ಅರವತ್ತರಲ್ಲಿ ಅರಳೊ ಮರುಳೊ!

ಅರವತ್ತರಲ್ಲಿ ಅರಳೊ ಮರುಳೊ!

ನಮ್ಮಲ್ಲಿ ಒಂದು ಗಾದೆ ಇದೆ  ಅದೇನೆಂದರೆ,  ಅರವತ್ತಕ್ಕೆ ಅರಳೊ ಮರುಳೊ ಈಗ್ಯಾಕೆ ಬೇಕಿತ್ತು ಇಂತಹ ಆಸೆ, ಕೈಲಾಗಲ್ಲ, ಆಸೆ ಬಿಡಲ್ಲ, ನಿಜವಾದರೂ ಈ ಮಾತು ; ಆದರೆ ನನಗೆ ಇದನ್ನು ಮೆಟ್ಟಿ ನಿಲ್ಲಬೇಕೆನ್ನುವ ಛಲ ಅರವತ್ತರ ಯೌವ್ವನದಲ್ಲಿ.  ಯಾರಾದರೂ ಕೇಳಿದರೆ ನಕ್ಕಾರು ಅನ್ನುವ ಯೋಚನೆ ನಾನು ಮಾಡುವುದಿಲ್ಲ ಬಿಡಿ.  ಯಾಕಂದ್ರೆ ನನಗಿದು ತಪ್ಪು ಅನಿಸಲಿಲ್ಲ ಇದುವರೆಗೂ.
 
1978 ರಿಂದ ಸುಮಾರು 19880ರವರೆಗೂ ಆವಾಗ ಈವಾಗ ಒಂದಷ್ಟು ಕವನಗಳನ್ನು ಬರೆಯುತ್ತಿದ್ದೆ.  ನನಗೆ ಕಲಿಸಿದ ಹೈಸ್ಕೂಲ್ ಮಾಸ್ಟರ್ ಗೆ ನಾನು ಬರೆಯುವ ವಿಷಯ ಗೊತ್ತಾಗಿ ನನ್ನದೊಂದು ಕವನ "ತೆನೆ" ಅವರೇ  "ತುಷಾರ" ಪತ್ರಿಕೆಗೆ ಕಳಿಸಿದ್ದು ಅದೂ ಕೂಡಾ ಪ್ರಕಟವಾಯಿತು.   ಆ ನಂತರ ಬಂದ ಆತ್ಮೀಯರೊಬ್ಬರ ಟೀಕೆ ನನಗೆ ಬರೆಯುವ ಉತ್ಸಹವನ್ನೇ ಚಿವುಟಿ ಹಾಕಿತು.  ಛೆ! ಬರೆಯಲು ನಾನು ಯೋಗ್ಯಳಲ್ಲ ಅನ್ನುವ ಕೀಳರಿಮೆ ಬಲವಾಗಿ ಆ ಚಿಕ್ಕ ವಯಸ್ಸಿನಲ್ಲಿ ಮನೆ ಮಾಡಿತು.  ಆದರೂ ಯಾವಾಗಲಾದರೂ ಒಮ್ಮೆ ತಡಿಲಾರದೆ ಬರಿತಿದ್ದೆ.  ಸ್ವಲ್ಪ ದಿನ ಕದ್ದು ಮುಚ್ಚಿ ಓದೋದು ಒಂದು ದಿನ ಹರಿದಾಕೋದು.  ಹೀಗೆ ನಡಿತಿತ್ತು.  ಅದೆಷ್ಟು ಕವನಗಳು ಕಸದ ಬುಟ್ಟಿ ಸೇರಿದವೋ ಲೆಕ್ಕವಿಲ್ಲ.  
 
ಇನ್ನು ಓದುವ ಗೀಳು ಮದುವೆ ಆಗುವವರೆಗೂ ತುಂಬಾ ಇತ್ತು.  ಪತ್ತೆದಾರಿ ಕಾದಂಬರಿ ಅಂದರೆ ಅಚ್ಚು ಮೆಚ್ಚು.  ಆ ನಂತರದ ಸಂಸಾರ  ಅನಾರೋಗ್ಯ, ತಾಪತ್ರಯಗಳ ಮದ್ಯ ಓದು ಬರಹವೆಲ್ಲ ಅಯೋಮಯ.  ಮನೆ ಆಫೀಸು,ಸಂಸಾರ ಇದರಲ್ಲೇ ಎಷ್ಟೊಂದು ವರ್ಷ ಕಾಲ ಸರಿದು ಹೋಯಿತು.  ಆಗ ಇದೇ ಒಂದು ಸಾಧನೆ ಅಂತ ಮನಸ್ಸು ಮರುಳಾಗಿತ್ತು.  ನನಗೆ ಇನ್ನೊಂದು ಪ್ರಪಂಚ ಕಾದಿದೆ ಅನ್ನುವುದು ಗೊತ್ತೇ ಇರಲಿಲ್ಲ.
 
