬಂಧಿಸುತ್ತಿದ್ದೀರಿ ಎಂಬ ಪ್ರಶ್ನೆಗೂ ಸುಮ್ಮನೆ ಕೂಗಾಡುತ್ತಿದ್ದ ಅವರ ಬಳಿ ಸರಿಯಾದ ವಿವರಣೆ ಇರಲಿಲ್ಲ. ಏತಕ್ಕೆ ಬಂಧಿಸುತ್ತಿದ್ದೇವೆ ಎಂದು ಪಾಪ ಆ ಪೊಲೀಸರಿಗೂ ಗೊತ್ತಿರಲಿಲ್ಲ. ನಿಶ್ಯಸ್ತ್ರನಾಗಿದ್ದ ನನ್ನ ಸುತ್ತ ೧೨ ಮಂದಿ ಬಂದೂಕು ಧಾರಿ ಪೊಲೀಸರು ನಿಂತುಬಿಟ್ಟರು. ಸಾಲದ್ದಕ್ಕೆ ಬೀದಿಗಳಲ್ಲಿ ಹರ್ಷೋದ್ಗಾರ ಮಾಡುತ್ತ ನೆರೆದಿದ್ದ ಸಾವಿರಾರು ಜನ ನೆರೆದಿದ್ದರು. ಇನ್ನೆಲ್ಲಿ ಅವರತ್ತ ಕೈಬೀಸಿ ಅವರನ್ನು ಪ್ರಚೋದಿಸಿಬಿಡುವೆನೋ ಎಂದು ನನ್ನ ಕೈಕಾಲುಗಳಿಗೆ ಸರಪಳಿಗಳನ್ನು ತೊಡಿಸಿ ಕೂಡಲೆ ಕಾರಿನಲ್ಲಿ ಕೂರಿಸಿಕೊಂಡು ಒಯ್ದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಚಾರ ಮಾಡುವ ಅಮೆರಿಕಾದಂತಹ ದೇಶಕ್ಕೆ ಇದೊಂದು ಕಳಂಕ ಸಾಲದೇ, ಇದನ್ನು ಹೇಡಿತನವೆನ್ನದೆ ಮತ್ತೇನೆಂದು ಕರೆಯುವುದು?
ಜೈಲಿನೊಳಗೆ ಪ್ರವೇಶಿಸಿದ ಕೂಡಲೆ ಒಬ್ಬ ಮಾರ್ಷಲ್ “ಇದು ನಿಮಗೆ ಅತ್ಯಂತ ಸುರಕ್ಷಿತವಾದ ಸ್ಥಳ” ಎಂದು ವ್ಯಂಗ್ಯವಾಗಿ ಮಾತನಾಡಿದ. “ನನಗೇನೂ ನಿಮ್ಮ ಅಧ್ಯಕ್ಷರುಗಳಂತೆ ಜೀವಭಯವಿಲ್ಲ. ಈಗಾಗಲೇ ನಿಮ್ಮ ಶೇ.೨೦ಕ್ಕೂ ಅಧಿಕ ಅಧ್ಯಕ್ಷರು ಹತ್ಯೆಗೀಡಾಗಿದ್ದಾರೆ. ಹೀಗೆ ಸರಪಳಿ ತೊಡಿಸಿ ಕೂಡಿ ಹಾಕುವುದನ್ನೇ ನೀವು ಸುರಕ್ಷತೆ ಎಂದು ಕರೆಯುವುದೆಂದಾದರೆ ಮೊದಲು ನಿಮ್ಮ ಎಲ್ಲ ಪ್ರೆಸಿಡೆಂಟರುಗಳಿಗೆ, ಗವರ್ನರುಗಳಿಗೆ ಈ ಸುರಕ್ಷತೆ ನೀಡಿ. ನಿಜವಾಗಿಯೂ ಅವರು ಜೀವಭಯದಿಂದ ಕಳವಳಿಸುತ್ತಿರುವುದು, ನಾನಲ್ಲ. ನನ್ನೊಂದಿಗೆ ಹೀಗೆ ಮೂರ್ಖನಂತೆ ಮಾತನಾಡದಿರಿ” ಎಂದು ಹೇಳಿದೆ. ಆಗ ಇನ್ನೊಬ್ಬ ಅಧಿಕಾರಿ “ನಿಮ್ಮ ಬಂಧುಗಳ ಹೆಸರು ವಿಳಾಸಗಳನ್ನು ಹೇಳಿ, ಅವರಿಗೆ ನಿಮ್ಮ ಬಂಧನದ ಸುದ್ದಿಯನ್ನು ತಿಳಿಸಬೇಕು” ಎಂದು ಕೇಳಿದ. “ನನಗೆ ಯಾವ ಬಂಧುಗಳೂ ಇಲ್ಲ, ನೀವು ಯಾರಿಗೆ ಬೇಕಾದರೂ ತಿಳಿಸಬಹುದು, ನಿಮ್ಮ ಹೆಂಡತಿಗೇ ತಿಳಿಸಿ, ತನ್ನ ಗಂಡ ವಾರೆಂಟ್ ಇಲ್ಲದೆಯೇ ಒಬ್ಬ ನಿರಪರಾಧಿಯನ್ನು ಬಂಧಿಸಿದ ಸುದ್ದಿಯನ್ನು ಕೇಳಿ ಆಕೆ ಸಂತೋಷ ಪಟ್ಟಾಳು” ಎಂದೆ. ನನ್ನ ಆಶ್ರಮದಲ್ಲಿ ಬೇಕಾದಷ್ಟು ಜನ ಅಟಾರ್ನಿ ಜನರಲ್‌ಗಳಿದ್ದರು, ವಕೀಲರುಗಳಿದ್ದರು. ಆದರೆ ನನ್ನ ಬಳಿ ಯಾರೊಬ್ಬರ ದೂರವಾಣಿ ಸಂಖ್ಯೆಯೂ ಇರಲಿಲ್ಲ. ಯಾರಿಗಾದರೂ ದೂರವಾಣಿ ಕರೆ ಮಾಡುವ ಅಭ್ಯಾಸವೂ ನನಗಿರಲಿಲ್ಲ. ನನ್ನ ಪಾಸ್‌ಪೋರ್ಟ್ ಕೂಡ ಎಲ್ಲಿ ಯಾರ ಬಳಿ ಇದೆಯೋ ಎಂದು ನನಗೆ ಗೊತ್ತಿರುತ್ತಿರಲಿಲ್ಲ. ಎಲ್ಲವನ್ನೂ ನನ್ನ ಸನ್ಯಾಸಿಗಳಿಗೇ ವಹಿಸಿಬಿಟ್ಟಿದ್ದೆ. ಆ ಜೈಲಿನ ಅಧಿಕಾರಿಯು “ಮುಂದೆ ಎಂದಾದರೂ ಹೀಗೆ ಜೈಲುಪಾಲಾಗಬಹುದು ಎಂದು ನೀವು ಕನಸಿನಲ್ಲೂ ಊಹಿಸಿರಲಿಲ್ಲ ಅಲ್ಲವೇ?” ಎಂದು ಕೇಳಿದ. “ಭವಿಷ್ಯಕ್ಕೆ ನಾನು ಸದಾ ಕಾಲ ತೆರೆದುಕೊಂಡಿರುವ ವ್ಯಕ್ತಿ. ಜೈಲಲ್ಲ ನರಕದಲ್ಲೂ ನನಗೆ ಬಾಧೆಯಾಗದು” ಎಂದು ಉತ್ತರಿಸಿದೆ. ಆಗ ಒಬ್ಬ ಮಾರ್ಷಲ್ ನನ್ನನ್ನು ಜೈಲಿನ ಕೋಣೆಯತ್ತ ಕರೆದೊಯ್ಯುವಾಗ ಏಕಾಂತದಲ್ಲಿ “ನಿಮಗೆ ಅನ್ಯಾಯವಾಗುತ್ತಿದೆ. ನಿಮ್ಮ ಆತ್ಮೀಯರನ್ನು ಸಂಪರ್ಕಿಸಲೂ ಅವಕಾಶ ನೀಡದೆ ನಿಮ್ಮನ್ನು ಬಂಧಿಸಲಾಗುತ್ತಿದೆ. ನನ್ನ ವೃತ್ತಿಜೀವನದಲ್ಲಿ ನಾನೆಂದು ವಾರೆಂಟ್ ಇಲ್ಲದೆ ಬಂಧಿಸಿದವನಲ್ಲ” ಎಂದು ಹೇಳಿ ವಿಷಾದ ಪಟ್ಟುಕೊಂಡ. “ನಿಮ್ಮ ವೃತ್ತಿಜೀವನದಲ್ಲಿ ಇದೊಂದು ಹೊಸ ಅನುಭವವೆಂದು ತಿಳಿಯಿರಿ. ನನಗೆ ವಾರೆಂಟ್ ಇತ್ಯಾದಿಗಳು ಮುಖ್ಯವಲ್ಲ. ನಾನೆಂದೂ ಊಹಿಸದ ಅನುಭವಗಳೆಲ್ಲ ನನ್ನ ಬದುಕಿನಲ್ಲಿ ಒದಗಿ ಬರುತ್ತಿರುವುದು ನನಗೆ ನಿಜಕ್ಕೂ ಸೋಜಿಗವೆನಿಸುತ್ತಿದೆ” ಎಂದೆ. ಮೊದಲ ದಿನ ಒಬ್ಬ ನೀಗ್ರೋ ಕೈದಿಯೊಂದಿಗೆ ನನ್ನನ್ನು ಇಡಲಾಯಿತು. ಆ ಸೆಲ್‌ನಲ್ಲಿ ಒಂದು ಕಬ್ಬಿಣದ ಮಂಚವಿತ್ತು. ಮಲಗಲು ಒಂದು ತಲೆದಿಂಬನ್ನೂ ನೀಡದ ಕಾರಣ ರಾತ್ರಿಯೆಲ್ಲ ಕುಳಿತೇ ಇದ್ದೆ. ಬೆನ್ನುನೋವು ಇನ್ನೂ ಉಲ್ಬಣವಾಯಿತು. ಎರಡನೆಯ ದಿನ ಮೆಡಿಕಲ್ ವಾರ್ಡಿಗೆ ಸ್ಥಳಾಂತರಿಸಿದರು.
ವೈದ್ಯಕೀಯ ವಾರ್ಡಿನ ಕೈದಿಗಳು, ಸಿಬ್ಬಂದಿ ಸದಾಕಾಲ ನನ್ನ ಸುತ್ತ ನೆರೆದಿರುತ್ತಿದ್ದರು, ಧ್ಯಾನದ ಕುರಿತ ನನ್ನ ಮಾತುಗಳನ್ನು ಕುತೂಹಲದಿಂದ ಕೇಳುತ್ತಿದ್ದರು. ಒಮ್ಮೆ ಜೈಲಧಿಕಾರಿಯೂ ತನ್ನ ಹೆಂಡತಿ ಮಕ್ಕಳನ್ನು ನನ್ನ ಬಳಿ ಕರೆತಂದಿದ್ದ. ಒಬ್ಬ ನರ್ಸ್ ನನಗಾಗಿ ಪ್ರತಿದಿನ ಹಣ್ಣು, ತರಕಾರಿ ಹಾಗು ಸಸ್ಯಾಹಾರಿ ಪದಾರ್ಥಗಳನ್ನು ತರುತ್ತಿದ್ದಳು. “ನಿಮಗೇಕೆ ತೊಂದರೆ, ಇಲ್ಲಿ ನನ್ನಂಥವರಿಗೆ ಒದಗಿಸುವ ಆಹಾರ ಪದಾರ್ಥಗಳು ಚೆನ್ನಾಗಿಯೇ ಇರುತ್ತವೆ” ಎಂದು ಸಂಕೋಚದಿಂದ ಹೇಳುತ್ತಿದ್ದೆ. “ಇಲ್ಲ ಇಲ್ಲಿನ ಆಹಾರ ಪದಾರ್ಥಗಳಲ್ಲಿ ಮಾಂಸಾಹಾರವೂ ಬೆರೆತಿರುತ್ತದೆ, ನೀವು ಸಸ್ಯಾಹಾರಿಗಳು, ಕೆಲದಿನಗಳ ಮಟ್ಟಿಗೆ ತಾನೇ ಇಲ್ಲಿರುವುದು. ಪರವಾಗಿಲ್ಲ” ಎನ್ನುತ್ತಿದ್ದಳು. ಆಸ್ಪತ್ರೆಯ ವೈದ್ಯೆ ಸಹ “ನೀವೇನೂ ಕೈದಿಗಳು ಉಪಯೋಗಿಸುವ ಶೌಚಾಲಯಕ್ಕೆ ಹೋಗ ಬೇಡಿ. ಒಳಗೆ ನನಗೇ ಪ್ರತ್ಯೇಕವಾಗಿರುವ ಶೌಚಾಲಯವನ್ನೇ ನೀವೂ ಬಳಸಬಹುದು” ಎಂದು ಹೇಳಿದ್ದಳು. ನನ್ನ ಅಟಾರ್ನಿ ನಿರೇನ್ ಪ್ರತಿದಿನ ಬರುತ್ತಿದ್ದ, ನಾನು ಪ್ರತಿದಿನವೂ ಸಂತೋಷವಾಗಿ ಇರುತ್ತಿದ್ದುದನ್ನು ಕಂಡು ಅಚ್ಚರಿ ಪಡುತ್ತಿದ್ದ “ಇಲ್ಲಿ ನಾನು ಸುಖವಾಗಿದ್ದೇನೆ. ಇಷ್ಟೊಂದು ವಿಶ್ರಾಂತಿ ಪಡೆದು ಬಹಳ ದಿನಗಳಾಗಿದ್ದವು. ಇಲ್ಲಿ ಎಲ್ಲ ಕೈದಿಗಳೂ, ನರ್ಸುಗಳೂ, ಡಾಕ್ಟರರೂ ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ನಾನು ಬಿಡುಗಡೆಯಾಗಿ ಆಶ್ರಮಕ್ಕೆ ಹೋದ ಕೂಡಲೆ ಅವರೂ ಆಶ್ರಮಕ್ಕೆ ಬಂದು ಕೆಲದಿನ ಇರಬೇಕೆಂಬ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ” ಎಂದು ಹೇಳಿದೆ. ನನ್ನನ್ನು ಭೇಟಿ ಮಾಡಿಸಲು ಅಲ್ಲಿನ ಸಿಬ್ಬಂದಿ ಪ್ರತಿದಿನ ತಮ್ಮ ಕುಟುಂಬದವರನ್ನು ಕರೆತರುತ್ತಿದ್ದರು. ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದರು. ಹಸ್ತಾಕ್ಷರ ಪಡೆಯುತ್ತಿದ್ದರು. ಒಬ್ಬ ನರ್ಸ್ ಹಸ್ತಾಕ್ಷರ ಪಡೆಯಲು ಯಾವ ಕಾಗದ ತುಂಡೂ ಕೈಗೆ ಸಿಗದಿದ್ದಾಗ ಆ ದಿನದ ಪತ್ರಿಕೆಯಲ್ಲಿ ಕೈಗೆ ಬೇಡಿ ತೊಡಿಸಿಕೊಂಡು ನಿಂತಿದ್ದ ನನ್ನ ಫೋಟೋದ ಮೇಲೆಯೇ ಹಸ್ತಾಕ್ಷರವನ್ನು ಪಡೆದಳು. ಸಿಬ್ಬಂದಿಗಳು ವಾರದ ರಜೆ ಇದ್ದಾಗಲೂ ಬಂದುಬಿಡುತ್ತಿದ್ದರು. “ರಜೆಯೇನು ಪ್ರತಿವಾರ ಸಿಗುತ್ತದೆ, ಆದರೆ ನೀವು ಇಲ್ಲಿರುವುದು ಮೂರೇ ದಿನಗಳು, ನಾವು ಈ ಅವಕಾಶವನ್ನು ಕಳೆದುಕೊಳ್ಳಲಾರೆವು” ಎನ್ನುತ್ತಿದ್ದರು. “ನೀವು ಆಸ್ಪತ್ರೆಯ ವಾರ್ಡಿನಲ್ಲಿ ಕಳೆದ ಈ ದಿನಗಳನ್ನು ನಾವು ನಮ್ಮ ಜೀವಮಾನದಲ್ಲೇ ಮರೆಯೆವು. ಮೂರೇ ದಿನಗಳಲ್ಲಿ ನಮ್ಮಲ್ಲಿ ಗಮನಾರ್ಹ ಬದಲಾವಣೆಗಳು ಉಂಟಾಗಿವೆ” ಎಂದು ಕೃತಜ್ಞತೆಯಿಂದ ಹೇಳುತ್ತಿದ್ದರು.
