ಅರಳಿಕಟ್ಟೆಯ ಮಹತ್ವ ಏನು?

ಅರಳಿಕಟ್ಟೆಯ ಮಹತ್ವ ಏನು?

ಪ್ರತಿ ಹಳ್ಳಿ ಹಳ್ಳಿಗೂ ಅರಳಿಕಟ್ಟೆ ಏಕೆ ಇರುತ್ತದೆ ನಿಮಗೆ ಗೊತ್ತೇ ? ಅದರ ವೈಜ್ಞಾನಿಕ ಹಿನ್ನೆಲೆ ಏನು ? ಪೂಜ್ಯ ಭಾವನೆ ಬರಲು ಕಾರಣವೇನು? ಇಲ್ಲಿ ಸ್ವಲ್ಪ ಮಾಹಿತಿ ಕಲೆಹಾಕಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ, ಸ್ವಲ್ಪ ಬಿಡುವು ಮಾಡಿಕೊಂಡು ಓದಿ.

ರಚ್ಚೆ ಕಟ್ಟೆ, ಜಗುಲಿಕಟ್ಟೆ , ನಾಗರಕಟ್ಟೆ , ಪಂಚಾಯಿತಿ ಕಟ್ಟೆ, ಅಶ್ವಥಮರ, ಅಶ್ವಥಕಟ್ಟೆ, ಹೀಗೆ ನಾನಾ ಹೆಸರಿನಿಂದಲೂ ಕರೆಯುತ್ತಾರೆ. ನಮ್ಮ ಪೂರ್ವಜರು ಇವುಗಳನ್ನು ಏಕೆ  ಪ್ರತಿಷ್ಠಾಪಿಸಿದರು ಎಂದರೆ ? 

ಈಗಿನ ಕೊರೋನ ಎರಡನೇ ಅಲೆಯಲ್ಲಿ  ಕೇಳಿಬರುತ್ತಿರುವ ಹೆಸರು ಆಮ್ಲಜನಕ , ಆಕ್ಸಿಜನ್ (O2) ಕೊರತೆ ? 

ನಿಮಗಿದು ಗೊತ್ತೇ ? ಅರಳಿಮರ ಅಥವಾ Ficus religiosa ಇತರ ಮರಗಳಿಗಿಂತಲೂ ಅತಿ ಹೆಚ್ಚು ಆಮ್ಲಜನಕವನ್ನು ಸರಬರಾಜು ಮಾಡುತ್ತದೆ ಮತ್ತು ಗ್ರಾಮದ ಸುತ್ತಮುತ್ತಲಿನ ಗಾಳಿಯನ್ನು ಶುದ್ಧೀಕರಿಸಿ ಮತ್ತು ಗಾಳಿಯಲ್ಲಿರುವ ಸೂಕ್ಷ್ಮ ಕ್ರಿಮಿ ಕೀಟಗಳನ್ನು ಕೂಡ ನಾಶಪಡಿಸುತ್ತದೆ ಹಾಗೂ ಅತಿಹೆಚ್ಚು ಇಂಗಾಲವನ್ನು ಹೀರಿಕೊಳ್ಳುವ ಸಾಮರ್ಥ್ಯ ಈ ಪಿಪ್ಪಲ ಮರಕ್ಕೆ ಇದೆ. ಆದುದರಿಂದಲೇ ನಮ್ಮ ಪೂರ್ವಜರು ಪ್ರತಿ ಹಳ್ಳಿಯ ಹಾಗೂ ಊರಿನ ಆರಂಭದಲ್ಲಿಯೇ ಇವುಗಳನ್ನು ನೆಡುತ್ತಿದ್ದರು. 

ಅವುಗಳ ಸಂರಕ್ಷಣೆ ಹಾಗೂ ಸುಸ್ಥಿರತೆ ಹೇಗೆ ? ಈಗಿನ ಕಾರ್ಪೊರೇಟ್ ಸಂಸ್ಥೆಗಳ ಭಾಷೆಯಲ್ಲಿ ಹೇಳಬೇಕಾದರೆ Sustainability Plan ಅಥವಾ ಸುಸ್ಥಿರತೆಯ ಯೋಜನೆ ಏನಪ್ಪಾ ಅಂದ್ರೆ ?