ಮತ್ತೆ ನನಗೆ ಸಾಹಿತ್ಯದ ಹುಚ್ಚು  ವಿಪರೀತ ಆಗಿರೋದು 2015ರ ಕೊನೆಯಲ್ಲಿ.  ಹೇಗೆ? ಇದು ನನಗೂ ಗೊತ್ತಿಲ್ಲ. ಮಗಳ ಬರವಣಿಗೆ, ಅವಳ ಬ್ಲಾಗ್ ಕಾರಣವಿರಬಹುದಾ? ಗೊತ್ತಿಲ್ಲ.    ಹಿಡಿದ ಪೆನ್ನು ಕಂಡ ಕಂಡಲ್ಲಿ ಗೀಚೋಕೆ ಶುರು ಹಚ್ಚಿಕೊಂಡಿತು.  ಎಷ್ಟು ಜಾಸ್ತಿ ಆಯಿತು ಅಂದರೆ "ಮನೆಯಲ್ಲಿ ಗೀಚಿದ ಪುಸ್ತಕಗಳ ಕಂತೆ ರದ್ದಿಗೆ ಹಾಕಿ ಮಾರಮ್ಮ ಇದೇನು ಹೀಂಗ ಬರಿತಿದ್ದೀಯಾ?" ಮಗಳು ಕೇಳುವಷ್ಟು." ಸಧ್ಯ ಬಿಳಿ ಗೋಡೆ ಮಾತ್ರ ಬಿಟ್ಟಿದ್ದೆ. 
 
ಅಲ್ಲಿಯವರೆಗೂ  ಬರೀ ದಿನ ಪತ್ರಿಕೆ ಮಾತ್ರ ಓದುತ್ತಿದ್ದ ನಾನು ಅಲ್ಲಿಯ ವಿಶೇಷ ಬರಹಗಳನ್ನು ಕತ್ತರಿಸಿ ಸಂಗ್ರಹಿಸಿಡುತ್ತಿದ್ದೆ. ಸಮಯವಾದಾಗಲೆಲ್ಲ ಮತ್ತೆ ಮತ್ತೆ ಅದನ್ನೇ ಓದುತ್ತಿದ್ದೆ.  ಇವುಗಳನ್ನೆಲ್ಲ ಇಟ್ಟುಕೊಂಡು ಮಾಡುವುದೇನು?  ಯಾಕಾಗಿ ಇವೆಲ್ಲ ಪೇರಿಸಿಟ್ಟೆ?  ರದ್ದಿಗೆ ಹಾಕಲಾ? ಛೆ! ಬೇಡ ನಾನಿಷ್ಟಪಟ್ಟ ಬರಹಗಳು.  ಹಾಗೆ ಇರಲಿ.  ಕ್ರಮೇಣ ಇವುಗಳನ್ನು ಬರಹಕ್ಕೆ ತಕ್ಕಂತೆ ಜೋಡಿಸಿ ಪುಸ್ತಕ ಮಾಡಿಸಿದರೆ ಹೇಗೆ?  ಈ ಯೋಚನೆ ಬಂದಿದ್ದೇ ತಡ ವಿಂಗಡಿಸಲು ಹೊರಟ ಮನ ನಿಧಾನವಾಗಿ ಪೆನ್ನು ಕೈ ಹಿಡಿಯುವಂತೆ ಮಾಡಿತು.  ಬಹುಶಃ ನಾನು ಬರೆಯಲು ಶುರು ಮಾಡಿದ್ದು ಇದೂ ಒಂದು ಕಾರಣವಿರಬಹುದೇ?  ಅದೂ ಗೊತ್ತಿಲ್ಲ.
 
