ಅರಣ್ಯ, ಜಲ ಹಾಗೂ ಹವಾಮಾನ ಉಳಿಸಲು ನಾವೇನು ಮಾಡಿದ್ದೇವೆ?

ಅರಣ್ಯ, ಜಲ ಹಾಗೂ ಹವಾಮಾನ ಉಳಿಸಲು ನಾವೇನು ಮಾಡಿದ್ದೇವೆ?

ಪ್ರತೀ ವರ್ಷ ಮಾರ್ಚ್ ತಿಂಗಳ ೨೧, ೨೨ ಮತ್ತು ೨೩ರಂದು ಕ್ರಮವಾಗಿ ವಿಶ್ವ ಅರಣ್ಯ ದಿನ, ವಿಶ್ವ ಜಲ ದಿನ ಹಾಗೂ ವಿಶ್ವ ಹವಾಮಾನ (ವಾತಾವರಣ) ದಿನಗಳು ಬರುತ್ತವೆ. ಈ ಮೂರೂ ಸಂಗತಿಗಳು ಒಂದಕ್ಕೊಂದು ಪೂರಕವೇ. ಅರಣ್ಯ ಇಲ್ಲದೇ ಹೋದರೆ ಜಲ ಹಾಗೂ ಹವಾಮಾನ ಹಾಳಾಗುವುದಂತೂ ನಿಶ್ಚಿತ. ಹಾಗೆಯೇ ಜಲ ಮತ್ತು ಪೂರಕ ವಾತಾವರಣ ಇಲ್ಲದೇ ಹೋದರೆ ಅರಣ್ಯ ಬೆಳೆಯುವುದಾದರೂ ಹೇಗೆ? ಈ ಎಲ್ಲಾ ಕಾರಣಗಳಿಗಾಗಿ ಈ ಮೂರೂ ದಿನಗಳು ಬಹಳ ಮಹತ್ವದ್ದಾಗಿದೆ.

ಒಂದು ದೇಶದ ಪ್ರಾಕೃತಿಕ ಸಮತೋಲನಕ್ಕೆ ಆ ದೇಶದ ಒಟ್ಟು ಭೂ ಪ್ರದೇಶದಲ್ಲಿ ಶೇಕಡಾ 33ರಷ್ಟು ಅರಣ್ಯ ಪ್ರದೇಶವಿರಬೇಕು. ಆದರೆ ನಮ್ಮ ದೇಶ ಹಾಗೂ ರಾಜ್ಯದಲ್ಲಿ ಸದ್ಯ ಈ ಪ್ರಮಾಣ ಶೇಕಡಾ 20ರ ಆಸುಪಾಸಿನಲ್ಲಿದೆ. ಇದರಲ್ಲಿ ವನ್ಯಜೀವಿಗಳಿಗೆ ಮೀಸಲಿರುವ ಸಂರಕ್ಷಿತ ಪ್ರದೇಶಗಳ ಪ್ರಮಾಣ ಕೇವಲ ಶೇಕಡಾ 4 ರಿಂದ 5 ರಷ್ಟು ಮಾತ್ರ. 

ಜಾಗತಿಕ ಮಟ್ಟದ ಗಂಭೀರ ಸಮಸ್ಯೆಗಳಾದ ಬರ, ಪ್ರವಾಹ, ಚಂಡಮಾರುತದಂತಹ ಪ್ರಾಕೃತಿಕ ವಿಕೋಪಗಳು ಹವಾಮಾನ ಬದಲಾವಣೆಯೊಂದಿಗೆ ನೇರ ಸಂಬಂಧ ಹೊಂದಿವೆ. ಇವುಗಳಿಗೆ ನಿರ್ಣಾಯಕ ಪರಿಹಾರವಿರುವುದು ಅರಣ್ಯ ಸಂರಕ್ಷಣೆ ಹಾಗೂ ಅರಣ್ಯದ ಅಭಿವೃದ್ಧಿಯಲ್ಲಿ ಮಾತ್ರ. ಇಂತಹ ‘ಪ್ರಾಕೃತಿಕ ಸಂಪತ್ತಿನ ಸಂರಕ್ಷಣೆ ಮತ್ತು ಅಭಿವೃದ್ಧಿ ನಮ್ಮ ನಿಮ್ಮೆಲ್ಲರ ಹೊಣೆ’. ವಿಶ್ವ ಅರಣ್ಯ ದಿನದಂದು ಪ್ರತಿಯೊಬ್ಬರೂ ಪ್ರಾಕೃತಿಕ ಸಂಪತ್ತಾದ ಅರಣ್ಯದ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಮುಂದಾಗಲೂ ಸಂಕಲ್ಪ ತೊಟ್ಟು ಕಾರ್ಯಪ್ರವೃತ್ತರಾಗಲೇ ಬೇಕಾಗಿದೆ.