ಜೈಲಧಿಕಾರಿ ಮೊದಲ ದಿನವೇ ಅಪಾರವಾದ ವಿಶ್ವಾಸ ತೋರಿಸಿದ. ಕೋರ್ಟಿನಲ್ಲಿ ನನಗೆ ಜಾಮೀನು ಸಿಗದಿದ್ದಾಗ “ಆಪಾದನೆಗಳು ರುಜುವಾತಾಗದಿದ್ದ ಮೇಲೆ ಆರೋಪಿಯನ್ನು ಜೈಲಿನಲ್ಲಿ ಇರಿಸಿಕೊಳ್ಳುವುದು ಎಂದರೇನು? ಇದು ನಿಜಕ್ಕೂ ಅನ್ಯಾಯ. ಖಂಡಿತ ಇದೆಲ್ಲ ರಾಜಕೀಯ ಪಿತೂರಿ” ಎಂದು ಸಿಡಿಮಿಡಿಗೊಳ್ಳುತ್ತಿದ್ದ. ಆಗ ನಾನು “ನೀವು ನನಗೊಂದು ಸಹಾಯವನ್ನು ಮಾಡಬಲ್ಲಿರಾ?” ಎಂದು ಕೇಳಿದೆ. “ಎಲ್ಲರೀತಿಯಲ್ಲೂ ಸಹಾಯ ಮಾಡಲು ಸಿದ್ಧ, ಹೇಳಿ ಏನು ಮಾಡಲಿ?” ಎಂದ. “ನಾನು ಜೈಲಿನಲ್ಲೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಬೇಕು” ಎಂದು ಹೇಳಿದೆ. “ಜೈಲಿನ ಒಬ್ಬ ಕೈದಿ ಪತ್ರಿಕಾಗೋಷ್ಠಿಯನ್ನು ನಡೆಸುವುದೇ! ಅಮೆರಿಕನ್ ಚರಿತ್ರೆಯಲ್ಲೇ ಇಂತಹುದು ನಡೆದಿರಲಾರದು” ಎಂದು ಹೇಳಿದ. “ಈಗ ನಡೆಯಲಿ ಬಿಡಿ, ನನ್ನ ಬೇಡಿಕೆ ಅನ್ಯಾಯದ್ದು ಎಂದು ನಿಮಗನ್ನಿಸಿದರೆ ಬೇಡ, ಆಗ ಬೇರೇನಾದರೂ ದಾರಿಯನ್ನು ಹುಡುಕೋಣ” ಎಂದೆ. ಆದರೆ ಆತ ಒಪ್ಪಿದ. “ಸರ್ಕಾರಕ್ಕೆ ಈ ವಿಷಯ ತಿಳಿದರೆ ನೀವು ತೊಂದರೆಯಲ್ಲಿ ಸಿಲುಕಿಕೊಳ್ಳುವಿರಿ ಎಂಬುದು ನೆನಪಿರಲಿ” ಎಂದು ಅವನಿಗೆ ಎಚ್ಚರಿಸಿದೆ. “ನನಗೇನೂ ಆ ಭಯವಿಲ್ಲ, ಇಷ್ಟರಲ್ಲೇ ನಾನು ನಿವೃತ್ತಿಯಾಗಲಿದ್ದೇನೆ. ಹೆಚ್ಚೆಂದರೆ ಸ್ವಲ್ಪ ಬೇಗ ನಿವೃತ್ತಿ ಆಗಬೇಕಾಗಬಹುದು. ಅಷ್ಟಕ್ಕೂ ನಮ್ಮ ನಿಯಮಾವಳಿಯಲ್ಲಿ ಕೈದಿಗಳು ಪತ್ರಿಕಾಗೋಷ್ಠಿ ನಡೆಸಬಾರದು ಎಂಬ ಉಲ್ಲೇಖವೇನೂ ಇಲ್ಲ” ಎಂದು ಹೇಳಿದ. ಆತನೂ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ ನನ್ನ ಒಂದೊಂದು ಮಾತುಗಳನ್ನೂ ಆಶ್ಚರ್ಯ, ಕುತೂಹಲಗಳಿಂದ ಕೇಳುತ್ತಿದ್ದ. ಜೊತೆಗೆ ಆಸ್ಪತ್ರೆಯಲ್ಲಿ ನನ್ನ ಆರೈಕೆ ಮಾಡುತ್ತಿದ್ದ ಡಾಕ್ಟರುಗಳೂ, ನರ್ಸುಗಳೂ ಅಲ್ಲಿಗೆ ಬಂದರು. ಅಂದು ಪತ್ರಿಕೆಯವರಲ್ಲದೆ, ನೈಟ್‌ವಾಚ್ ಟೀವಿ, ಎಬಿಸಿ ನ್ಯೂಸ್ ನೈಟ್‌ಲೈನ್, ಚಾನೆಲ್ ೬ ಟೀವಿ ಇತ್ಯಾದಿ ದೃಶ್ಯಮಾಧ್ಯಮದವರೂ ಬಂದಿದ್ದರು. ಅಂದು ಸುಮಾರು ನೂರು ಜನ ಪತ್ರಕರ್ತರು ಜೈಲಲ್ಲಿ ಹಾಜರಿದ್ದರು.
ಆ ಜೈಲರನು “ನಾನು ನಿಮಗೆ ಹೇಳಬಾರದು, ಪ್ರತಿದಿನ ನೂರಾರು ದೂರವಾಣಿ ಕರೆಗಳು, ತಂತಿ ಸಂದೇಶಗಳು ಜೈಲಿಗೆ ಬರುತ್ತಿವೆ. ಜಗತ್ತಿನ ಎಲ್ಲ ಮೂಲೆಗಳಿಂದ ಜನ ನಿಮಗೆ ಶುಭ ಹಾರೈಕೆಗಳನ್ನು ಕಳುಹಿಸುತ್ತಿದ್ದಾರೆ, ಎಲ್ಲ ಕಡೆ ಸಣ್ಣ ಹಾಗು ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿವೆ. ಇದನ್ನೆಲ್ಲ ನಿರೀಕ್ಷಿಸಿರದಿದ್ದ ಸರ್ಕಾರ ಈಗ ತುಂಬ ತಲ್ಲಣಿಸಿದೆ. ಒಂದಂತೂ ನಿಜ. ಇನ್ನು ನಿಮಗೆ ಸರ್ಕಾರದಿಂದ ಯಾವುದೇ ಅಪಾಯ ಉಂಟಾಗದು. ಅವರಿಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸಿ ಎಂದು ನನಗೆ ಸೂಚನೆಗಳು ಬಂದಿವೆ” ಎಂದರು. ನನ್ನ ಬಂಧನವಾದ ಮೂರು ಗಂಟೆಗಳಲ್ಲೇ ಆಸ್ಟ್ರೇಲಿಯಾದಿಂದ ಆತನಿಗೆ ಒಂದು ದೂರವಾಣಿ ಕರೆ ಬಂದಿತಂತೆ “ಎಷ್ಟೊಂದು ದೂರವಾಣಿ ಕರೆಗಳು, ತಂತಿ ಸಂದೇಶಗಳು ಬರತೊಡಗಿವೆ, ಇವನ್ನೆಲ್ಲ ಹೇಗೆ ನಿಭಾಯಿಸುವುದು ಎಂದು ನಿಮಗೆ ತಲೆನೋವಾಗಿರಬೇಕು ಅಲ್ಲವೇ?" ಎಂದು ಕೇಳಿದರಂತೆ. ಎಲ್ಲ ಕಡೆಗಳಿಂದ ಎಷ್ಟೊಂದು ಹೂಗುಚ್ಛಗಳು ಬರತೊಡಗಿದವೆಂದರೆ “ಇವನ್ನೆಲ್ಲ ಇರಿಸಿಕೊಳ್ಳಲು ಜೈಲಿನಲ್ಲಿ ಜಾಗವಿಲ್ಲ, ಏನು ಮಾಡುವುದು” ಎಂದು ನನ್ನನ್ನು ಕೇಳಿದರು ಆಗ ನಾನು “ನನ್ನ ಕಡೆಯಿಂದ ಈ ಊರಿನ ಎಲ್ಲ ಶಾಲೆ ಕಾಲೇಜು ವಿಶ್ವವಿದ್ಯಾಲಯಗಳಿಗೆ ಕಳುಹಿಸಿಕೊಡಿ” ಎಂದು ಸೂಚಿಸಿದೆ. ನಾನು ಜೈಲಿನಿಂದ ವಿಮಾನ ನಿಲ್ದಾಣಕ್ಕೆ ಹೋಗುವಾಗ, ಜನ ನನ್ನತ್ತ ಹೂಗಳನ್ನು ಚೆಲ್ಲುತ್ತಿದ್ದರು. ಇವನನ್ನು ಬಂಧಿಸಿ ದೊಡ್ಡ ತಪ್ಪು ಮಾಡಿದೆವು ಎಂದು ಸರ್ಕಾರ ಪರಿತಪಿಸುತ್ತಿತ್ತು.
ಎಲ್ಲಕ್ಕಿಂತ ಅಪರೂಪದ ಅನುಭವವೆಂದರೆ ಜಪಾನಿನ ಒಬ್ಬ ಅನುಭಾವಿ ಕರೆ ಮಾಡಿದ್ದು. ನನ್ನೊಂದಿಗೆ ಮಾತನಾಡಬೇಕು ಎಂದು ಪೊಲೀಸರಿಗೆ ಹೇಳಿದ ಆತ “ನೀವು ಆತನನ್ನು ಬಂಧಿಸಿ ಈ ಶತಮಾನದ ಬಹುದೊಡ್ಡ ಅಚಾತುರ್ಯವೊಂದನ್ನು ಮಾಡಿದಿರಿ. ನಮ್ಮ ಜೆನ್ ಮಠದಲ್ಲಿ ಆತನ ಪುಸ್ತಕಗಳನ್ನೇ ಪಠ್ಯವನ್ನಾಗಿ ಬೋಧಿಸುವುದು. ನಾನೂ ಸಹ ಜೀವನ್ಮುಕ್ತನಾದರೂ ಅವರಷ್ಟು ಕಲಾತ್ಮಕವಾಗಿ ವಿವರಿಸಲು ನನಗೆ ಬರುವುದಿಲ್ಲ. ಅವರ ಒಂದೊಂದು ಮಾತುಗಳನ್ನೂ ಇಲ್ಲಿನ ಜೆನ್ ಧ್ಯಾನ ಪದ್ಧತಿ ಅನುಮೋದಿಸುತ್ತದೆ” ಎಂದು ಹೇಳಿದನಂತೆ. ನಿಜಕ್ಕೂ ಜಪಾನಿನ ಎಲ್ಲ ದೊಡ್ಡ ದೊಡ್ಡ ಜೆನ್ ಮಠಗಳಲ್ಲಿ, ಪಾಠಶಾಲೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಇಂದಿಗೂ ನನ್ನ ಕೃತಿಗಳನ್ನು ಬೋಧಿಸಲಾಗುತ್ತಿದೆ. ಜೈಲರ್ ನನಗೆ ಆ ದೂರವಾಣಿ ಕರೆಯನ್ನು ವರ್ಗಾಯಿಸಿದ. ಆ ಕಡೆಯಿಂದ ಆ ವೃದ್ಧದನಿ ಹೇಳಿದ್ದಿಷ್ಟೇ. “ನೀವೆಲ್ಲಿದ್ದರೂ ಆನಂದವಾಗಿ ಇರುತ್ತೀರಿ ಎಂದು ನಾನು ಬಲ್ಲೆ. ಹಾಗಾಗಿ ’ಹೇಗಿದ್ದೀರಿ’ ಇತ್ಯಾದಿ ಉಪಚಾರದ ಮಾತುಗಳ ಅಗತ್ಯವಿಲ್ಲ. ನಾನು ನಿಮಗೆ ಹೇಳುವುದಿಷ್ಟೇ: ಅರಿತವರು ಸದಾ ನಿಮ್ಮ ಪರವಾಗಿರುತ್ತಾರೆ. ಅರಿಯದವರನ್ನು ಲೆಕ್ಕಕ್ಕಿಡಬೇಕಾದ ಅಗತ್ಯವಿಲ್ಲ”,..ಬುದ್ಧ, ಬೋಧಿಧರ್ಮ, ಮಹಾಕಾಷ್ಯಪ ಮೊದಲಾದ ಎಲ್ಲ ಅನುಭಾವಿಗಳೂ ಆ ಧ್ವನಿಯ ಮೂಲಕ ನನ್ನ ಕಿವಿಯಲ್ಲಿ ಪಿಸುಗುಡುತ್ತಿರುವಂತೆ ಕೇಳಿಸಿತು. ಏಕೆಂದರೆ ಆ ಧ್ವನಿ ಅದೇ ಪರಂಪರೆಯ ಒಂದು ಜೀವಂತ ಕೊಂಡಿ!