ಇವೆಲ್ಲ ನೋಡಿ ಮಗಳು 31-1-2015ರಲ್ಲಿ ಕನ್ನಡ ಬ್ಲಾಗ್ ಒಪನ್ ಮಾಡಿ ಕೊಟ್ಲು. ಅದುವರೆಗೂ ಅಲ್ಲಲ್ಲಿ ಪೇರಿಸಿಟ್ಟ ಬರಹಕ್ಕೆ ಒಂದು ಸುಂದರವಾದ ಮನೆ ಸಿಕ್ಕಿತು.  ಬರಹಕ್ಕೆ ತಕ್ಕಂತೆ ಒಂದೊಂದು ಚಂದದ ಚಿತ್ರ ಹುಡುಕಿ ಬ್ಲಾಗಲ್ಲಿ ಪೇರಿಸ್ತಾ ಬಂದೆ.  ದಿನಕ್ಕೆ ಹತ್ತತ್ತು ಸರ್ತಿ ಒಪನ್ ಮಾಡಿ ನೋಡೋದು.  ಈ ಮೊದಲೆ 58ರ ಹುಟ್ಟು ಹಬ್ಬಕ್ಕೆ ಮಗಳಿಂದ ಟಚ್ ಸ್ಕ್ರೀನ್ ಮೊಬೈಲ್ ಬೇಡಾ ಅಂದರೂ ಕೊರಳಿಗೆ ಪ್ರೀತಿಯ ಕೈಗಳ ಮಾಲೆ ತೊಡಿಸಿ "Happy Birthday mammy" ಅಂತ ನನ್ನ ಕೈಸೇರಿಸಿದ ಈ ಮಾಯಾಂಗನೆನ ಹಾಂಗೊತ್ತಿ ಹೀಂಗೊತ್ತಿ ಬೆರಳುಗಳಿಗೆ Google ಲೋಕದ ಪರಿಚಯ ತನ್ನಷ್ಟಕ್ಕೆ ಆಗುತ್ತಾ ಬಂತು.  ಅಲ್ಲಿ ಏನಿದೆ ಏನಿಲ್ಲ.  ಈ ಲೋಕದ ಪರಿಚಯವೆ ಇಲ್ಲದ ನನಗೆ ಇದೊಂದು ಹೊಸ ಪ್ರಪಂಚದಂತೆ ಗೋಚರಿಸತೊಡಗಿತು.  ಬೆಳಿಗ್ಗೆ ಬೇಗ ಬೇಗ ಮನೆ ಕೆಲಸವೆಲ್ಲ ಮುಗಿಸಿ ಪಟಕ್ ಅಂತ ಮಾಯಾಂಗನೆಯೊಂದಿಗೆ ನನ್ನಾಟ ಶುರು ಆಗಿದ್ದು ಬರ್ತಾ ಬರ್ತಾ ಜಾಸ್ತಿ ಆಯಿತು.  
 
ಹೀಗೆ ನೋಡ್ತಾ ಇದ್ನಾ "ವಿಸ್ಮಯ ನಗರಿ" ಕನ್ನಡದ ಬರಹ ಬರೆದು ಕಳಿಸಿ ಎನ್ನುವ ಒಕ್ಕಣೆ.  ಹಾಂಗೂ ಹಿಂಗೂ ಅಲ್ಲಿಗೆ ಬರಹ ಕಳಿಸೋದು ರೂಢಿ ಆಯಿತು.  ಏನು ಪ್ರತಿಕ್ರಿಯೆ ಬಂತು? ಎಷ್ಟು ಜನ ಓದುತ್ತಿದ್ದಾರೆ? ಇಂಥ ಕುತೂಹಲ ಇಟ್ಟುಕೊಂಡು ನೋಡೋದು ಮತ್ತೆ ಇನ್ನೊಂದು ತಾಣದ ಸರ್ಚಿಂಗು.  
 
ಆಗ ಸಿಕ್ಕಿತು "ಅವಧಿ" ಎಂಬ ಗೀಟಾಕುವ ಗಿಣಿ.  ಅಲ್ಲಿ ನನ್ನ ಈಮೇಲ್ ಒತ್ತಿದೆ.  ದಿನಾ ಅವಧಿಯ ಪ್ರಕಟಣೆ ಬರಲು ಶುರುವಾಯಿತು.  ಒಳ್ಳೊಳ್ಳೆ ಬರಹಗಳು.  ಇಲ್ಲಿ ನನ್ನ ಬರಹ ಬರೋದು ಯಾವಾಗೋ ! ಒಂದೆರಡು ಕಳಿಸಿದೆ.  ಮಖಾ ಅಡಿಗಾಯ್ತು.  ತತ್ತರಿಕೆ ಇಲ್ಯಾಕೊ ಹೊಕ್ಕೊಳೋಕೆ ಆಗ್ತಿಲ್ವಲ್ಲ.  ಏನು ಮಾಡಲಿ.  ಬೇಜಾರು, ಹತಾಷೆ ಮನಸ್ಸಿನ ತುಂಬಾ.  ಎಲ್ಲರ ಬರಹ ನೋಡಿ ಒಳಗೊಳಗೆ ಅಸೂಯೆ, ಕಣ್ಣು ಹನಿಯಾಗುತ್ತಿತ್ತು.
 
ಒಂದಿನ ಅವಧಿಯಲ್ಲಿ  ನನ್ನ ಮೆಚ್ಚಿನ ಸಾಹಿತಿ "ಶ್ರೀ ಜಯಂತ್ ಕಾಯ್ಕಿಣಿ" ಯವರ "ಪಾರ್ಲರ್ ಕಿಟಕಿ" ಬರಹ ಓದಿದೆ ನೋಡಿ.  ಅಲ್ಲಿ ನಿಮ್ಮ ಅನಿಸಿಕೆ ಮುಂದುವರಿಸಬಹುದು ಅಂತಿತ್ತು.  ಏನಾದರಾಗಲಿ ಬರೆಯೋದೆ ಅಂತ ಹಂಗೆ ಕಮೆಂಟಲ್ಲಿ ಹಳೆಯ ಘಟನೆಯ ಒಂದಷ್ಟು ನನಗನಿಸಿ ಒಕ್ಕಣೆ ಅಚ್ಚಾಕದೆ.  ಅರೆರೆ ಸಾಯಂಕಾಲ ಅವಧಿಯಿಂದ ಮೇಲ್ "ನಿಮ್ಮ ಫೋಟೊ ಕಳಿಸಿ, ಬರಹ ಪ್ರಕಟಿಸಬೇಕು".  ಹಮ್ಮಾ......ಅದೇನು ಸಂಭ್ರಮ ಅವಧಿಯಲ್ಲಿ ನಾನು.  ವಾವ್! ಸೂಪರ್. ಮಗಳು ಆಫೀಸಿಂದ ಬರೋದು ಲೇಟು.  ನನಗೇನೂ ಗೊತ್ತಾಗೋಲ್ಲ ಹೆಂಗೆ ಕಳಿಸೋದು.  ಆಗಲೆ WhatsApp ನಲ್ಲಿ ಎಲ್ಲಾ ಮಗಳಿಗೆ ಊದಿದ್ದಾಯ್ತು.  "ಹೌದಾ. ಇರಮ್ಮ ಬರ್ತೀನಿ".  ಆದರೆ ನನ್ನ ತಲೆಗೆ ಹತ್ತಿದ ನಶೆ ಇಳಿತಾನೆ ಇಲ್ಲ.  ಸರಿ ರಾತ್ರಿ ಒಂಬತ್ತೂವರೆಗಂತೂ ನನ್ನ ವಿವರ ಅವಧಿಗೆ ಕಳಿಸಿದ್ದಾಯ್ತು.  ಮಾರನೆ ದಿನ ಎಲ್ಲರ ಹತ್ತಿರ ಹೇಳಿಕೊಂಡಿದ್ದೂ ಆಯ್ತು ಬರಹ ನೋಡಿ.  ಕೆಲವು ದಿನಗಳಲ್ಲೇ ಇನ್ನೊಂದು ಕವನ ಮೊದಲ ಬಾರಿ ಪ್ರಕಟವಾದಾಗ ಇಡೀ ಮನೆಯೆಲ್ಲ ಓಡಾಡಿ ಖುಷಿಯಿಂದ ಕುಣಿದಾಡಿದ್ದು ಮಗಳು ಇವತ್ತಿಗೂ ಜ್ಞಾಪಿಸುತ್ತಾಳೆ."ಅಮ್ಮಾ ನೀ ಚಿಕ್ಕ ಹುಡುಗಿ ಆಗಿದ್ದೆ ಆ ದಿನ"  
 
Yes, ಈ ಬರಹದ ಪಿತ್ತ ಎಂಥವರನ್ನೂ ಬರೆದಾಗ ಮರುಳು ಮಾಡಿಬಿಡುತ್ತದೆ.  ಖುಷಿಯ ಸಂಭ್ರಮದಲ್ಲಿ ಕಳಿಸುವ ಬರಹಗಳು ಪ್ರಕಟವಾದಾಗ ನಮ್ಮ ವಯಸ್ಸು, ಸ್ಥಿತಿ, ಗತಿ ಎಲ್ಲ ಮರೆಸಿ ಅವರ್ಣನೀಯ ಆನಂದ ಮೈ ಮನವೆಲ್ಲ ತುಂಬಿ ಬಿಡುತ್ತದೆ.  ಇದೇ ಖುಷಿ ಯಲ್ಲಿ ಇನ್ನೊಂದು ಬರಹ ಬರೆಯುವ ಹುನ್ನಾರ ಮನದೊಳಗೆ.  
 
ಹೀಗೆ ತಾಣಗಳ ಹುಡುಕಾಟದಲ್ಲಿ ಸಿಕ್ಕಿದ್ದು "ನಿಲುಮೆ".  ಅಬ್ಬಾ! ಇಲ್ಲಿ ಬರುವ ಬರಹಗಳು ಅತ್ಯಂತ ಗಹನವಾಗಿರುತ್ತವೆ.  ಹಾಗೆ ಪ್ರತಿಕ್ರಿಯೆಗಳು ಕೂಡಾ.  ಇಲ್ಲಿ ಪ್ರಕಟವಾಗುವಂಥ ಬರಹ ನನ್ನ ಹತ್ತಿರ ಬರೆಯೋಕೆ ಆಗ್ತಿಲ್ವಲ್ಲ.  ಏನು ಮಾಡಲಿ?  ಪ್ರಯತ್ನ ಮಾಡಿದರೆ ಲೇಖನ ಬರೆಯೋಕೆ ಸಾಧ್ಯವಾ?  ಅದು ಹಂಗೆ ಮನದಲ್ಲಿ ಹುಟ್ಟಬೇಕು.  Philosophy ಬರಹಗಳು ನನಗರಿವಿಲ್ಲದಂತೆ ಆಗಲೆ ಬರೆಯಲು ಶುರು ಮಾಡಿದ್ದೆ.  ಪೇಪರ್ನಲ್ಲೂ ಪ್ರಕಟವಾಯಿತು.  ಅವುಗಳಲ್ಲೊಂದನ್ನು ಆಯ್ಕೆ ಮಾಡಿ ಕಳಿಸಿದಾಗ ಖುಷಿಯಿಂದ "ಬರಿ ರಾಜಕೀಯವೆ ತುಂಬಿರುವ ನಿಲುಮೆ ನಿಮ್ಮ ಬರಹದಿಂದ ಹೊಸ ಹೆಜ್ಜೆಯತ್ತ ಸಾಗಿದೆ" ಇದವರ ಮೇಲ್.  ಅಂದಿನಿಂದ ಇದುವರೆಗೂ ನಿಲುಮೆಯೊಂದಿಗೆ ನನ್ನ ನಂಟು.
 
ಈ ಮಧ್ಯೆ ಇನ್ನೊಂದು ತಾಣವಾದ " ಸಂಪದ"ದಲ್ಲಿ ಪ್ರಕಟವಾದ ನಾ ಬರೆದ ಮೊದಲ ಕಥೆ "ಅವಳು" ಕಥೆಯ ಪ್ರತಿಕ್ರಿಯೆಗೆ  ಬೆರಗಾದೆ.  ಇದುವರೆಗೆ ಸುಮಾರು ಮೂರು ಸಾವಿರ ಹತ್ತತ್ತಿರ ಜನ ಈ ಕಥೆ ಓದಿರುತ್ತಾರೆ. ಸಂಪದದಲ್ಲಿ ಆಯ್ದ ಬರಹದಲ್ಲಿ ಸೆಲೆಕ್ಟ ಆಯಿತು.   ಒಳ್ಳೆಯ ಪ್ರತಿಕ್ರಿಯೆ ಸಿಕ್ಕು ನಾ ಬರೆದ ಎಲ್ಲ ಕಥೆಗಳೂ ಅಲ್ಲಿ ಪ್ರಕಟವಾಗಿವೆ.
 
