ಅಮ್ಮನ ಪ್ರೀತಿ ; ಅಪ್ಪನ ತ್ಯಾಗ…

ಅಮ್ಮನ ಪ್ರೀತಿ ; ಅಪ್ಪನ ತ್ಯಾಗ…

ಅಮ್ಮನನ್ನು ಪ್ರತ್ಯಕ್ಷ ದೇವರೆಂದು ಎಲ್ಲಾ ಸಾಹಿತ್ಯದ ಸಂದೇಶಗಳಲ್ಲೂ ಮೊದಲಿನಿಂದಲೂ ವರ್ಣಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಅಪ್ಪನನ್ನು ಸಹ ವರ್ಣಿಸಲು ಪ್ರಾರಂಭವಾಗಿದೆ. ಹಿಂದಿನ ಬಹುತೇಕ ಸಿನಿಮಾಗಳಲ್ಲಿ - ಹಾಡುಗಳಲ್ಲಿ ತಾಯಿಯನ್ನು ಕರುಳು ಹಿಂಡುವಂತೆ ಚಿತ್ರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ತಂದೆಯ ತ್ಯಾಗವನ್ನು ಸಹ ಕಥೆ ಹಾಡುಗಳಲ್ಲಿ ಚಿತ್ರಿಸಲಾಗುತ್ತಿದೆ.

ಎಲ್ಲಾ ಧಾರಾವಾಹಿ ಕಥೆ ಕಾದಂಬರಿ ಸಿನಿಮಾಗಳಲ್ಲಿ ಪುರುಷರನ್ನು ಮಾತ್ರವೇ  ಖಳ ಪಾತ್ರಗಳಲ್ಲಿ ನಿರೂಪಿಸಲಾಗುತ್ತಿತ್ತು. ಇತ್ತೀಚೆಗೆ ಮಹಿಳೆಯರ ಪಾತ್ರಗಳನ್ನು ಸಹ ವಿಲನ್ ಗಳಾಗಿ ನಿರೂಪಿಸಲಾಗುತ್ತಿದೆ. ಮೊದಲೆಲ್ಲಾ ಪತಿಯಿಂದ ಪತ್ನಿಯ ಕೊಲೆ ಎಂಬುದನ್ನು ಮಾತ್ರ ಕೇಳು ಕೇಳುತ್ತಿದ್ದೆವು. ಇತ್ತೀಚೆಗೆ ಪತ್ನಿಯಿಂದ ಪತಿ ಕೊಲೆಯ ಪಿತೂರಿ ಎಂಬುದನ್ನು ಸಹ ನೋಡುತ್ತಿದ್ದೇವೆ.

ಪ್ರೇಮಿಗಳ ವಿಷಯದಲ್ಲಿ ಗಂಡಿನಿಂದ ಹೆಣ್ಣಿಗೆ ಮೋಸ ವಂಚನೆಯ ವಿಷಯಗಳು ಮಾತ್ರ ಸುದ್ದಿಯಾಗುತ್ತಿದ್ದವು. ಇತ್ತೀಚೆಗೆ ಹೆಣ್ಣುಗಳಿಂದ ಸಹ ಪುರುಷ ಮೇಲೆ ಮೋಸ ದೌರ್ಜನ್ಯದ ಕೇಸು ದಾಖಲಾಗುತ್ತಿವೆ. ಜೈಲುಗಳಲ್ಲಿ, ಆಸ್ಪತ್ರೆಯ ರೋಗಿಗಳಲ್ಲಿ, ಬಾರುಗಳಲ್ಲಿ, ಕಳ್ಳತನ ಅಪರಾಧಗಳಲ್ಲಿ ಕೇವಲ ಪುರುಷರು ಮಾತ್ರ ಹೆಚ್ಚು ಕಾಣುತ್ತಿದ್ದರು. ಆದರೆ ಇತ್ತೀಚೆಗೆ ಮಹಿಳೆಯರ ಸಂಖ್ಯೆ ಸಹ ಇವುಗಳಲ್ಲಿ ಹೆಚ್ಚುತ್ತಿದೆ.

