ಅಮ್ಮನೇ ದೈವ
ಕವನ
ಕೋಟಿಗೂ ಸಿಗದಂತಹ ಪ್ರೀತಿ
ಅಮ್ಮನ ಹೃದಯ ತೋರಿದ ರೀತಿ
ಬಾಳ ಚಂದ್ರಿಕೆಗೆ ಗ್ರಹಣ ಕಾಡದಂತೆ
ತನ್ನ ಹಸಿವ ಹಿಸುಕಿದಳು ಕಾಣದಂತೆ.
ಮರೆತಳು ತನ್ನೆದೆಯ ನೋವ
ನನ್ನೆಯ ನಗೆಯ ತೊಟ್ಟಿಲಲಿ
ತೂಗಿದಳು ತಾ ಕಂಡ ಕನಸುಗಳ
ಪ್ರೇಮವ ಅಮೃತವಾಗಿಸಿ ಲಾಲಿಯಲಿ.
ತಿದ್ದಿದಳು ತೊದಲು ನುಡಿಗಳ
ಕಡೆಗಣಿಸಿ ಜಗದ ಮಾತುಗಳ
ಬಿದ್ದ ಕಾಲಿಗೆ ಮುತ್ತ ನೀಡಿ
ಜೊತೆಯಾದಳು ತಾನು ಎದೆಯೊಡ್ಡಿ.
ಬೆಳ್ಳಿಯ ಲೋಟವ ಕಂಡವಳಲ್ಲ
ಜೋಪಡಿಯೇ ಅಕ್ಕರದ ಗುಡಿಯಾಯಿತಲ್ಲ
ಮೊಸರು ಸಕ್ಕರೆಯ ನನಗೆ ನೀಡಿಲ್ಲ
ಆಕೆಯ ಮಾತೇ ಸವಿಯ ಬೆಲ್ಲ.
ಆಕೆಯದು ಮಣ್ಣಿನ ಗಂಧದ ಗುಣ
ಸತ್ವ ಕಳೆದು ಬೆಳೆಸಿದಳು ತೀರಿಸಲಾಗದು ಋಣ
ಭರಿಸಿದಳು ನೋವ ನನ್ನ ಜನನ ಕಾಲದಿ
ಮರೆಸಿದಳು ನೋವ ನನ್ನ ಬದುಕ ಮಾರ್ಗದಿ.
- ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್