ಅರಳಿದ ಹೂವಿಗೆ

ಅರಳಿದ ಹೂವಿಗೆ

ಬರಹ

(ರಾಬರ್ಟ್ ಹೆರ್ರಿಕ್ ನ "ಟು ಬ್ಲಾಸಮ್ಸ್" ಕವಿತೆಯ ಸರಳಾನುವಾದ)

ಬದುಕಿನೊಲುಮೆಯ ತರು ಮುಡುಪಿಟ್ಟ ಫಲವೆ
ನೀನೇಕೆ ಅಳಿವೆ ಕ್ಷಣದೊಳಗೆ
ಬಂದಿಲ್ಲ ನಿನಗಿನ್ನು ಕಾಲ

ಇಲ್ಲಿರಲು ನೀನು ಕೆಲಕಾಲ
ಕೆಂಪಡರಿ ಮುಗುಳುನಗೆ ಬೀರಿ
ಬಳಿಕವೇ ನಿನ್ನಗಲುವಿಕೆಯಲ್ಲವೆ

ನಿನ್ನ ಚೇತನ ಬುವಿಗಿಳಿದ ಕಾರಣವೇನು
ಕ್ಷಣವರೆಕ್ಷಣದ ಉಲ್ಲಾಸಕೆ
ಮರುಘಳಿಗೆ ಪಾಡುವ ವಿದಾಯಕೆ?

ದುರ್ದೈವ ಪ್ರಕೃತಿ ನಿನಗೆ ಕೊಟ್ಟ ಹುಟ್ಟು
ಕ್ಷಣಿಕ ಸುಖವ ನೀ ಕೊಟ್ಟು
ಅರಿಯದಲೆ ಕ್ಷಯಿಸುವ ನಿನ್ನದೇನು ಗುಟ್ಟು

ನಿನ್ನ ತಳಿರೆಲೆಗಳಲಿ ಬರೆದಿಟ್ಟ
ವಿಧಿಯ ಲಿಖಿತವನೋದಿ ಅಳಿವ ಗುಟ್ಟನರಿವೆ
ಅಧೈರ್ಯದಿಂದಿರಲೆನ್ನ ಮನ

ಹಮ್ಮಿಳಿದ ಬಳಿಕ ನಿನ್ನಂತೆ ಕ್ಷಣಿಕವೀ
ಜೀವನವು ಎಂಬರಿವು ಮೂಡಿ
ತೆರಳುವೆನು ಜವರಾಯನೋಲಗಕೆ.

ವಿಜಯಶಂಕರ ಮೇಟಿಕುರ್ಕೆ.