ಅಯೋಧ್ಯಾ

ಅಯೋಧ್ಯಾ

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್ ಉಮೇಶ್
ಪ್ರಕಾಶಕರು
ಧಾತ್ರಿ ಪ್ರಕಾಶನ, ನ್ಯೂ ಕಾಂತರಾಜೇ ಅರಸು ರಸ್ತೆ, ಮೈಸೂರು-೫೭೦೦೦೯
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿ ಅದರ ಉದ್ಘಾಟನೆಯ ಶುಭ ಸಂದರ್ಭದಲ್ಲಿ ಬಿಡುಗಡೆಯಾದ ಕೃತಿ ಅಯೋಧ್ಯಾ. ಇದು ರಾಮನ ಇತಿಹಾಸವಲ್ಲ ; ರಾಮಮಂದಿರದ ಇತಿಹಾಸ ಎಂದು ಈ ಕೃತಿಯ ಲೇಖಕರಾದ ಎಸ್ ಉಮೇಶ್ ಅವರು ಪುಸ್ತಕದ ಮುಖಪುಟದಲ್ಲೇ ಅಚ್ಚುಹಾಕಿಸಿದ್ದಾರೆ. ಕೆಲ ಮಂದಿರಗಳಿಗೆ ಸಹಸ್ರ ವರ್ಷಗಳ ಪೌರಾಣಿಕ ಹಿನ್ನಲೆ ಇರುತ್ತದೆ. ಇನ್ನು ಕೆಲ ಮಂದಿರಗಳಿಗೆ ಶತಶತಮಾನಗಳ ಇತಿಹಾಸವಿರುತ್ತದೆ. ಆ ಮಂದಿರದ ವೈಭವ, ಅದರ ಮೇಲೆ ಎರಗಿದ ದಾಳಿಗಳು, ಅದರ ಜೀರ್ಣೋದ್ಧಾರದ ಸಂಕಲ್ಪ, ಅದಕ್ಕಾಗಿ ನಡೆದ ಹೋರಾಟಗಳು... ಹೀಗೆ ಹಲವು ಕಥನಗಳು ಗರಿಗೆದರುತ್ತವೆ.

ಭರತ ಖಂಡದ ಸಂಸ್ಕೃತಿ, ಪರಂಪರೆ, ಆಸ್ಥೆ, ಶ್ರದ್ಧೆಗಳ ಪ್ರತೀಕವಾಗಿರುವ ಅಯೋಧ್ಯೆಯ ಶ್ರೀರಾಮ ಮಂದಿರ, ಇಂಥ ಬರ್ಬರ ಇತಿಹಾಸ ಹಾಗೂ ಪೌರಾಣಿಕ ವೈಭವ ಹೊಂದಿರುವ ಒಂದು ಅಪ್ರತಿಮ ಪುಣ್ಯಕ್ಷೇತ್ರ ಅದರ ಹೋರಾಟ, ಸಂಕಲ್ಪ, ಸಾಕ್ಷಾತ್ಕರಿಸಿದ ರೀತಿಯನ್ನು ಜನಪ್ರಿಯ ಲೇಖಕ ಎಸ್.ಉಮೇಶ್ ಇಲ್ಲಿ ದಾಖಲಿಸಿದ್ದಾರೆ. ಉಮೇಶ್ ಅವರ ಬರವಣಿಗೆಯ ಶೈಲಿ ಯಾರನ್ನಾದರೂ ಆಕರ್ಷಿಸದೇ ಇರಲಾರದು. ಸುಲಲಿತವಾಗಿ ಒಂದು ಪುಟ್ಟ ಕಾದಂಬರಿಯಂತೆ ಇತಿಹಾಸದ ಪುಟಗಳಲ್ಲಿ ಅಡಗಿದ್ದ ನೈಜ ಕಥಾನಕವನ್ನು ಬಯಲು ಮಾಡುತ್ತಾ ಹೋಗಿದ್ದಾರೆ. 

