ಅಮ್ಮ

ಅಮ್ಮ

ಕವನ

ಅಮ್ಮನ ಬಗ್ಗೆ ಬರೆಯಲು ಕುಳಿತೆ

ಆದರೆ,ಅಯ್ಯೋ ಎಷ್ಟೊಂದು ಕವಿತೆಗಳು

ಬರೆದಿದ್ದಾರೆ ಅಮ್ಮನ ಬಗ್ಗೆ. ನಾನೇನು ಬರೆಯಲಿ

ಅವರು ಬರೆದಿರುವುಕ್ಕಿಂತ ಬಿನ್ನವಾಗಿ. 

 

ಅರೆ,ಅವರು ಬರೆದಿರುವುದು ಅವರುಗಳ 

ಅಮ್ಮಂದಿರ ಬಗ್ಗೆ,ನನ್ನ ಅಮ್ಮನ ಬಗ್ಗೆ ಅಲ್ಲವಲ್ಲ.

ನನ್ನ ಅಮ್ಮ,ಅವರುಗಳ ಅಮ್ಮ ಆಗಲು ಸಾಧ್ಯವೆ?

ನನ್ನಮ್ಮನ ಬಗ್ಗೆ ಸಾದ್ಯಾಂತ ಬರೆಯಲಾದೀತೆ,ಅವರಿಗೆ.

 

ಆದರೆ ಎಲ್ಲ ಅಮ್ಮಂದಿರ ಬದುಕು,ಒಂದೇ

ಆಕಾಶದ ತುಂಬಿರುವ ನಕ್ಷತ್ರಗಳಂತಲ್ಲವೆ.

ಸುಖ ದುಃಖ ಬೇಗುದಿ ಬಡತನ ಹೆರಿಗೆಗಳು

ಶಯನ ಹನನ ದಾದಿ ಪಾಕದೊಂದಿಗೇ ಬಾಣಂತಿತನ.

 

ಜಗದ ಅಮ್ಮಂದಿರೆಲ್ಲ ಒಂದೇ ಬಸ್ಸಿನ 

ಬೇರೆ ಬೇರೆ ಊರಿನ ಪಯಣಿಗರು.

ಅಥವಾ ಕೆಲವರು ಕಾಲ್ನಡಿಗೆಯವರು

ಮಿಕ್ಕವರು ವಾಯುಯಾನದವರಿರಬಹುದು.

 

ಗಂಡಿನ ಬೆತ್ತಲೆಯೊಂದಿಗೆ ಕತ್ತಲೆಯ ಒಳ

ಹೊರಗು ಸುಪರಿಚಿತ,ಆದರೂ ಪಾತ್ರ

ಪೋಷಣೆಯು ಮಾತ್ರ ಬೇರೆಯದೆ

ಹೆಂಡತಿ ಅತ್ತೆ ಸೊಸೆ ಮಗಳು ಅಮ್ಮ.

 

ವರ್ಣಸಿದರೆ ಪದಗಳಲ್ಲಿ ಹಿಡದಿಡಬಹುದು

ಉಳಿದವಷ್ಟೋ ವರ್ಣಸಲಾಗದೆ,ಅದೇನು

ವ್ಯಕ್ತಿಯೆ,ಜಗದ ಶಕ್ತಿ.ಗಂಡಿನ ಜೀವದ ಅನುರುಕ್ತಿ

ಹೆಣ್ಣಿಲ್ಲದ,ಅಮ್ಮನಿಲ್ಲದ ಜಗವೆ ನಶ್ವರ ನಿರಾಕಾರ.

 

ಅಮ್ಮನ ಬಗ್ಗೆ ತಿಳಿಯಲು ತಿಳಿಸಲು

ನವಮಾಸದ ಬಾಧೆ,ಹೊರುವ ಹೆರುವ 

ತಂದೆ ಮಗುವನ್ನು ಸಂತೈಸುವ ಪೊರೆಯುವ

ಅನ್ನದಾನಿಯ ಬಗ್ಗೆ ವಿವರಿಸಿದರೆ ಸಾಕಲ್ಲವೆ.

 

ಜಗವೆ ಅಮ್ಮ,ಅಮ್ಮನೆ ಜಗತ್ತು,ಭೂಮಿ ಅಮ್ಮ

ಅಮ್ಮನೆ ಭೂಮಿ,ಅಮ್ಮ ಅನ್ನ,ಅನ್ನವೇ ಅಮ್ಮ.

ಅಪ್ಪ ನಿರಾಕಾರ,ಅಮ್ಮ ಸಾಕಾರ,ಸಹನೆ

ಅಮ್ಮನಿಲ್ಲದೆ ಏನಿದೆ,ನಿನ್ನಿಂದಲೆ ಎಲ್ಲವೂ ಅಮ್ಮ.

 

ಜ್ಯೋತಿ ಕುಮಾರ್.ಎಂ(ಜೆ.ಕೆ.)

ಚಿತ್ರ್