ಇದು ಪುರುಷರ ಮಹಿಳಾ ದ್ವೇಷದ ಆರೋಪ ಎಂದು ದಯವಿಟ್ಟು ನಿರ್ಲಕ್ಷಿಸದಿರಿ. ಮಹಿಳೆಯರ ಆಧುನಿಕತೆಯ - ಸಮಾನತೆಯ ಮಾರ್ಗದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಎಚ್ಚರಿಕೆಯ ಸಂದರ್ಭವಿದು. ಕುತೂಹಲಕ್ಕಾಗಿ ಪ್ರಾಥಮಿಕ ಶಾಲೆಯ ಬಹಳಷ್ಟು ಮಕ್ಕಳನ್ನು ಮಾತನಾಡಿಸಿದ್ದೇನೆ. ಅವರಲ್ಲಿ ಹೆಚ್ಚು ಮಕ್ಕಳು ಹೇಳಿದ್ದು Father is sweet mother is bit harsh. ಹೌದು ಮೊದಲು ಅಪ್ಪ ಮಕ್ಕಳನ್ನು ಜಾಸ್ತಿ ಹೊಡೆಯುವುದು ಕಾಣುತ್ತಿತ್ತು. ಈಗ ಅಮ್ಮಂದಿರು ಮಕ್ಕಳಿಗೆ ಹೊಡೆಯುವುದನ್ನು ಗಮನಿಸಬಹುದು. ಹಾಗೆಂದು ಪುರುಷರೆಲ್ಲಾ ಒಳ್ಳೆಯವರಾಗಿದ್ದಾರೆ ಮಹಿಳೆಯರು ಕೆಟ್ಟವರಾಗುತ್ತಿದ್ದಾರೆ ಎಂದು ಭಾವಿಸಬೇಕಿಲ್ಲ. ಆದರೆ ಬದಲಾವಣೆ ಹಂತದಲ್ಲಿ ದಾರಿ ತಪ್ಪುತ್ತಿರುವ ಗುಣಲಕ್ಷಣಗಳ ಒಂದು ಪ್ರಾರಂಭಿಕ ಹಂತ ಎಂದು ಅರ್ಥಮಾಡಿಕೊಳ್ಳಬೇಕು. ವಾದ ಮಾಡಲು ಪ್ರಾರಂಭಿಸಿದರೆ ಗಂಡಸರ ಅಸಂಖ್ಯಾತ ತಪ್ಪುಗಳನ್ನು ತೋರಿಸಬಹುದು. ಆದರೆ ಆ ತಪ್ಪುಗಳು ಹೆಣ್ಣು ಮಕ್ಕಳ ತಪ್ಪುಗಳಿಗೆ ಸಮರ್ಥನೆಯಾಗಬಾರದು. ಅನುಭವದ ಪಾಠದಿಂದ ಅಮೃತ ಹೊರಬರಬೇಕೆ ಹೊರತು ವಿಷವಲ್ಲ.

ಸಾಮಾಜಿಕ ಬದಲಾವಣೆಯ ಸಂದರ್ಭಗಳಲ್ಲಿ ಈ ರೀತಿಯ ತಳಮಳಗಳು ಸಹಜ. ಕಾಲ ಸರಿದಂತೆ ಎಲ್ಲವೂ ಒಂದು ನಿಯಂತ್ರಣಕ್ಕೆ ಬರಬಹುದು ಎಂಬ ಆಶಾಭಾವನೆಯೊಂದಿಗೆ..

***

ನಮ್ಮ ಯಾತ್ರೆಯ 8 ನೆಯ ಜಿಲ್ಲೆ ‌ಸಾಹಿತ್ಯದ ನಗರ ಧಾರವಾಡದತ್ತ...