ಖ್ಯಾತ ಪತ್ರಕರ್ತರಾದ ರವೀಂದ್ರ ಜೋಶಿಯವರು ಈ ಕೃತಿಗೆ ಮುನ್ನುಡಿಯನ್ನು ಬರೆಯುತ್ತಾ “ಭಾರತದ ವಿಶೇಷತೆ ಇರೋದೇ ಅಲ್ಲಿ ! ಇಲ್ಲಿಯ ಪ್ರತಿ ಶಿಲೆಯೂ ಹೇಗೆ ಕಥೆ ಹೇಳುತ್ತದೆಯೋ ಹಾಗೆಯೇ ಪ್ರತಿ ಗ್ರಾಮ, ಪ್ರತಿ ಶಹರ ಕೂಡ ಪುರಾಣ, ಇತಿಹಾಸದ ಸೊಗಡನ್ನು ತನ್ನ ಒಡಲಿನಲ್ಲಿ ಹುದುಗಿಸಿಕೊಂಡಿರುತ್ತದೆ. ಅಯೋಧ್ಯಾ ಎಂಬ ಈ ಅವಧನಗರಿಯೂ ಕೂಡ ಪ್ರಾಚೀನತೆಯಲ್ಲಿ ಪ್ರಾಚೀನವಾದ ಊರು. ಪುರಾಣ, ಇತಿಹಾಸ ಎರಡನ್ನೂ ಸಮನಾಗಿ ಅನುಭವಿಸಿದ, ಅನುಭವಿಸಿಯೂ ತನ್ಮ ಅಸ್ಮಿತೆಯನ್ನು ಕಳೆದುಕೊಳ್ಳದ ಅಪರೂಪದಲ್ಲಿ ಅಪರೂಪದ ನಗರಿ. 

ಸಾಹಿತಿ ಎಸ್ .ಉಮೇಶ್ ಇಲ್ಲಿಯ ಇತಿಹಾಸವನ್ನು ಜಿಜ್ಞಾಸುವಾಗಿ ಇಣುಕಿ ನೋಡಿದ್ದಾರೆ. ಸತ್ಯವನ್ನೂ ಒರೆಗೆ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಎಲ್ಲಿಯೂ ಪೂರ್ವಾಗ್ರಹ ಪ್ರೀಡಿತರಾಗದೆಯೇ, ತಮ್ಮ ವಿಚಾರಧಾರೆಯನ್ನು ಹೇರಲು ಹೋಗದೆ, ಚಿಕಿತ್ಸಕರಾಗಿ ಎಲ್ಲವನ್ನೂ ಬಣ್ಣಿಸಿದ್ದಾರೆ.

ಅಯೋಧ್ಯೆಯಷ್ಟು ತಳಮಳಗೊಂಡ ಮತ್ತೊಂದು ನಗರವಿಲ್ಲ. ಅದರಷ್ಟು ಕಲವಿಲಗೊಂಡಂಥ ಮತ್ತೊಂದು ಪಟ್ಟಣವಿಲ್ಲ. ಅದರಷ್ಟು ಕಲವಿಲಗೊಂಡಂಥ ಮತ್ತೊಂದು ಪಟ್ಟಣವಿಲ್ಲ. ಅಲ್ಲಿ ಘನ ಘೋರ ರಕ್ತಪಾತವಾಗಿದೆ. ಕನಸುಗಳೆಲ್ಲ ಛಿದ್ರವಿಛಿದ್ರಗೊಂಡು ಹನುಮಾನ್ ಗಡಿ ಮತ್ತಿತರ ಬೀದಿಯಲ್ಲಿ ಬಿದ್ದಿದೆ. ಒಂದು ಸಂಭ್ರಮಕ್ಕಾಗಿ, ಒಂದು ರಾಮರಾಜ್ಯಕ್ಕಾಗಿ ಲಕ್ಷೋಪಲಕ್ಷ ಮನಸ್ಸುಗಳು ತುಡಿದಿವೆ. ಅಂಥ ದುರಂತ ಅಧ್ಯಾಯಗಳ ಮೆಲುಕು ಈ ಕೃತಿ.” ಎಂದಿದ್ದಾರೆ.

ಲೇಖಕರಾದ ಎಸ್ ಉಮೇಶ್ ಅವರು ‘ನಾನೇಕೆ ಈ ಪುಸ್ತಕವನ್ನು ಬರೆದೆ?’ ಎಂಬ ತಮ್ಮ ಮುನ್ನುಡಿಯಲ್ಲಿ ಅವರಿಗೆ ಈ ಕೃತಿಯನ್ನು ಬರೆಯಲು ಸಿಕ್ಕ ಪ್ರೇರಣೆ, ಅನಿವಾರ್ಯತೆ, ಮಹಾನುಭಾವರ ಸಂಗ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಒಂದೆಡೆ ಅವರು ಬರೆಯುತ್ತಾರೆ “ಇಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಗೊಂಡಿದೆ. ಅಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಟೆಯಾಗಿದೆ. ಈ ದೇಶದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ನಾವೇಕೆ ಇಷ್ಟು ಸಂಭ್ರಮ ಪಡಬೇಕು? ಎಂದು ಕೇಳುವ ಕೆಲವು ಮೂರ್ಖರಿದ್ದಾರೆ. ಬಹುಷಃ ಅವರಿಗೆ ಇತಿಹಾಸದ ಅರಿವು ಇರಲಿಕ್ಕಿಲ್ಲ. 

