ಅಮ್ಮನ ಪ್ರೀತಿ.

ಅಮ್ಮನ ಪ್ರೀತಿ.

ಅಂದು ಮುಂಜಾನೆ ಎಚ್ಚರವಾಗಿದ್ದು ಸ್ವಲ್ಪ ತಡವಾಗಿತ್ತು, ಕಾಲೇಜಿಗೆ ತಡವಾಗುತ್ತದೆ ಅಂತ ಅವಸರದಲ್ಲಿ ಬೆಳಗಿನ ಕಾರ್ಯಗಳು ನೆದೆದಿದ್ದವು. ಅದೇ ಸಮಯಕ್ಕೆ ಸರಿಯಾಗಿ ಅಮ್ಮನ ಕಾಲ್ ಬಂತು, ಹೊತ್ತಾಗಿದೆ ಅಂತ ಫೋನ್ ತೆಗೆದರೆ ಅದೇ ನಿತ್ಯ ವಿಚಾರಣೆ, ಸ್ನಾನ ಆಯ್ತಾ, ಟೀ ಕುಡಿದ, ತಿಂಡಿ ಆಯ್ತಾ, ಸಮಯವಾಗಿದ್ದರಿಂದ ರೇಗಾಡಿ ಫೋನ್ ಕಟ್ ಮಾಡಿದೆ. 
 
ಸ್ವಲ್ಪ ಸಮಯದ ನಂತರ ಹತ್ತಿರದ ಹೋಟೆಲ್ ಹೋಗಿ ತಿಂಡಿ ತಿಂದು ಕಾಲೇಜ್ ಹೋಗೋಕೆ ವೋಲ್ವೋ ಬಸ್ ಹತ್ತಿದೆ, ನಾನು ಹತ್ತಿದ ಸ್ಟಾಪ್ನಲ್ಲೆ ಒಬ್ಬ ಹೆಂಗಸು ಮತ್ತು ಅವರ ಪುಟ್ಟ ಮಗಳು  ಬಸ್ಸು ಹತ್ತಿದರು. ಅವರ  ಸಾಮಾನು, ಚೀಲ ನೋಡಿದಾಗ ಹೂ ಮಾರೋರು ಅಂತ  ತಿಳೀತು. ಆ ಪುಟ್ಟ ಮಗುವಿಗೆ  ಎನ್ನೋ ಒಂದು ರೀತಿ ಸಂತೋಷ, ಯಾಕಂದರೆ ಅದು ವೋಲ್ವೋ ಬಸ್, ನನ್ನ ಯೋಚನೆಯ ಪ್ರಕಾರ ಆ ಮಗುವಿಗೆ ಇದು ಮೊದಲ ಅನುಭವ. ಹವಾ ನಿಯಂತ್ರಿತ ಬಸ್, ಶುಚಿಯಾದ ಸೀಟ್ಗಳು, ಶುಭ್ರ ಬಟ್ಟೆ ತೊಟ್ಟಿದ್ದ ಕಂಡಕ್ಟರ್ ಮತ್ತು ಡ್ರೈವರ್, ಎಲ್ಲವೂ ಒಂದು ರೋಮಂಚನಕಾರಿಯದ ಅನುಭವ ಆ ಮಗುವಿಗೆ. 
 
ಆದರೆ ಟಿಕೆಟ್ ರೇಟ್  ಅಮ್ಮ ಮುಖ ಬಾಡಿತು. ಉಳಿದ ಬಸ್ಗಳಲ್ಲಿ ೧೪ ರೂಪಾಯಿಯ ಟಿಕೆಟ್ಗೆ ಈ ಬಸ್ನಲ್ಲಿ ೩೫ ರೂಪಾಯಿ, ಪಾಪ ಮುಂಜಾನೆ ಹೊತ್ತು ಹುಟ್ಟುವ ಮುನ್ನ ಮಾರುಕಟ್ಟೆಗೆ ಹೋಗಿ ಹೂ ತಂದು ಕಟ್ಟಿ ದಿನವೆಲ್ಲಾ ಮಾರಿದರೆ ಸಿಗುವ ದುಡ್ಡು ಹೊತ್ತಿನ ಊಟಕ್ಕೆ ಸಾಲದು, ಆದರೆ ಇಲ್ಲಿ ೧೪ ರುಪಾಯಿ ಟಿಕೇಟ್ಗೆ ೨೫ ರೂಪಾಯಿ ಕೊಡಬೇಕಾಗಿ ಬಂದಾಗ ಅವರ ಮುಖ ಬಾಡಿ ಹೊಗಿತ್ತು.
 
ಆದರೆ ಬಸ್ನಲ್ಲಿದ್ದ ಅವರ ಮಗಳ ಸಂತೋಷ ನೋಡಿ ಆ ತಾಯಿಯ ಬೇಸರ ಕರಗಿ ನಿಧಾನವಾಗಿ ಮುಖದಲ್ಲಿ ಸಂತೋಷ ಉಕ್ಕಿತು. ಇದನೆಲ್ಲಾ ಮುಖ ಪ್ರೇಕ್ಷಕನಾಗಿ ನೋಡುತ್ತಾ ಕುಳಿತ್ತಿದ್ದ ನನಗೆ  ಅಮ್ಮ ನೆನಪಾದಳು, ಮುಂಜಾನೆ ಅವಳ ಜೊತೆ ರೇಗಾಡಿದ್ದಕ್ಕೆ ಅಸಹ್ಯವಾಗಿತ್ತು, ತಪ್ಪಿನ ಅರಿವಾಗಿ ಅಮ್ಮನಿಗೆ ಫೋನ್ ಮಾಡಿದರೆ ಅವಳ ಮಾತಿನಲ್ಲಿ ಯಾವುದೇ ಸಿಟ್ಟಿಲ್ಲ, ಬೇಜಾರಿಲ್ಲ, ಮತ್ತೆ ಅದೇ ಪ್ರೀತಿ ತುಂಬಿದ ದನಿಯಲ್ಲಿ ತಿಂಡಿ ಊಟ ಕೆಲಸದ ಬಗ್ಗೆ ಮಾತುಕತೆ ಮುಂದುವರೆದಿತ್ತು. 
 
ಅಮ್ಮ ಅಂದ್ರೆ ಹಾಗೆ, ಮಕ್ಕಳ ಸಂತೋಷಕ್ಕೆ ತಮ್ಮ ಊಟ, ನಲಿವು, ಎಲ್ಲವನ್ನೂ ತ್ಯಾಗ ಮಾಡೋ ಕರುಣಾಮಯಿ. ಆದರೆ ಮಕ್ಕಳಾದ ನಮಗೆ ಇದರ ಬೆಲೆ ತಿಳಿಯುವುದು ತುಂಬ ಕಡಿಮೆ, ತಿಳಿದರು ಅವರ ಪ್ರೀತಿಗೆ ಬೆಲೆ ಕೊಡುವುದು ತುಂಬಾ ಕಡಿಮೆ. ಆದರೆ  ಅವರಿಗೆ ದಿನಕ್ಕೆ ಹತ್ತಾರು ಸುಳ್ಳು ಹೇಳಿ ಜೀವನ ಮಾಡುವುದು ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ. 
 
ಈ ಒಂದು ಪುಟ್ಟ ಘಟನೆಯ ಪ್ರಭಾವ ಮಾತ್ರ ತುಂಬಾ ದೊಡ್ಡದಾಗಿತ್ತು.