ಅಯೋಧ್ಯೆ ಪರ್ವಕ್ಕೆ ಭಾವೈಕ್ಯತೆಯ ಸ್ವಾಗತ

ಅಯೋಧ್ಯೆ ಪರ್ವಕ್ಕೆ ಭಾವೈಕ್ಯತೆಯ ಸ್ವಾಗತ

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಪ್ರಾಣಪ್ರತಿಷ್ಟಾಪನೆ ಅದ್ದೂರಿ ಹಾಗೂ ಸಾಂಗೋಪಾಂಗವಾಗಿ ಸಂಪನ್ನಗೊಂಡಿತು. ಗಣ್ಯಾತಿಗಣ್ಯರು ಪಾಲ್ಗೊಂಡಿದ್ದಂಥ ರಾಮ ಮಂದಿರ ಆವರಣದಲ್ಲಿ ವಿಜೃಂಭಣೆಗೇನೂ ಕೊರತೆಯೇ ಇದ್ದಿರಲಿಲ್ಲ. ಇಂಥದ್ದೊಂದು ವ್ಯವಸ್ಥಿತ ಸಮಾರಂಭದ ಹಿಂದೆ ಸರಕಾರ ಇದ್ದಿದ್ದರಿಂದ ಅಲ್ಲಿ ಅಂಥ ಲೋಪಗಳೂ ಕಂಡುಬರಲಿಲ್ಲ. ಆದರೆ, ಈ ಐತಿಹಾಸಿಕ ಸಮಾರಂಭದ ವೇಳೆ ಬೀದಿಬೀದಿಗಳಲ್ಲಿ ಭಾರತದ ಭವ್ಯ ಪರಂಪರೆಯ, ಸಾಂಸ್ಕೃತಿಕ ಸೌಂದರ್ಯ ಪ್ರಕಟಗೊಂಡಿರುವುದು ನಿಜಕ್ಕೂ ಸೋಜಿಗ.

ಬಹುಸಂಖ್ಯಾತ ಹಿಂದೂಗಳಿಗೆ ಅಯೋಧ್ಯೆಯಲ್ಲಿ ರಾಮ ಹುಟ್ಟಿದ, ಅವನಿಗೊಂದು ಭವ್ಯ ಮಂದಿರ ನಿರ್ಮಿಸಬೇಕೆಂಬ ಕನಸು ಹಲವು ಶತಮಾನಗಳಿಂದ, ಸಾಮಾಜಿಕ, ಕಾನೂನಾತ್ಮಕ ಹಾಗೂ ರಾಜಕೀಯ ಕಾರಣಗಳಿಂದ ಸಾಕಾರಗೊಂಡಿರಲಿಲ್ಲ. ಸುದೀರ್ಘ ಕಾಯುವಿಕೆ ಬಳಿಕ ಲಭಿಸುವ ಯಾವುದೇ ಕಾರಣಗಳಿಂದ ಸಾಕಾರಗೊಂಡಿರಲಿಲ್ಲ. ಸುದೀರ್ಘ ಕಾಯುವಿಕೆ ಬಳಿಕ ಲಭಿಸುವ ಯಾವುದೇ ಸಂಗತಿಗೂ ಮೌಲ್ಯ ಹೆಚ್ಚು. ಆ ಕಾರಣಕ್ಕಾಗಿಯೇ ಬಹುಸಂಖ್ಯಾತ ಸಮುದಾಯ ಭಾವುಕತೆಗೆ ಜಾರಿತ್ತು. ರಾಮ ಹುಟ್ಟಿದ್ದು ತಮ್ಮ ಮನೆಯಲ್ಲಿಯೇ ಎಂಬಂತಿತ್ತು ಹಲವರ ಉತ್ಸಾಹ. ರಂಗೋಲಿ ಹಾಕಿ, ರಾಮನನ್ನು ಧ್ಯಾನಿಸಿದ್ದಷ್ಟೇ ಅಲ್ಲ, ಪಾನಕ ಹಂಚಿಕೆ, ಅನ್ನದಾನದಂತಹ ಸೇವೆಗಳ ಮೂಲಕವೂ ಈ ಐತಿಹಾಸಿಕ ಸಡಗರಕ್ಕೆ ಸಾರ್ಥಕತೆ ತಂದುಕೊಟ್ಟವು. 

