ಅರಮನೆಯಿಂದ ಅರಿವಿನರಮನೆಗೆ

ಅರಮನೆಯಿಂದ ಅರಿವಿನರಮನೆಗೆ

ಪುಸ್ತಕದ ಲೇಖಕ/ಕವಿಯ ಹೆಸರು
ಸುರೇಶ ಮುದ್ದಾರ
ಪ್ರಕಾಶಕರು
ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ಭುವನೇಶ್ವರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ: ೨೦೨೨

ಉಪನ್ಯಾಸಕರಾದ ಸುರೇಶ ಮುದ್ದಾರ ಇವರು ‘ಅರಮನೆಯಿಂದ ಅರಿವಿನರಮನೆಗೆ' ಎಂಬ ಸೊಗಸಾದ ಪುಟ್ಟ (೮೮ ಪುಟಗಳು) ಪುಸ್ತಕವನ್ನು ರಚಿಸಿದ್ದಾರೆ. ಗ್ರಾಮೀಣ ಬದುಕಿನ ತಲ್ಲಣಗಳು, ಬಡತನ, ಮಾನವೀಯ ಮೌಲ್ಯಗಳು, ಪೂರಕವಾದ ಪರಿಸರ, ಸುತ್ತ ಮುತ್ತ ಘಟಿಸುವ ಘಟನೆಗಳು, ಲೋಕವನ್ನು ಹೀಗೂ ನೋಡಿ ಎಂದು ತೋರಿಸುವಂತಹ ಕವನಗಳು ಇಲ್ಲಿವೆ. ಸುರೇಶ ಮುದ್ದಾರ ಅವರು ಮೌಲ್ಯವಾದ ಸಂದೇಶವನ್ನು ಮುಂದಿನ ತಲೆಮಾರಿಗೆ ದಾಟಿಸಬೇಕೆನ್ನುವ ಕಳಕಳಿ ಉಳ್ಳವರು. ಈ ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ ಅಕ್ಷತಾ ಕೃಷ್ಣಮೂರ್ತಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿರುವ ಭಾವನೆಗಳು ನಿಮ್ಮ ಓದಿಗಾಗಿ ಇಲ್ಲಿದೆ...

“ಬರಹ ಎನ್ನುವುದು ಲೋಕದ ದನಿಯಾಗಬೇಕು ಎಂದು ಬರೆಯಲು ಹೊರಟ ಕವಿ ಪ್ರೊ. ಸುರೇಶ ಮದ್ದಾರ ಅವರು. ಈಗಾಗಲೇ ‘ಸಾಂವಿ’ ಕಥಾ ಸಂಕಲನವನ್ನು ಕೊಟ್ಟ ಕಥೆಗಾರ. ಈಗ ತಮ್ಮ ಹೊಸ ಕವನ ಸಂಕಲನ `ಅರಮನೆಯಿಂದ ಅರಿವಿನರಮನೆಗೆ’ ನಮ್ಮ ಕೈಗಿತ್ತಿದ್ದಾರೆ. ಹೀಗಾಗಿ ಮೊದಲಿಗೆ ಅವರಿಗೆ ಶುಭಾಶಯಗಳನ್ನು ಕೋರುತ್ತೇನೆ. ಕವಿ, ಕಥೆಗಾರ ಆಗಿರುವ ಪಂಚಮಿ ಮೀಡಿಯಾ ಪಬ್ಲಿಕೇಶನ್‌ನ ಶ್ರೀಧರ ಬನವಾಸಿಯವರ ಒತ್ತಾಸೆಯ ಮೇರೆಗೆ ಈ ಸಂಕಲನದ ಮೊದಲ ಓದುಗಳಾಗಿರುವೆ. ಕವಿತೆಯನ್ನು ಹಚ್ಚಿಕೊಂಡು ಓದಿದರೆ ಅದು ನಮ್ಮನ್ನು ಹಚ್ಚಿಕೊಂಡು ಬಿಡುತ್ತದೆಯಂತೆ. ಸುರೇಶ ಅವರ ಕವನಗಳನ್ನು ಓದುತ್ತಾ ಹೋದಾಗ ಅಲ್ಲಿನ ಕೆಲವೊಂದಿಷ್ಟು ಸಾಲುಗಳು ಹಚ್ಚಿಕೊಂಡದ್ದು ಹೌದು. ಇಲ್ಲಿನ ಕವನಗಳು ಸಾಮಾಜಿಕ ನೆಲೆಯಲ್ಲಿ ರೂಪಗೊಂಡಿರುವಂತಹದ್ದು. ವರ್ತಮಾನದ ವಾಸ್ತವದ ಜೊತೆ ಜೊತೆಗೆ ಸಾಮಾಜಿಕ ಬದಲಾವಣೆಯನ್ನು ನಿರೀಕ್ಷಿಸುವ ಕವಿತೆಗಳು ಇಲ್ಲಿವೆ. ಸಾರ್ವಜನಿಕ ಸಂಗತಿಗಳಿಗೆ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ಕಾರಣಗಳನ್ನು ಹುಡುಕುವ ಬಹುತೇಕ ಕವನಗಳು ಈ ಸಂಕಲನದ ಜೀವಾಳವಾಗಿವೆ. ಕವಿ ಇಂತಹುದನ್ನೆಲ್ಲ ಹಚ್ಚಿಕೊಂಡು ಬರೆದ ಕಾರಣ

`ಹೊತ್ತು ಹೋಗದ ದಿನವು
ಮರಳಿ ಬಾರದೆ ಇರಲಿ
ಬತ್ತಿ ಹೋಗಿಹ ದೀಪ
ಬೆಳಗಿಕೊಳ್ಳಲಿ ಮತ್ತೆ’

.. ಇವೆಲ್ಲ ಕಾಡಿವೆ. ಹೀಗೆ ಕಾಡಿ ಕವಿತೆಯಾಗಿ ಸಮಕಾಲೀನ ಸಂಗತಿಗಳನ್ನು ದರ್ಶಿಸುತ್ತವೆ. ಇವರ ಅಮ್ಮ ವಸುಧೆಯ ಮನದಂತೆ, ಗಂಗೆಯ ಕಲರವದಂತೆ, ಹೊಳೆವ ತಾರೆಯಂತೆ, ದಿನಕರನ ರಶ್ಮಿಯಂತೆ ಕಂಡಿದೆ. ಅಮ್ಮನ ಬಗ್ಗೆ ಓದಿದ ನೂರಾರು ಕವಿತೆಗಳಲ್ಲಿ ಇದು ಒಂದಾಗಿ ತಾಯ್ತನದ ಪ್ರೀತಿ ಎತ್ತಿ ಹಿಡಿದು ಅಂತ್ಯದಲ್ಲಿ ಅಮ್ಮನಿಗೆ ಅಮ್ಮನೇ ಸಾಟಿ ಎಂಬ ಸತ್ಯದ ಸಾಕ್ಷಾತ್ಕಾರ ಹೊಮ್ಮುತ್ತದೆ. ವಸಂತನ ಕಾಣದ ಕವಿಗಳಿಲ್ಲ. ಜನ ಮಾನಸದಲ್ಲಿ ವಸಂತ ಸದಾ ನೆಲೆಯಾಗಿರುತ್ತಾನೆ. ಪ್ರತಿ ಉಸಿರಲ್ಲೂ ಹಸಿರ ತುಂಬುವುದು ವಸಂತ ಸುರೇಶ ಅವರ ಕವನದಲ್ಲಿ ಕೂಡ `ಮಾಲಿನ್ಯ ಕಳೆಯುವ’ ಕನಸುಗಾರ. ಕವಿಯ ಆಶಯ ಈ ಕವನದಲ್ಲಿ ಎದ್ದು ತೋರುತ್ತದೆ. ನಿಸ್ವಾರ್ಥ ಬದುಕಿನಲ್ಲಿ ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವನ್ನು ಸಹ ಇಲ್ಲಿನ ಕವಿತೆಗಳು ಮಾಡುತ್ತದೆ ಎಂಬುದು ಆಶಾದಾಯಕವಾದ ಬೆಳವಣಿಗೆ. ಇವರ ಒಂದು ಕವನ ಹೀಗೆ ಹೇಳುತ್ತದೆ..

ಕಾಮಿ ಬೆಕ್ಕುಗಳ
ಕಾಮಿ ಕರ್ಮವನು
ನೋಡ ಆತ ನಡೆದ
ಜಗವೆಲ್ಲ ಕಂಡು
ಕೆಡಬಾರದಂತ
ಮೆಲ್ಲಗೆ ಹೊರಳಿ ನಿಂತ..

