ಅಮ್ಮನ ಪ್ರೀತಿ ಮತ್ತು ತ್ಯಾಗಕ್ಕೆ ಶರಣು ಎನ್ನುತ್ತಾ...

ಅಮ್ಮನ ಪ್ರೀತಿ ಮತ್ತು ತ್ಯಾಗಕ್ಕೆ ಶರಣು ಎನ್ನುತ್ತಾ...

ಇಂದು (ಮೇ ೯) *ತಾಯಂದಿರ ದಿನವಂತೆ*. ಹೀಗೂ ಇದೆಯಾ ಎಂದು ಅಚ್ಚರಿಯಾಗುತ್ತದೆ ಅಲ್ಲವೇ? ಅಮ್ಮನವರಿಗೂ ಒಂದು ದಿನ ಬೇಕಾ? ಹಾಗೆ ನೋಡ ಹೋದರೆ ಪ್ರತೀ ದಿನವೂ ಅಮ್ಮನ ದಿನವೇ ಅಲ್ಲವೇ? ಹುಟ್ಟಿ, ಬೆಳೆದು ದೊಡ್ಡವರಾದ ನಂತರವೂ ನಾವು ಅಮ್ಮನ ಮುದ್ದು ಕೂಸುಗಳೇ ಅಲ್ಲವೇ?  ಆದರೆ ಇಂದು ಇದು ಅನಿವಾರ್ಯತೆಯಿಂದ, ಪರಿಸ್ಥಿಯ ಅವಲೋಕನದಿಂದ, ಮನಗಂಡು ಬಂದಿರಬಹುದು. ಬದುಕಿನ ಅನಿವಾರ್ಯತೆ, ಜಂಜಾಟಗಳಿಂದ ಮಕ್ಕಳು ಅಮ್ಮನಿಗೆ ಸಮಯವನ್ನೇ ಕೊಡುವುದನ್ನು ಮರೆತಿದ್ದಾರೆ ಅನಿಸಿಯೇ ಈ ದಿನಕ್ಕೆ ಮಹತ್ವ ಬಂದಿರಬಹುದೇನೋ? 

೧೮೭೦ರಲ್ಲಿ ಜೂಲಿಯಾ ವಾರ್ಡ್ ಎಂಬವರು, ಯುದ್ಧದಲ್ಲಾಗುವ ಸಾವು ನೋವುಗಳನ್ನು ಕಂಡು ಮಮ್ಮಲ ಮರುಗಿದರು. ಯುದ್ಧ ರಂಗದಲ್ಲಿ ಮಡಿಯುತ್ತಿರುವ ಸಾವಿರಾರು ಯುವಕರ ತಾಯಂದಿರ ನಿಟ್ಟುಸಿರು, ದುಃಖ, ಆರ್ತನಾದದ ಅರಿವಿದ್ದ ಇವರು, ಇನ್ನಾದರೂ ಯುವಕರನ್ನು ಕೊಲ್ಲದಿರಿ, ನಿಮ್ಮ ಮಕ್ಕಳಿಗೆ ಹೇಳಿರಿ ಎಂಬ ಘೋಷಣೆಯೊಂದಿಗೆ, ಪ್ರತೀ ವರ್ಷದ *೨ನೇ ಮೇ ವಾರದ* ದಿನ ಮೆರವಣಿಗೆ ಹೋಗಿ ಪ್ರಚಾರ ಮಾಡಿ ಆರಂಭಿಸಿದರು. ಅಂದಿನದ ಪ್ರಾರಂಭವಾಯಿತು ಅಮ್ಮನ ದಿನ.

