ಅಯೋಧ್ಯೆ -ವಿನಾಶಕಾರಿ ವೋಟ್ ಬ್ಯಾಂಕ್ ರಾಜಕೀಯ

ಅಯೋಧ್ಯೆ -ವಿನಾಶಕಾರಿ ವೋಟ್ ಬ್ಯಾಂಕ್ ರಾಜಕೀಯ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಮಧು ಲಿಮಯೆ, ಅನುವಾದ: ಹಸನ್ ನಯೀಂ ಸುರಕೋಡ
ಪ್ರಕಾಶಕರು
ಲೋಹಿಯಾ ಪ್ರಕಾಶನ, ಬಳ್ಳಾರಿ
ಪುಸ್ತಕದ ಬೆಲೆ
ರೂ. ೨೫.೦೦, ಮುದ್ರಣ: ೨೦೦೬

ಅಯೋಧ್ಯೆ -ವಿನಾಶಕಾರಿ ವೋಟ್ ಬ್ಯಾಂಕ್ ರಾಜಕೀಯ ಎಂಬ ಪುಸ್ತಕದ ಮೂಲ ಲೇಖಕರು ಮಧು ಲಿಮಯೆ. ಭಾರತದ ಹಿರಿಯ ಸಮಾಜವಾದಿ ಚಿಂತಕ ಮಧು ಲಿಮಯೆ ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು. ತಮ್ಮ ೧೮ನೆಯ ಪ್ರಾಯದಲ್ಲಿ ಜೈಲಿನ ರುಚಿ ಕಂಡವರು. ಮುಂದೆ ಜೈಲಿಗೆ ಹೋಗುವುದು ಮಾಮೂಲಾಗಿ ಬಿಟ್ಟಿತು. ‘ಭಾರತದಿಂದ ತೊಲಗಿ' ಆಂದೋಲನದ ಕಾಲದಲ್ಲಿ ಭೂಗತರಾದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ೧೮ ತಿಂಗಳ ಕಾಲ ಜೈಲಿನಲ್ಲಿ ಬಂದಿಯಾಗಿದ್ದರು. 

ಲೋಕಸಭೆಗೆ ನಾಲ್ಕು ಸಲ ಆಯ್ಕೆಯಾಗಿ ಅಪ್ರತಿಮ ಸಂಸದೀಯ ಪಟು ಎನಿಸಿಕೊಂಡರು. ಡಾ. ರಾಮ ಮನೋಹರ ಲೋಹಿಯಾ ಹಾಗೂ ಜಯಪ್ರಕಾಶ ನಾರಾಯಣ ಅವರಿಂದ ಪ್ರಭಾವಿತರಾಗಿದ್ದ ಲಿಮಯೆ ಮರಾಠಿ ಮತ್ತು ಇಂಗ್ಲಿಷ್ ನಲ್ಲಿ ಸುಮಾರು ೩೦ ಕೃತಿಗಳನ್ನು ರಚಿಸಿದರು. ಅಷ್ಟೇ ಅಲ್ಲದೆ ಹಿಂದಿಯಲ್ಲಿ ಅವರು ಬರೆದ ಕೃತಿಗಳೆಂದರೆ ‘ರಾಜಕೀಯಕ್ಕೆ ಒಂದು ಹೊಸ ತಿರುವು;, ಮಾರ್ಕ್ಸ್ ವಾದ ಹಾಗೂ ಗಾಂಧಿವಾದ, ಸ್ವಾತಂತ್ರ್ಯ ಹೋರಾಟದ ವಿಚಾರಧಾರೆ.. ಇತ್ಯಾದಿ.

ಪುಸ್ತಕದ ಬೆನ್ನುಡಿಯ ಬರಹ ಈ ರೀತಿ ಇದೆ. “ಲೋಹಿಯಾ ಬದುಕಿದ್ದಿದ್ದರೆ ಅವರು ಅಯೋಧ್ಯೆ ವಿವಾದ ಕುರಿತು ಹೇಗೆ ಚಿಂತನೆ ಮಾಡಬಹುದಿತ್ತೋ ಹಾಗೆಯೇ ಮಧು ಲಿಮಯೆ ಚಿಂತನೆ ಮಾಡಿದರು. ತಮ್ಮ ಜನಪ್ರಿಯತೆಗೆ ಧಕ್ಕೆಯೊದಗೀತೆಂದು ಸತ್ಯ ಸಂಗತಿಗಳನ್ನು ತಿರುಚುವ ಇಲ್ಲಾ ಮುಚ್ಚಿಡುವ ಹುನ್ನಾರಗಳನ್ನು ರೂಪಿಸುವ ರಾಜಕಾರಣಿಗಳನ್ನು ಕಂಡರೆ ಅವರು ಕೆಂಡ ಕಾರಿದವರು. ಇದಕ್ಕೆ ಲಿಮಯೆ ಅವರು ೧೯೯೨ರ ಜನವರಿಯಿಂದ ಡಿಸೆಂಬರ್ ವರೆಗಿನ ಪ್ರಕ್ಷುಬ್ಧ ಕಾಲಾವಧಿಯಲ್ಲಿ ಅಯೋಧ್ಯೆ ವಿವಾದದ ಹಿನ್ನಲೆ ಮುನ್ನಲೆ ಕುರಿತು ಬರೆದ ಲೇಖನಗಳೇ ಸಾಕ್ಷಿ.