ಜಲ--ಜೀವಜಲ  ಅಬ್ಬಾ! ಬತ್ತಿ ಹೋದರೆ ಮಾನವನ, ಸಕಲ ಜೀವಿಗಳ ಪರಿಸ್ಥಿತಿ ಏನಾಗಬಹುದು, ಊಹಿಸಲೂ ಸಾಧ್ಯವಿಲ್ಲ. ಮನೆಯಲ್ಲಿ ಒಂದು ಕ್ಷಣ ನೀರು ನಳ್ಳಿಯಲ್ಲಿ ಬರುವುದಿಲ್ಲ ಎಂದಾದರೆ ಆಗುವ ತಳಮಳ ಹೇಳಲು ಸಾಧ್ಯವಿಲ್ಲ.

ನೀರಿನ ಉಳಿವಿಗಾಗಿ, ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯೋಗಗಳು ಆಗುತ್ತಿವೆ. ಹಸಿರು ಗಿಡಮರಗಳ ನಾಶ, ಕಾಂಕ್ರೀಟ್ ಕಟ್ಟಡಗಳಿಂದಾಗಿ ದಿನೇದಿನೇ ನೀರಿನ ಒರತೆ ಬತ್ತಿ ಹೋಗುತ್ತಿದೆ. *ಮರಗಿಡಗಳ ನೆಟ್ಟು ಬೆಳೆಸಿ, ಕಾಡು ಕಡಿಯದಿರಿ, ನಾಡನ್ನು ರಕ್ಷಿಸಿ, ಹಸಿರೇ ಉಸಿರು, ಉತ್ತಮ ಆರೋಗ್ಯ ಇದೆಲ್ಲಾ ಅನುಷ್ಠಾನಕ್ಕೆ ತಂದರೂ ಮತ್ತೂ ಕೊರತೆ ಕಾಡುತ್ತಿದೆ. ಮಳೆ ನೀರು ಸಂಗ್ರಹಣಾ ಅಭಿಯಾನ ಪ್ರತೀ ಕಟ್ಟಡದಲ್ಲೂ ಅಳವಡಿಸಲೇ ಬೇಕೆಂಬ ನಿಯಮ ಕಡ್ಡಾಯವಾದಲ್ಲಿ ಸ್ವಲ್ಪ ಪ್ರಯೋಜನವಾಗಬಹುದು.

ಜಲಮೂಲಗಳನ್ನು ಸ್ವಚ್ಛ ವಾಗಿಡುವುದು, ಕೆರೆಗಳನ್ನು ಕಾಪಾಡಿಕೊಳ್ಳುವುದು, ಸತತವಾಗಿ ಕೊಳವೆಬಾವಿಗಳನ್ನು ಕೊರೆಯದಿರುವುದು, ಪ್ರತಿಹನಿ ನೀರನ್ನು ಕಾಯ್ದುಕೊಳ್ಳುವ ಅಭಿಯಾನದಿಂದ ಒಂದಷ್ಟು ಪ್ರಯೋಜನವಾಗಬಹುದು.

ಪುಟ್ಟ ಮಕ್ಕಳಿಗೆ ನೀರಿನ ಮಹತ್ವದ ಅರಿವು ಮನೆಯಿಂದಲೇ ಆರಂಭಿಸಬೇಕು.  ನೀರಿನ ಮರುಬಳಕೆ ಅಭಿಯಾನ ಯೋಜನೆಗಳನ್ನು ಜಾರಿಗೆ ತರುವುದು.ಕೊಳಕು ನೀರಿನ ಸೇವನೆಯಿಂದಾಗುವ ದುಷ್ಪರಿಣಾಮ ಗಳನ್ನು ಮನದಟ್ಟು ಮಾಡುವ ಕೆಲಸವಾಗಬೇಕಿದೆ.ಮಳೆ ನೀರು ಸಂಗ್ರಹ ಎಂಬುದು ಜನಾಂದೋಲನವಾದರೆ ಪ್ರಯೋಜನವಾಗಬಹುದು. ಪ್ರತಿಹನಿ ನೀರನ್ನು ಹಾಳುಮಾಡದೆ ಬಳಸಿ,ನಮ್ಮದಾದ ಕೊಡುಗೆ, ಕರ್ತವ್ಯವನ್ನು ಮಾಡಬೇಕಾಗಿದೆ.

