ಅಮ್ಮ...!

ಅಮ್ಮ...!

ಅಮ್ಮ ಎಂಬುದು ಎರಡಕ್ಷರದ ಪದವೇ, ಪದ್ಯವೇ,ಗದ್ಯವೇ,ಕಥಾ ಸಾರವೇ…? ಹೇಗೆ ಬೇಕಾದರೂ ವಿವರಿಸಬಹುದು ಈ ಅಮ್ಮ ಎಂಬ ಪದವನ್ನು… ಕಣ್ತೆರೆದಾಗ ಅಮ್ಮನನ್ನ ನೋಡಬೇಕು, ಅಮ್ಮನ ಕೈಯಿಂದಲೇ ತುತ್ತು ತಿನ್ನಬೇಕು, ಅವಳೇ ತುಟಿಯಂಚಿನ ಎಂಜಲು ವರೆಸಬೇಕು, ಅವಳು ತನ್ನ ಕಂಕುಳಲ್ಲಿ ಎತ್ತಿಕೊಳ್ಳಬೇಕು, ಬಾಯಿತೆರೆದು ಮಾತನಾಡುವಾಗ ಮೊದಲು ಅಮ್ಮ ಎನ್ನಲೇಬೇಕು, ತಿಂಡಿಬೇಕೆಂದರೂ ಅಮ್ಮನೇ ನೀಡಬೇಕು, ಕೈಹಿಡಿದು ನಡೆಸಲು-ಆಡಲು ಜೊತೆಗಿರಬೇಕು, ಮಲಗುವುದಾದರೂ ಅಮ್ಮನ ಮಡಿಲೇ ಬೇಕು, ಜೋ-ಜೋ ಲಾಲಿ ಹಾಡು ಹಾಡಬೇಕು, ಉಯ್ಯಾಲೆಯಲ್ಲಿ ಕುಳ್ಳಿರಿಸಿ ತೂಗಬೇಕು, ಬಿಸಿಲಿಗೆ ನಡೆಯುವಾಗ ಅಮ್ಮನ ಸೆರಗೇ ನೆರಳಾಗಬೇಕು.

ಕೈ ಹಿಡಿದು ನಡೆಸಲು ಬೇಕು ಅಮ್ಮ, ಮಗುವಿಗೆ ಮೊದಲ ಗುರುವಾಗಿಹಳು ಅಮ್ಮ, ಬಿದ್ದಾಗಲೂ ಅಮ್ಮಾ, ನಿದ್ರೆಯಿಂದ ಎದ್ದಾಗಲೂ ಅಮ್ಮಾ, ಗುಮ್ಮ ಬಂದರೂ ಭಯವೇಕೆ ಜೊತೆಗಿರುವಳು ಅಮ್ಮ, ತುತ್ತು ತಿನಿಸುವಾಗ ತೋರಿಸುವಳು ಸುಂದರ-ನಕ್ಷತ್ರ -ಚಂದ್ರಮ, ಮೊದಲು ಮನೆಯವರ ಹಸಿವು ನೀಗಿಸಿ- ತನಗೆ ತಿನ್ನಲು ಇಲ್ಲವಾದರೂ ಹಸಿವೆಯಿಂದ ಇದ್ದರೂ ಅದನ್ನು ತೋರಿಸಳು ಅಮ್ಮ, ಏನು ಬೇಕೆಂದರೂ ಮೊದಲು ಕೇಳುವುದು ಅಮ್ಮ, ಎಷ್ಟು ಬೈದರೂ ಬೇಸರ ಬಾರದು ಆ ರೀತಿ ಬೈಯ್ಯುವಳು ಅಮ್ಮ, ಅಮ್ಮ-ಅಮ್ಮ ನೀನಿಲ್ಲದೇ ನಾ ಹೇಗಿರಲಿ ಹೇಳಮ್ಮ, ನೀ ನನ್ನ ಜೊತೆಯಾಗಿರಬೇಕಮ್ಮ...

ಹೆಣ್ಣನ್ನು ತಾಯಿಗೆ ಹೋಲಿಸಲಾಗಿದೆ, ಹಾಗೆಯೇ ಗೌರವಿಸಲಾಗುತ್ತದೆ...ಅಮ್ಮಾ ಎಂದಾಕ್ಷಣ ಪ್ರತೀಯೊಂದು ಹೆಣ್ಣಿನ ಮುಖದಲ್ಲಿ ಅದೇನೋ ಸಂತೋಷ,ಕಣ್ಣಿಂದ ಹನಿಗಳು ಜಿನುಗುತ್ತವೆ. ತಾಯಿ/ಅಮ್ಮ ಎಂದು  ಸುಲಭದ ಮಾತಲ್ಲ...

ಹೆತ್ತ ಮಗ ಮೋಸ ಮಾಡಬಹುದು ಆದರೆ ಹೆತ್ತ ತಾಯಿ/ಆ ತಾಯಿಯ ಕರುಳು ಎಂದಿಗೂ ಮೋಸ ಮಾಡುವುದಿಲ್ಲ. ಮಗು ಜನಿಸಿದಾಗ ಅವಳು ಅಮ್ಮಾ ಎಂದು ಆ ಮಗುವಿನ ಬಾಯಿಂದ ಕರೆಸಿಕೊಂಡಾಗ ಅಮ್ಮ ಆಗುವಳು ಎಂಬುದು ಎಷ್ಟು ಸತ್ಯವೋ.. ಪ್ರತೀಯೊಬ್ಬರೂ ಸಹ ಹೆಣ್ಣಿಗೆ ತಾಯಿಯ ಗೌರವ ನೀಡಿದರೆ ಆ ಹೆಣ್ಣಿಗೆ/ಸ್ತ್ರೀ'ಗೆ ಸಿಗುವ ಖುಷಿ ಅಪಾರ… ತಾಯಿ/ಅಮ್ಮನ ಬಗ್ಗೆ ವಿವರಿಸುತ್ತಾ ಸಾಗಿದರೆ ಅದು ಹರಿಯುವ ನದಿಯು ಹರಿಯುತ್ತಾ ಸಮುದ್ರವನ್ನು ಸೇರಿ ವಿಶಾಲ ಸ್ವರೂಪವನ್ನು ಪಡೆದುಕೊಳ್ಳುವುದಂತೂ ಸತ್ಯ.

ಅಮ್ಮ ಎಂದೇ ಎಲ್ಲದಕ್ಕಿಂತ ಮೊದಲು,ಅಮ್ಮನ ಒಡಲು ಪ್ರೀತಿಯ ಕಡಲು, ಪ್ರೀತಿ-ವಾತ್ಸಲ್ಯ-ಮಮತೆಯ ಮುಗಿಲು, ತಾಯಿಯ ಪ್ರೇಮ ಎಲ್ಲಕ್ಕಿಂತ ಮಿಗಿಲು... ಅಮ್ಮನನ್ನು ಪ್ರೀತಿಸಿ, ಅಮ್ಮನ ನೋವ ಮರೆಸಿ ಮೊಗದಲ್ಲಿ ನಗುವ ತರಿಸಿ...

-ಶಾಂತಾರಾಮ ಶಿರಸಿ, ಉತ್ತರ ಕನ್ನಡ

ಚಿತ್ರ ಕೃಪೆ: ಇಂಟರ್ನೆಟ್ ತಾಣ