ಅಮ್ಮನ ಸೆರಗಿನ ಮಹತ್ವ ಗೊತ್ತೇ...?

ಅಮ್ಮನ ಸೆರಗಿನ ಮಹತ್ವ ಗೊತ್ತೇ...?

ಇಂದು ‘ಅಮ್ಮಂದಿರ ದಿನ' ಹಾಗೆ ನೋಡಲು ಹೋದರೆ ವರ್ಷದ ಪ್ರತಿಯೊಂದು ದಿನವೂ ಅಮ್ಮಂದಿರ ದಿನವೇ. ಆದರೂ ಅಮ್ಮನನ್ನು ನೆನಪಿಕೊಳ್ಳ ಬೇಕು, ಆಕೆಯ ಮಹತ್ವವನ್ನು ಅರಿಯಬೇಕು ಎನ್ನುವ ಉದ್ದೇಶದಿಂದ ಅಮ್ಮನ ದಿನದ ನಿರ್ಧಾರ ಆಗಿರಲೂ ಬಹುದು. ವರ್ಷವಿಡೀ ನೆನಪಿಲ್ಲದ ಅಲ್ಲ ಈ ದಿನವಾದರೂ ಮಕ್ಕಳಿಗೆ ನೆನಪಾಗಿ ಕೇಕ್ ತುಂಡರಿಸಿ, ಮೊಬೈಲ್ ಸ್ಟೇಟಸ್ ನಲ್ಲಿ ಹಾಕಿಕೊಳ್ಳುವರೂ ಬಹಳಷ್ಟು ದಿನ ಇದ್ದಾರೆ. ಬದುಕಿರುವಾಗ ಒಂದು ದಿನವೂ ಅಮ್ಮನ ಸುಖ ದುಃಖಗಳ ಬಗ್ಗೆ ಕೇಳದ ಮಕ್ಕಳು ಸತ್ತ ಬಳಿಕ 'ಅಮ್ಮನ ದಿನ' ದಂದು ಆಕೆಯ ಫೋಟೋ ಹಾಕಿ ‘ಐ ಮಿಸ್ ಯೂ ಅಮ್ಮ' ಹೇಳುವ ಮಕ್ಕಳೂ ಇದ್ದಾರೆ. ನಾನಿಲ್ಲಿ ಹೇಳ ಹೊರಟಿರುವುದು ಅಮ್ಮನ ಸೆರಗಿನ ಬಗ್ಗೆ....ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಕೆಲವು ಸಾಲುಗಳಿಗೆ ನನ್ನದೇ ಆದ ಕೆಲವು ಪದಗಳನ್ನು ಬಳಸಿ ಪುಟ್ಟ ಬರಹವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿರುವೆ. ಒಂದು ಚೂರು ಓದಿ ಬಿಡಿ...!

ಇಂದಿನ ಮಕ್ಕಳಿಗೆ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ. ಏಕೆಂದರೆ ಅಮ್ಮ ಸೀರೆ ಉಡುವುದೇ ಅಪರೂಪ. ಅಂದು ಮಗು ಅತ್ತರೆ ಕಂಬನಿ ಒರೆಸಲು ಅಮ್ಮನ ಸೆರಗೇ ಟವೆಲ್. ಅಂದು ಆಟವಾಡಿ ಬಂದಾಗ ಬೆವೆತ ಮುಖ ಒರೆಸಲು  ಅಮ್ಮನ ಸೆರಗೇ ಕರವಸ್ತ್ರ. ಅಂದು ಮಗು ಅಮ್ಮನ ತೊಡೆಯ ಮೇಲೆ ಮಲಗಿ ನಿದ್ದೆ ಮಾಡಿದರೆ ಆ ಸೆರಗೇ ಬೀಸಣಿಗೆ, ಚಳಿಯಾದರೆ ಹೊದಿಕೆ. ಅಂದು ಯಾರಾದರೂ ಹೊಸಬರು ಮನೆಗೆ ಬಂದರೆ ನಾಚುವ ಮಗುವಿಗೆ ಅಮ್ಮನ ಸೆರಗೇ ಬಚ್ಚಿಟ್ಟುಕೊಳ್ಳಲು ಆಸರೆ. ಸೆರಗು ಮರೆಯಿಂದಲೇ ಕದ್ದು ನೋಡಬಹುದಾಗಿತ್ತು.

ಅಮ್ಮನ ಸೆರಗು ಹಿಡಿದುಬಿಟ್ಟರೆ ಅಮ್ಮನ ಹಿಂದೆ ನಡೆದುಕೊಂಡು ಜಗವನ್ನೇ ಸುತ್ತಿದ ಅನುಭವವಾಗುತ್ತಿತ್ತು. ಮಳೆ ಬಂದರೆ ನೆನೆಯುವ ಸ್ಥಿತಿ ಬಂದು ತಾನು ನೆಂದರೂ ಪರವಾಗಿಲ್ಲ, ಮಗುವಿಗೆ ಸೆರಗಿನ ಆಸರೆ ಅಂತೂ ಖಂಡಿತ. ಹಣೆಯ ಬೆವರು, ನೆಂದ ಒದ್ದೆ ತಲೆ ಒರೆಸಲು ಅಮ್ಮನ ಸೆರಗು ಸದಾ ಸಿದ್ದ. ಬಚ್ಚಿಟ್ಟ ತಿಂಡಿಗಳನ್ನು ಮುಚ್ಚಿಟ್ಟು ಕೊಡಲು ಅಮ್ಮನ ಸೆರಗು ಯೋಗ್ಯ ಜಾಗ. ತರಕಾರಿ ತರಲು ಚೀಲ ಮರೆತಾಗ ಸೆರಗೇ ಚೀಲ

