'ಅಮೇರಿಕಾದಿಂದ ಬಂದವನು'- ಸಿಂಗರ್ ನ ಇನ್ನೊಂದು ಕಥೆ
'ಅಮೇರಿಕಾದಿಂದ ಬಂದವನು'- ಸಿಂಗರ್ ನ ಇನ್ನೊಂದು ಕಥೆ
೧೯೭೮ರ ನೋಬೆಲ್ ಪ್ರಶಸ್ತಿಗೆ ಪಾತ್ರನಾದ ಐಸಾಕ್ ಬಾಷೆವಿಸ್ ಸಿಂಗರ್ ಪೋಲಂಡ್ ದೇಶದ ಯಿದ್ದಿಷ್ ಭಾಷೆಯ ಸಾಹಿತಿ. ಕನ್ನಡ ಓದುಗರಿಗೆ ಈತನ ಸಾಹಿತ್ಯದ ಆಯ್ದ ಭಾಗಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ನೋಬೆಲ್ ಪುರಸ್ಕೃತ ಸಾಹಿತ್ಯ ಮಾಲೆಯ ಅಡಿ 'ಐಸಾಕ್ ಬಾಷೆವಿಸ್ ಸಿಂಗರ್ -ವಾಚಿಕೆ'ಯಲ್ಲಿ ಕನ್ನಡಿಸಲಾಗಿದೆ.
ಈ ಪುಸ್ತಕದಿಂದ 'ಅಮೇರಿಕಾದಿಂದ ಬಂದವನು' ಎಂಬ ಕಥೆಯ ಸಂಗ್ರಹವನ್ನು ಇಲ್ಲಿ ಕೊಟ್ಟಿದ್ದೇನೆ. ( ಈ ಪುಸ್ತಕವನ್ನು ವಿಲೇವಾರಿ ಮಾಡುತ್ತಿದ್ದು - ಈ ಕಥೆ ಚೆನ್ನಾಗಿರುವದರಿಂದ ನನ್ನ ಪುಸ್ತಕದಲ್ಲಿ ನನಗಾಗಿ ಬರೆದುಕೊಳ್ಳುವ ಬದಲು ನಿಮಗಾಗಿಯೂ ಇರಲೆಂದು ಇಲ್ಲಿ ಸಂಪದದಲ್ಲಿ ಕುಟ್ಟುತ್ತಿದ್ದೇನೆ.)
ಲೆಂತಿನ್ ಸಣ್ಣ ಊರು . ಬೆಲ್ ಇಲ್ಲಿಯ ಗುಡಿಸಲುಗಳು ಒಂದರಲ್ಲೇ ವಾಸವಾಗಿದ್ದ . ಸುಮಾರು ಎಂಭತ್ತು ವರ್ಷದ ಮುಪ್ಪಿನವನಾದ ಇವನ ಜತೆಯಲ್ಲಿ ಹೆಂಡತಿ ಬೆಲ್‍ಷಳೂ ಇದ್ದಳು. ಇವರಿಗಿದ್ದ ಒಬ್ಬನೇ ಮಗ ಸ್ಯಾಮುಯಲ್ ನಲವತ್ತು ವರ್ಷದ ಹಿಂದೆ ಅಮೇರಿಕಾಕ್ಕೆ ಹೋಗಿದ್ದ. ಅಲ್ಲಿ ಅವನು ಕೋಟ್ಯಾಧೀಶನಾಗಿದ್ದಾನೆ ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಪ್ರತಿ ತಿಂಗಳು ಒಂದು ಪತ್ರ ಮತ್ತು ಒಂದು ಮನಿಯಾರ್ಡರನ್ನು ಪೋಸ್ಟ್‍ಮ್ಯಾನ್ ತಂದು ಕೊಡುತ್ತಿದ್ದ . ಈ ಹಣವನ್ನು ಅವರು ಯಾವಾಗಲೂ ಬಳಸಿಕೊಂಡಿರಲಿಲ್ಲ. ಯಾವುದಕ್ಕೆ ಬೇಕಿತ್ತು? ಹೊಲ, ಹಸು, ಮೇಕೆ ಇವರಿಗೆ ಬೇಕಿದ್ದವೆಲ್ಲವನ್ನೂ ಕೊಡುತ್ತಿದ್ದವು. ಬೆಲ್‍ಷ ಕೋಳಿ ಮತ್ತು ಮೊಟ್ಟೆಗಳನ್ನು ಮಾರುತ್ತಿದ್ದಳು. ಅವರಿಗೆ ಬೇಕಿದ್ದ ಬ್ರೆಡ್ ಕೊಳ್ಳಲು ಇಷ್ಟರಲ್ಲೇ ಸಾಕಾಗುತ್ತಿತ್ತು. ಮಗ ಕಳಿಸುವ ಹಣವನ್ನು ಬೆಲ್ ಎಲ್ಲಿಡುತ್ತಾನೆ ಎಂಬುದು ಯಾರಿಗೂ ಬೇಕಾದ ವಿಷಯವಾಗಿರಲಿಲ್ಲ. ಲೆಂತಿನ್‍ನಲ್ಲಿ ಕಳ್ಳರಿರಲಿಲ್ಲ.