*ತಾಯಿ, ಅಮ್ಮ* ಪದವೇ ರೋಮಾಂಚನವಲ್ಲವೇ? ಎಷ್ಟು ಶಕ್ತಿ ಅಡಗಿದೆ ನೋಡಿ. ಸಹನೆ, ತ್ಯಾಗ, ಮಮತೆ, ಪ್ರೀತಿ , ಪ್ರೇಮ, ವಾತ್ಸಲ್ಯದ ಪ್ರತಿರೂಪವೇ ತಾಯಿ. ಮಕ್ಕಳ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಿ ಸರಿದಾರಿಗೆ ಒಯ್ದು, ತನ್ನ ಕಾಲ ಮೇಲೆ ತಾನೇ ನಿಲ್ಲುವಂತೆ  ಮಗುವನ್ನು  ರೂಪಿಸುವವಳು ತಾಯಿ. ಕರುಣಾಮಯಿ ಆಕೆ. ತನ್ನ ಮಗುವನ್ನು ಬೆಳೆಸಲು ಅವಳು ಮಾಡುವ ತ್ಯಾಗಗಳನ್ನು ಬರೆದು ಹೇಳುವುದು ಅಸಾಧ್ಯ.

ಅವಳಷ್ಟು ಸಹನಾ? ಶಕ್ತಿ ಬೇರೆ ಇರಲು ಸಾಧ್ಯವೇ *ಮನೆಯ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು* ನಾವೆಲ್ಲಾ ಪ್ರಾಥಮಿಕ ಶಾಲೆಯಲ್ಲಿ ಓದಿದ್ದೇವೆ. ಎಲ್ಲಾ ಬಿಡೋಣ, ಅಂಕುರವಾದ ಭ್ರೂಣವನ್ನು ಗರ್ಭದೊಳಗೆ ಜೋಪಾನವಾಗಿ ಬಚ್ಚಿಟ್ಟು, ನವಮಾಸ ಕಳೆದೊಡನೆ, ಬುವಿಯ ಬೆಳಕನ್ನು ಕಾಣುವಂತ ಮಾಡುವ ಏಕೈಕ ದೇವತೆ ತಾಯಿ. ಅವಳ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಜೊತೆಗೆ ಒಳ್ಳೆಯ ಕುಟುಂಬ ಸದಸ್ಯರು ಒದಗಿಬಂದರೆ ಮಹಾಭಾಗ್ಯ ಆಕೆಯದು. ಕಿರುಕುಳ, ಪೀಡನೆ, ಚುಚ್ಚುವಿಕೆ, ಮೆಟ್ಟುವಿಕೆ, ಕೀಳಾಗಿ ಕಾಣುವ ಮನೋಭಾವದ ಮನೆಮಂದಿ, ಬಡತನ, ಈ ಎಲ್ಲದರ ಮಧ್ಯೆ ಸಿಲುಕಿ ನಲುಗಿ ಬೇಯುವ ತಾಯಂದಿರೂ ಬಹಳಷ್ಟು ಮಂದಿ ಇದ್ದಾರೆ. ನಮ್ಮ ನಿಮ್ಮ ನಡುವೆಯೇ ಜೀವಚ್ಛವವಾಗಿ ಬದುಕುತ್ತಿದ್ದಾರೆ. ಹೆಣ್ಣೆಂದರೆ ಬರೇ ಭೋಗದ ವಸ್ತುವಾಗಿ, ಮನೆಕೆಲಸದವಳಾಗಿ, ಸದಸ್ಯರ ಆಶೋತ್ತರ ಪೂರೈಸಲಿರುವವಳಾಗಿ, ಅವಳಿಗೂ ಒಂದು ಮನಸ್ಸಿದೆ, ಹೃದಯವಿದೆ, ಭಾವನೆಗಳಿವೆ ಎಂದು ಅರ್ಥ ಮಾಡಿಕೊಳ್ಳದವರ ನಡುವೆಯೇ ಬದುಕು ಸವೆಸುವ ಅಮ್ಮಂದಿರೂ ಸಾಕಷ್ಟು ಇದ್ದಾರೆ.