ನಮ್ಮ ಬುದ್ದಿಜೀವಿಗಳಿಗೆ ಇದು ಮೂಢನಂಬಿಕೆ ಅನ್ನಿಸಬಹುದು, ಆದರೆ ಅವರ ಯೋಜನೆಗಳ ಪರಿಸರ ಪೂರಕ ಮತ್ತು ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿವಂತಹದ್ದು. ಆಗಿನ ಕಾಲದಲ್ಲಿ ದೇವರಿಗೆ ಮತ್ತು ಪೂಜೆ ಪುನಸ್ಕಾರಗಳಿಗೆ ಹೆಚ್ಚು ಪ್ರಾಧಾನ್ಯ ಕೊಡುತ್ತಿದ್ದರು ಹಾಗೆಯೇ ಭಯ ಭಕ್ತಿಗಳಿಂದ ಆಚರಿಸುತ್ತಿದ್ದರು. ಇವನ್ನೂ ಕಡಿಯಬಾರದು ಹಾಗೂ ಸಂರಕ್ಷಿಸಲು ದೈವತ್ವವನ್ನು ಆರೋಪಿಸಿದರು. 

ಅದಕ್ಕಾಗಿಯೇ ಅಲ್ಲಿ ನಿರಂತರ ಪೂಜೆಗಳು, ನಾಗ ಪ್ರತಿಷ್ಠೆ  , ಉಪನಯನ , ಮದುವೆ ಹೀಗೆ ಅನೇಕ ಧಾರ್ಮಿಕ ಆಚರಣೆಗಳನ್ನು ಮಾಡತೊಡಗಿದರು. ಹಾಗೆಯೇ ಹೋಮ ಹವನಗಳಿಗೆ ಉಪಯೋಗಿಸುತ್ತಿದ್ದರು ಅದರ ಹಿಂದಿರುವ ಅದರ ವೈಜ್ಞಾನಿಕ ಕಾರಣ ಮನೆ ಮತ್ತು ಮಸಸ್ಸು ಶುದ್ಧೀಕರಣವೇ. 

ಸಂತಾನಭಾಗ್ಯವಿಲ್ಲದವರಿಗೆ ಯಾರೂ ನೋಡದ ಸಮಯದಲ್ಲಿ ಹೋಗಿ ಪ್ರದಕ್ಷಿಣೆ ಹಾಕಿ ಎಂದು ಸಹ ಹೇಳುತ್ತಾರೆ , ಅದರ ಹಿಂದಿನ ರಹಸ್ಯ ಬೆಳಿಗ್ಗೆ ಸಮಯದಲ್ಲಿ ಅತಿ ಹೆಚ್ಚು ಪ್ರಾಣವಾಯು ದೊರೆತು ಮತ್ತು ಪ್ರದಕ್ಷಿಣೆಯಿಂದ ವ್ಯಾಯಾಮವಾಗಿ, ಬೊಜ್ಜು ಕರಗಿ ಸಂತಾನೋತ್ಪತ್ತಿ ಅಂಗಗಳು ಚುರುಕಾಗುತ್ತದೆ ಹಾಗೂ ಮನಸ್ಸಿಗೂ ಹಿತಕರವೆನಿಸುತ್ತದೆ. ಹಾಗೆಯೇ ರಾತ್ರಿ ಹೊತ್ತು ದೀಪ ಹಚ್ಚುತ್ತಾರೆ, ಅಲ್ಲಿ ದೀಪವಿದ್ದರೆ ಇದು ದೇವರಕಟ್ಟೆ ಎಂದು ಮಲಗುತ್ತಿರಲಿಲ್ಲ, ಏಕೆಂದರೆ ಹಿಂದಿನಕಾಲದಲ್ಲಿ ಹೆಚ್ಚು ಜನ ನಡೆದೇ ಅಥವಾ ಬಂಡಿಗಳಲ್ಲಿ ಸಾಗುತ್ತಿದ್ದರು ಆಗ ಅಲ್ಲಿ ಜನ ಮಲಗಬಾರದು ಎಂದು ಏಕೆಂದರೆ ರಾತ್ರಿ ಇವು ಹೆಚ್ಚು ಇಂಗಾಲವನ್ನು ಉತ್ಪಾದಿಸುತ್ತದೆ.  ಇದು ಉಸಿರಾಟ ಸಮಸ್ಯೆ ಉಂಟಾಗಬಾರದು ಎಂಬುದೇ ಇದರ ಹಿನ್ನೆಲೆ. 