ಇಂಗು ಗುಂಡಿ ನಿರ್ಮಾಣ, ಶಾಲೆಗಳಲ್ಲಿ ಮಕ್ಕಳಿಗೆ ಜಲ ಮರುಪೂರಣದ ಪಾಠ ಮಾಡಬೇಕಾಗಿದೆ. ವಿಶ್ವದಲ್ಲಿ ಏರುತ್ತಿರುವ ತಾಪಮಾನ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಅರಣ್ಯಗಳ ನಾಶ, ಗಾಳಿಯಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣ, ಸಾಗರದ ನೀರಿನ ಮಟ್ಟ ಏರಿಕೆ, ಸಾಗರ ಮಾಲಿನ್ಯದಿಂದ ಜಲಚರಗಳ ಸಾವು ಇವೆಲ್ಲವೂ ಜಲಮಟ್ಟವನ್ನು ಕುಗ್ಗಿಸುತ್ತಿದೆ. ಮಳೆಯ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಕಮ್ಮಿಯಾಗುತ್ತಿದೆ. ಅಕಾಲದ ಮಳೆಯೂ ಬೆಳೆಯನ್ನು ಹಾಳು ಮಾಡುತ್ತಿದೆ. ಕಷ್ಟ ಪಟ್ಟು ಫಸಲನ್ನು ಬೆಳೆಸಿದ ರೈತನಿಗೆ ಅದು ಕಟಾವಿಗೆ ಬರುವಾಗ ವಾತಾವರಣ ಕೈಕೊಡುತ್ತದೆ. ಬೆಳೆ ನಾಶವಾಗುತ್ತದೆ. ಹವಾಮಾನವೂ ಪೂರಕವಾಗಿದ್ದರೆ ಮಾತ್ರ ಎಲ್ಲವೂ ಸರಿಯಾಗಿರುತ್ತದೆ. ಪ್ರಕೃತಿಯ ಮೇಲೆ ಹೀಗೆ ನಡೆಯುತ್ತಿರುವ ನಿರಂತರ ದೌರ್ಜನ್ಯದಿಂದ (ಅರಣ್ಯ ನಾಶ, ಪರಿಸರ ನಾಶ, ಜಲ ಮಾಲಿನ್ಯ) ನಮ್ಮ ಭೂಮಿ ಸಾರ ಕಳೆದುಕೊಳ್ಳುತ್ತಿದೆ. ನಮ್ಮ ಈ ಕೃತ್ಯದಿಂದಾಗಿ ಪ್ರಕೃತಿಯು ತನ್ನದೇ ಆದ ಹಾದಿಯನ್ನು ಕಂಡುಕೊಳ್ಳುತ್ತದೆ. ಅದೇ ಕಾರಣದಿಂದ ಅಕಾಲ ಮಳೆ, ಬಿರುಗಾಳಿ, ಆಗಾಗ ಬರುವ ಚಂಡಮಾರುತ, ಆಲಿಕಲ್ಲು ಮಳೆ ಇವುಗಳು ಕಂಡು ಬರುತ್ತವೆ. 