ಸುಮ್ಮನೆ ಯೋಚನೆ ಮಾಡಿ, ಎಂಟು ಸಾವಿರ ವರ್ಷಗಳ ನಂತರವೂ ಒಬ್ಬ ವ್ಯಕ್ತಿ ಈ ದೇಶದಲ್ಲಿ ಆದರ್ಶ ಪುರುಷನಾಗಿ ಕಂಗೊಳಿಸುತ್ತಿದ್ದಾನೆ. ಇಡೀ ಜಗತ್ತನ್ನು ಪ್ರೇರೇಪಿಸುತ್ತಿದ್ದಾನೆ ಎಂದರೆ ಅದೇನು ಸಾಮಾನ್ಯದ ಸಂಗತಿಯೇ? ವ್ಯಕ್ತಿಯೊಬ್ಬ ಸಾಮಾನ್ಯ ಮನುಷ್ಯನಾಗಿ ಹುಟ್ಟಿ ತನ್ನ ಸತ್ಕರ್ಮ, ನ್ಯಾಯ, ನೀತಿ, ಧರ್ಮ, ನಿಷ್ಟೆಯಿಂದಲೇ ದೈವತ್ವಕ್ಕೇರಿ ಮರ್ಯಾದಾ ಪುರುಷೋತ್ತಮನಾದ ಮತ್ತೊಂದು ಉದಾಹರಣೆ ಈ ಜಗತ್ತಿನಲ್ಲಿ ಇಲ್ಲ. ಇದೇ ಕಾರಣಕ್ಕೆ ಶ್ರೀರಾಮ ಇಂದು ಕೇವಲ ಭಾರತವಷ್ಟೇ ಅಲ್ಲ, ಜಗತ್ತಿನ ಐಕಾನ್ ಆಗಿ ಕಂಗೊಳಿಸುತ್ತಿದ್ದಾನೆ. ಇನ್ನು ಸತತ ಐದುನೂರು ವರ್ಷಗಳ ಕಾಲ ಆತ ಜನ್ಮತಾಳಿದ ಜಾಗದಲ್ಲಿ ಆತನಿಗೊಂದು ಮಂದಿರ ಕಟ್ಟಬೇಕು ಎಂದು ಹೋರಾಡಿ ಲೆಕ್ಕವಿಲ್ಲದಷ್ಟು ತ್ಯಾಗ ಬಲಿದಾನಗಳನ್ನು ಮಾಡಿದ ಆತನ ಭಕ್ತರ ಶ್ರದ್ಧೆ, ಭಕ್ತಿ, ನಂಭಿಕೆ ಅದೆಂಥದ್ದಿರಬೇಡ? ಅದು ಮತ್ತೊಂದು ಸೋಜಿಗ.” 

ಕೃತಿಕಾರ ಎಸ್ ಉಮೇಶ್ ಅವರು ತಾವು ಬಾಲ್ಯದಲ್ಲಿ ಕಂಡ ರಾಮರಥ, ಅದರ ಹಿಂದೆ ಓಡಿದ ನೆನಪು, ರಾಮ ಪಾದುಕೆಗೆ ಜಯಘೋಷ ಹಾಕಿದ್ದು , ಮಂದಿರಕ್ಕಾಗಿ ರಾಮನ ಹೆಸರು ಬರೆದ ಇಟ್ಟಿಗೆ ಕಳಿಸುವಾಗ ‘ಜೈ ಶ್ರೀರಾಮ್' ಎಂದು ಘೋಷಣೆ ಹಾಕಿದ್ದು ಎಲ್ಲಾ ಸಂಗತಿಗಳನ್ನು ನೆನಪು ಮಾಡಿಕೊಂಡಿದ್ದಾರೆ. ಈ ಪುಸ್ತಕಕ್ಕಾಗಿ ಮಾಹಿತಿ ಸಂಗ್ರಹಿಸಲು ರಾಮಮಂದಿರದ ಟ್ರಸ್ಟಿ ಆಗಿದ್ದ ಪೇಜಾವರ ಶ್ರೀಗಳಾದ ವಿಶ್ವ ಪ್ರಸನ್ನ ತೀರ್ಥರನ್ನು ಭೇಟಿಯಾದಾಗ ಅವರು ನಾಗರಕಟ್ಟೆ ಗೋಪಾಲ್ ಜೀ ಎನ್ನುವ ವಿಶ್ವಹಿಂದೂ ಪರಿಷತ್ತಿನ ಕಟ್ಟಾಳುವನ್ನು ಪರಿಚಯ ಮಾಡಿಕೊಡುತ್ತಾರೆ. ಅವರ ಜೊತೆ ರಾಮ ಜನ್ಮ ಭೂಮಿ ಟ್ರಸ್ಟ್ ನ ರಾಷ್ಟ್ರೀಯ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಪ್ರಧಾನಿ ಮೋದಿಯವರ ಆಪ್ತ ಸಹಾಯಕರಾಗಿದ್ದ ನೃಪೇಂದ್ರ ಮಿಶ್ರರವರು. ಇವರೆಲ್ಲರ ಸಾಂಗತ್ಯದಿಂದ ದೊರೆತ ವಿಷಯಗಳನ್ನು ಬಹಳ ಆಸ್ಥೆಯಿಂದ ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. 