ಪ್ರತಿಯೊಂದು ಆಚರಣೆ ಹಿಂದೆ ಯಾವುದೋ ಒಂದು ಕಾರಣ ಇದ್ದೇ ಇರುತ್ತದೆ, ಒಂದು ಬಹು ಮುಖ್ಯ ಸಲಹೆ ಯಾರಾದರೂ ಯಾವುದೇ ಆಚರಣೆ ಮಾಡುತ್ತಿದ್ದಾರೆ ಅದು ಯಾವುದೇ ಧರ್ಮದವರು ಆಗಲಿ , ಅವರ ಆಚರಣೆ ಇನ್ನೊಬ್ಬರಿಗೆ ಮತ್ತು ಪರಿಸರಕ್ಕೆ ತೊಂದರೆ ಆಗುತ್ತಿಲ್ಲ ಎಂದರೆ ಅದರ ಬಗ್ಗೆ ಮಾತನಾಡುವುದು ಬೇಡ ಬದಲಾಗಿ ಅವುಗಳನ್ನು ಗೌರವಿಸಿ ಕಳೆದುಕೊಳ್ಳುವುದು ಏನೂ ಇಲ್ಲ. 

ಒಟ್ಟಾರೆ ನಮ್ಮ ಪೂರ್ವಜರು ನಮ್ಮ ಹಾಗೇ ಡಿಗ್ರಿಗಳು, ಪಿ ಹೆಚ್ ಡಿಗಳು ಹೊಂದಿರಲಿಲ್ಲ ಅವರಿಗೆಲ್ಲ ಇದ್ದದ್ದು ಸಾಮಾನ್ಯ ಜ್ಞಾನ ಮತ್ತು ಪ್ರಜ್ಞೆ. ಅವರು ಅನುಭವಗಳಿಂದ ಅತಿ ಹೆಚ್ಚು ಕಲಿಯುತ್ತಿದ್ದರು ಬಹು ಮುಖ್ಯವಾಗಿ ಅವರೆಲ್ಲರೂ ಪರಿಸರದ ಜ್ಞಾನ ಮತ್ತು ಪ್ರಾಮುಖ್ಯತೆಯನ್ನು ತಿಳಿದಿದ್ದರೂ  ಹಾಗೆಯೇ ಅವನ್ನು ಮುಂದಿನ ಪೀಳಿಗೆಗೆ ಒಂದೊಳ್ಳೆ ಜೀವನವನ್ನು ಕೊಟ್ಟು ಹೋಗುತ್ತಿದ್ದರು. ಆದರೆ ನಾವು ಅವರ ತದ್ವಿರುದ್ದ ನಾವು ಪರಿಸರದ ಜೊತೆ ಸಾಗುತ್ತಿಲ್ಲ ಬದಲಾಗಿ ಅದರ ವಿರುದ್ದ ಸಾಗುತ್ತಿದ್ದೇವೆ, ಇದರ ಪರಿಣಾಮವೇ ಇಂದು ಕೊರೊನಗೆ ಇನ್ನಿಲ್ಲದಂತೆ ನಲುಗಿದ್ದೇವೆ. ಇನ್ನಾದರೂ ನಾವು ನಮ್ಮ ಆಚರಣೆಗೆ ಹಾಗೂ ಪರಿಸರಕ್ಕೆ ಬೆಲೆ ಕೊಡದಿದ್ದಲ್ಲಿ ನಮ್ಮ ಅಳಿವು ಶತಸಿದ್ಧ. 

ಸಂಗ್ರಹ ಮತ್ತು ಲೇಖನ : ರಘು ರಾಮಾನುಜಂ