ನಾವು ಇನ್ನಾದರೂ ಜಾಗೃತರಾಗಬೇಕಾಗಿದೆ. ನಮ್ಮ ದುರಂತವೆಂದರೆ ಪ್ರಪಂಚದ ಅತ್ಯಂತ ಕಲುಷಿತ ೨೦ ನಗರಗಳಲ್ಲಿ ೧೫ ನಗರಗಳು ನಮ್ಮ ಭಾರತ ದೇಶದಲ್ಲೇ ಇವೆ. ನಮ್ಮ ದೇಶದ ರಾಜಧಾನಿ ದೆಹಲಿಯ ವಿಷಯ ನಿಮಗೆ ಗೊತ್ತೇ ಇದೆ. ಅಲ್ಲಿಯ ಕಲುಷಿತ ವಾತಾವರಣದಿಂದಾಗಿ ಜನರಿಗೆ ರಸ್ತೆಗಳಲ್ಲಿ ನಡೆದಾಡುವುದೇ ದುಸ್ತರವಾಗಿದೆ. ಈ ಕುರಿತಾಗಿ ಕೋರ್ಟೂ ಕಟವಳ ವ್ಯಕ್ತ ಪಡಿಸಿದೆ.  ನಾವು ಹೀಗೇ ನೆಲ, ಜಲದ ಮೇಲೆ ದೌರ್ಜನ್ಯ ಮಾಡುತ್ತಾ ಬಂದರೆ ಈ ಪರಿಸ್ಥಿತಿ ದೇಶದ ಇತರ ನಗರಗಳಿಗೂ ಹಬ್ಬುತ್ತದೆ. ಈಗ ಕೊರೋನಾ ಕಾರಣಕ್ಕೆ ಹಾಕುತ್ತಿರುವ ಮಾಸ್ಕ್ ಅನ್ನು ಮುಂದಿನ ದಿನಗಳಲ್ಲಿ ವಾಯು ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ಹಾಕಬೇಕಾದ ಅನಿವಾರ್ಯತೆ ಎದುರಾದೀತು. ಜಾಗತಿಕ ಉಷ್ಣಾಂಶ (Global Warming) ಏರಿಕೆಯ ನಿಯಂತ್ರಣದ ಬಗ್ಗೆ ಈಗಾಗಲೇ ಪ್ಯಾರಿಸ್ ಒಪ್ಪಂದವಾಗಿದೆ.  ವಿಶ್ವದ ಎಲ್ಲಾ ದೇಶಗಳು ಇಂಗಾಲ (ಕಾರ್ಬನ್)ದ ಬಳಕೆಯನ್ನು ಕಮ್ಮಿ ಮಾಡಬೇಕು, ಅನಿವಾರ್ಯವಾಗಿ ಇಂಗಾಲ ಬಳಕೆಯಾಗುತ್ತಿರುವ ಕೈಗಾರಿಕೆಗಳನ್ನು ನಿಯಂತ್ರಣದಲ್ಲಿಡಬೇಕು. ಪರಿಸರದಲ್ಲಿ ಆಮ್ಲಜನಕದ ಪ್ರಮಾಣವನ್ನು ಏರಿಕೆಯಾಗುವಂತೆ ಕಾರ್ಯಗಳನ್ನು ಕೈಗೊಳ್ಳಬೇಕು. ಇದಕ್ಕೆ ಪರಿಹಾರವೆಂದರೆ ಗಿಡ-ಮರಗಳ ಸಂರಕ್ಷಣೆ. ಇಂಗಾಲವನ್ನು ಕಮ್ಮಿ ಮಾಡಿ ಆಮ್ಲಜನಕ ನೀಡುವ ಏಕೈಕ ಅಗ್ಗದ ವ್ಯವಸ್ಥೆ ಎಂದರೆ ಗಿಡ ಮರಗಳ ಬೆಳೆಸುವಿಕೆ. ಪ್ರತೀ ವರ್ಷ ಕಾಡಿಗೆ ಬೀಳುವ ಬೆಂಕಿಯನ್ನು ನಿಯಂತ್ರಣ ಮಾಡುವುದು, ಅರಣ್ಯ ಒತ್ತುವರಿ ತೆರವು, ಕಾಡುಗಳನ್ನು ಕಡಿದು ಮಾಡುವ ನಗರೀಕರಣ, ಜಲವನ್ನು ಕಲುಷಿತಗೊಳಿಸುವ ಹಾನಿಕಾರಕ ಕೈಗಾರಿಕೆಗಳು ಇವೆಲ್ಲವನ್ನು ತಡೆಗಟ್ಟುವ ಕೆಲಸ ತುರ್ತಾಗಿ ಆಗಬೇಕಾಗಿದೆ.

ನಾವು ನಮ್ಮ ಮುಂದಿನ ತಲೆಮಾರಿಗೆ ಆರೋಗ್ಯಕರ, ವಾಸಯೋಗ್ಯ ಭೂಮಿಯನ್ನು ಕೊಟ್ಟು ಹೋಗಬೇಕಾದರೆ ಈಗಲೇ ಕಾರ್ಯ ಪ್ರವೃತ್ತರಾಗಬೇಕು. ನಾವು ಇದೇ ರೀತಿ ವಾಯು, ಜಲ, ಅರಣ್ಯ ವಿನಾಶ ಮಾಡುತ್ತಾ ಸಾಗಿದರೆ ನಮ್ಮ ಭವಿಷ್ಯ ಅಂಧಕಾರದತ್ತ ಸಾಗುವುದರಲ್ಲಿ ಸಂಶಯವಿಲ್ಲ. ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮಾತೊಂದು ನೆನಪಿಗೆ ಬರುತ್ತಿದೆ. “ಈ ಭೂಮಿಯಲ್ಲಿ ಪ್ರತಿಯೊಬ್ಬನ ಅಗತ್ಯವನ್ನು ಪೂರೈಸಲು ಬೇಕಾದಷ್ಟು ಎಲ್ಲವೂ ಇದೆ; ದುರಾಸೆಗಳನ್ನು ಪೂರೈಸಲು ಸಾಕಾಗುವಷ್ಟಲ್ಲ” ಈ ವಿಷಯವನ್ನು ನಾವೆಲ್ಲಾ ಮನಸ್ಸಲ್ಲಿ ಇಟ್ಟುಕೊಂಡರೆ ಸಾಕು.!  

---  

ಚಿತ್ರ ಕೃಪೆ: ಅಂತರ್ಜಾಲ ತಾಣ

ಪೂರಕ ಮಾಹಿತಿ ಮತ್ತು ಸಹಕಾರ: ಆಜಾದ್ ಸುರೇಶ ರಾಮಕೃಷ್ಣ ಹಾಗೂ ರತ್ನಾ ಕೆ. ಭಟ್, ತಲಂಜೇರಿ