ಅಯೋಧ್ಯೆ, ಗಾಂಧಿ, ಕಾಮನ್‌ವೆಲ್ತ್
"ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣಿಂದೆತ್ತ ಸಂಬಂಧವಯ್ಯಾ? ಎತ್ತಣ ಅಯೋಧ್ಯೆ, ಎತ್ತಣ ಗಾಂಧಿ, ಎತ್ತಣ ಕಾಮನ್‌ವೆಲ್ತ್, ಆನಂದ್ರಾಮಯ್ಯಾ?"
"ಸಂಬಂಧವಿದೆ ಮಿತ್ರರೇ. ಮೊನ್ನೆ ಅಯೋಧ್ಯೆ ವಿವಾದದ ತೀರ್ಪು ಬಂತು; ಇಂದು ಗಾಂಧಿಜಯಂತಿ; ನಾಳೆಯಿಂದ ಕಾಮನ್‌ವೆಲ್ತ್ ಕ್ರೀಡಾಕೂಟ ಆರಂಭ."
"ಇಷ್ಟೇನಾ ಸಂಬಂಧ? ಕ್ಯಾಲೆಂಡರ್ ಬಂಧ!"
"ಇಷ್ಟೇ ಅಲ್ಲ, ಬಂಧುಗಳೇ, ಇನ್ನೂ ಇದೆ. ಭಾರತದ ಭವಿಷ್ಯವನ್ನು ಹೊಸೆಯುವ ಮತ್ತು ಭಾರತೀಯರ ಹೃದಯಗಳನ್ನು ಬೆಸೆಯುವ ಸಂಬಂಧವಿದೆ."
"ಅದೇನಪ್ಪಾ, ಅಂತಹ ಸಂಬಂಧ? ಅದ್ಹೇಗಪ್ಪಾ, ಬೆಸೆಯುವ ಬಂಧ?"
"ಹೌದು. ಮೊನ್ನೆಯ ತೀರ್ಪಿನಲ್ಲಿ ಸೂರ್ಯವಂಶೀಯ ಶ್ರೀರಾಮಚಂದ್ರನನ್ನು ಒಪ್ಪಿಕೊಳ್ಳಲಾಗಿದೆ, ಅಪ್ಪಿಕೊಳ್ಳಲಾಗಿದೆ. ಅದೇ ವೇಳೆ, ಚಂದ್ರನ ಗುರುತಿನ ಮುಸ್ಲಿಮ್ ಸಮುದಾಯಕ್ಕೂ ಮನ್ನಣೆ ನೀಡಲಾಗಿದೆ. ಇಂದು ನಾವು ಜಯಂತಿ ಆಚರಿಸುತ್ತಿರುವ ಗಾಂಧೀಜಿ, ’ಈಶ್ವರ ಅಲ್ಲಾ ತೇರೋ ನಾಮ್’, ಎಂದವರು; ರಾಮರಾಜ್ಯದ ಕನಸು ಕಂಡವರು. ನಾಳೆ ಆರಂಭಗೊಳ್ಳುವ ಕಾಮನ್‌ವೆಲ್ತ್ ಕ್ರೀಡಾಕೂಟವು ಎಂತಹ ಅವಕಾಶವೆಂದರೆ, ಭಾರತೀಯರ ಸ್ನೇಹ, ಸೌಹಾರ್ದ, ಕ್ರೀಡಾಮನೋಭಾವ, ವಿಭಿನ್ನತೆಯಲ್ಲೂ ಏಕತೆ(ಯು ಭಾರತೀಯರಿಗೆ ನೀಡಿರುವ ಅದ್ಭುತ ಶಕ್ತಿ) ಇವುಗಳನ್ನು ಭಾರತೀಯರು ಸ್ವಯಂ ಮನಗಾಣುವುದು ಮಾತ್ರವಲ್ಲ, ವಿಶ್ವಕ್ಕೇ ಸಾರಲು ಒದಗಿರುವ ಸದವಕಾಶ."
"ಹೌದಲ್ವೆ!"
"ಹ್ಞೂಂ. ಒಂದರ ಹಿಂದೊಂದು ಕೂಡಿಬಂದಿರುವ ಈ ಮೂರು ಸಂದರ್ಭಗಳನ್ನು ಒಟ್ಟಾಗಿ ಭಾವಿಸಿ ನಾವಿಂದು, ವಿಭಿನ್ನ ಮತ-ಸಂಸ್ಕೃತಿಗಳ ನಡುವೆಯೂ, ಒಂದಾಗಿ ಮುನ್ನಡೆವ ಮತ್ತು ಒಂದಾದ ಸಂಕಲ್ಪದಿಂದ ದೇಶವನ್ನು ಮುನ್ನಡೆಸುವ ಮನಸ್ಸನ್ನೇಕೆ ಮಾಡಬಾರದು? ಮೇಲೆ ಹೇಳಿದ ಮೂರು ಸಂದರ್ಭಗಳ ಬಂಧವು ನಮಗೆ ಈ ದಿಸೆಯಲ್ಲಿ ಹೊಸದೊಂದು ಹುಮ್ಮಸ್ಸನ್ನು ಮತ್ತು ಸ್ಫೂರ್ತಿಯನ್ನು ಏಕೆ ನೀಡಬಾರದು? ಎಲ್ಲೋ ಇದ್ದ ಕೋಗಿಲೆಯು ಇನ್ನೆಲ್ಲೋ ಇರುವ ಮಾಮರದ ಮೇಲೆ ಬಂದು ಕುಳಿತು ಧ್ವನಿಗೈಯುತ್ತದೆ. ಇಲ್ಲೇ ಅಕ್ಕಪಕ್ಕದಲ್ಲಿರುವ ನಾವೆಲ್ಲ ಒಮ್ಮನಸ್ಸಿನಿಂದ ಏಕೆ ಬಾಳಬಾರದು? ಒಂದೇ ಧ್ವನಿಯನ್ನೇಕೆ ಹೊರಹೊಮ್ಮಿಸಬಾರದು?"