ಭಾವಪೂರ್ಣವಾದ ಶಿವಪಥ ಕವಿತೆಯನ್ನು ಸುಲಭವಾಗಿ ಹಾಡಿಕೊಂಡು ಹೋಗಬಹುದು. ಶಿವ ದರ್ಶನ ಮಾಡಿಸುತ್ತ ಅಲೌಕಿಕ ಶಕ್ತಿಯ ಪರಿಭಾಷಿಸುವ ಕವಿತೆಯಾಗಿ ಕಾಣುತ್ತದೆ. ಇಲ್ಲಿ ಸೂರ್ಯ ಮುಳುಗುವ ಕಾರಣ ಯೋಚನೆಗೆ ಹಚ್ಚುತ್ತದೆ. ನಿಸ್ವಾರ್ಥ ಬದುಕು ಕವಿತೆಯ ಹಕ್ಕಿ ಹಾರುವುದು ಬದುಕಿನಾಚೆಯ ಅರ್ಥ ಹುಡುಕಾಟವೇ ಆಗಿದೆ.
ಸುರೇಶ ಮುದ್ದಾರ ಅವರು ಮೌಲ್ಯವಾದ ಸಂದೇಶವನ್ನು ಮುಂದಿನ ತಲೆಮಾರಿಗೆ ದಾಟಿಸಬೇಕೆನ್ನುವ ಕಳಕಳಿ ಉಳ್ಳವರು. ಅವರ ಈ ಹಿಂದಿನ ಕಥಾಸಂಕಲನ ಗಮನಿಸಿದರೆ ಹಾಗೂ ಈ ಕವನ ಸಂಕಲನ ಗಮನಿಸಿದರೆ ಗುಣಾತ್ಮಕ ಸಮಾಜಕ್ಕಾಗಿ ನಾವೆಲ್ಲ ಹೇಗೆ ಬದಲಾಗಬೇಕು.ಈಗ ಬದುಕು ಹೇಗೆ ಬದಲಾಗುತ್ತಿದೆ ಎಂಬುದರ ಕುರಿತಾದ ರಚನೆಗಳೇ ಹೆಚ್ಚಿವೆ. ಗ್ರಾಮೀಣ ಬದುಕಿನ ತಲ್ಲಣಗಳು, ಬಡತನ, ಮಾನವೀಯ ಮೌಲ್ಯಗಳು, ಪೂರಕವಾದ ಪರಿಸರ, ಸುತ್ತ ಮುತ್ತ ಘಟಿಸುವ ಘಟನೆಗಳು, ಲೋಕವನ್ನು ಹೀಗೂ ನೋಡಿ ಎಂದು ತೋರಿಸುವಂತಹ ಕವನಗಳು ಇಲ್ಲಿವೆ. `ನರನು ಸಾಧಿಸುವುದೇನು..?’ ಕವಿತೆಯಲ್ಲಿ ಇವರೆ ಹೇಳಿದಂತೆ