ಒಂದು ದಿನ ಶುಭಾಶಯ ಹೇಳಿದರೆ ಸಾಲದು. ಕಣ್ಣಲ್ಲಿ ರಕ್ತ ಇಲ್ಲದ ಹಾಗೆ ಇರುವ ಮಕ್ಕಳು ತಾಯಿಯ ಇಳಿವಯಸ್ಸಿನಲ್ಲಿ ಮನೆಯಿಂದ ಹೊರದೂಡಿ ಬೀದಿಪಾಲು ಮಾಡುವುದನ್ನು ಕಂಡಿದ್ದೇವೆ. *ಹೆಣ್ಣನ್ನು ಹಾಡಿ ಹೊಗಳಬಹುದು, ಆದರೆ ತಾಯಿಯನ್ನು ಹಾಡಿ ಹೊಗಳಲು ಸಾಧ್ಯವಿಲ್ಲ *ಹೆತ್ತ ತಾಯಿಯ ಋಣವನ್ನು ತೀರಿಸಲು ಸಾಧ್ಯವೇ? ಆಕೆ ಕುಟುಂಬದ ಕಾರ್ಯ ನಿರ್ವಹಣಾಧಿಕಾರಿ, ಹಿತಚಿಂತಕಿ, ಕರುಣಾಮಯಿ.ತ್ಯಾಗಕ್ಕೆ ಇನ್ನೊಂದು ಹೆಸರೇ ತಾಯಿ.

*ತಾಯಿ ಎನ್ನುವ ಜೀವ ನಿರೀಕ್ಷೆ ಮಾಡುವುದು ಆಸ್ತಿ, ಅಂತಸ್ತು, ಐಶ್ವರ್ಯ, ಒಡವೆ, ವಸ್ತ್ರ ಖಂಡಿತಾ ಅಲ್ಲ, ಬೊಗಸೆಯಷ್ಟು ಪ್ರೀತಿ, ನೆಮ್ಮದಿ, ಒಂದು ತುತ್ತು ಅನ್ನ*.

ಅನಾರೋಗ್ಯ ಸಂದರ್ಭದಲ್ಲಿ ಆಕೆ ಮಕ್ಕಳಿಗಾಗಿ ಮಾಡುವ ತ್ಯಾಗ, ಪಡುವ ಯಾತನೆ ಅಳತೆಗೂ ನಿಲುಕದು. ಇಂದಿನ ಈ ಸಂಕಷ್ಟದ ಕಾಲದಲ್ಲಿ ತಾಯಿಯ ಪಾತ್ರ ಹಿರಿದು. ಹುಟ್ಟುತ್ತಾ ಮಗಳು, ಬೆಳೆದು ನಿಂತಾಗ ಪತ್ನಿ- ಸೊಸೆ, ಮಗುವಾದಾಗ ಅಮ್ಮ, ಮೊಮ್ಮಕ್ಕಳಾದಾಗ ಅಜ್ಜಿ, ಈ ನಡುವೆ ಸಹೋದರಿ, ಅತ್ತಿಗೆ ಹೀಗೆ ನಾನಾ ಪಾತ್ರಗಳನ್ನು ನಿಭಾಯಿಸುವ ಸ್ತ್ರೀಯನ್ನು *ತಾಯಿಯ* ಸ್ಥಾನದಲ್ಲಿ ಪೂಜಿಸೋಣ, ವ್ಯಕ್ತಿತ್ವ ಕ್ಕೆ ಬೆಲೆ ಕೊಡೋಣ.*ಕ್ಷಮಯಾಧರಿತ್ರಿ* ಆದ ಆಕೆಯು ನಮ್ಮೆಲ್ಲರ ಮನೆಯನ್ನು ಬೆಳಗುವ ನಂದಾದೀಪ. ಜಗದ ಎಲ್ಲಾ ಕೋಟಿ ಕೋಟಿ ತಾಯಂದಿರಿಗೂ ನಮಸ್ಕಾರಗಳು.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು