ಅರಬಿ (ವಿಶ್ವಕಥಾಕೋಶ -೧೦)

ಅರಬಿ (ವಿಶ್ವಕಥಾಕೋಶ -೧೦)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಹತ್ತನೆಯ ಸಂಪುಟ ‘ಅರಬಿ'. ವಿಶ್ವಕಥಾಕೋಶದ ೧೦ನೇ ಸಂಪುಟದಲ್ಲಿ ಐರ್ಲ್ಯಾಂಡ್, ವೇಲ್ಸ್, ಸ್ಕಾಟ್ಲ್ಯಾಂಡ್ ಮೊದಲಾದ ಕಥೆಗಳಿವೆ. ಐರ್ಲ್ಯಾಂಡ್, ವೇಲ್ಸ್, ಸ್ಕಾಟ್ಲ್ಯಾಂಡ್ ಗಳ ಸಾಹಿತ್ಯದಲ್ಲಿ ಹೊಸತನವಿದೆ. ಜೇಮ್ಸ್ ಜಾಯ್ಸ್ ನ ಕಥೆ ‘ಅರಬಿ' ಶೀರ್ಷಿಕೆಯಾಗಿರುವ ಈ ಸಂಪುಟದಲ್ಲಿ, ಆ ಮೂರೂ ದೇಶಗಳ ಒಟ್ಟು ಹದಿನೈದು ಪ್ರಾತಿನಿಧಿಕ ಕಥೆಗಳಿವೆ.

ಈ ಪುಸ್ತಕದಲ್ಲಿ ಇರುವ ೧೫ ಕಥೆಗಳೆಂದರೆ, ಅರಬಿ (ಜೇಮ್ಸ್ ಜಾಯ್ಸ್), ಜೂಲಿಯಾಳ ಶಾಪ (ಜಾರ್ಜ್ ಮೂರ್), ರಾಷ್ಟ್ರದ ಅತಿಥಿಗಳು (ಫ್ರಾಂಕ್ ಅ'ಕಾನರ್), ಹೊಂಚು ಸಿಪಾಯಿ (ಲಿಯಾಮ್ ಅ'ಫ್ಲಹರ್ಟಿ), ಮಕ್ಕಳು (ಡೇನಿಯಲ್ ಕಾರ್ಕೆರಿ), ಹುರಿಯ ಹಾಡು (ಡಬ್ಲ್ಯೂ ಬಿ.ಯೇಟ್ಸ್), ದಾಂತೆ ಮತ್ತು ಏಡಿ (ಸ್ಯಾಮ್ಯುಯೆಲ್ ಬೆಕೆಟ್), ಕ್ಯಾಲೆಬನ ದೋಣಿ (ರೈಸ್ ಡೇವೀಸ್), ನಾಯಿ ನಕ್ಕಾಗ (ಜಾರ್ಜ್ ಇವಾರ್ಟ್ ಇವಾನ್ಸ್), ಸಮುದ್ರದ ಮುನ್ನೋಟ (ಡಿಲಾನ್ ಥಾಮಸ್), ಜಾನೆಟ್ ಡಾಲ್ರಿಂಪಲಳ ಮದುವೆಯ ಕಥೆ (ವಾಲ್ಟರ್ ಸ್ಕಾಟ್), ಮಣ್ಣು ( ಲೂಯಿ ಗ್ರಾಸಿಕ್-ಗಿಬ್ಬನ್), ಕಿನ್ನರ ಕುಮಾರ (ಜೆ.ಜೆ.ಬೆಲ್), ಕಡಲು ( ನೀಲ್ ಎಮ್. ಗನ್), ಮ್ಯಾಟನಿ (ಫ್ರೆಡ್ ಉರ್ಕುಹಾರ್ಟ್).

ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ಶಾ.ಬಾಲು ರಾವ್ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೨೬೦ ಪುಟಗಳನ್ನು ಹೊಂದಿದೆ. ಐರ್ಲ್ಯಾಂಡ್, ವೇಲ್ಸ್ ಹಾಗೂ ಸ್ಕಾಟ್ಲ್ಯಾಂಡ್ ದೇಶದ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.