ಸಂಜೆಯ ಹೊತ್ತಿಗೆ ಎಷ್ಟೊಂದು ದೂರವಾಣಿ ಕರೆಗಳು ಬರಲಾರಂಭಿಸಿದವೆಂದರೆ ಜೈಲಿನವರು ಅದಕ್ಕೆಂದೇ ಪ್ರತ್ಯೇಕ ಸಿಬ್ಬಂದಿ ವರ್ಗವನ್ನು ನೇಮಿಸಿಕೊಳ್ಳಬೇಕಾಯಿತು. ಅಂತಹ ಎಷ್ಟೋ ಜೆನ್ ಅನುಭಾವಿಗಳು ಪ್ರತಿಭಟಿಸಿದರು. ಆದರೆ ಒಬ್ಬ ಹಿಂದುವೂ ಪ್ರತಿಕ್ರಿಯಿಸಲಿಲ್ಲ. ಎಷ್ಟೋ ಸೂಫಿಗಳು ಅಮೆರಿಕಾದ ಈ ಕ್ರಮವನ್ನು ವಿರೋಧಿಸಿದರು. ಆದರೆ ಒಬ್ಬ ಮುಸಲ್ಮಾನನೂ ಈ ಬಂಧನವನ್ನು ವಿರೋಧಿಸಿರಲಿಲ್ಲ. ನಿಜಾಮುದ್ದೀನ್ ಚಿಸ್ತಿಯ ದರ್ಗಾ ಇರುವ ಅಜ್ಮೀರ್ ಸೂಫೀಗಳ ಮುಖ್ಯ ಕೇಂದ್ರ. ಆ ದರ್ಗಾದ ಮುಖ್ಯಸ್ಥ ಅಜ್ಮೀರ್‌ನಿಂದ “ಕಾಗೆಗಳನ್ನು ಯಾರೂ ಹಿಡಿದು ಬಂಧಿಸುವುದಿಲ್ಲ. ಎತ್ತರದಲ್ಲಿ ಹಾರುವ ಹಂಸೆಯನ್ನು ಹಿಡಿಯಲು ಹವಣಿಸುತ್ತಾರೆ” ಎಂಬ ಸೂಫೀ ವಾಕ್ಯವನ್ನು ತಂತಿ ಸಂದೇಶದಲ್ಲಿ ಕಳಿಸಿದ್ದ. ಹಸೀದ್‌ನ ಪಂಥದ ರಬ್ಬೀಗಳು “ನಾವು ನಿಮ್ಮ ಪರವಾಗಿದ್ದೇವೆ” ಎಂದು ಬೆಂಬಲಿಸಿ ತಂತಿ ಕಳಿಸಿದರು. ಆದರೆ ಒಬ್ಬ ಕ್ರಿಶ್ಚಿಯನ್ನನೂ ದನಿ ಎತ್ತಲಿಲ್ಲ. ಇವರುಗಳ ಕಷ್ಟ ನನಗರ್ಥವಾಗುತ್ತದೆ. ಜೀವನವಿಡೀ ನಾನು ಕೊಳೆತು ನಾರುತ್ತಿದ್ದ ಈ ಪ್ರತಿಷ್ಠಿತ ಧರ್ಮಗಳನ್ನು ಜಾಲಾಡಿದ್ದರಿಂದ ಅವರಾರಿಗೂ ಉಸಿರಿರಲಿಲ್ಲ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದ ನನ್ನ ಅಮೆರಿಕಾದ ಅಟಾರ್ನಿ - ಆತ ಜಗತ್ತಿನ ಅತಿ ಶ್ರೇಷ್ಠ ಅಟಾರ್ನಿ ಎಂದು ನನ್ನ ಅಭಿಮತ - ಪೀಟರ್ ಷೇ (Peter Schey) ಪ್ರತಿದಿನ ನನ್ನನ್ನು ಕಾಣಲು ಜೈಲಿಗೆ ಬರುತ್ತಿದ್ದ. ಜೈಲಿನವರು ಆತನನ್ನು ಕುರ್ಚಿಯ ಮೇಲೆ ಕೂರಿಸುತ್ತಿದ್ದರೂ ಆತ ನನ್ನೆದುರು ನೆಲದ ಮೇಲೆಯೇ ಕುಳಿತುಕೊಳ್ಳುತ್ತಿದ್ದ “ನನಗೇಕೋ ನಿಮ್ಮೆದುರು ಕುರ್ಚಿಯ ಮೇಲೆ ಕೂರಲು ಮುಜುಗರವಾಗುತ್ತದೆ. ಅಮೆರಿಕನ್ ಸರ್ಕಾರದ ಆರೋಪ ನಿಜ. ನಿಮ್ಮ ಸಾನ್ನಿಧ್ಯದಲ್ಲಿ ಎಂಥದೋ ಮೋಡಿ ನಡೆಯುತ್ತದೆ. ಜನ ಸಮ್ಮೋಹಿತರಂತೆ ವರ್ತಿಸುತ್ತಾರೆ. ಕಾನೂನು ತಜ್ಞನಾದ ನನಗೂ ಇದರ ಕಾರ್ಯಕಾರಣ ಸಂಬಂಧ ಅರ್ಥವಾಗಿಲ್ಲ” ಎಂದು ಹೇಳಿದ. ಸಮ್ಮೋಹನ ವಿದ್ಯೆಯನ್ನು ಮಾಡುವುದು ಸುಲಭ. ಬೀದಿಬದಿಯ ಬುಡುಬುಡಿಕೆಯವನೂ ಅದನ್ನು ಮಾಡಬಲ್ಲ. ಆದರೆ ತಾನಾಗೇ ಅದು ಸಂಭವಿಸುವುದು ನಿಜಕ್ಕೂ ಪವಾಡ. ಒಮ್ಮೆ ಇಂಥದು ಸಂಭವಿಸಿದರೆ ಕಾರ್ಯ ಕಾರಣ ಸಂಬಂಧ ಮುರಿದು ಬೀಳುತ್ತದೆ. ಏಕೆಂದರೆ ಅದು ವ್ಯಾವಹಾರಿಕ ನೆಲೆಗೂ ಉನ್ನತ ನೆಲೆಗೆ ಸಂಬಂಧ ಪಟ್ಟ ಸಂಗತಿ.
ನನ್ನ ಅಟಾರ್ನಿಗಳು ಜಾಮೀನು ಪಡೆಯಲು ಮುಂದಾದಾಗ “ಜಾಮೀನು ಪಡೆಯುವ ನಿಮ್ಮ ಪ್ರಯತ್ನವೇ ನನಗರ್ಥವಾಗುವುದಿಲ್ಲ. ನೀವು ಕೇಳಬೇಕಾದ್ದು ಜಾಮೀನಲ್ಲ, ಯಾವ ಕಾರಣಕ್ಕೆ ವಾರೆಂಟ್ ಇಲ್ಲದೇ ಬಂಧಿಸಿದಿರಿ ಎಂದು ಕೋರ್ಟಿನಲ್ಲಿ ಪ್ರಶ್ನಿಸಿ” ಎಂದು ಅವರಿಗೆ ಹೇಳಿಕೊಡುತ್ತಿದ್ದೆ. “ನೀವು ದಯವಿಟ್ಟು ಸುಮ್ಮನಿರಿ. ನೀವು ಮಾತನಾಡತೊಡಗಿದರೆ ಸಮಸ್ಯೆ ಇನ್ನೂ ಕಗ್ಗಂಟಾಗುತ್ತದೆ” ಎಂದು ಅವರು ನನ್ನ ಬಾಯಿ ಮುಚ್ಚಿಸಿ ತಮ್ಮ ಪ್ರಯತ್ನವನ್ನೇ ಮುಂದುವರೆಸುತ್ತಿದ್ದರು. ಬಂಧಿತರಾಗಿದ್ದ ನನ್ನ ಆರೂ ಸನ್ಯಾಸಿಗಳಿಗೆ ಜಾಮೀನು ಸಿಕ್ಕಿತು. ನನಗೆ ಮಾತ್ರ ಸಿಗಲಿಲ್ಲ. ಜಾಮೀನು ವಿಚಾರಣೆಗೆ ಕೋರ್ಟಿಗೆ ಕರೆದುಕೊಂಡು ಹೋಗಬೇಕಾದಾಗ ಪುನಃ ನನ್ನ ಕೈಕಾಲುಗಳಿಗೆ ಸೊಂಟಕ್ಕೆ ಸರಪಳಿ ಬಿಗಿಯಲಾಯಿತು. ಬೆನ್ನು ಮೂಳೆಯ ಯಾವ ಭಾಗದಲ್ಲಿ ನನಗೆ ಹೆಚ್ಚಿನ ತೊಂದರೆ ಇತ್ತೋ ಅಲ್ಲೇ ಸರಪಳಿಯನ್ನು ಬಿಗಿಯಾಗಿ ಕಟ್ಟುವಂತೆ ಸೂಚಿಸಲಾಗಿತ್ತಂತೆ. ಡ್ರೈವರನನ್ನು ಪಕ್ಕಕ್ಕೆ ಕೂರಿಸಿ ಸ್ವತಃ ಮಾರ್ಷಲ್ಲನೇ ವಿಲಕ್ಷಣವಾಗಿ ಕಾರನ್ನು ಚಾಲನೆ ಮಾಡಿದ. ತೀವ್ರವಾದ ವೇಗದಲ್ಲಿ ಓಡಿಸುತ್ತ ಒಮ್ಮೆಲೆ ಕಾರಿಗೆ ಬ್ರೇಕ್ ಹಾಕುತ್ತಿದ್ದ. ಹೀಗಾದರೂ ನನ್ನ ಬೆನ್ನುಮೂಳೆಗೆ ಅಪಾಯವಾದರೆ ತನ್ನ ಮೇಲೆ ಆಪಾದನೆ ಬರುವುದಿಲ್ಲ ಎಂದು ಸರ್ಕಾರದ ಎಣಿಕೆ. ಹೀಗೆಯೇ ಒಂದು ಗಂಟೆಗಳ ಕಾಲ ಕಾರಿನಲ್ಲಿ ಕೂರಿಸಿ ಹಿಂಸೆ ನೀಡಿದ ಮೇಲೆ ವಿಚಾರಣೆಗೆ ಕರೆದೊಯ್ಯುತ್ತಿದ್ದರು. ಒಮ್ಮೆ ವಿಚಾರಣೆ ಮುಗಿವ ಹೊತ್ತಿಗೆ ಮಾರ್ಷಲ್ ಬೇರಾವುದೋ ಕಾರ್ಯಾರ್ಥವಾಗಿ ಹೊರಟು ಹೋಗಿದ್ದ ಕಾರಣ ಅವನ ಸಹಾಯಕ ನನ್ನನ್ನು ಮರಳಿ ಜೈಲಿಗೆ ಕರೆತಂದ. ಆ ಜೈಲು ಬೇರೆಲ್ಲೂ ಇರಲಿಲ್ಲ ನ್ಯಾಯಾಲಯದ ನೆಲಮಾಳಿಗೆಯೇ ಜೈಲು ಎಂದು ಆ ಸಹಾಯಕನ ಜೊತೆ ಎಲಿವೇಟರ್‌ನಲ್ಲಿ ಇಳಿದಾಗಲೇ ನನಗೆ ತಿಳಿದದ್ದು. ಆ ಮಾರ್ಷಲ್ ನನ್ನ ಬೆನ್ನು ಮೂಳೆ ಮುರಿಯುವ ಉದ್ದೇಶದಿಂದಲೇ ೧ ಗಂಟೆಗಳ ಕಾಲ ಸುಮ್ಮನೆ ನನ್ನನ್ನು ಅಲೆದಾಡಿಸುತ್ತಿದ್ದ.
ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಒಬ್ಬ ಮಹಿಳೆಯಾಗಿದ್ದರಿಂದ ನನ್ನಲ್ಲಿ ಸ್ವಲ್ಪ ಭರವಸೆ ಚಿಗುರೊಡೆಯಿತು. ಆದರೆ ಹೆಂಗಸರು ಅಧಿಕಾರ, ಯಶಸ್ಸು, ಅಂತಸ್ತುಗಳಿಗೆ ಇಷ್ಟೊಂದು ಹಾತೊರೆಯುತ್ತಾರೆಂದು ಆತನಕ ನನಗೆ ತಿಳಿದಿರಲಿಲ್ಲ. ಆಕೆ ನನ್ನ ಮುಖವನ್ನೇ ನೋಡದೆ ಮಾರ್ಷಲ್ಲನನ್ನು ಕುರಿತು “ಆತನಿಗೆ ಟೋಪಿಯನ್ನು ತೆಗೆಯಲು ಹೇಳಿರಿ. ಅಮೆರಿಕಾದ ಕೋರ್ಟಿನಲ್ಲಿ ಟೋಪಿಯನ್ನು ಹಾಕಿಕೊಳ್ಳುವುದು ನ್ಯಾಯಾಂಗ ನಿಂದನೆಯಾಗುತ್ತದೆ” ಎಂದಳು. ಅಷ್ಟೇ ಅಲ್ಲ ವಿಚಾರಣೆಯುದ್ದಕ್ಕೂ ಆಕೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಲೇ ಇರಲಿಲ್ಲ. ಆಗಲೇ ಇವರಿಂದ ಜಾಮೀನನ್ನು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ ಎಂದು ನಿರ್ಧರಿಸಿಕೊಂಡೆ. “ನನ್ನ ಜಾಮೀನಿನ ವಿಚಾರ ಹಾಗಿರಲಿ, ಈಗಾಗಲೇ ಆರೋಪಪಟ್ಟಿಯಲ್ಲಿ ನೂರ ಮೂವತ್ತಾರು ದೂರುಗಳು ದಾಖಲಾಗಿವೆ. ಆ ಪಟ್ಟಿ ಇನ್ನೂ ಎಷ್ಟು ಉದ್ದ ಬೇಕಾದರೂ ಬೆಳೆಯಲಿ ನಾನು ಲೆಕ್ಕಿಸುವುದಿಲ್ಲ. ಆದರೆ ಟೋಪಿಯನ್ನು ತೊಡುವುದು ಗೌರವವೋ, ಅವಮಾನವೋ ಮೊದಲು ನಿರ್ಧಾರವಾಗಬೇಕು. ಒಂದು ಟೋಪಿ ಹೇಗೆ ನ್ಯಾಯಾಲಯವನ್ನು ಅವಮಾನಿಸಬಲ್ಲುದು ಎಂದು ನನಗೆ ವಿವರಿಸಿ. ಹಾಗಿದ್ದರೆ ನಾನು ತೊಟ್ಟಿರುವ ಗೌನಿನಿಂದ ನ್ಯಾಯಾಂಗ ನಿಂದನೆಯಾಗದೇ, ಅದನ್ನೂ ಕಳಚಿಟ್ಟು ನಿಲ್ಲಲೇ?” ಎಂದು ಕೇಳಿದೆ. ಆಕೆ ನನ್ನ ಮಾತುಗಳಿಗೆ ಕಿವಿಗೊಡದೆ ಆ ವಿಷಯವನ್ನು ಅಲ್ಲಿಗೇ ಬಿಟ್ಟು ಜಾಮೀನಿನ ವಿಚಾರಣೆ ಕೈಗೆತ್ತಿಕೊಂಡಳು. ಆದರೆ ನಾನು ಅಷ್ಟಕ್ಕೇ ಬಿಡಲಿಲ್ಲ. “ಏಕೆ ಒಂದೇ ಕ್ಷಣದಲ್ಲಿ ಅಮೆರಿಕಾದ ಕಾನೂನಿನಲ್ಲಿ ತಿದ್ದುಪಡಿ ಆಗಿಬಿಟ್ಟಿತೇ?” ಎಂದು ಮಾರ್ಷಲ್ಲನನ್ನು ಕೇಳಿದೆ. “ಇಲ್ಲ ನೀವು ಟೋಪಿಯನ್ನು ತೆಗೆಯಬೇಕಿಲ್ಲ” ಎಂದು ಕಿವಿಯಲ್ಲಿ ಹೇಳಿದ.
ಆ ದಿನ ನಿರೀಕ್ಷಿಸಿದ್ದಂತೆ ನನ್ನ ಜಾಮೀನು ಅರ್ಜಿಯನ್ನು ನಿರಾಕರಿಸಲಾಯಿತು. ಸರ್ಕಾರದ ಪರವಾಗಿ ಮೂರು ದಿನಗಳ ಕಾಲ ವಾದ ಮಂಡಿಸಿದ ವಕೀಲರು ಈತನ ಬಳಿ ಲೆಕ್ಕವಿಲ್ಲದಷ್ಟು ಸಂಪತ್ತಿನ ಸಂಗ್ರಹವಿದೆ. ಈತನು ಹೇಳಿದಂತೆ ಕೇಳುವ ಸಾವಿರಾರು ಮಂದಿ ಶಿಷ್ಯರನ್ನು ಹೊಂದಿದ್ದಾನೆ ಇತ್ಯಾದಿ ವಾದಿಸಿದ. ಇವೆಲ್ಲ ಅಪರಾಧಗಳೇ. ಹಣವಂತರಿಗೆ ಜಾಮೀನು ಸಿಗಬಾರದೆಂದು ಕಾನೂನಿದೆಯೇ. ನಾನು ಸಾವಿರಾರು ಜನಗಳ ಪ್ರೀತಿಯನ್ನು ಸಂಪಾದಿಸಿರುವ ವ್ಯಕ್ತಿಯಾಗಿದ್ದೇನೆ ಎಂದರೆ ನಾನು ಸಮಾಜದ ಶತ್ರುವಲ್ಲ ಎಂದು ಹೇಳಿದಂತಾಯಿತು. ಸರ್ಕಾರದ ಪರ ವಾದ ಮಾಡಿದ ವಕೀಲನು ೧೩೬ ಆಪಾದನೆಗಳಲ್ಲಿ ಒಂದಕ್ಕೂ ಸರಿಯಾದ ಸಾಕ್ಷ್ಯಾಧಾರ ಒದಗಿಸದೇ ಕೊನೆಯಲ್ಲಿ “ಸಾಕ್ಷ್ಯಾಧಾರ ಮುಖ್ಯವಲ್ಲ, ಅಮೆರಿಕನ್ ಸರ್ಕಾರ ಈತನಿಗೆ ಜಾಮೀನು ಸಿಗುವುದನ್ನು ಸಹಿಸುವುದಿಲ್ಲ ಎಂಬ ವಿಷಯವನ್ನು ಮ್ಯಾಜಿಸ್ಟ್ರೇಟರ ಗಮನಕ್ಕೆ ತರಲು ಇಚ್ಛಿಸುತ್ತೇನೆ” ಎಂದು ಹೇಳಿ ಕುಳಿತುಬಿಟ್ಟ. ಆಕೆಗೆ ಮೇಲಿನಿಂದ “ಜಾಮೀನನ್ನು ಮಂಜೂರು ಮಾಡದಿದ್ದರೆ ನಿಮಗೆ ಫೆಡರಲ್ ಜಡ್ಜ್ ಸ್ಥಾನವನ್ನು ನೀಡುತ್ತೇವೆ” ಎಂಬ ಆಶ್ವಾಸನೆ ಸಿಕ್ಕಿತ್ತು ಎಂಬ ವಿಷಯ ಆಮೇಲೆ ನನಗೆ ಕೆರೊಲಿನಾದ ಹಿರಿಯ ನ್ಯಾಯಾಧಿಕಾರಿಯೊಬ್ಬರಿಂದ ತಿಳಿಯಿತು. “ಜೈಲುವಾಸವನ್ನು ನಾನು ಶಿಕ್ಷೆ ಎಂದು ಭಾವಿಸಿದವನೇ ಅಲ್ಲ. ಆಕೆ ನನಗೆ ಮೊದಲೇ ಹೇಳಿದ್ದರೆ ಜಾಮೀನು ಅರ್ಜಿ ಸಲ್ಲಿಸಲು ನನ್ನ ಅಟಾರ್ನಿಗಳಿಗೆ ಆಸ್ಪದವನ್ನೇ ಕೊಡುತ್ತಿರಲಿಲ್ಲವಲ್ಲ” ಎಂದು ಹೇಳಿದೆ.
ನವೆಂಬರ್ ೪, ೧೯೮೫ ರಂದು ನನ್ನನ್ನು ಓಕ್ಲಹೋಮಾ ಜೈಲಿಗೆ ಸಾಗಿಸಲಾಯಿತು. “ಇವರಿಗೆ ಜಾಮೀನು ಬೇಕಿದ್ದರೆ ಓರೆಗಾನ್‌ನಲ್ಲಿ ಅರ್ಜಿ ಹಾಕಿಕೊಳ್ಳಲಿ, ಇಲ್ಲಿ ನೀಡಕೂಡದು” ಎಂದು ಸರ್ಕಾರದ ಪರ ವಕೀಲ ವಾದಿಸಿದ. ನನ್ನ ಆರು ಜನ ಸನ್ಯಾಸಿಗಳಿಗೆ ಇಲ್ಲಿ ಜಾಮೀನು ಸಿಕ್ಕಿರುವಾಗ ನನಗೆ ಮಾತ್ರ ಏಕೆ ಓರೆಗಾನ್‌ನಲ್ಲಿ ಎಂದು ನನಗೆ ತಿಳಿಯಲಿಲ್ಲ. ಕೊನೆಗೆ ಒರೆಗಾನ್‌ಗೆ ಕರೆದೊಯ್ದರು. ಕೆಲವು ರಾಜ ತಾಂತ್ರಿಕೆ ನೆವಗಳನ್ನೊಡ್ಡಿ ೬ ದಿನಗಳ ಪ್ರಯಾಣದ ಹಾದಿಯನ್ನು ಕ್ರಮಿಸಲು ೧೨ ದಿನ ತೆಗೆದುಕೊಂಡರು. ಈ ೧೨ ದಿನಗಳಲ್ಲಿ ೬ ಜೈಲುಗಳಲ್ಲಿ ನನ್ನನ್ನು ಇರಿಸಲಾಯಿತು. ಪ್ರತಿಸಲ ವಿಮಾನದಿಂದಿಳಿದು ಕಾರಿನಲ್ಲಿ ಹತ್ತಿಸಿಕೊಳ್ಳುವಾಗಲೂ ಹಳೆಯ ಮಾರ್ಷಲ್ ಹೊಸ ಮಾರ್ಷಲ್‌ಗೆ ಕಿವಿಯಲ್ಲಿ “ಈತ ಮಹಾ ಅಪಾಯಕಾರಿ ಮನುಷ್ಯ. ಜಗತ್ತಿನೆಲ್ಲೆಡೆ ಸುದ್ದಿಯಲ್ಲಿರುವವನು ಹೊರಬಂದ ಕೂಡಲೆ ಪ್ರತಿಯೊಂದನ್ನೂ ಹೊರಗೆಡಹುತ್ತಾನೆ. ಹಾಗಾಗಿ ಹುಷಾರಾಗಿ ಇವನ ಮೈಮುಟ್ಟದಂತೆ ನಡೆದುಕೊಳ್ಳಿ” ಎಂದು ಪ್ರತ್ಯೇಕವಾಗಿ ಸೂಚನೆ ನೀಡುತ್ತಿದ್ದ. ಹೀಗೆ ಕಾರಿನಲ್ಲಿ ಹೋಗುವಾಗ ಒಮ್ಮೆ ರಾತ್ರಿ ೧೧.೩೦ಗಂಟೆಯಾಗಿತ್ತು. ಕಾರಿನಲ್ಲಿದ್ದ ಮಾರ್ಷಲ್ ಅರ್ಜಿಯಲ್ಲಿ ನನ್ನ ಹೆಸರನ್ನು ಡೇವಿಡ್ ವಾಷಿಂಗ್‌ಟನ್ ಎಂದು ನಮೂದಿಸಲು ಸೂಚಿಸಿದ. ಹಾಗೆ ಬರೆದರೆ ನನ್ನನ್ನು ಸುಲಭವಾಗಿ ಗುಂಡಿಟ್ಟು ಕೊಲ್ಲಬಹುದೆಂಬುದು ಅವರ ಸಂಚು. ಹಾಗಾಗಿ ನಾನು ನಿರಾಕರಿಸಿದೆ “ಹೀಗೆಂದು ನನಗೆ ಮೇಲಿನಿಂದ ಸೂಚನೆ ಬಂದಿದೆ, ದಯವಿಟ್ಟು ನಿರಾಕರಿಸಬೇಡಿ” ಎಂದು ಕೋರಿಕೊಂಡ. ಆಗ “ಅರ್ಜಿಯಲ್ಲಿ ನಿನಗೆ ಬೇಕಾದ್ದನ್ನು ಬರೆದುಕೋ, ನಾನು ಸಹಿ ಮಾತ್ರ ಮಾಡಬಲ್ಲೆ” ಎಂದು ತಿಳಿಸಿದೆ. ಸಮಸ್ಯೆ ಇಷ್ಟು ಸುಲಭವಾಗಿ ಬಗೆಹರಿಯಬಹುದೆಂದು ನಂಬಿರದಿದ್ದ ಆತ ಬೇಗ ಬೇಗನೆ ಅರ್ಜಿಯನ್ನು ತುಂಬಿದ. ಆದರೆ ಅರ್ಜಿಯಲ್ಲಿ ನಾನು ಹಿಂದಿಯಲ್ಲಿ ನನ್ನ ಸಹಿ ಮಾಡಿದ್ದರಿಂದ ಅವರ ಯೋಜನೆಯೆಲ್ಲ ತಲೆಕೆಳಗಾಯಿತ್ತು. ಹಾಗು ನನ್ನನ್ನು ಗುಂಡಿಟ್ಟು ಕೊಲ್ಲುವ ಸಂಚನ್ನು ಕೈಬಿಡಬೇಕಾಯಿತು. ಕಾರಿನಲ್ಲಿ ನನ್ನ ಪಕ್ಕದಲ್ಲಿ ಇನ್ನೊಬ್ಬ ಹೆಣ್ಣು ಕೈದಿ ಕುಳಿತಿದ್ದಳು. ಮಾರನೆಯ ದಿನ ಆಕೆ ಬಿಡುಗಡೆ ಆಗುತ್ತಿತ್ತು. ನಮ್ಮ ಪ್ರತಿಯೊಂದು ಸಂಭಾಷಣೆಯನ್ನೂ ಕೇಳುತ್ತಿದ್ದ ಆಕೆ ಹೊರ ಬಂದ ಕೂಡಲೆ ಕಾರಿನಲ್ಲಿ ನಡೆದ ಪ್ರತಿಯೊಂದು ಸಂಭಾಷಣೆಯನ್ನೂ ಚಾಚೂ ತಪ್ಪದೇ ಮಾಧ್ಯಮದವರ ಮುಂದೆ ಹೇಳಿಬಿಟ್ಟಳು. ಮರುದಿನ ಎಲ್ಲ ಪತ್ರಿಕೆಗಳಲ್ಲೂ ಅದೊಂದು ದೊಡ್ಡ ಸುದ್ದಿಯಾಯಿತು. ಕೂಡಲೆ ೫ನೇ ನವೆಂಬರ್ ೧೯೮೫ರಂದು ನನ್ನನ್ನು ಆ ಜಾಗದಿಂದ ೩೦ ಕಿ.ಮೀ. ದೂರವಿದ್ದ ಪೆನಿಟೆಂಶಿಯರಿ ಎಂಬ ಜಾಗಕ್ಕೆ ಕಳಿಸಿಬಿಟ್ಟರು. ನಾನು ಆ ಜೈಲಿಗೆ ಬಂದಿರಲೇ ಇಲ್ಲ ಎಂದು ತಮ್ಮ ದಾಖಲೆಗಳಲ್ಲಿ ತಿದ್ದಿ ಬಚಾವಾದರು.
ಜೈಲಿನಲ್ಲಿ ನನ್ನನ್ನು ಉಪಾಯವಾಗಿ ಕೊಲ್ಲಲು ಹಲವು ಸಂಚುಗಳನ್ನು ನಡೆಸಿದರು. ಒಂದು ಜೈಲಿನಲ್ಲಿ ಒಬ್ಬ ಸಾಂಕ್ರಾಮಿಕ ರೋಗಿ ವಾಸಿಸುತ್ತಿದ್ದ ಕೋಣೆಯಲ್ಲಿ ನನ್ನನ್ನು ಬಿಟ್ಟರು. ಹನ್ನೆರಡು ದಿನಗಳ ಕಾಲ ಜೈಲಿನಿಂದ ವಿಮಾನ ನಿಲ್ದಾಣಕ್ಕೆ ವಿಮಾನ ನಿಲ್ದಾಣದಿಂದ ಜೈಲಿಗೆ ಕರೆದೊಯ್ಯುತ್ತಿದ್ದರು. ಪ್ರತಿ ಸಲ ಕಾರಿನಲ್ಲಿ ಹೋಗುವಾಗಲೂ ನನ್ನ ಬೆನ್ನು ಮೂಳೆಗೆ ಪೆಟ್ಟಾಗುವಂತೆ ಕಾರು ಚಾಲನೆ ಮಾಡುತ್ತಿದ್ದರು. ಧೂಳು ಹೊಗೆಗಳಿಂದ ನನಗೆ ಅಲರ್ಜಿ ಆಗುವುದೆಂದು ಅರಿತಿದ್ದ ಅವರು ಸಿಗರೇಟು ಸೇದುವ ಕೈದಿಗಳಿರುತ್ತಿದ್ದ ಸೆಲ್‌ನೊಳಗೆ ನನ್ನನ್ನು ಬಿಡುತ್ತಿದ್ದರು. ಆ ಸೆಲ್‌ಗಳಲ್ಲಿ ಹೆಜ್ಜೆ ಇಟ್ಟರೂ ಧೂಳು ಮೇಲೇಳುತ್ತಿತ್ತು. ಸೆಲ್‌ನಲ್ಲಿದ್ದ ಟೀವಿಯ ಶಬ್ದವನ್ನು ಗರಿಷ್ಟ ಮಟ್ಟಕ್ಕೇರಿಸಿ ನಿದ್ರಿಸಲಾಗದಂತೆ ಮಾಡುತ್ತಿದ್ದರು. ಬೆನ್ನು ನೋವಿಗೆ ಆ ತನಕ ನಾನು ತೆಗೆದುಕೊಂಡಿರದಿದ್ದ ಮಾತ್ರೆಗಳನ್ನೆಲ್ಲ ನನಗೆ ಕೊಡಲು ಬರುತ್ತಿದ್ದರು. ’ಮಾತ್ರೆ ಬೇಡದಿದ್ದರೆ ಚುಚ್ಚುಮದ್ದಿನ ರೂಪದಲ್ಲಿ ಕೊಡುತ್ತೇವೆ’ ಎಂದು ಹೇಳುತ್ತಿದ್ದರು.
ಹೀಗೆ ಜೈಲಿನಿಂದ ಜೈಲಿಗೆ ಅಲೆದಾಡಿಸುವಾಗ ಪ್ರತಿಯೊಂದು ಜೈಲಿನಲ್ಲೂ ಪತ್ರಕರ್ತರು ಮುತ್ತಿರುತ್ತಿದ್ದರು. ವಿಮಾನದಿಂದ ಕಾರನ್ನೇರುವ ಸಮಯದಲ್ಲಿ ಅವರೆಲ್ಲ ನನ್ನ ಬಳಿ ನುಗ್ಗಿ “ಜೈಲಿನಲ್ಲಿ ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ” ಎಂದು ಕೇಳುತ್ತಿದ್ದರು. ಹಾಗಾಗಿ ಜೈಲಿನ ಅಧಿಕಾರಿಗಳು ನನ್ನನ್ನು ನೇರವಾಗಿ ಹಿಂಸಿಸಲು ಹಿಂಜರಿಯುತ್ತಿದ್ದರು. ಪ್ರಭುತ್ವವಲ್ಲದಿದ್ದರೆ ಅಮೆರಿಕಾದ ಮಾಧ್ಯಮವಾದರೂ ವ್ಯಕ್ತಿಸ್ವಾತಂತ್ರ್ಯದ ಬಗ್ಗೆ ಕಾಳಜಿ ಹೊಂದಿದೆ ಎಂದು ನನಗೆ ಸಮಾಧಾನವಾಗುತ್ತಿತ್ತು. ಸರ್ಕಾರದವರು ನನ್ನನ್ನು ಬಂಧಿಸಿ ನಾನು ಯಾರು ಎನ್ನುವುದು ಇಡೀ ಅಮೆರಿಕಾಗೇ ತಿಳಿಯುವಂತೆ ಹಾಗು ಜನರ ಸಹಾನುಭೂತಿ ನನಗೆ ಸಿಗುವಂತೆ ಮಾಡಿದರು. ಸರ್ಕಾರಿ ಅಧಿಕಾರಿಗಳನ್ನು ಬಿಟ್ಟರೆ ಜೈಲಿನ ಒಳಗೂ, ಹೊರಗೂ ಅಮೆರಿಕಾದ ಯಾವ ಪ್ರಜೆಯೂ ನನ್ನನ್ನು ವಿರೋಧಿಸಲಿಲ್ಲ, ಟೀಕಿಸಲಿಲ್ಲ. ಅಮೆರಿಕಾದ ಪ್ರತಿಯೊಂದು ಪತ್ರಿಕೆಯೂ, ದೃಶ್ಯಮಾಧ್ಯಮವೂ ನನ್ನ ಪರವಾದ ಸಹಾನುಭೂತಿಯನ್ನು ಸೂಚಿಸಿದವು.