‘ಒಂದು ಚಿತ್ರ ನೂರು ಪದಗಳಿಗೆ ಸಮ' ಎಂಬ ಮಾತು ಇದೆ. ಅದನ್ನು ಯಥಾವತ್ತಾಗಿ ಜಾರಿಗೆ ತಂದಿದ್ದಾರೆ ಎಸ್ ಉಮೇಶ್ ಅವರು. ಅವರ ಈ ಕೃತಿಯಲ್ಲಿ ಬಹುತೇಕ ಪ್ರತೀ ಪುಟದಲ್ಲೂ ರಾಮಮಂದಿರಕ್ಕೆ ಸಂಬಂಧ ಪಟ್ಟ ಛಾಯಾ ಚಿತ್ರಗಳಿವೆ. ಅಪರೂಪದಲ್ಲಿ ಅಪರೂಪವಾಗಿರುವ ಚಿತ್ರಗಳೂ ಇವೆ. ಈ ಕೃತಿಯಲ್ಲಿ ಅವರು ಊರಿಗೊಬ್ಬ ರಾಮ, ಪೂಜೆಗೊಬ್ಬ ಹನುಮ, ಶ್ರೀರಾಮ ಹೇಗೆ ಮತ್ತು ಏಕೆ ಪ್ರಸ್ತುತ?, ರಾಮಾಯಣ ಕಾಲದ ಅಯೋಧ್ಯೆ ಹೇಗಿತ್ತು?, ಈತ ಕೇವಲ ಬಾಬರಿ ಮಸೀದಿ ಕಟ್ಟಲಿಲ್ಲ, ಹಿಂದೂ ಧರ್ಮದ ಅವನತಿಗೆ ಪಿತೂರಿ ಮಾಡಲಾರದವರೇ ಇಲ್ಲ, ಶ್ರೀರಾಮ ಪ್ರತ್ಯಕ್ಷನಾದ ಆ ನಿಗೂಢ ಘಟನೆ, ಹಿಂದೂ ಸ್ವಾಭಿಮಾನಕ್ಕೆ ಕಿಡಿ ಹಚ್ಚಿದರು, ರಾಮಮಂದಿರಕ್ಕೆ ಮೊದಲ ಇಟ್ಟಿಗೆ, ಮಂದಿರವಲ್ಲೇ ಕಟ್ಟುವೆವು, ರಾಜೀವ್ ಗಾಂಧಿಗೆ ಅತ್ತ ದರಿ-ಇತ್ತ ಪುಲಿ, ಹನುಮನ ಪವಾಡದ ಎರಡು ಘಟನೆಗಳು, ಸುಪ್ರೀಂ ತೀರ್ಪಿನಲ್ಲಿ ಏನಿದೆ?, ನಾ ಕಂಡ ಅಯೋಧ್ಯೆ ಮುಂತಾದ ಆಸಕ್ತಿದಾಯಕ ೨೩ ಅಧ್ಯಾಯಗಳಿವೆ. 

ಸುಮಾರು ೨೨೫ ಪುಟಗಳ ಅಯೋಧ್ಯಾ ಕೃತಿಯನ್ನು “ಐದು ಶತಮಾನಗಳ ರಾಮಜನ್ಮಭೂಮಿ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದ ಸಾವಿರಾರು ರಾಮಭಕ್ತರಿಗೆ, ಕರಸೇವಕರಿಗೆ ಮತ್ತು ಸಾಧು ಸಂತರಿಗೆ ಸಮರ್ಪಣೆ ಮಾಡಿದ್ದಾರೆ.  ಬಹಳ ಮುತುವರ್ಜಿಯಿಂದ ಎಸ್ ಉಮೇಶ್ ಅವರು ಅಯೋಧ್ಯಾ ರಾಮಮಂದಿರದ ಕಥೆಯನ್ನು ಹೇಳಹೊರಟಿದ್ದಾರೆ. ಅವರ ಈ ಪ್ರಯಾಣದಲ್ಲಿ ನಾವೂ ಅವರೊಂದಿಗೆ ಭಾಗಿಯಾಗುವ.