ಅಮ್ಮಾ ನಿನ್ನ ತೋಳಿನಲ್ಲಿ…
“ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು, ನಿನ್ನ ಸಂಗ ಆಡಲೆಂದು ಬಂದೆ ನಾನು…” ಎನ್ನುವ ಕಲ್ಪನಾ ನಟಿಸಿ, ಪಿ ಸುಶೀಲಾ ಹಾಡಿದ ‘ಕಪ್ಪು-ಬಿಳುಪು' ಚಲನ ಚಿತ್ರದ ಖ್ಯಾತ ಹಾಡನ್ನು ನೀವು ಕೇಳಿಯೇ ಇರುತ್ತೀರಿ. ಇಲ್ಲಿರುವ ಚಿತ್ರವನ್ನು ಗಮನಿಸಿದರೆ ಒಂದು ಮರದ ಮೇಲೆ ಮತ್ತೊಂದು ಮರ ಬೆಳೆದ ದೃಶ್ಯ ನೋಡುವಾಗ ನಿಮಗೆ ಈ ಹಾಡು ನೆನಪಾಗಲು ಸಾಧ್ಯ. ಈಚಲು ಮರದ ಕಾಂಡದಲ್ಲಿ ಹೇಗೋ ಆಲದ (ಗೋಳಿ ಮರ) ಜಾತಿಗೆ ಸೇರಿದ ಸಸ್ಯವೊಂದು ಬೆಳೆದು ಈಗ ಮರವಾಗಿದೆ. ಈಚಲು ಮರ ಹಾಗೂ ಆಲದ ಮರಗಳೆರಡೂ ಬೇರೆ ಬೇರೆ ಸಸ್ಯ ಜಾತಿಗೆ ಸೇರಿದವುಗಳು. ಆಲದ ಮರದ ಬೀಜ ಬಹಳ ಸಣ್ಣದಾದುದರಿಂದ ಅದು ಗಾಳಿಯಲ್ಲಿ ಹಾರಿ ಬಹುಷಃ ಈಚಲು ಮರದ ಕಾಂಡದಲ್ಲಿ ಸೇರಿರಬಹುದು. ಅಲ್ಲಿದ್ದ ತೇವಾಂಶದಿಂದ (ಮುಂಜಾನೆ ಬೀಳುವ ಮಂಜು) ಬೀಜ ಮೊಳಕೆಯೊಡೆದು ಸಸಿಯಾಗಿ ಬೆಳೆದು ಮರವಾಗಿರಬೇಕು. ಇಷ್ಟು ದೊಡ್ದ ಮರಕ್ಕೆ ಆಹಾರ ಎಲ್ಲಿಂದ ಸಿಗುತ್ತಿದೆ ಎನ್ನುವುದೇ ಕುತೂಹಲಕರವಾದ ಪ್ರಶ್ನೆ.
ಹೊರಬದಿಯಿಂದ ಬರಿ ಕಣ್ಣಿಗೆ ಕಾಣಿಸುವ ಬೇರುಗಳು ಇನ್ನೂ ನೆಲವನ್ನು ತಲುಪಿಲ್ಲ. ಆದರೂ ಮರ ಹಸಿರಾಗಿ ಆರೋಗ್ಯವಾಗಿದೆ. ಈಚಲು ಮರವೂ ಸ್ವಸ್ಥವಾಗಿದೆ. ಪ್ರಕೃತಿಯ ಪವಾಡಗಳಿಗೆ ನಾವು ಬರೀ ಮೂಕ ಪ್ರೇಕ್ಷಕರಷ್ಟೇ. ಈ ಜೋಡಿ ಮರಗಳು ಕಂಡು ಬಂದದ್ದು ಮಂಗಳೂರಿನ ಕುತ್ತಾರು ಬಳಿಯ ಸೇವಂತಿಗುಡ್ಡೆ ಎಂಬಲ್ಲಿರುವ ಖಾಸಗಿ ಪ್ರದೇಶದಲ್ಲಿ.
ಚಿತ್ರ : ವನಿತಾ ಗಿರೀಶ್, ಕುತ್ತಾರು