ಹನ್ನೆರಡು ದಿನಗಳಲ್ಲಿ ಅಮೆರಿಕಾದ ಐದು ಜೈಲುಗಳಲ್ಲಿ ಇದ್ದು ಬಂದಿದ್ದ ನನಗೆ ಅಲ್ಲಿ ಅರಿವಾದದ್ದಿಷ್ಟು. ಮೊದಲನೆಯದಾಗಿ, ಪ್ರಜಾಪ್ರಭುತ್ವ ದೇಶ ಎಂದು ಜಗತ್ತಿಗೆ ಹೇಳಿಕೊಳ್ಳುವ ಅಮೆರಿಕಾ ಆಂತರ್ಯದಲ್ಲಿ ಮಹಾ ಫ್ಯಾಸಿಸ್ಟ್ ದೇಶ. ಎರಡನೆಯದಾಗಿ, ಅಮೆರಿಕಾ ಹೊರಜಗತ್ತನ್ನು ಮಾತ್ರ ವಂಚಿಸುತ್ತಿರಲಿಲ್ಲ, ತನ್ನ ನಿಜರೂಪವನ್ನು ತೋರಿಸದೇ ಅದು ತನ್ನ ಪ್ರಜೆಗಳಿಗೇ ವಂಚನೆ ಮಾಡುತ್ತಿತ್ತು. ಏಕೆಂದರೆ ಅಮೆರಿಕನ್ ಪ್ರಜೆಗಳು ನಿಜಕ್ಕೂ ವಿಶ್ವಾಸಿಗಳು. ಮೂರನೆಯದಾಗಿ, ಆ ಐದೂ ಜೈಲುಗಳಲ್ಲೂ ಒಬ್ಬ ಬಿಳಿ ಕೈದಿಯೂ ನನ್ನ ಕಣ್ಣಿಗೆ ಬೀಳಲಿಲ್ಲ. ಎಲ್ಲರೂ ಕರಿಯರಾಗಿದ್ದರು. ಅವರಲ್ಲೂ ಹೆಚ್ಚಿನವರು ವಿಚಾರಣಾಧೀನ ಕೈದಿಗಳಾಗಿದ್ದರು. ಅವರೆಲ್ಲ ಕೋರ್ಟಿನ ತೀರ್ಪಿಗಾಗಿ ತಿಂಗಳು ಗಟ್ಟಲೆ, ವರ್ಷಗಟ್ಟಲೆ ಕಾಯುತ್ತಿದ್ದವರು. ಅಮೆರಿಕಾದಲ್ಲಿ ಮಾನವತಾವಾದಿಗಳು ಎಂದು ಹೇಳಿಕೊಳ್ಳುವವರಿಗಿಂತಲೂ ಜೈಲಿನ ಕೈದಿಗಳು ಹೆಚ್ಚು ಮಾನವೀಯತೆ ಹೊಂದಿದ್ದರು. “ಈತನಿಗೆ ಯಾವುದೇ ವಿಶೇಷ ಸವಲತ್ತು ನೀಡಬೇಡಿ” ಎಂಬ ಆದೇಶವನ್ನು ಪಡೆದಿದ್ದ ಜೈಲಧಿಕಾರಿಗಳು ನನಗೂ ಮಾಂಸಾಹಾರವನ್ನು ಕೊಡುತ್ತಿದ್ದರು. ಆಗ ನನ್ನ ಕಷ್ಟವನ್ನು ಅರಿತು ನನ್ನ ಸೆಲ್‌ನಲ್ಲಿದ್ದ ಹನ್ನೆರಡು ಮಂದಿ ಕೈದಿಗಳು ತಮ್ಮ ಪಾಲಿನ ಸೇಬು, ಹಾಲು ಇತ್ಯಾದಿಗಳನ್ನು ನನಗೆ ಕೊಟ್ಟುಬಿಡುತ್ತಿದ್ದರು. ಆದರೂ ೧೨ ದಿನಗಳಲ್ಲಿ ನನ್ನ ದೇಹ ೮ ಪೌಂಡ್ ತೂಕವನ್ನು ಕಳೆದುಕೊಂಡಿತು.
೭ರ ಅಕ್ಟೋಬರ್‌ನಂದು ನನ್ನನ್ನು ವಿಮಾನದಲ್ಲಿ ಕೊಂಡೊಯ್ದರು. ಪತ್ರಕರ್ತರ ಹಾವಳಿಯಿಂದ ತಪ್ಪಿಸಿಕೊಳ್ಳಲು ೬ ವಿಮಾನ ನಿಲ್ದಾಣಗಳನ್ನು ಬದಲಾಯಿಸಿ ಕೊನೆಗೆ ಪೋರ್ಟ್ ಲ್ಯಾಂಡಿನಲ್ಲಿ ನನ್ನನ್ನು ಇಳಿಸಿದರು. ಪ್ರತಿ ನಿಲ್ದಾಣದಲ್ಲೂ ಗಂಟೆ ಗಟ್ಟಲೆ ನಿಲ್ಲಿಸಿ ಓರೆಗಾನ್‌ಗೆ ಕೊಂಡೊಯ್ಯುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದರು. ಇಷ್ಟೊಂದು ಸುಳ್ಳು ಹೇಳುವ ಜನರನ್ನು ನಾನು ಆತನಕ ಕಂಡಿರಲಿಲ್ಲ. ಕೊನೆಗೆ ೫ ಲಕ್ಷ ಡಾಲರ್ ಠೇವಣೆ ಇಟ್ಟುಕೊಂಡು ಜಾಮೀನು ನೀಡಿದರು. ಇಷ್ಟೆಲ್ಲ ಆದಮೇಲೆ ಭಾರತೀಯ ರಾಯಭಾರಿ ಕಛೇರಿಯ ಅಧಿಕಾರಿಯೊಬ್ಬ ನನ್ನ ಬಳಿ ಬಂದು “ನಮ್ಮಿಂದೇನಾದರೂ ಸಹಾಯ ಬೇಕೇ” ಎಂದು ಕೇಳಿದ. ಅಮೆರಿಕನ್ ಸರ್ಕಾರದ ಅನ್ಯಾಯ ಎಲ್ಲ ಮಾಧ್ಯಮಗಳಲ್ಲೂ ಪ್ರಸಾರವಾಗುತ್ತಿದ್ದರೂ ಅದರ ವಿರುದ್ಧ ದನಿ ಎತ್ತದೆ ಜಾಣ ಕುರುಡರಂತೆ ವರ್ತಿಸುತ್ತಿದ ಇವರು ಈಗ ಸಹಾಯ ನೀಡಲು ಬಂದಿದ್ದರು. ಒಂದು ವೇಳೆ ನಾನು ಕೇಳಿದ್ದರೂ ಅವರು ಯಾವ ಸಹಾಯವನ್ನೂ ಮಾಡುತ್ತಿರಲಿಲ್ಲ ಎಂದು ನನಗೆ ಗೊತ್ತಿತ್ತು. ಭಾರತೀಯ ಸಂಸತ್ತಿನಲ್ಲಿ ನನ್ನ ಪರವಾಗಿ ಯಾವುದೇ ಚರ್ಚೆ ನಡೆಯದಂತೆ ಅಮೆರಿಕನ್ ಸರ್ಕಾರವು ಇಬ್ಬರು ಸಂಸದರಿಗೆ ಲಂಚ ನೀಡಿತ್ತಂತೆ. ಈ ಸಂಗತಿ ಆಮೇಲೆ ವಿಶ್ವಾಸಾರ್ಹ ಮೂಲಗಳಿಂದ ನನಗೆ ತಿಳಿದುಬಂದಿತು. ನನ್ನನ್ನು ಬಿಡುಗಡೆ ಮಾಡಿದ ಕೂಡಲೆ ಅಮೆರಿಕನ್ ಸರ್ಕಾರ ಪಶ್ಚಿಮ ಜರ್ಮನಿಯ ಮೇಲೆ ಒತ್ತಡ ಹೇರಲಾರಂಭಿಸಿತು. ಜರ್ಮನಿಯಲ್ಲಿ ನನ್ನ ೬ ಆಶ್ರಮಗಳು ಇದ್ದುದರಿಂದ ಒಂದು ವೇಳೆ ನಾನು ಅಮೆರಿಕಾದಿಂದ ಹೊರಟರೆ ನೇರವಾಗಿ ಜರ್ಮನಿಯಲ್ಲಿ ಇಳಿಯಬಹುದು ಎಂದು ಊಹಿಸಿದರು. ಪಶ್ಚಿಮ ಜರ್ಮನಿ ಅಮೆರಿಕಾದ ಹಂಗಿನಲ್ಲಿ ಇದ್ದುದರಿಂದ ನಾನು ಅವರ ವಿಮಾನ ನಿಲ್ದಾಣದಲ್ಲಿ ಇಳಿಯಕೂಡದೆಂದು ನಿರ್ಬಂಧ ಹೇರಿತು. ೮ನೇ ನವೆಂಬರ್‌ನಲ್ಲಿ ಬಿಡುಗಡೆಯಾಗಿ ರಜನೀಶ್‌ಪುರಂನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ೧೪ನೆಯ ನವೆಂಬರ್‌ನಲ್ಲಿ ಮತ್ತೆ ಪೋರ್ಟ್‌ಲ್ಯಾಂಡ್‌ನ ಕೋರ್ಟಿಗೆ ಹೋಗಬೇಕಾಯಿತು. ನನ್ನ ಮೇಲಿನ ಯಾವ ಆರೋಪವೂ ರುಜುವಾತಾಗದಿದ್ದರೂ ೪ ಲಕ್ಷ ಡಾಲರ್ ಠೇವಣೆ ಪಡೆದುಕೊಂಡ ಕೋರ್ಟ್ ಕೂಡಲೆ ಅಮೆರಿಕಾವನ್ನು ಬಿಟ್ಟು ಹೊರಡಲು ಆದೇಶಿಸಿತು.
ಅನುಬಂಧ ೩: ವಿಶ್ವಪರ್ಯಟನೆ
೧೪ರ ನವೆಂಬರ್ ೧೯೮೫ರಂದು ಪೋರ್ಟ್‌ಲ್ಯಾಂಡಿನಿಂದ ದೆಹಲಿಯ ವಿಮಾನ ನಿಲ್ದಾಣಕ್ಕೆ ಒಂದು ಖಾಸಗೀ ವಿಮಾನದಲ್ಲಿ ಹಿಂದಿರುಗುವಾಗ ಸೌದಿ ಅರೇಬಿಯಾದಲ್ಲಿ ಎಂಥದೋ ಧಾರ್ಮಿಕ ಉತ್ಸವ ಇದ್ದುದರಿಂದ ಆ ದಿನ ಯಾವ ವಿಮಾನವೂ ತಮ್ಮ ದೇಶದ ಮೇಲೆ ಹಾರಾಡಬಾರದೆಂದು ಅವರು ಅಪ್ಪಣೆ ವಿಧಿಸಿದ್ದರಂತೆ. ಹಾಗಾಗಿ ಸೈಪ್ರಸ್ ಎಂಬಲ್ಲಿ ೧೨ ಗಂಟೆಗಳ ಕಾಲ ತಂಗಬೇಕಾಯಿತು. ೧೭ರಂದು ದೆಹಲಿಯನ್ನು ತಲುಪಿದಾಗ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸನ್ಯಾಸಿಗಳು ನನ್ನನ್ನು ಸ್ವಾಗತಿಸಿದರು. ದೆಹಲಿಯಲ್ಲಿ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿ ವೈದ್ಯರ ಸಲಹೆಯ ಮೇರೆಗೆ ಹಿಮಾಲಯದ ಕುಲು ಮನಾಲಿ ಎಂಬಲ್ಲಿ ವಿಶ್ರಾಂತಿ ಪಡೆದೆ. ಆ ದಿನಗಳಲ್ಲಿ ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದೆನಾದರೂ ದೊಡ್ಡ ಸಭೆಗಳಿಗೆ ಪ್ರವಚನ ನೀಡುತ್ತಿರಲಿಲ್ಲ.
ನಾನು ದೆಹಲಿಯ ಪತ್ರಿಕಾಗೋಷ್ಠಿಯಲ್ಲಿ ಯಾವುದೋ ಧರ್ಮದವರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂಬ ಕಾರಣಕ್ಕೆ ಬಂಗಾಳದಿಂದ ಸಮನ್ಸ್ ಬಂದಿತು. ಭಾರತ ಸರ್ಕಾರವು ನನ್ನ ಜೊತೆಗಿದ್ದ ಎಲ್ಲ ವಿದೇಶೀ ಸನ್ಯಾಸಿಗಳ ವೀಸಾವನ್ನೂ ವಜಾಗೊಳಿಸಿ ನನಗೆ ಮಾತ್ರ ಮೂರು ಷರತ್ತುಗಳ ಮೇಲೆ ಇರಲು ಅವಕಾಶ ನೀಡಿತು. ಮೊದಲ ಷರತ್ತು: ಯಾವ ವಿದೇಶೀಯನೂ ನನ್ನನ್ನು ಭೇಟಿ ಮಾಡಲು ಬರುವಂತಿಲ್ಲ, ಎರಡನೆಯದು, ನಾನು ಯಾವುದೇ ಪತ್ರಿಕಾಗೋಷ್ಠಿಯನ್ನು ನಡೆಸುವಂತಿಲ್ಲ, ಮೂರನೆಯದು, ಇನ್ನು ಮುಂದೆ ನಾನು ಯಾವ ಹೊರದೇಶಕ್ಕೂ ಭೇಟಿ ನೀಡುವಂತಿಲ್ಲ. ಹೀಗೆ ಷರತ್ತುಗಳನ್ನು ವಿಧಿಸಿ ನಾನು ದೇಶ ಬಿಟ್ಟು ಹೋಗುವಂತೆ ಒತ್ತಡ ಹೇರಿದ ಸರ್ಕಾರವು ಇನ್ನೊಂದು ಕಡೆ ನನ್ನ ಪಾಸ್‌ಪೋರ್ಟನ್ನು ಮುಟ್ಟುಗೋಲು ಹಾಕಿಕೊಂಡು ದೇಶ ಬಿಟ್ಟು ಹೋಗದಂತೆ ಮಾಡಲು ಪ್ರಯತ್ನಿಸಿತು. ಈ ದ್ವಂದ್ವ ನೀತಿಯಿಂದ ಹಿಂಸಿಸುವುದಕ್ಕಿಂತ ಒಂದೇ ಸಲ ಕೊಂದು ಬಿಟ್ಟರೆ ಎಲ್ಲರಿಗೂ ಕ್ಷೇಮವಲ್ಲವೇ? ಕೊನೆಗೆ ಬೇರೆ ದಾರಿ ಇಲ್ಲದೆ ನೇಪಾಳಕ್ಕೆ ಹೋದೆ. ಏಕೆಂದರೆ ನೇಪಾಳ ಪರದೇಶವಾದರೂ ಅಲ್ಲಿ ಪ್ರವೇಶಿಸಲು ವೀಸಾ ಅನುಮತಿಯ ಅಗತ್ಯ ಇರಲಿಲ್ಲ. ಅಲ್ಲಿಗೆ ಎಲ್ಲ ದೇಶಗಳ ಸನ್ಯಾಸಿಗಳೂ ಸುಲಭವಾಗಿ ಬರಲು ಸಾಧ್ಯವಾಯಿತು. ಕಠ್ಮಂಡುವಿನಲ್ಲಿ ಇಳಿದ ಕೂಡಲೆ ಪತ್ರಿಕಾಗೋಷ್ಠಿ ನಡೆಸಿದೆ. ನೇಪಾಳದಲ್ಲಿ ತುಂಬ ಜನ ’ಹೊಸ ಬುದ್ಧನಿಗೆ ಸ್ವಾಗತ’ ಎಂಬ ಘೋಷಣಾ ಫಲಕಗಳನ್ನು ಎಲ್ಲೆಡೆ ಪ್ರದರ್ಶಿಸಿದರು. ಅದನ್ನು ಕಂಡ ಪತ್ರಕರ್ತರು “ನಿಮ್ಮನ್ನು ನೀವು ಬುದ್ಧನ ಅವತಾರ ಎಂದು ಪರಿಗಣಿಸುವಿರೇ?” ಎಂದು ಕೇಳಿದರು.
