ಅರಗಿಸುವ ಉದರ

ಅರಗಿಸುವ ಉದರ

ದುಃಖದ ಎದೆಯ ಮೇಲಿನ 
ಮೌನ ಸಂವಾದ, 
ಬೇಕೆಂದು ಕೇಳಿದ್ದು
ಹೊಟ್ಟೆಯ ಸುಖವನ್ನೇ ?

ರಾಕ್ಷಸ ಹೊಟ್ಟೆ, 
ರಟ್ಟೆಗೆಷ್ಟು ಕೆಲಸ ಕೊಡುತ್ತಿದೆ,
ಬಿಟ್ಟೆನೆಂದರೂ ಬಿಡದೀ ಹೊಟ್ಟೆ,

ಹೊತ್ತಿ ಉರಿಯುವ 
ಉದರದೊಳಗಿನ ವಿಲಯಾಗ್ನಿ 
ಭಗ್ನವಾಗುವುದೆಂದು ನಂಬಿದರದು 
ಬರೀ ಪೊಳ್ಳು ಭರವಸೆ 

ಒಬ್ಬ ಭಕಾಸುರನೆಂಬುವವನಿದ್ದ!!!
ಹೇಳಿದ್ಯಾರು ??
ಎಲ್ಲಾ ಭಕಾಸುರರೆ, ಹೊಟ್ಟೆಗಾಗಿ,

ಇಲ್ಲಿಯವರೆಗೂ ಬಟ್ಟೆಗೂ 
ಹೊಡೆದಾತವಿತ್ತು,
ಇನ್ನು ಅದಿಲ್ಲ, 
ಬಟ್ಟೆ ಹಾಕಿದಂತೆ ನಟಿಸುವುದೇ 
ಜಾಗತೀಕರಣದ ಒಳಗುಟ್ಟು 

ಹುಟ್ಟೋ ಸಂತತಿಯೆಲ್ಲ 
ಮತ್ತೊಮ್ಮೆ ಆದಿಯೆಡೆಗೆ 
ಹೊಟ್ಟೆಗಿಲ್ಲದ
ಬಟ್ಟೆ ಇರದ,
ದಿಟ್ಟ ದಿನಗಳೆಡೆಗೆ,

ಎಷ್ಟೆಂದು ಮುಚ್ಚಿತ್ತು ಕಾಯುವುದು,
ಬಾಯಿ, ಮೈ ಯಾ 
ಚಪಲವನು ?
ದಿಕ್ಕರಿಸಿ, ಗುಡುಗಲೇ ಬೇಕು 

ಜಗವ ಗೆದ್ದವನಿರಬಹುದು 
ಹೊಟ್ಟೆಯನು ಗೆದ್ದವನಿಹನೇ?
ಅದರೊಳಗಿನ, ಮುಗಿಯದ 
ಭಕಾಸುರನನ್ನು ಗೆದ್ದವನಿಹನೇ?

ವರ್ಷಗಳಿಂದಾ ಕೂಡಿತ್ತಿದ್ದು 
ಇದೆಯೇ ಅಲ್ಲಿ,,,,,
ಹ್ಹ ಹ್ಹ , ಹೊಟ್ಟೆಯ ನಾಟಕವದು 
ತಿಂದಂತೆ ನಟಿಸಿ,
ಮತ್ತಷ್ಟು ಬೇಕೆನ್ನುವುದು,

ಆದಿಯಿಂದಲೂ 
ಅಂತ್ಯದ ವರೆಗೂ 
ಹೊಟ್ಟೆ ಮಾತ್ರ ಸತ್ಯ,
ಸಾಯುವ ಕೊನೆಗಳಿಗೆಯಲಿ 
ಹೊಟ್ಟೆ ಮಾತ್ರ ಬರುವುದು 
ಇನ್ಯಾವುದಲ್ಲ,

-- ಜೀ ಕೇ ನ 
 

Comments

Submitted by makara Tue, 07/15/2014 - 17:50

ನಮ್ಮ ಚಿಕ್ಕಂದಿನಲ್ಲಿ ಒಂದು ಪದ್ಯವಿತ್ತು. ಎಲ್ಲರೂ ಮಾಡುವುದು ಗೇಣು ಹೊಟ್ಟೆಗಾಗಿ ಮಾರು ಬಟ್ಟೆಗಾಗಿ. ಬಹುಶಃ ಇಂದಿನ ಕಟ್ ಅಂಡ್ ಪೇಸ್ಟ್ ಯುಗದಲ್ಲಿ ಅದನ್ನು ಎಲ್ಲರೂ ಮಾಡುವುದು ಮಾರು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ತಪ್ಪಾಗಿ ಅಂಟಿಸಿಕೊಂಡು ಬಿಟ್ಟಿದ್ದಾರೆ. ಇದನ್ನೇ ನಿಮ್ಮ ಕವನ ಬಹಳ ಅರ್ಥಪೂರ್ಣವಾಗಿ ಬಿಂಬಿಸುತ್ತದೆ ನವೀನ್.

Submitted by kavinagaraj Wed, 07/16/2014 - 08:44

ಹಸಿವು ಮತ್ತು ಹೊಟ್ಟೆಯ ಬಗ್ಗೆ ಚೆನ್ನಾಗಿ ಬರೆದಿರುವಿರಿ. ಅಭಿನಂದನೆ.
ಹಸಿದವಗೆ ಹುಸಿ ವೇದಾಂತ ಬೇಡ
ಕಥೆ ಕವನ ಸಾಹಿತ್ಯ ಬೇಡವೇ ಬೇಡ |
ಬಳಲಿದ ಉದರವನು ಕಾಡಬೇಡ
ಮುದದಿ ಆದರಿಸಿ ಮೋದಪಡು ಮೂಢ ||