ಧಾರವಾಡ ಜಿಲ್ಲೆಯ ಜ್ಞಾನ ಭಿಕ್ಷಾ ಪಾದಯಾತ್ರೆಯ ಮಾರ್ಗಸೂಚಿ

***

ಧಾರವಾಡ

ಹುಬ್ಬಳ್ಳಿ 

ಕಲಘಟಗಿ,

ಕುಂದಗೋಳ 

ನವಲಗುಂದ 

(ಧಾರವಾಡ ಜಿಲ್ಲೆಯ ಕೊನೆಯ ತಾಲೂಕು)

ನರಗುಂದ

( ಗದಗ ಜಿಲ್ಲೆಯ ಮೊದಲ ತಾಲೂಕು)

* ಜ್ಞಾನ ಭಿಕ್ಷಾ ಪಾದಯಾತ್ರೆಯ 108 ನೆಯ ದಿನ ಬೆಳಗಾವಿ ಜಿಲ್ಲೆಯ ಬೈಲೂರು ( ಕಿತ್ತೂರು ತಾಲ್ಲೂಕು ಸಮೀಪ ) ಇಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಲೇಖನ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ : ಇಂಟರ್ನೆಟ್ ತಾಣ

 

Comments

Submitted by Ashwin Rao K P Sat, 02/20/2021 - 10:31

ಅಮ್ಮನ ಪ್ರೀತಿ -ಅಪ್ಪನ ತ್ಯಾಗ ಲೇಖನದ ಕುರಿತು..

ಸತ್ಯ, ನಾನು ಮೊದಲಿನಿಂದಲೂ ಇದನ್ನು ಹೇಳುತ್ತಾ ಬಂದವಳು. ನಮ್ಮೂರಿನ ವಿಟ್ಲದಲ್ಲಿ ಮಹಿಳಾ ದಿನಾಚರಣೆಯ ಒಂದು ಸಮಾರಂಭ. ಮುಖ್ಯ ಅತಿಥಿಯಾಗಿ ನನಗೆ ಅನಿಸಿಕೆ ಹೇಳಲಿತ್ತು. ಹಲವಾರು ವಿಷಯಗಳನ್ನು ಹೇಳುತ್ತಾ, ಯಾಕೆ ಗಂಡಸರನ್ನು ದ್ವೇಷ ಮಾಡ್ತೀರಿ? ಅವರಿಲ್ಲದೆ ಹೇಗೆ ಸಂಸಾರ, ಇಬ್ಬರೂ ಜೊತೆ ಜೊತೆಗೆ ಸಾಗಬೇಕು, ಇನ್ನೂ ಹಲವಾರು ವಿಷಯ ಹೇಳುವಾಗ, ಓರ್ವ ಗಣ್ಯ ಜನಪ್ರತಿನಿಧಿ ಮಹಿಳೆ ಎದ್ದು ನಿಂತು *ಟೀಚರಮ್ಮ, ನಿಮ್ಮ ಗಂಡ ಒಳ್ಳೆಯವರಿರಬಹುದು, ನಾವೆಲ್ಲ ಅನುಭವಿಸ್ತಾ ಇದ್ದೇವೆ* ಹೇಳಿದರು. ಬರೇ ನನ್ನವರ ಬಗ್ಗೆ ಅಲ್ಲ ವೇದಿಕೆಯಲ್ಲಿ ಮಾತನಾಡಿದ್ದು, ಸುತ್ತಮುತ್ತಲಿನ ಸಮಾಜ, ವ್ಯವಸ್ಥೆ, ಮನೆಮನೆ ಕಥೆ ಹೇಳಿ ಸಮಜಾಯಿಸಿದೆ. ಹೇಳಿದರೂ ಒಪ್ಪಿಕೊಳ್ಳುವ ಮನೋಭಾವದ ಹೆಂಗಳೆಯರು ಕಡಿಮೆ, ನಾನು ಕಂಡ ಹಾಗೆ.(ಜೀವನಾನುಭವದ ಮಾತು).ಉತ್ತಮ ಸಂದೇಶ,ಧನ್ಯವಾದಗಳು.

-ರತ್ನಾ ಭಟ್, ತಲಂಜೇರಿ (ನಿವೃತ್ತ ಶಿಕ್ಷಕಿ)