ಲೋಹಿಯಾರಂತೇ ಲಿಮಯೆ ಅವರ ತಲೆಯು ಚುರುಕಾಗಿತ್ತು. ಆದರೆ ಹೃದಯ ಶ್ರೀಮಂತವಾಗಿತ್ತು. ಭಾರತೀಯರ ಮನಸ್ಸಾಕ್ಷಿಯ ರಕ್ಷಕರಂತಿದ್ದ ಲಿಮಯೆ ಅವರ ಚಿಂತನೆ ದೇಶದ ಪ್ರಸಕ್ತ ಸಂದರ್ಭದಲ್ಲಿ ತುಂಬ ಪ್ರಸ್ತುತವೆನಿಸುವುದರಲ್ಲಿ ಸಂದೇಹವಿಲ್ಲ.”

ಅನುವಾದಕರಾದ ಹಸನ್ ನಯೀಂ ಸುರಕೋಡ ಇವರು ತಮ್ಮ ಪ್ರಸ್ತಾವನೆಯಲ್ಲಿ ಬರೆಯುತ್ತಾರೆ “ ಕಳೆದ ನಲವತ್ತು ವರ್ಷಗಳಿಂದ ತಮ್ಮ ದೇಶ ಇತಿಹಾಸದಲ್ಲಿ ಬದುಕುವುದನ್ನು ಕಲಿಯತೊಡಗಿದೆ. ಇತಿಹಾಸದ ಅರಿವಿಗೆ ಮಾತ್ರ ಗತಕಾಲದ ನೆನಪುಗಳಿರುತ್ತವೆ. ವರ್ತಮಾನದ ಸಂಕಟಗಳು ಮತ್ತು ಭವಿಷ್ಯದ ಹೆದರಿಕೆ ಇರುತ್ತದೆ. ಅಲ್ಲದೆ ನಿರಂತರವಾದ ಸತ್ಯದ ಅನ್ವೇಷಣೆಯಿಂದಾಗಿ ಇತಿಹಾಸಕ್ಕೆ ಮರೆವು ಗೊತ್ತಿಲ್ಲ. ಪುರಾತನ ಅವಶೇಷಗಳು, ಹಳೆಯ ಕಟ್ಟಡಗಳು, ಕಡತಗಳು, ಓಲೆಗರಿಯ ಪುಸ್ತಕಗಳು ಇವೆಲ್ಲ ಹಳೆಯ ನೆನಪುಗಳನ್ನು ಜೀವಂತವಾಗಿಸುತ್ತವೆ. ವರ್ತಮಾನದ ದೃಷ್ಟಿ ಕ್ರೂರವಾದದ್ದು. ಹಳೆಯ ಕಾಳಗಗಳು, ಹಳೆಯ ಅಪಮಾನ, ಸೋಲುಗಳು, ಹಳೆಯ ಪ್ರೀತಿ ಅಭಿಮಾನಗಳು ಇವೆಲ್ಲ ಇತಿಹಾಸದ ನೆನಪಿನಿಂದ ಜೀವಂತವಾಗುತ್ತವೆ. ವರ್ತಮಾನದ ಸಂದರ್ಭದಲ್ಲಿ ಬಂದು ಏನೇನನ್ನೋ ಬೇಡುತ್ತವೆ, ಕಾಡುತ್ತವೆ, ಇತಿಹಾಸದ ದಿಕ್ಕು ಬದಲಾದುದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸುತ್ತವೆ.”

ಪರಿವಿಡಿಯಲ್ಲಿ ೧೦ ಅಧ್ಯಾಯಗಳಿವೆ. ಸುಮಾರು ೭೦ ಪುಟಗಳ ಈ ಪುಸ್ತಕವನ್ನು ಅನುವಾದಕರು ರಾಮದುರ್ಗದ ಗೆಳೆಯರ ಬಳಗ ಹಾಗೂ ಗೋಕಾಕದ ಸಮಾಜವಾದಿ ಚಿಂತನ ವೇದಿಕೆಯ ಸದಸ್ಯರಿಗೆ ಅರ್ಪಿಸಿದ್ದಾರೆ.