ಅಮ್ಮನಿಗೊಂದು ಪತ್ರ
ಕವನ
ಕತ್ತಲಲಿ ಭಯವಾಗಿ ನಾ ಕೂಗುತಿರುವೆ
ಬಾರಮ್ಮ ಎತ್ತಿಕೋ.. ಎಂದಳುತಲಿರುವೆ
ಬಾರಮ್ಮ ನನ್ನಮ್ಮ ನನ್ನೆತ್ತಿಕೊಳ್ಳೆ
ಭಯ ದೂಡುವಂತೆನ್ನ ಎದೆಗೊತ್ತಿಕೊಳ್ಳೆ
ಅಪ್ಪಳಿಸುತಿದೆ ಕಿವಿಗೆ ರಕ್ತದಾಟದ ಕೇಕೆ
ನಲುಗಿಹುದು ಹೆಣ್ತನವು ಕಾಮದಾರ್ಭಟಕೆ
ಮಾನವತೆ ನುಚ್ಚಾಯ್ತು ಕಾಲತುಳಿತಕ್ಕೆ
ಬಿಗಿದಪ್ಪಿ ನನ್ನೊಯ್ಯೆ ನಿನ್ನ ಲೋಕಕ್ಕೆ
ಆವುದೋ ಭಯದಿಂದ ಮನವು ಮೂಕ
ಕೊನೆಯೆಂದು ಕ್ರೌರ್ಯಕ್ಕೆ? ಸಾಕು ಶೋಕ
ನಾಳೆ ಏನಾಗುವುದೋ? ಸುತ್ತ ನರಕ
ಮಡಿಲಲಿಟ್ಟುಕೊ ಎನ್ನ ಉಸಿರಿರುವ ತನಕ
ಸಾಕಮ್ಮ ಸಾಕು ಈ ಮೋಸದಾಟದ ಸುಗ್ಗಿ
ಸತ್ಯ ತಡವರಿಸುತಿದೆ ಗಂಟಲುಬ್ಬಿ
ಒಳಿತೆಲ್ಲ ನರಸತ್ತು ನಾಶವಾಗುವ ಮುನ್ನ
ಬಿಡಿಸಿ ಸುಳಿಯಿಂದ ಎತ್ತಿಕೋ ಎನ್ನ..