ಅರಮನೆ ಗುಡ್ಡದ ಕರಾಳ ರಾತ್ರಿಗಳು

ಅರಮನೆ ಗುಡ್ಡದ ಕರಾಳ ರಾತ್ರಿಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
ಪುಸ್ತಕದ ಬೆಲೆ
ರೂ.೧೩೦.೦೦ ಮೊದಲ ಮುದ್ರಣ: ಮಾರ್ಚ್ ೨೦೧೬

ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪಕೊಟ್ಟು ಪ್ರಕಟಿಸಿದ ‘ಮಲೆನಾಡಿನ ರೋಚಕ ಕಥೆಗಳು’ ಎಂಬ ಓದುಗರಿಗೆ ಮೆಚ್ಚುಗೆಯಾಯಿತು. ಅದರ ಫಲವೇ ಅರಮನೆ ಗುಡ್ಡದ ಕರಾಳ ರಾತ್ರಿಗಳು ಪುಸ್ತಕ. ಇದು ಮಲೆನಾಡಿನ ರೋಚಕ ಕಥೆಗಳು ಸರಣಿಯ ಎರಡನೇ ಪುಸ್ತಕ. ಇದು ಕರ್ಮವೀರ ವಾರಪತ್ರಿಕೆಯಲ್ಲಿ ಧಾರವಾಹಿ ರೂಪದಲ್ಲಿ ಈಗಾಗಲೇ ಪ್ರಕಟವಾಗಿದೆ. 

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಾಸಿಸುತ್ತಿರುವ ಗಿರಿಮನೆ ಶ್ಯಾಮರಾಯರು ಈ ಪುಸ್ತಕದಲ್ಲಿನ ಪರಿಸರವನ್ನು ಅನುಭವಿಸುತ್ತಾ ಬೆಳೆದವರು. ಇದರಲ್ಲಿನ ಕಥೆ ಕಲ್ಪನೆಯಿರಬಹುದು. ಆದರೆ ಪರಿಸರದ ಚಿತ್ರಣ ನೈಜವಾಗಿದೆ. ತಮ್ಮ ಬೆನ್ನುಡಿಯಲ್ಲಿ ಶ್ಯಾಮರಾಯರು ಬರೆಯುತ್ತಾರೆ ‘ ಪಶ್ಚಿಮ ಘಟ್ಟದಲ್ಲಿ ಚಾರಣ ಮಾಡುವವರು ಒಂದಿಷ್ಟಾದರೂ ಅದರ ಬಗ್ಗೆ ಮೊದಲೇ ತಿಳಿದಿರಬೇಕು. ಅದರಂಚಿನಲ್ಲೇ ಹುಟ್ಟಿ ಬೆಳೆದ ನನಗೆ ಅದು ಹೊಸತಲ್ಲ. ಆದರೆ ಬಯಲು ಸೀಮೆಯವರಿಗೆ ಇಲ್ಲಿನ ಎಲ್ಲವೂ ಹೊಸತು ಮಾತ್ರವಲ್ಲ ; ಇಲ್ಲಿನ ಮಳೆಗಾಳದ ಆರ್ಭಟ, ಪರಿಸರ, ಪ್ರಾಣಿ ಪಕ್ಷಿ, ಕತ್ತಲು, ದಿಕ್ಕು-ದೆಸೆ ಎಲ್ಲವೂ ನಿಗೂಢ. ಕಾಡಿನೊಳಗೆ ತಪ್ಪಿಸಿಕೊಂಡರೆ ಏನು ತಿನ್ನಬಹುದು? ಹೇಗೆ ಬದುಕುಳಿಯಬಹುದು? ಎಂದು ಕೂಡಾ ಅವರಿಗೆ ಗೊತ್ತಿರುವುದಿಲ್ಲ. ಇಲ್ಲಿನ ಕಾಡಿನ ಲೂಟಿ, ಅನಾಚಾರಗಳ ಕಲ್ಪನೆಯೂ ಇರುವುದಿಲ್ಲ. ಹಾಗಾಗಿ ಕಾಲ್ಪನಿಕ ಕಥೆಯ ಜೊತೆ ಇಲ್ಲಿನ ನೈಜ ಚಿತ್ರಣವನ್ನೂ ಇದರಲ್ಲಿ ಕೊಡುತ್ತಿದ್ದೇನೆ. ಆಸಕ್ತರಿಗೆ ಕತೆ ಓದಿಸಿಕೊಂಡು ಹೋಗುವುದರ ಜೊತೆಗೆ ಪ್ರಕೃತಿಯ ಬಗ್ಗೆ ಒಂದಿಷ್ಟು ಮಾಹಿತಿಯೂ ಇದರಲ್ಲಿ ಸಿಗಬಹುದು'. 

ಆಕರ್ಷಕ ಮುಖಪುಟವನ್ನು ಶಂಭುರಿತ್ತಿಯವರು ಕಲ್ಪಿಸಿಕೊಟ್ಟಿದ್ದಾರೆ. ಇದರಲ್ಲಿ ಘಟ್ಟಕ್ಕೆ ಚಾರಣ ಹೊರಟವರ ಕಥೆಯನ್ನು ಕಾದಂಬರಿ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಅಲ್ಲಿನ ಪರಿಸರ, ಅನಾಚಾರ, ಮಳೆಗಾಲದ ವೈಭವದ ವಾತಾವರಣದ ಚಿತ್ರಣವನ್ನು ಓದುಗರ ಮುಂದೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಶ್ಯಾಮರಾವ್ ಅವರು ತೆರೆದಿಟ್ಟಿದ್ದಾರೆ. ಕತೆ ಕಾಲ್ಪನಿಕವಾದರೂ ಪ್ರಕೃತಿ ಚಿತ್ರಣ, ಅರಮನೆ ಗುಡ್ಡ, ಊರು, ಪರಿಸರ ಎಲ್ಲವೂ ನೈಜವೇ. ಸುಮಾರು ೧೮೦ ಪುಟಗಳ ಈ ಪುಸ್ತಕವು ಪತ್ತೇದಾರಿ ಕಾದಂಬರಿಯನ್ನು ಓದಿದಂತೆ ಕುತೂಹಲ ಕೆರಳಿಸುತ್ತಾ ಹೋಗುತ್ತದೆ.