ಇದ್ದಕ್ಕಿದ್ದಂತೆ ಒಂದು ದಿನ "ರೀಡೂ ಕನ್ನಡ" ದಿಂದ ಮೇಲ್.  ನಿಮ್ಮ ಬರಹ ಅತ್ಯುತ್ತಮವಾಗಿದೆ.  ನಮ್ಮ ತಾಣಕ್ಕೂ ಕಳಿಸಿ.  ಖುಷಿ ಆಯುತು.  ಈಗ ನಾನಿಲ್ಲಿ ಗೆಸ್ಟ ಆಥರ್ ಆಗಿ ನನ್ನ ಅನೇಕ ಬರಹ ಪ್ರಕಟವಾಗಿವೆ, ಪ್ರಕಟವಾಗುತ್ತಿವೆ. ಧನ್ಯವಾದಗಳು ರೀಡೂ!
 
ಈ ಎಲ್ಲ ತಾಣಗಳು ನಮ್ಮ ಬರಹಗಳನ್ನು ನಮಗೆ ಯಾವ ಖರ್ಚಿಲ್ಲದೆ ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ನಮ್ಮನ್ನು ಪರಿಚಯಿಸುವ ಬಹುದೊಡ್ಡ ಉಪಕಾರವನ್ನು ನಮಗೆ ಮಾಡುತ್ತಿವೆ.  ಆಗ ನಮ್ಮ ಕಾಲದಲ್ಲಿ ನವ್ಯ ಕವಿಗಳಿಗೆ ಈ ರೀತಿ ಯಾವ ತಾಣಗಳೂ ಇರಲಿಲ್ಲ, ಇಂಟರ್ನೆಟ್ ಮೊದಲೇ ಇಲ್ಲವೇ ಇಲ್ಲ.  ಬರೆದಿದ್ದು ಬೇರೆಯವರು ಓದಬೇಕೆಂದರೆ ಪತ್ರಿಕಾ ಮಾಧ್ಯಮವೊಂದೇ ಆಗಿತ್ತು.  ಕಳಿಸಿದ ಬರಹಗಳು ಕಸದ ಬುಟ್ಟಿ ಸೇರುತ್ತಿದ್ದವು.  ಪ್ರತೀ ಸಾರಿ ಪೋಸ್ಟ್ ಮಾಡುವಾಗ ಹಣ ವ್ಯಯ ಮಾಡುವುದು ಕೂಡಾ ಕಷ್ಟ ಆಗುತ್ತಿತ್ತು.  ಆದರೆ ಈಗ ಹಾಗಿಲ್ಲ.  ಬರೆಯುವವರಿಗೆ ತುಂಬಾ ಪ್ರೊತ್ಸಾಹವಿದೆ.  ರಾತ್ರಿ ಬೆಳಗಾಗುವುದರಲ್ಲಿ online ನಲ್ಲಿ ಪ್ರಕಟವಾದ ಬರಹಗಳು ಎಷ್ಟೊಂದು ಜನ ಓದಿರುತ್ತಾರೆ.  ಕಾಸಿಲ್ಲದೇ ಓದಬಹುದು, ಖರ್ಚಿಲ್ಲದೆ ಬರಹ ಪ್ರಕಟಣೆಗೆ ಕಳಿಸಬಹುದು.  ನಿಜಕ್ಕೂ ಎಲ್ಲ ತಾಣಗಳ ಕಾರ್ಯ ವೈಖರಿ ಶ್ಲಾಘನೀಯ.  ನನ್ನ ಅನಂತ ಕೃತಜ್ಞತೆಗಳು.
 
ಮತ್ತೆ ಹಾಗೆ ಮುಂದುವರಿದ ದಿನಗಳಲ್ಲಿ ಕಂಡಿದ್ದು FaceBook.  ಇಲ್ಲಿ ಹೆದರುತ್ತ ಹೆದರುತ್ತ ಇಟ್ಟ ಕಾಲು ಈಗ ಯಾವ ಭಯವಿಲ್ಲದೆ ನನ್ನ ಬರಹಗಳನ್ನು ಪ್ರಕಟಿಸುತ್ತಿದ್ದೇನೆ.  ಅದ್ಭುತ ಪ್ರತಿಕ್ರಿಯೆ.  ಇಲ್ಲಿಂದಲೆ ಇನ್ನಿತರ ತಾಣಗಳ ಪರಿಚಯ, ಹೊಸ ಹೊಸ ಬರಹಗಳು ಹುಟ್ಟಿಕೊಳ್ಳೋದು ಮುಂದುವರೆದಿದೆ.  
 