ಒಂದು ದಿನ ಗುಡಿಸಲಿನ ಬಾಗಿಲನ್ನು ತಳ್ಳಿಕೊಂಡು ಶ್ರೀಮಂತನಂತಿದ್ದ ಮನುಷ್ಯನೊಬ್ಬ ಒಳಗೆ ಬಂದ. ' ಅಮ್ಮ ನಾನು ನಿಮ್ಮ ಮಗ ಸ್ಯಾಮುಯಲ್- ಸ್ಯಾಮ್' ಎಂದ. ಅವಳನ್ನು ಅಪ್ಪಿಕೊಂಡು ಹಣೆ ಕೆನ್ನೆಗೆ ಮುತ್ತಿಟ್ಟ. ಅವಳು 'ನನ್ನ ಮಗ' ಎಂದು ತೊದಲಿದಳು. ತಂದೆ 'ಒಳ್ಳೇದಪ್ಪ , ಚೆನ್ನಾಗಿ ನೆಮ್ಮದಿಯಿಂದ ಇದೀಯಲ್ಲವೇ?' ಎಂದ.
..
ಊಟದ ನಂತರ ಮಗ ಕೇಳಿದ ' ಅಪ್ಪ , ನಾನು ಕಳಿಸಿದ ದುಡ್ಡನ್ನೆಲ್ಲಾ ನೀನು ಏನು ಮಾಡಿದೆ? '
ಬೆಲ್‍ನ ಹುಬ್ಬುಗಳು ಮೇಲೇರಿದವು ' ಇಲ್ಲೇ ಇದೆಯಲ್ಲಪ್ಪ' ಎಂದ.
'ನೀನ್ಯಾಕೆ ಖರ್ಚು ಮಾಡಲಿಲ್ಲ ಇದನ್ನ ?'
'ಯಾವುದಕ್ಕಾಗಿ ಖರ್ಚು ಮಾಡಬೇಕಿತ್ತು ? ದೇವರು ದೊಡ್ಡವನು , ನಮಗೆ ಬೇಕಿರೋದೆಲ್ಲ ಇದೆ.'
'ಎಲ್ಲಿಗಾದರೂ ಪ್ರವಾಸ ಹೋಗಬಹುದಿತ್ತಲ್ಲವೇ?'
'ಎಲ್ಲಿಗೆ ಹೋಗಬೇಕಪ್ಪ. ಇದೇ ನಮ್ಮ ಮನೆ.'
ಮಗ ಒಂದರ ಹಿಂದೊಂದು ಪ್ರಶ್ನೆಗಳನ್ನು ಕೇಳಿದ. ಆದರೆ ಅವರ ಉತ್ತರಗಳು ಇದೇ ರೀತಿಯಲ್ಲಿದ್ದವು. ಅವರಿಗೆ ಏನೂ ಬೇಕಿರಲಿಲ್ಲ. 'ಕಳ್ಳರಿಗೇನಾದರೂ ಗೊತ್ತಾದರೆ ನಿಮಗೆ ಕಷ್ಟವಾಗುತ್ತಲ್ಲ' ಮಗ ಹೇಳಿದ.
'ಇಲ್ಲಿ ಕಳ್ಳರಿಲ್ಲ ಕಣಪ್ಪ'
'ಈ ಹಣಾನೆಲ್ಲ ಏನು ಮಾಡೋದು?'
'ನೀನೇ ತಗೊಳ್ಳಪ್ಪ'
'ನಾವು ದೊಡ್ಡ ಸಿನಗಾಗೊಂದನ್ನು ಕಟ್ಟಿಸಿದರೆ?' ಮಗ ಹೇಳಿದ. ( ಸಿನಗಾಗ್ - ದೇವಾಲಯ)
'ಇಲ್ಲಿರೋ ಸಿನಗಾಗ್ ದೊಡ್ಡದಾಗೇ ಇದೆ ಕಣಪ್ಪ' ಬೆಲ್ ಉತ್ತರಿಸಿದ.
'ವಯಸ್ಸಾಗಿರೋ ಮುದುಕರಿಗೆ ಒಂದು ಮನೆ ಕಟ್ಟಿಸಿದರೆ? '
'ಇಲ್ಲಿ ಯಾರೂ ಬೀದಿಗಳಲ್ಲಿ ಮಲಗೊಲ್ಲ'
..
ಸ್ಯಾಮುಯಲ್ ತನ್ನ ಪಾಸ್‍ಪೋರ್ಟ್ , ಚೆಕ್ ಪುಸ್ತಕ , ಹಣ ಎಲ್ಲಾ ನೋಡಿಕೊಂಡ. ಇಲ್ಲಿಗೆ ಬರುವದಕ್ಕೆ ಮುಂಚೆ ಅವನು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದ .ತನ್ನ ಅಪ್ಪ ಅಮ್ಮಂದಿರಿಗೆ, ನೆರೆಹೊರೆಯವರಿಗೆ ಉಡುಗೊರೆ ನೀಡಲು ಏನೇನನ್ನೋ ತಂದಿದ್ದ . ಆದರೆ ನಾಗರಿಕತೆಯಿಂದ ದೂರವಾಗಿ ಹಿಂದುಳಿದಿರುವ ಈ ಹಳ್ಳಿಯವರಿಗೆ ಏನೂ ಬೇಕಾಗಿರಲಿಲ್ಲ. ಪ್ರಾರ್ಥನೆಗೆ ಕುಳಿತಿದ್ದ ಅವನ ತಾಯಿ ಬೆಲ್‍ಷ ತನ್ನ ಅಜ್ಜಿ ಮುತ್ತಜ್ಜಿಯರಿಂದ ಕೇಳಿದ್ದ ಹಾಡೊಂದನ್ನು ಹಾಡತೊಡಗಿದ್ದಳು.
ನೀಡಯ್ಯ ಸಕಲಗಳ
ಬೂಟುಗಳ ಬ್ರೆಡ್ಡುಗಳ
ಮತ್ತೆ ಬ್ರೆಡ್ಡನ್ನS
ಮತ್ತೆ ಮೆಸಯ್ಯS ಸೂತ್ರSವ.