“ನೇಪಾಳ ಬೌದ್ಧರ ನೆಲ, ಭಾರತ ದೇಶವು ತನ್ನದು ಬುದ್ಧ ಹುಟ್ಟಿದ ನಾಡು ಎಂದು ಸುಳ್ಳು ಹೇಳುತ್ತದೆ. ಬುದ್ಧ ಎನ್ನುವುದು ವ್ಯಕ್ತಿಯ ಹೆಸರಲ್ಲ. ನಾನು ಯಾರ ಅವತಾರವೂ ಅಲ್ಲ. ಆದರೆ ನಾನು ಮನುಷ್ಯ ಸಾಧ್ಯವಾದ ಜ್ಞಾನೋದಯಕ್ಕೆ ಪ್ರಾಪ್ತನಾದವನು ಎಂದು ನಿಸ್ಸಂಶಯವಾಗಿ ಹೇಳ ಬಲ್ಲೆ. ಆ ಅರ್ಥದಲ್ಲಿ ನನ್ನನ್ನು ಅವರು ಬುದ್ಧನೆಂದು ಕರೆದರೆ ತಪ್ಪಿಲ್ಲ. ನೇಪಾಳದ ದೊರೆಯೂ ನನ್ನನ್ನು ಜ್ಞಾನಿ ಎಂದು ಒಪ್ಪಿದ್ದಾನೆ. ಆದರೆ ತಾನೂ ಸಹ ಜೀವನ್ಮುಕ್ತ ಎಂದು ಭಾವಿಸಿಕೊಂಡಿರುವ ಅವನ ಮಾತುಗಳನ್ನು ಅವನ ಬಾಲಬಡುಕರು ಮಾತ್ರ ನಂಬುವರು. ಆತ ನಿಜಕ್ಕೂ ಜೀವನ್ಮುಕ್ತನಾಗಿದ್ದರೆ ನನ್ನನ್ನು ಸ್ವಾಗತಿಸಲು ಇಲ್ಲಿಗೆ ದಯಮಾಡಿಸುತ್ತಿದ್ದ. ರಾಜನಾದವನು ತನ್ನ ದೇಶಕ್ಕೆ ಅತಿಥಿಯಾಗಿ ಪಾದಾರ್ಪಣೆ ಮಾಡಿದವನನ್ನು ಸತ್ಕರಿಸುವುದು ಪೂರ್ವದ ಸಂಪ್ರದಾಯ ಎಂದು ದೊರೆಯಾದ ಆತನಿಗೆ ತಿಳಿದಿಲ್ಲವೇ? ಸಾಲದ್ದಕ್ಕೆ ನಾನು ಹಿಂದೂಧರ್ಮದ ವಿರುದ್ಧ ಮಾತನಾಡದಿದ್ದರೆ ಆತ ನನಗೆ ನನ್ನ ಸನ್ಯಾಸಿಗಳಿಗೆ ಆಶ್ರಮವನ್ನು ಕಟ್ಟಿಕೊಳ್ಳಲು ಅನುಮತಿ ನೀಡಬಲ್ಲನಂತೆ. ಅವನ ಷರತ್ತಿಗೆ ನಾನು ಒಪ್ಪಲಿಲ್ಲ. ಯಾವ ಮಾತುಗಳನ್ನು ಆಡಬೇಕು, ಯಾವುದನ್ನು ಆಡಬಾರದು ಎಂಬ ನಿಯಮಗಳನ್ನು ಮುನ್ನವೇ ಇರಿಸಿಕೊಂಡು ಮಾತನಾಡುವ ಸ್ವಭಾವ ನನ್ನದಲ್ಲ” ಎಂದು ಅವರಿಗೆ ಉತ್ತರಿಸಿದೆ.
೨೧ನೇ ಜನವರಿ ೧೯೮೬ರಂದು ವಿಶ್ವಪರ್ಯಟನೆ ಮಾಡಲು ನಿರ್ಧರಿಸಿದೆ. ನನ್ನೊಂದಿಗೆ ಹೆಜ್ಜೆ ಇಡಲು ಸಿದ್ಧರಿದ್ದ, ತಮ್ಮನ್ನು ತಾವು ಕ್ರಿಶ್ಚಿಯನ್ನರೆಂದು, ಯಹೂದಿಗಳೆಂದು, ಹಿಂದೂಗಳೆಂದು ಕರೆದು ಕೊಳ್ಳುವುದನ್ನು ಎಂದೋ ಬಿಟ್ಟಿದ್ದ ಸಾವಿರಾರು ಸನ್ಯಾಸಿಗಳನ್ನು ಜಗತ್ತಿನೆಲ್ಲೆಡೆ ಗುರುತಿಸಿದ್ದೆ. ಈ ಸರ್ಕಾರಗಳು ಅವರು ಬಂದು ನನ್ನನ್ನು ಭೇಟಿ ಮಾಡಲು ನಿರ್ಬಂಧಿಸಿದ್ದರಿಂದ ನಾನೇ ಅವರ ಬಳಿ ಹೋಗಲು ನಿರ್ಧರಿಸಿದ್ದೆ. ಬಾಯಾರಿದವನು ನೀರನ್ನು ಹುಡುಕಿಕೊಂಡು ಹೋಗುವನೆಂಬುದು ಹಳೆಯ ಮಾತಾಯಿತು. ಆಧುನಿಕ ಯುಗದಲ್ಲಿ ನೀರೇ ಬಾಯಾರಿದವನ ಮನೆಯೊಳಗೆ ಬರುವುದಿಲ್ಲವೇ? ನಾನು ಜಗತ್ತಿನ ಅತ್ಯಂತ ವಿವಾದಾತ್ಮಕ ವ್ಯಕ್ತಿ. ಆದರೆ ಯಾವ ವಿವಾದ ಎಂಬುದು ಯಾರಿಗೂ ಗೊತ್ತಿಲ್ಲ. ನಿಜ ಹೇಳುತ್ತೇನೆ ಅದಾವ ವಿವಾದವೋ ನನಗೂ ಗೊತ್ತಿಲ್ಲ. ನೇಪಾಳದ ಪ್ರಧಾನ ಮಂತ್ರಿ ನನ್ನನ್ನು ಭೇಟಿ ಮಾಡಿ “ಎಲ್ಲಕಡೆಗಳಿಂದ ಒತ್ತಡ ಬರುತ್ತಿದೆ, ನಿಮ್ಮನ್ನು ಇರಿಸಿಕೊಳ್ಳುವ ಇಚ್ಛೆ ನಮಗಿದ್ದರೂ ಅಮೆರಿಕಾ, ಜರ್ಮನಿ ಹಾಗು ಭಾರತ ಸರ್ಕಾರಗಳು ನಿಮ್ಮನ್ನು ಕೂಡಲೆ ಬಂಧಿಸುವಂತೆ ಇಲ್ಲವೆ ದೇಶದಿಂದ ಹೊರಹಾಕುವಂತೆ ಒತ್ತಾಯ ಪಡಿಸುತ್ತಿವೆ. ನಮ್ಮ ಬಳಿ ಸೇನಾಪಡೆಯೂ ಇಲ್ಲ” ಎಂದು ಕೇಳಿಕೊಂಡರು. ಹಾಗಾಗಿ ನಾನು ಅಲ್ಲಿಂದ ಹೊರಡಬೇಕಾಯಿತು.
ಪೋಪರು ಭಾರತಕ್ಕೆ ಭೇಟಿ ನೀಡಿದಾಗ ಹಿಂದೂಗಳು ಪೋಪ್‌ರ ವಿರುದ್ಧ ಘೋಷಣೆಗಳನ್ನು ಕೂಗಿದ್ದನ್ನು ನಾನು ಖಂಡಿಸಿದ್ದೆ. ಅವರು ಹೋದಲ್ಲೆಲ್ಲ ಅತಿಥಿಯಂತೆ ಅವರನ್ನು ಸ್ವಾಗತಿಸಬೇಕು, ಎಲ್ಲ ಹಿಂದೂ ಚಿಂತಕರು, ಬೌದ್ಧ, ಜೈನ ಸಾಧುಗಳು, ಅನುಭಾವಿಗಳು ಒಂದೆಡೆ ಸೇರಿ ಅವರೊಂದಿಗೆ ಧರ್ಮದ ಮೂಲತತ್ವದ ಕುರಿತು ಜಿಜ್ಞಾಸೆ ನಡೆಸಬೇಕು. ಆಗ ಪೋಪ್‌ಗೆ ನಿಜವಾದ ಧಾರ್ಮಿಕತೆ ಏನೆಂದು ಹೊಳೆದು ನಮ್ಮಂಥವರಿಗೆ ಧರ್ಮ ಪ್ರಚಾರ ಮಾಡುವ ಅಗತ್ಯವಿಲ್ಲ ಎಂದು ಮನವರಿಕೆಯಾಗಬಹುದು. ಈಗ ಪಾಪ, ಬರೀ ಹಸುವಿನ ಸಗಣಿಯ ವಾಸನೆಯನ್ನು ಹೊತ್ತು ವ್ಯಾಟಿಕನ್‌ಗೆ ಹೋಗುವಂತಾಗಿದೆ. ಆತ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೆ ಭಾರತದ ನೆಲವನ್ನು ಚುಂಬಿಸಿದನಂತೆ. ಅಷ್ಟಕ್ಕೂ ಕ್ರಿಶ್ಚಿಯಾನಿಟಿ ಒಂದು ಮೂರನೆಯ ದರ್ಜೆಯ ಧರ್ಮ. ಅದು ಈತನಕ ಒಬ್ಬ ಅನುಭಾವಿಗೂ ಜನ್ಮ ನೀಡಿಲ್ಲ. ಆ ಧರ್ಮ ಕೊನೆಯ ಪಕ್ಷ ಒಬ್ಬ ತತ್ವಜ್ಞಾನಿಯನ್ನೂ ಹುಟ್ಟಿಸಿಲ್ಲ. ಒಂದು ಘನವಾದ ಪರಂಪರೆಯನ್ನೇ ಹೊಂದಿರದ ಧರ್ಮ ಅದು. ಎಲ್ಲಕ್ಕಿಂತ ಮಿಗಿಲಾಗಿ ಹಾಗೆಲ್ಲ ಧಿಕ್ಕಾರದ ಘೋಷಣೆ ಕೂಗುವುದು ಪೂರ್ವದೇಶಗಳ ಸಂಪ್ರದಾಯವಲ್ಲ. ಅವರು ನಮ್ಮ ದೇಶದ ಯಾವ ಭಾಗದಲ್ಲಿ ಓಡಾಡಿದರೂ ನಮಗೇನು ನಷ್ಟ? ಅವರ ಹುಳುಕುಗಳನ್ನು ತೆರೆದು ತೋರಿಸೋಣ ಆದರೆ ’ಕೂಡಲೆ ಹಿಂದಿರುಗು’ ಎಂದು ಘೋಷಣೆ ಕೂಗುವುದು ಬೇಡ ಎಂದು ಹೇಳಿದೆ. ಜೊತೆಗೆ ಪೋಪರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದೆ. ಆದರೆ ಆತ ಹೇಡಿಯಂತೆ ಮೌನ ವಹಿಸಿದ. ಆತನನ್ನು ನಾನು ತುಂಬ ಸಲ ಚರ್ಚೆಗೆ ಆಹ್ವಾನಿಸಿದ್ದೆ. ಆದರೆ ಒಮ್ಮೆಯೂ ಆ ಕಡೆಯಿಂದ ಒಂದು ಉತ್ತರ ಬರಲಿಲ್ಲ.
ಕೊನೆಗೆ ನಾನೇ ರೋಮ್‌ಗೆ ಪಯಣಿಸಲು ನಿರ್ಧರಿಸಿದೆ. ನನ್ನ ಸನ್ಯಾಸಿಗಳು ಇಟಲಿಗೆ ಭೇಟಿ ನೀಡಲು ವೀಸಾ ಅನುಮತಿ ಕೋರಿದಾಗ ಪೋಪ್ ನಮ್ಮ ಕೋರಿಕೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಸಿದ. ನನ್ನ ಒಂದು ಸಂದರ್ಶನವು ಇಟಲಿಯ ಟೀವಿಗಳಲ್ಲಿ ಅತಿ ಹೆಚ್ಚು ಪ್ರಸಾರವನ್ನು ಪಡೆದ (೩೭ ಮಿಲಿಯನ್ ಜನ ನೋಡಿದರಂತೆ) ಕಾರ್ಯಕ್ರಮ ಎನಿಸಿಕೊಂಡಾಗ ಪೋಪ್ ನನ್ನನ್ನು ಕುರಿತ ಎಲ್ಲ ಟೀವಿ ಪ್ರಸಾರಗಳ ಮೇಲೂ ನಿಷೇಧ ಹೇರಿದನಲ್ಲದೆ ನಾನು ಯಾವುದೇ ಕ್ಯಾಥೋಲಿಕ್ ದೇಶಕ್ಕೂ ಕಾಲಿಡಕೂಡದೆಂದು ಅಪ್ಪಣೆ ಹೊರಡಿಸಿದ. ಮುಂದೊಮ್ಮೆ ಇಟಲಿಗೆ ಹೋಗಲು ಅನುಮತಿ ಸಿಕ್ಕಾಗ ಚರ್ಚಿನ ಹಿಡಿತದಲ್ಲಿದ್ದ ಇಟಲಿಯ ಎಲ್ಲ ಮಾಧ್ಯಮಗಳಿಗೂ “ಆತನ ಕುರಿತ ಯಾವ ಸುದ್ದಿಯನ್ನೂ ಅದು ಪರವಾದದ್ದಾಗಿರಲಿ, ವಿರುದ್ಧವಾದದ್ದಾಗಿರಲಿ ಪ್ರಕಟಿಸಬೇಡಿ, ಆತನನ್ನು ವಿರೋಧಿಸಿ ಪ್ರಚಾರ ನಡೆಸಿದರೆ ಅದರಿಂದಲೂ ಆತ ಲಾಭ ಪಡೆದುಬಿಡಬಲ್ಲ. ಹಾಗಾಗಿ ಯಾವ ವಿಧದಲ್ಲೂ ಪ್ರಚಾರ ನಡೆಯಕೂಡದು” ಎಂದು ಸೂಚನೆ ನೀಡಿದನಂತೆ. ನಾನು ಇಟಲಿಯ ನೆಲದಲ್ಲಿ ಇಳಿದ ಕೂಡಲೆ “ನನಗೆ ನಿಮ್ಮ ಪ್ರಚಾರ ಬೇಕಿಲ್ಲ. ಆದರೆ ನನ್ನ ಪರವಾಗಲಿ, ವಿರೋಧವಾಗಲಿ ಸುದ್ದಿಯನ್ನು ಪ್ರಚಾರ ಮಾಡದ ಮಾಧ್ಯಮಗಳು ತಮ್ಮ ಬುದ್ಧಿಯನ್ನು ಪೋಪ್‌ಗೆ ಮಾರಿಕೊಂಡು ಅವರ ಕೈಗೊಂಬೆಗಳಾಗಿವೆ ಎಂದು ತೀರ್ಮಾನವಾಗುತ್ತದೆ” ಎಂದು ಹೇಳಲಿದ್ದೆ. ೩ ವಾರಗಳ ಸಂದರ್ಶಕ ವೀಸಾಗೆ ೩ ತಿಂಗಳು ಕಾಯಿಸಿದರು. ಕೊನೆಗೆ ಇಟೆಲಿಯ ಪ್ರಸಿದ್ಧ ಸಿನೆಮಾ ನಟ ಫೆಲಿನಿ ಪ್ರತಿಭಟಿಸಿದ ಮೇಲೆ ವೀಸಾ ನೀಡಬೇಕಾಯಿತು. ಆದರೆ ಕೊನೆಗೆ ನಾನೇನೂ ಅಲ್ಲಿಗೆ ಹೋಗಲಿಲ್ಲ. ನನ್ನ ಆಲೋಚನೆಗಳನ್ನು ಅಭಿವ್ಯಕ್ತಿಸಿದ್ದೇ ನನಗೆ ತಿಳಿದಂತೆ ನಾನು ಮಾಡಿರುವ ಅಪರಾಧ. ಅಭಿವ್ಯಕ್ತಿಸುವುದು ಮನುಷ್ಯನ ಮೂಲಭೂತ ಹಕ್ಕು ಎಂದು ಒಪ್ಪಿಕೊಳ್ಳುವುದಾದರೆ ಇವರೇಕೆ ನನ್ನನ್ನು ಶಿಕ್ಷಿಸುವರೋ ನನಗೆ ಗೊತ್ತಾಗಲಿಲ್ಲ. ನಾನೇನೂ ಅಧಿಕಾರ ಲಾಲಸೆಯವನಲ್ಲ. ಇವರ ಬೆದರಿಕೆಗೆ ಸುಮ್ಮನಾದವನೂ ಅಲ್ಲ. ಈ ಕುರುಡು ರಾಜಕಾರಿಣಿಗಳಿಗೆ ಕಾಣಿಸದ್ದು ನನಗೆ ಕಾಣಿಸುತ್ತಿದೆ ಎನ್ನಲು ನನಗೆ ಭಯವೇಕೆ? ಪೋಪನು ವ್ಯಾಟಿಕನ್ನಿನಲ್ಲಿ ವಿಶ್ವಧರ್ಮ ಸಮ್ಮೇಳನವನ್ನು ಆಯೋಜಿಸಿದ್ದನಂತೆ. “ಪೋಪ್‌ರ ಕಾರ್ಯದರ್ಶಿಗೆ ನಿಮ್ಮನ್ನು ಆಹ್ವಾನಿಸುವ ಮನಸ್ಸಿದೆ, ಆದರೆ ಪೋಪರು ಬೇಡ ಎನ್ನುತ್ತಿದ್ದಾರೆ” ಎಂದು ಇಟಲಿಯ ಸನ್ಯಾಸಿಗಳಿಂದ ಪತ್ರಗಳು ಬಂದವು.