`ಎಲ್ಲಿ ಹುಡುಕಲಿ? ಬಿಗಿ ಹಿಡಿದ ಉಸಿರನ್ನು ನಿರಾಳವಾಗಿ ಬಿಡುವ ಠಾವನ್ನು’ ಎನ್ನುವ ಚಂದದ ಸಾಲಿದೆ. ಮುಂದುವರೆದು ನಾವೆಲ್ಲ ಒಂದಾದರೆ ಬಿಳಿಯ ಬಣ್ಣವಾಗುತ್ತೇವೆ ಎಂದು ಕವಿ ಒಂದೇ ಸಾಲಿನಲ್ಲಿ ಮಹತ್ವದ ವಿಚಾರ ದಾಖಲಿಸಿ ಬಿಡುತ್ತಾರೆ. ತಣ್ಣಗೆ ತಮ್ಮ ಆಶಯ ದಾಖಲಿಸುವ ಪರಿ ಇದು. ಈ ಸಂಕಲನದ ಕವಿತೆಗಳು ಹೆಚ್ಚಿನದೇನೂ ಕೇಳುವುದಿಲ್ಲ. ಬಹುಶಃ ಈ ಕಾರಣದಿಂದ ವಾಚಾಳಿ ಎನಿಸುವುದಿಲ್ಲ. ತಮಗನಿಸಿದ್ದು ಸ್ವಲ್ಪದರಲ್ಲಿಯೇ ಹೇಳಿಬಿಡುತ್ತವೆ. ಬಹು ನಿರೀಕ್ಷೆಯನ್ನು ಹೊಂದಿಲ್ಲದಿದ್ದರೂ ಕಾವ್ಯ ಬರೆಯುವಂತಹ ಸೃಜನಶೀಲತೆಗಳನ್ನು ಹೊತ್ತಿವೆ. ಸಮಾಜದ ಚಲನೆಯ ಬಗ್ಗೆ ಬದಲಾವಣೆಗಳ ಬಗ್ಗೆ ಪಿಸು ನುಡಿವ ಮಾತುಗಳಿವೆ. ಆತ್ಮಸಂಗಾತದ ವಿಷಾದದ ದನಿಗಳು ಇರುವುದರಿಂದಲೇ ನಾವೆಲ್ಲ ಒಂದಾದರೆ ಬಿಳಿಯ ಬಣ್ಣವಾಗುವ ಮಹದಾಸೆಯನ್ನು ಹೊತ್ತ ಸಾಲು ನಮ್ಮನ್ನು ಬಿಡದೆ ಹಚ್ಚಿಕೊಳ್ಳುತ್ತದೆ. ಪರಿಮಳದ ಹೂವುಗಳು ಬಾಂಬುಗಳ ಧೂಳಿಗೆ ಸೊರಗಿ ಬಾಡಿವೆ (ಯುದ್ಧ) ಎಂಬ ಯುದ್ಧದ ಕುರಿತಾದ ಕವನ ಕಾಡದೇ ಬಿಡದು. ಜೀವನದ ನಾನಾ ಮುಖಗಳ ತೀಕ್ಷ್ಣ ಹಾಗೂ ಕೋಮಲ ಅನುಭವಗಳು ಒಂದಾದ ಮೇಲೋಂದರಂತೆ ಕವನ ಸಂಕಲನದಲ್ಲಿ ಸಿಗುತ್ತಲೇ ಹೋಗುತ್ತವೆ. `ನೀನು ಕಾಣ ಹೊರಟ ಊರು ನಿನ್ನೊಳಗೆ ಇದೆ’ (ಕಣ್ತೆರೆದು ನೋಡು) ಎಂದು ಹೇಳುತ್ತ ಹುಡುಕಾಟಕ್ಕೆ ಕೊನೆಯನ್ನು ಕೊಡುತ್ತಾರೆ. ಇಂತಹ ಸಾಲುಗಳು ಕವನ ಸಂಕಲನದ ಅಂದ ಹೆಚ್ಚಿಸಿವೆ. ಜೀವಂತ ವಲಯದ ಭಾವ ಸಂದರ್ಭಗಳನ್ನು ಅದರ ಗೇಯತೆಯನ್ನು ಇಟ್ಟುಕೊಂಡ ವ್ಯಕ್ತಿ ಪರಿಚಯದ ಕವನಗಳನ್ನು ಕೂಡ ಇಲ್ಲಿ ಕಾಣಬಹುದು. ಜಗದ ಸೌಂದರ್ಯ ಭಾವಕನ್ಯೆ ಮುಂತಾದ ಕವನಗಳು ಪ್ರಾಸಬದ್ಧ ನುಡಿಗಳಿಂದ ಹಾಡಲು ಅನುಕೂಲಿಸುವ ಕವನಗಳು. ಹಸಿವು ನೀಗುತ್ತಿರುವ ಅನ್ನದಾತ ಇಲ್ಲಿ ಮಹಾಸಂತನಾಗಿದ್ದಾನೆ.
ಸುರೇಶ ಅವರ ಕವಿತೆಗಳು ನಿಗೂಢತೆಯ ಹಂಗು ತೊರೆದು ನೇರ ಮಾತಾಡುವ ಕವಿತೆಗಳು. ಚಿಂತನ ಶೀಲತೆಗಳನ್ನು ಪರಿಣಾಮಕಾರಿಯಾಗಿ ಸಮರ್ಥವಾಗಿ ಬಿಂಬಿಸುವವು. ಕಾಲದ ಚಲನೆಯನ್ನು ಗುರುತಿಸುತ್ತ, ಕಾಲದ ಚಲನೆಯ ತಲೆಮಾರುಗಳ ಬದಲಾವಣೆಯನ್ನು, ಅದಕ್ಕೆ ಪೂರಕವಾಗಿ ತಮ್ಮ ಮತವನ್ನು ದಾಖಲಿಸುತ್ತ ಬಂದಿರುವ ಸುರೇಶರ ಕವನಗಳು ರೂಪಕಗಳ ಭಾರದಿಂದ ಬಳಲುವುದಿಲ್ಲ. ಗೇಯತೆಯನ್ನು ಬಿಟ್ಟು ಅಭಿವ್ಯಕ್ತಿಸುವ ರಚನೆಗಳು ಹೆಚ್ಚೆಚ್ಚು ಕಾಣುವಂತಾಗಲಿ. ಕವಿಯ ಸಾಲಿನಲ್ಲಿ ಹೇಳುವುದಾದರೆ `ಬೇಸರದ ದಿನಗಳು ಮುಗಿದು ಬಿಡಲಿ’. ದೀಪ ಹಚ್ಚುವ ಕವಿಯ ಮನಸ್ಸು ಬಹುಮುಖಿ ಓದುಗರನ್ನು ಮುಟ್ಟುವ, ತಟ್ಟುವ ಕವಿತೆಗಳನ್ನು ಕಟ್ಟಿಕೊಡಲಿ.”