ಹಿಂದೂಗಳ ಈ ಸಂಘಟಿತ ಸಡಗರ ಕಂಡಾಗ ಅಯೋಧ್ಯೆ ಭವಿಷ್ಯದಲ್ಲಿ ನಿರೀಕ್ಷೆಯಂತೆ ದೇಶದ ಅತಿ ದೊಡ್ಡ ಸಾಂಸ್ಕೃತಿಕ ಪರಂಪರಾ ಕೇಂದ್ರವಾಗುವುದರಲ್ಲಿ ಅನುಮಾನವಿಲ್ಲ. ರಾಮಭಕ್ತಿಯ ಪಾರಾಯಣ ಮಾಡುವವರ ಜತೆಜತೆಗೆ ಕಲೆ, ಸಂಗೀತ, ಪ್ರವಾಸಪ್ರಿಯರಿಗೂ ಅಯೋಧ್ಯೆ ಬಹುದೊಡ್ಡ ಸೆಳೆತವೇ ಆಗಬಹುದು. ಭಾರತೀಯರ ಪಾಲಿಗೆ ಅಯೋಧ್ಯೆ ಪರಂಪರೆಯ ಗುರುತು ಆಗಿರುವುದು ಬಹುಸಂಖ್ಯಾತರಲ್ಲೂ ವಿಶ್ವಾಸ ಹೆಚ್ಚಿಸಿದೆ.

ಇದನ್ನೆಲ್ಲ ಸ್ವಾಗತಿಸುತ್ತಲೇ, ಇತರೆ ಸಮುದಾಯಗಳು ರಾಮನ ಲೋಕಾರ್ಪಣೆಯ ಸಡಗರದಲ್ಲಿ ಭಾಗಿಯಾಗಿರುವುದು ಈ ನೆಲದ ಭಾವೈಕ್ಯ, ಸೌಂದರ್ಯಕ್ಕೆ ಸಾಕ್ಷಿ. ‘ರಾಮ ಜನ್ಮಭೂಮಿ ಹಿಂದೂಗಳಿಗೆ ಸೇರಿದ್ದು' ಎಂದು ಸುಪ್ರೀಂ ಕೋರ್ಟ್ ಅಂತಿಮ ಐತಿಹಾಸಿಕ ತೀರ್ಪು ಪ್ರಕಟಿಸಿದಾಗಲೂ ಭಾರತ ಇಂಥದ್ದೇ ಒಮ್ಮತದ ಸ್ವಾಗತ ಕೋರಿದ್ದನ್ನು ಮರೆಯಲಾಗದು. ಇದೇ ಅಯೋಧ್ಯೆಯ ಹೊರವಲಯದಲ್ಲಿ ಕೋರ್ಟಿನ ನಿರ್ದೇಶನದ ಮೇರೆಗೆ ಮಸೀದಿಯೂ ನಿರ್ಮಾಣಗೊಳ್ಳುತ್ತಿದೆ. ಇದನ್ನೂ ಆಡಳಿತ ವ್ಯವಸ್ಥೆ ಸಂತಸದಿಂದಲೇ ಸ್ವಾಗತಿಸಬೇಕಿದೆ. ರಾಜಕೀಯ ಭಿನ್ನಾಭಿಪ್ರಾಯ ಮರೆತು, ಹಳತನ್ನು ಹಿಡಿದು ಜಗ್ಗದೆ, ಸಮನ್ವಯತೆ ಕಾಪಾಡುವ ಸಾಮರಸ್ಯಭಾವ ಮುಂದಿನ ಬೆಳವಣಿಗೆಗಳಲ್ಲೂ ಮೇಲ್ಪಂಕ್ತಿ ಹಾಕಿಕೊಡುವಂತಾಗಲಿ. ರಾಮರಾಜ್ಯದ ಗುಣ ಇದೇ ಅಲ್ಲವೇ?

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೩-೦೧-೨೦೨೪ 

ಚಿತ್ರ ಕೃಪೆ: ಅಂತರ್ಜಾಲ ತಾಣ