ಇದೇ ಸಂದರ್ಭದಲ್ಲಿ ಜೆ. ಕೃಷ್ಣಮೂರ್ತಿ ತೀರಿಕೊಂಡರು. ಅವರು ಮರಣ ಶಯ್ಯೆಯಲ್ಲಿದ್ದಾಗ “ನನ್ನ ಬದುಕು ವ್ಯರ್ಥವಾಯಿತು, ಜನ ನನ್ನನ್ನು ಒಂದು ಮನರಂಜನೆಯ ವಸ್ತುವಿನಂತೆ ನಡೆಸಿಕೊಂಡರು” ಎಂದು ಹೇಳಿದರಂತೆ. ಆಗ ಅವರ ಬಳಿಯಲ್ಲೇ ಇದ್ದ ನನ್ನ ಸ್ನೇಹಿತರೊಬ್ಬರು ನನಗೆ ಹೇಳಿದ ಮಾತಿದು. ಅನುಭಾವಿ ಒಬ್ಬ ಬಂಡಾಯಗಾರ, ತಮಾಷೆಯ ವಸ್ತುವಲ್ಲ. ಅವನ ಸಾಮೀಪ್ಯದಲ್ಲಿ ನಮ್ಮ ಹೃದಯವನ್ನು ತೆರೆದಿಟ್ಟಾಗ ಅವನು ಬೆಂಕಿಯಂತೆ ಒಳಗೆ ಪ್ರವೇಶಿಸಿ ನಮ್ಮೆಲ್ಲ ಕಶ್ಮಲಗಳನ್ನೂ ಸುಟ್ಟು ಕರಗಿಸಬಲ್ಲ, ಹೊಸ ವ್ಯಕ್ತಿಗೆ ಜನ್ಮನೀಡಬಲ್ಲ. ಮನರಂಜನೆಯಾದರೂ ನಮ್ಮಲ್ಲಿ ಎಂದಿಗೂ ಹೊಸ ಪರಿವರ್ತನೆಯನ್ನು ಉಂಟುಮಾಡದು. ಬದಲಿಗೆ ನಮ್ಮನ್ನಿನ್ನೂ ಮರೆವಿಗೆ ತಳ್ಳುತ್ತದೆ. ರಾಜಕಾರಿಣಿಗಳು ಸೀನಿದರೂ, ಕೆಮ್ಮಿದರೂ ದೊಡ್ಡದಾಗಿ ಸುದ್ದಿ ಮಾಡುವ ಈ ಮಾಧ್ಯಮದವರಿಗೆ ೯೦ ವರ್ಷಗಳ ಕಾಲ ಮನುಷ್ಯ ಪ್ರಜ್ಞೆಯನ್ನು ಉನ್ನತ ಸ್ತರಕ್ಕೆ ಏರಿಸಲು ಒಂದೇ ಸಮನೆ ಪ್ರಯತ್ನಿಸಿದ ಕೃಷ್ಣಮೂರ್ತಿಯ ಸಾವು ಗಂಭೀರವಾದುದು ಎನಿಸಲಿಲ್ಲವೇ?
ಅಮೆರಿಕಾದ ಪ್ರಭುತ್ವ ನನ್ನ ಆಶ್ರಮವನ್ನು ನೆಲಸಮ ಮಾಡಿತು, ಇದರರ್ಥ ಲೋಕದಲ್ಲಿ ಶಾಂತಿ, ಪ್ರೀತಿ, ವಿಶ್ವಾಸಗಳು ನಾಶವಾದವು ಎಂದಲ್ಲ, ನಾನು ನಿರಾಶಾವಾದಿಯಲ್ಲ. ಕಾಳಗದಲ್ಲಿ ಸೋತ ಮಾತ್ರಕ್ಕೆ ಯುದ್ಧವೇ ಮುಗಿಯಿತು ಎಂದರ್ಥವಲ್ಲ. ನನ್ನ ಆಶ್ರಮವನ್ನು ನಾಶ ಪಡಿಸಿದ ಅಮೆರಿಕನ್ ಪ್ರಭುತ್ವ ತಾನು ವಿಶ್ವಶಾಂತಿಗೆ ಹೆದರುತ್ತದೆ ಎಂಬುದನ್ನು ರುಜುವಾತು ಪಡಿಸಿತು. ಒಂದರ್ಥದಲ್ಲಿ ನಮಗಾದದ್ದು ಸೋಲೇನಲ್ಲ. ಆಶ್ರಮವೆಂದರೆ ಬರೀ ಇಟ್ಟಿಗೆ ಕಲ್ಲುಗಳಲ್ಲ. ಆಶ್ರಮ ನೆಲಸಮವಾದ ಮೇಲೆ ಅಲ್ಲಿ ನೆರೆದಿದ್ದ ಐದು ಸಾವಿರ ಧ್ಯಾನಸಿದ್ಧರು ವಿಶ್ವದಾದ್ಯಂತ ಚದುರಿಹೋದರು. ಮೊದಲು ನನ್ನ ಆಶ್ರಮವನ್ನು ನೆಲಸಮ ಮಾಡಲು ಪ್ರಯತ್ನಿಸಿದ ಅಮೆರಿಕಾ ಆಮೇಲೆ ಚಳವಳಿಯನ್ನು ಹತ್ತಿಕ್ಕಲು ಹರಸಾಹಸ ಪಟ್ಟಿತು. ನನ್ನ ಪಾಡಿಗೆ ನಾನು ನನ್ನ ಸನ್ಯಾಸಿಗಳೊಂದಿಗೆ ಕುಳಿತಿದ್ದೆ. ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಸೇರಿದ ಅತ್ಯಂತ ಸಮೀಪದ ನಗರವೂ ನಮ್ಮಿಂದ ೨೦ ಮೈಲಿ ದೂರವಿತ್ತು. ಸುಮ್ಮನಿದ್ದ ನನ್ನನ್ನು ಕೆಣಕಿ ಜೇನುಹುಟ್ಟಿಗೆ ಕಲ್ಲು ಹೊಡೆದಂತಾಯಿತು. ಮುಂದೆ ವಿಶ್ವದಾದ್ಯಂತ ನಮಗೆ ಸಿಕ್ಕ ಪ್ರಚಾರ, ಮನ್ನಣೆಗಳನ್ನು ಕಂಡು ಅವರು ಕರುಬಿದರು.
ಒಬ್ಬ ನಿಶ್ಯಸ್ತ್ರನಿಗೆ, ನಿರುಪದ್ರವಿಗೆ ಪ್ರವಾಸಿಯ ವೀಸಾ ಕೊಡಲು ಕ್ಯಾಬಿನೆಟ್ ಸಭೆಗಳನ್ನು (ಅದೂ ಗುಪ್ತಸಭೆಗಳನ್ನು) ನಡೆಸುವುದೆಂದರೇನು? ವೀಸಾಗೆ ಅರ್ಜಿ ಸಲ್ಲಿಸುತ್ತಿದ್ದಂತೆಯೇ ಆಯಾ ದೇಶದ ಪತ್ರಿಕೆಗಳು “ಈತ ಅಪಾಯಕಾರಿ ವ್ಯಕ್ತಿ, ಈತನನ್ನು ಒಳಗೆ ಸೇರಿಸಬೇಡಿ” ಎಂದು ಬರೆಯುವುದೆಂದರೇನು? ಬಹುಮತವೇ ಪರಮಸತ್ಯ ಎನ್ನುವುದಾದರೆ ಅವರ ಆತಂಕ ಸುಳ್ಳಲ್ಲ. ನನಗೆ ಅನುಮತಿಯನ್ನು ನೀಡಲು ಪ್ರತಿಯೊಂದು ದೇಶವೂ ಜರ್ಮನ್, ಇಂಡಿಯನ್, ಅಮೆರಿಕನ್ ಸರ್ಕಾರಗಳ ಸಲಹೆ, ಸೂಚನೆ ಹಾಗು ಅನುಮತಿಗಳನ್ನು ಕೇಳುತ್ತಿತ್ತು. ಗಂಡುಮೆಟ್ಟಿದ ನೆಲವೆಂದು ಹೆಸರು ಪಡೆದ ಜರ್ಮನಿ ದೇಶವೂ ಈತನನ್ನು ತಡೆಗಟ್ಟುತ್ತಿರಬೇಕೆಂದರೆ ಏನರ್ಥ ಎಂದು ಎಲ್ಲರಿಗೂ ಗೊಂದಲವಾಗಿತ್ತು. ಒಂದುವೇಳೆ ಮೇಲಿನ ಹಂತದವರು ಅನುಮತಿ ನೀಡಿದರೂ ಕ್ರಿಶ್ಚಿಯನ್, ಯಹೂದಿ ಅಥವ ಹಿಂದೂಗಳಾಗಿದ್ದ ಕೆಳಹಂತದ ಗುಮಾಸ್ತರು, ಅಧಿಕಾರಿಗಳು ಅನಗತ್ಯ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದ್ದರು. ಜಗತ್ತು ಸ್ವತಂತ್ರವಾಗಿ ಬದುಕುತ್ತಿಲ್ಲ. ದೇಶಗಳ ಹೆಸರಿನಲ್ಲಿ ಇಡೀ ಮನುಷ್ಯ ಜನಾಂಗವು ಬಂದೀಖಾನೆಗಳನ್ನು ನಿರ್ಮಿಸಿಕೊಂಡು ಜೀವಿಸುತ್ತಿದೆ ಎನಿಸಿತು. ನನಗೆ ಎಲ್ಲೆಡೆ ಸುತ್ತಬೇಕೆಂಬ ವ್ಯಸನವೇನೂ ಇರಲಿಲ್ಲ. ನನ್ನ ಸನ್ಯಾಸಿಗಳ ಆಹ್ವಾನಕ್ಕೆ ಬೆಲೆಕೊಟ್ಟು ಹೋಗುತ್ತಿದ್ದೆ ಅಷ್ಟೇ. ಪಾರ್ಲಿಮೆಂಟುಗಳಿಗೆ ನನ್ನನ್ನು ತಡೆಯಲೂ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಆಗ ನನ್ನ ಸನ್ಯಾಸಿಗಳು ಕೂಡಲೆ ಕೋರ್ಟಿನ ಮೊರೆ ಹೋಗುತ್ತಿದ್ದರು. ನಾನು ಐದುವರ್ಷಗಳ ಕಾಲ ಅಮೆರಿಕಾವನ್ನು ಪ್ರವೇಶಿಸುವಂತಿಲ್ಲ ಎಂಬ ಆ ಪ್ರಭುತ್ವದ ಆದೇಶವನ್ನು ತಿರುಚಿ ಪ್ರಕಟಿಸಿದ ಗ್ರೀಸ್‌ನ ಒಂದು ಪತ್ರಿಕೆ ನಾನು ಗ್ರೀಸ್‌ನಲ್ಲಿದ್ದಾಗಲೇ “ಈತನನ್ನು ಅಮೆರಿಕನ್ ಪೊಲೀಸರು ಎಲ್ಲೆಡೆ ಹುಡುಕುತ್ತಿದ್ದರೆ ಈತ ಪೊಲೀಸರಿಂದ ತಪ್ಪಿಸಿಕೊಂಡು ನಮ್ಮ ದೇಶದಲ್ಲಿ ತಲೆಮರೆಸಿಕೊಂಡು ಕೂತಿದ್ದಾನೆ” ಎಂದು ಪ್ರಕಟಿಸಿತ್ತು. ನಾನು ಹಾಗೆ ತಲೆಮರೆಸಿಕೊಳ್ಳುವವನಾದರೆ ಪ್ರತಿದಿನ ಪತ್ರಕರ್ತರಿಗೆ ಸಂದರ್ಶನ ನೀಡುತ್ತಿದ್ದೆನೆ, ಟೀವಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆನೇ? ನನ್ನ ಬಗ್ಗೆ ಇನ್ನೂ ಎಂತೆಂತಹ ಸುದ್ದಿಗಳು ಜಗತ್ತಿನ ಮೂಲೆ ಮೂಲೆಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಹೇಗೆಲ್ಲ ಪ್ರಚಾರವಾಗುತ್ತಿತ್ತೋ ನನಗೆ ತಿಳಿಯುತ್ತಿರಲಿಲ್ಲ.
ಮಾರ್ಚ್ ೫ ರಂದು ಗ್ರೀಸ್ ಸರ್ಕಾರ ನನ್ನನ್ನು ಅಕಾರಣವಾಗಿ ಬಂಧಿಸಿ ದೇಶದಿಂದ ಆಚೆಗಟ್ಟಿತು. ಗ್ರೀಸ್‌ನ ಅಧ್ಯಕ್ಷನಿಗೆ ತನ್ನ ದೇಶದಲ್ಲಿ ನನ್ನ ಆಶ್ರಮವೊಂದು ಗ್ರೀಸ್‌ನಲ್ಲಿ ಸ್ಥಾಪನೆಯಾಗಬೇಕು ಎಂಬ ಇಂಗಿತವಿತ್ತು. ಅವನ ಉದ್ದೇಶವೇ ಬೇರೆ: ಆ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದು ಆತನ ಆಲೋಚನೆಯಾಗಿತ್ತು. ಆತನ ನೆರವಿನಿಂದಲೇ ನನ್ನ ವೀಸಾ ಅವಧಿಯ ವಿಸ್ತರಣೆಯಾದದ್ದು. ಆಮೇಲೆ ಆಶ್ರಮವನ್ನು ಸ್ಥಾಪಿಸಲು ಅವೇ ಹಳಸಲು ಷರತ್ತುಗಳನ್ನು ನನ್ನ ಮುಂದಿಟ್ಟ. “ನಮ್ಮ ಹುಳುಕುಗಳು ನಮ್ಮನ್ನು ಬಾಧಿಸವು ಆದರೆ ಆ ಹುಳುಕಿನ ಅನಾವರಣವಾದರೆ ಅದನ್ನು ನಾವು ಸಹಿಸೆವು” ಎಂಬುದೇ ಅವನ ಷರತ್ತಿನ ಒಟ್ಟು ಸಾರಾಂಶ. ಇವರ ಧೋರಣೆಯನ್ನು ಕಂಡು ಹೇಸಿಗೆ ಎನಿಸಿತು. ಆಶ್ರಮಕ್ಕೆ ಇವರು ಕೊಡುವ ಭೂಮಿ ಯಾರಿಗೆ ಬೇಕು? ಒಬ್ಬ ಮನುಷ್ಯನಿಗೆ ಎಷ್ಟು ಭೂಮಿ ಬೇಕು? ನಾನಾದರೂ ಒಬ್ಬ ಅಲೆಮಾರಿ. ಎಂತಹ ಅಲೆಮಾರಿಗೂ ಕೊನೆಗೆ ತನ್ನದೇ ಆದ ನೆಲೆ ಎಂಬುದಿರುತ್ತದೆ. ನಾನಾದರೂ ನಿಜವಾದ ಅರ್ಥದ ಅಲೆಮಾರಿ. ಏಕೆಂದರೆ ನನಗೆ ಯಾವ ನೆಲವೂ ನನ್ನ ನೆಲ ಎನಿಸುವುದಿಲ್ಲ, ಯಾವ ದೇಶವೂ ನನ್ನದೆನ್ನಿಸುವುದಿಲ್ಲ. ನನ್ನಂಥವನನ್ನು ಉಚ್ಚಾಟನೆ ಮಾಡುವುದೆಂದರೆ ತಮ್ಮ ಸೋಲನ್ನು ತಾವೇ ಒಪ್ಪಿಕೊಂಡಂತೆ. ಸರಕಾರ ನನ್ನನ್ನು ಆಚೆಗಟ್ಟದಿದ್ದರೆ ತಾನೇ ನನ್ನ ಜಾಗಕ್ಕೆ ಡೈನಮೈಟ್ ಇಡುವೆನೆಂದು ಆರ್ಚ್‌ಬಿಷಪ್ ಹೇಳಿದನಂತೆ. ಇವರೆಲ್ಲ “ನಿಮ್ಮ ಶತ್ರುವನ್ನೂ ಪ್ರೀತಿಸಿ” ಎಂದು ಬೋಧಿಸಿದ ಯೇಸುವಿನ ಪ್ರತಿನಿಧಿಗಳೇ? ಯೇಸುವು “ನಿಮ್ಮ ನೆರೆಯವನನ್ನೂ ನಿಮ್ಮಂತೆಯೇ ಭಾವಿಸಿ” ಎಂದು ಹೇಳಿದ್ದನಲ್ಲದೆ “ಒಬ್ಬ ಟೂರಿಸ್ಟ್‌ನನ್ನೂ ಪ್ರೀತಿಸಿ” ಎಂದೇನೂ ಬೋಧಿಸಿರಲಿಲ್ಲವಲ್ಲ!