ಗಿಡದಿಂದ ಬಿಡಿಸುವ ಹೂವುಗಳಿಗೆ ಒಮ್ಮೊಮ್ಮೆ ಸೆರಗೇ ಹೂ ಬುಟ್ಟಿ. ಮನೆಗೆ ಯಾರಾದರೂ ಒಮ್ಮೆಲೇ ಬಂದಾಗ ಕುಳಿತು ಕೊಳ್ಳುವ ಆಸನ ಒರೆಸಲು ಸೆರಗೇ ‌ಸಾಧನ. ಅಡುಗೆ ಮನೆಯಲ್ಲಿ ತಕ್ಷಣ ಮಸಿ ಅರಿವೆ ಸಿಗದಿದ್ದರೆ ಒಲೆ ಮೇಲೆ ಉಕ್ಕುವ ಹಾಲಿನ ಬಿಸಿ ಪಾತ್ರೆ ಇಳಿಸಲಿಕ್ಕೂಅಮ್ಮನ ಸೆರಗೇ ಬೇಕು. ಅಂದು ಅಮ್ಮ ತಲೆಯ ಮೇಲೆ ಕಟ್ಟಿಗೆಯ, ಹುಲ್ಲಿನ ಹೊರೆ ಹೊರಲು ಅಮ್ಮನ ಸೆರಗೇ ಬಳಸುತ್ತಿದ್ದಳು. ಅಮ್ಮ ಮಂಗಳ ಕಾರ್ಯಗಳಲ್ಲಿ ಕೊಡುವ ಉಡಿಯಕ್ಕಿ, ಬಾಗಿನ ಇತ್ಯಾದಿ ಸ್ವೀಕರಿಸಲು, ದೇವಸ್ಥಾನದಲ್ಲಿ ಕೊಡುವ ಪ್ರಸಾದ ಸ್ವೀಕರಿಸಲು ಅಮ್ಮ ಸೆರಗು ಬಳಸುತ್ತಿದ್ದಳು.

ಸಿಟ್ಟು ಬಂದರೆ ಏನಾದರೂ ಮಾಡಲೇ ಬೇಕೆನ್ನುವ ಛಲ ಬಂತೋ ಅಮ್ಮ ಸೆರಗು ಎಳೆದು ಸೊಂಟಕ್ಕೆ ಎಳೆದು ಕಟ್ಟಿದಳೆಂದರೆ ಕೆಲಸ ಆದಂತೆಯೇ. ಕಣ್ಣು ಬಿಟ್ಟು ಸೆರಗು ಸೊಂಟಕ್ಕೆ ಕಟ್ಟಿದಳೆಂದರೆ ಅಪ್ಪನೇ ಒಮ್ಮೊಮ್ಮೆ ಹೆದರುತ್ತಿದ್ದ. ಹಬ್ಬ-ಹರಿದಿನಗಳಲ್ಲಿ ಅಮ್ಮ ಸೊಂಟಕ್ಕೆ ಸೆರಗು ಕಟ್ಟಿದಳೆಂದರೆ ಮನೆ ಸ್ವಚ್ಛಗೊಳಿಸಲು ಮುಗಿಸಿದಾಗಲೇ ಸೊಂಟದಿಂದ ಸೆರಗಿಗೆ ಮುಕ್ತಿ. ಅಂದು ಮಗುವಿಗೆ  ಏನಾದರೂ ನೆಗಡಿಯಾಗಿ ಮೂಗಿನಲ್ಲಿ ಸಿಂಬಳ ಸೋರಲು ಶುರುವಾಯಿತೋ  ಅಮ್ಮನ ಸೆರಗೇ ಕರವಸ್ತ್ರ. ಅಮ್ಮನೇನಾದರೂ ಸೆರಗೊಡ್ಡಿ ಬೇಡಿದಳೆಂದರೆ ಎಂತಹ ಕಲ್ಲು ಮನಸ್ಸು ಸಹ  ಕರಗುತ್ತದೆ. ಸದಾ ಹೆಂಡತಿಯ ಸೆರಗನ್ನು ಹಿಡಿದು ಹಿಂದೆ ಓಡಾಡುತ್ತಿದ್ದ ಅಂದಿನ ಅಮ್ಮಾವ್ರ ಗಂಡಂದಿರೂ ಈಗೀಗ ಕಾಣುತ್ತಲೇ ಇಲ್ಲ. ಅಮ್ಮ ಮತ್ತು ಅವಳ ಸೀರೆಯ  ಸೆರಗಿನ ಸೊಬಗನ್ನು ಎಷ್ಟು ವರ್ಣಿ‌ಸಿದರೂ ಸಾಲದು.ಇಂತಹ ಮಹಿಮೆ ಉಳ್ಳ ಸೆರಗು ಈಗ ಎಲ್ಲಿ ಮಾಯವಾಯಿತೊ? ಈಗೀಗ ಸೀರೆ ಉಡುವವರು ಕಡಿಮೆಯಾಗಿ ಸೆರಗೇ ಇಲ್ಲದಿದ್ದ ಮೇಲೆ ಇನ್ನು ಅದನ್ನು ಹಿಡಿದು  ಸಂಭ್ರಮಿಸುವ ಮಗುವೆಲ್ಲಿ? ಗಂಡನೆಲ್ಲಿ?

-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