ಕೊನೆಗೆ ಆತನ ಹಟದಂತೆ ಯಾವ ಮುನ್ಸೂಚನೆಯೂ ಇಲ್ಲದೆ ಪೋಲೀಸರು ನಾನಿದ್ದ ಜಾಗದ ಮೇಲೆ ದಾಳಿ ಮಾಡಿದರು. ಕಲ್ಲುಗಳನ್ನೆಸೆದು ಆ ಪಾರಂಪರಿಕ ಕಟ್ಟಡದ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದರು, ಅನಾಗರೀಕರಂತೆ ನನ್ನ ಸನ್ಯಾಸಿಗಳನ್ನು ಎಳೆದಾಡಿದರು, ವಾರೆಂಟ್ ಇಲ್ಲದೆ ಮನೆಯೊಳಗೆ ಪ್ರವೇಶಿಸಿ ನನ್ನನ್ನು ಬಂಧಿಸಿ ಹಡಗಿನಲ್ಲಿ ಭಾರತಕ್ಕೆ ಕಳಿಸಲು ನಿರ್ಧರಿಸಿದರು. ಯಾವುದೋ ಕಾಗದ ಪತ್ರಗಳಿಗೆ ಸಹಿ ಮಾಡುವಂತೆ ನನಗೆ ಹೇಳಿದರು. “ಆ ಕಾಗದದಲ್ಲಿ ನೀವು ನನ್ನ ಜಾಗಕ್ಕೆ ಬಂದು ದಾಂಧಲೆ ನಡೆಸಿದ್ದನ್ನೂ ಸೇರಿಸಿ, ಇಲ್ಲವಾದರೆ ಸಹಿ ಮಾಡುವುದಿಲ್ಲ. ಅಲ್ಲದೆ ಸಮುದ್ರ ಪ್ರಯಾಣ ನನಗಾಗುವುದಿಲ್ಲ, ಹಡಗಿನಲ್ಲಿ ನನ್ನ ಆರೋಗ್ಯಕ್ಕೆ ಹೆಚ್ಚು ಕಡಿಮೆಯಾದರೆ ನೀವೇ ಜವಾಬ್ದಾರರೆಂದು ಬರೆದು ಸಹಿ ಮಾಡಿ ಸಾಧ್ಯವಿಲ್ಲದಿದ್ದರೆ ಅಥೆನ್ಸ್‌ನಲ್ಲಿರುವ ನನ್ನ ವಿಮಾನಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡಿ” ಎಂದು ಕೇಳಿದೆ. ಗ್ರೀಸ್‌ನಲ್ಲಿ ಆದ ಅನುಭವವೇ ನನಗೆ ಇನ್ನಿತರ ಯುರೋಪಿಯನ್ ದೇಶಗಳಲ್ಲಿಯೂ ಆಯಿತು. ಜಿನಿವಾ, ಸ್ವೀಡನ್, ಲಂಡನ್, ಐರ್ಲ್ಯಾಂಡ್, ಸ್ಪೇಯಿನ್, ಹಾಲೆಂಡ್ ಎಲ್ಲ ದೇಶಗಳೂ ನನ್ನ ವಿಮಾನ ಇಳಿಯದಂತೆ ನಿಷೇಧ ಹೇರಿದವು. ಸ್ವೀಡನ್ ಎಲ್ಲ ಭ್ರಷ್ಟರಿಗೆ, ಭಯೋತ್ಪಾದಕರಿಗೆ, ಮಾಫಿಯಾದವರಿಗೆ ಆಶ್ರಯ ನೀಡುತ್ತಿದ್ದ ಉದಾರೀ ದೇಶವಾದ್ದರಿಂದ ಅಲ್ಲಿ ನಮಗೇನೂ ತೊಂದರೆಯಾಗದು ಎಂದು ಭಾವಿಸಿದರೆ ಅಲ್ಲಿಯೂ ನಮ್ಮ ವಿಮಾನ ಇಳಿಯಲು ಅವಕಾಶ ನೀಡಲಿಲ್ಲ. ಇಳಿದರೆ ನಿಮ್ಮನ್ನು ನೇರವಾಗಿ ಬಂದಿಖಾನೆಗೆ ಕರೆದೊಯ್ಯಲಾಗುವುದು ಎಂದು ಹೇಳಿದರು. ಅಮೆರಿಕಾದ ಅಧ್ಯಕ್ಷ ಲಿಬಿಯಾ ಮೇಲೆ ಬಾಂಬ್ ದಾಳಿ ನಡೆಸಲು ಇಂಗ್ಲೆಂಡನ್ನು ತನ್ನ ನೆಲೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದ. ವಿಪರ್ಯಾಸವೆಂದರೆ ಅಂಥವನಿಗೆ ತನ್ನ ದೇಶದಲ್ಲಿ ಅವಕಾಶ ಮಾಡಿಕೊಟ್ಟ ಇಂಗ್ಲೆಂಡ್ ನನಗೆ ಅಲ್ಲಿ ಕಾಲಿಡಲೂ ಬಿಡಲಿಲ್ಲ.
ಐರ್ಲ್ಯಾಂಡಿನಿಂದ ನಾನು ಉರುಗ್ವೆಗೆ ಪ್ರಯಾಣಿಸಿದೆ. ನನ್ನ ಪುಸ್ತಕಗಳನ್ನು ಓದಿದ್ದ ಉರುಗ್ವೆಯ ಅಧ್ಯಕ್ಷ ನನಗೆ ಅಲ್ಲಿ ಶಾಶ್ವತ ಪೌರತ್ವವನ್ನು ನೀಡುವ ಭರವಸೆ ನೀಡಿದ. ಭರ್ತಿಯಾಗಿದ್ದ ಅರ್ಜಿಯಲ್ಲಿ ನಾನು ಸಹಿ ಕೂಡ ಮಾಡಿದ್ದೆ. “ಮೂರು ವರ್ಷಗಳ ಕಾಲ ಇಲ್ಲಿ ವಾಸಿಸಿ, ನಾಲ್ಕನೆಯ ವರ್ಷದಿಂದ ಕಾನೂನಾತ್ಮಕವಾಗಿ ನೀವು ಉರುಗ್ವೆಯ ಪ್ರಜೆಯಾಗುವಿರಿ” ಎಂದು ಹೇಳಿದ್ದ. ಉರುಗ್ವೆ ನನಗೆ ತುಂಬ ಹಿಡಿಸಿತು. “ಎಲ್ಲ ದೇಶಗಳೂ ನನ್ನನ್ನು ಹೊರಗಟ್ಟುತ್ತಿರುವಾಗ ನಿಮಗೆ ನನ್ನ ಬಗ್ಗೆ ಹೇಗೆ ಆಸಕ್ತಿ ಮೂಡಿತು” ಎಂದು ಕೇಳಿದೆ. ಅದಕ್ಕೆ ಅವರು “ಅವರಾರಿಗೂ ನಿಮ್ಮ ಬಗ್ಗೆ ಸರಿಯಾಗಿ ತಿಳಿದಿಲ್ಲ” ಎಂದು ಹೇಳಿದರು. ನನ್ನ ಅರ್ಜಿಗೆ ಅವರು ಸಹಿಹಾಕುವ ದಿನ ಎಫ್‌ಬಿಐಗಳು ಅಮೆರಿಕಾದ ಅಧ್ಯಕ್ಷ ರೇಗನ್‌ಗೆ ವಿಷಯ ತಿಳಿಸಿದರಂತೆ. ಎಫ್‌ಬಿಐ ಹಾಗು ಸಿಐಎ ಗಳು ನಾನು ಹೋದಲ್ಲೆಲ್ಲ ನನ್ನನ್ನು ಹಿಂಬಾಲಿಸುತ್ತಿದ್ದರು. ಅದೇ ದಿನ ಉರುಗ್ವೆಯ ಅಧ್ಯಕ್ಷರಿಗೆ ರೇಗನ್ ಫೋನ್ ಮಾಡಿ “ನಾನು ಹೇಳುವುದಿಷ್ಟೇ: ಇನ್ನು ಮೂವತ್ತಾರು ಗಂಟೆಗಳೊಳಗೆ ರಜಿನೀಶ್ ನಿಮ್ಮ ದೇಶದಿಂದ ಅಧಿಕೃತವಾಗಿ ಗಡಿಪಾರಾಗಬೇಕು ಇಲ್ಲವಾದರೆ ಇನ್ನು ಮುಂದೆ ನಿಮ್ಮ ದೇಶಕ್ಕೆ ಯಾವುದೇ ಸೌಲಭ್ಯಗಳನ್ನು ಒದಗಿಸಲಾಗುವುದಿಲ್ಲ. ಈಗಾಗಲೇ ನೀಡಲಾದ ಸಾಲದ ಮೇಲಿನ ಬಡ್ಡಿಯ ದರವನ್ನು ದುಪ್ಪಟ್ಟು ಏರಿಸಲಾಗುವುದು. ಆಯ್ಕೆಯ ಸ್ವಾತಂತ್ರ್ಯ ಸಂಪೂರ್ಣವಾಗಿ ನಿಮ್ಮದು” ಎಂದನಂತೆ. ನಾನು ಉರುಗ್ವೆಯ ಅಧ್ಯಕ್ಷನಂತಹ ಮೃದುಸ್ವಭಾವದ ವ್ಯಕ್ತಿಯನ್ನು ಬೇರೆಲ್ಲೂ ಕಾಣಲಿಲ್ಲ. “ನಾನು ಅಸಹಾಯಕನಾಗಿದ್ದೇನೆ. ನಾವಿನ್ನೂ ಸ್ವತಂತ್ರರಲ್ಲ, ಆರ್ಥಿಕವಾಗಿ ನಾವಿನ್ನೂ ಗುಲಾಮರು ಎಂಬ ನಿಜ ನಿಮ್ಮ ಈ ಭೇಟಿಯಿಂದ ನಮಗೆ ತಿಳಿಯುವಂತಾಯಿತಲ್ಲ. ಆದರೆ ಅಧಿಕೃತವಾಗಿ ಗಡಿಪಾರು ಮಾಡುವ ಅವಶ್ಯಕತೆ ಏನು? ಎಂದು ರೇಗನ್‌ರನ್ನು ಕೇಳಿದರೆ ಹೇಳಬೇಕಾದುದನ್ನು ಹೇಳಿ ಆಗಿದೆ ಎಂದು ಹೇಳಿ ಫೋನನ್ನು ಇಟ್ಟುಬಿಟ್ಟರು” ಎಂದು ಪರಿತಪಿಸಿದ. ಆಗ ಅಧ್ಯಕ್ಷನ ಕಾರ್ಯದರ್ಶಿಯು ನನ್ನ ಬಳಿಗೆ ಧಾವಿಸಿ “ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕಾದ ಅಧಿಕಾರಿಗಳು ಕಾಯುತ್ತಿರುತ್ತಾರೆ. ನೀವು ಈ ಕೂಡಲೆ ಸಣ್ಣ ವಿಮಾನ ನಿಲ್ದಾಣದಿಂದಲೇ ಹೊರಟುಬಿಡಿ, ’ನಮ್ಮ ಗಮನಕ್ಕೆ ಬರದಂತೆ ಹೊರಟುಹೋದರು’ ಎಂದು ನಾವು ಅವರಿಗೆ ಹೇಗೋ ಸಮಾಧಾನ ಹೇಳಿಕೊಳ್ಳುತ್ತೇವೆ” ಎಂದು ಹೇಳಿದ. “ಪರವಾಗಿಲ್ಲ ಇದು ನನಗೇನೂ ಹೊಸತಲ್ಲ ನನ್ನ ಪಾಸ್‌ಪೋರ್ಟ್‌ನ ಮೇಲೆ ಮುದ್ರೆಯನ್ನೊತ್ತಿರಿ. ಮುಂದೆ ನನ್ನ ಪಾಸ್‌ಪೋರ್ಟ್ ಒಂದು ಚಾರಿತ್ರಿಕ ದಾಖಲೆಯಾಗಲಿದೆ” ಎಂದು ಹೇಳಿದೆ. ನಾನು ಹೋದ ಸುದ್ದಿಯನ್ನು ಕೇಳಿ ರೇಗನ್ ಉರುಗ್ವೆಯ ಅಧ್ಯಕ್ಷನನ್ನು ಅಮೆರಿಕಾಗೆ ಕರೆದು ಮೂವತ್ತಾರು ಮಿಲಿಯನ್ ಡಾಲರ್ ಉಡುಗೊರೆಯಾಗಿ ಮಂಜೂರು ಮಾಡಿದನಂತೆ. ಈಗ ನಾನೂ ಎಲ್ಲ ದೇಶಗಳಿಂದಲೂ ಶೇಕಡಾವಾರು ಲೆಕ್ಕದಲ್ಲಿ ನನ್ನ ಕಮಿಷನ್ ಕೇಳಬೇಕು. ನನ್ನಿಂದಲ್ಲವೇ ಅವರಿಗೆಲ್ಲ ಉಡುಗೊರೆಗಳು ಸಿಗುತ್ತಿರುವುದು! ಅಮೆರಿಕಾ ನಾನು ಹೋದ ಎಲ್ಲ ದೇಶಗಳಿಗೂ “ಈತ ಮಹಾ ಅಪಾಯಕಾರಿ, ಈತ ಒಂದು ದೇಶದ ಸಂಸ್ಕೃತಿ ಹಾಗು ನೈತಿಕತೆಗಳನ್ನು ಹಾಳುಗೆಡಹಬಲ್ಲ, ಯುವಜನತೆಯನ್ನು ಸುಲಭವಾಗಿ ಹಾದಿ ತಪ್ಪಿಸಬಲ್ಲ, ಧರ್ಮದ ಬೇರುಗಳನ್ನೇ ಕತ್ತರಿಸಿಹಾಕಬಲ್ಲ” ಎಂಬ ಸಂದೇಶವನ್ನು ರವಾನಿಸುತ್ತಿತ್ತು. ಆ ದಾಖಲೆಗಳನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಉರುಗ್ವೆಯಿಂದ ಜಮೈಕಾ ಹಾಗು ಲಿಸ್ಬಾನ್‌ಗಳಿಗೆ ಹೋದೆ ಅಲ್ಲೆಲ್ಲ ಇದೇ ರೀತಿ ಅಮೆರಿಕಾದ ಒತ್ತಡದಿಂದಾಗಿ ನೆಲೆಯೂರಲಾಗದೆ ಕೊನೆಗೆ ೩೦ರ ಜುಲೈ ೧೯೮೬ರಂದು ಮುಂಬಯಿ ವಿಮಾನ ನಿಲ್ದಾಣವನ್ನು ತಲುಪಿದೆ. ಜುಹು ಸಮುದ್ರ ತೀರದಲ್ಲಿದ್ದ ಸೂರಜ್ ಪಾರೇಖರ ಮನೆಯಲ್ಲಿ ಉಳಿದುಕೊಂಡೆ. ಆಮೇಲೆ ೧೯೮೭ರ ಜನವರಿ ೪ ರಂದು ಐದೂವರೆ ವರ್ಷಗಳ ನಂತರ ಪುನಃ ಪೂನಾ ಆಶ್ರಮಕ್ಕೆ ಹಿಂದಿರುಗಿದೆ.