ಇವೆಲ್ಲವುಗಳ ಮಧ್ಯೆ 2015 ಡಿಸೆಂಬರ್ ಮರೆಯಲಾಗದ ಕ್ಷಣ.  ಒಂದಿನ ಇದ್ದಕ್ಕಿದ್ದಂತೆ ಮನೆ ಕಂಪೌಂಡಿನಲ್ಲಿ ಜಾರಿ ಬಿದ್ದು ಬಲಗೈ 36 ದಿನಗಳ ಪ್ಲಾಸ್ಟರಿಂಗ್ ಹಾಕಿಸಿಕೊಂಡಾಗ ಪೆನ್ನು ಹಿಡಿದು ಹೇಗೆ ಬರೆಯಲಿ?  ಅಳು ಒತ್ತರಿಸಿ ಬಂತು.  ಎಡಗೈಯ್ಯಲ್ಲಿ ಬರೆಯುವ ಪ್ರಯತ್ನ ಆಗಲಿಲ್ಲ.  ಆಗ ಮೊಬೈಲ್ ಡೈರಿ ಪರಿಚಯಿಸಿದ ಮಗಳು ಬಲಗೈ ತೋರು ಬೆರಳಿನಲ್ಲಿ ಬರೆಯುವುದನ್ನು ಅಕ್ಷರ ರೂಢಿಸಿಕೊಂಡೆ ಕಷ್ಟಪಟ್ಟು.  ಸುಮಾರು ನಲವತ್ತು ಬರಹ ಕೈ ಮುರಿದಾಗ ಬರೆದೆ.  ಇಂದಿಗೂ ಒಂದೇ ಬೆರಳಲ್ಲಿ ಬರೆಯುವುದು ಪಾದರಸದಂತೆ.  ಆದರೆ ಈಗ ಮೊಬೈಲಲ್ಲಿ ಅಲ್ಲ Mi pad.  
 
ಜೀವನದಲ್ಲಿ ರಾಮಾ ಶಿವಾ ಎಂದು ಜಪ ಮಾಡುವ ವಯಸ್ಸಿನಲ್ಲಿ ನನಗೆ ಸಿಕ್ಕ ಈ ಸಾಹಿತ್ಯ ಲೋಕದಲ್ಲಿ  ಕಥೆ,ಕವನ, ಆಧ್ಯಾತ್ಮ, ,ಚಿಂತನೆ, ಕವಿ ಮನ, ನನ್ನೊಳಗಿನ ಭಾವನೆ, ನೋವು, ನಲಿವು ಇತ್ಯಾದಿ ಬರಹಗಳನ್ನು ಅವಿರತವಾಗಿ ಬರೆಯುತ್ತ ಬರೆಯುತ್ತ ಖುಷಿಯಿಂದ ಕಾಲ ಕಳೆಯುತ್ತಿದ್ದೇನೆ.   ಇನ್ನೂ ಇನ್ನೂ ಬರೆಯುವ ಉತ್ಸಾಹ ನನ್ನದು.  ನನ್ನೊಳಗಿನ ಕಲೆ ಬಡಿದೆಬ್ಬಿಸಿದ ಆ ಒಂದು ಶಕ್ತಿಗೆ ನನ್ನ ನಮನ. ಬರಹ ಓದುವ ತಮಗೆಲ್ಲರಿಗೂ ವಂದನೆಗಳು.
 
ಇರುವ ಅರವತ್ತ್ನಾಲ್ಕು ವಿದ್ಯೆಗಳನ್ನು ಮನುಷ್ಯ ಯಾವಾಗ ಬೇಕಾದರೂ ಕಲಿಯಬಹುದು, ಇದಕ್ಕೆ ವಯಸ್ಸಿನ ಹಂಗಿಲ್ಲವೆಂದು ನನ್ನ ಅಜ್ಜಿ ತಮ್ಮ ಎಪ್ಪತ್ತರ ವಯಸ್ಸಿನಲ್ಲಿ ನನಗೆ ಹೇಳಿದ್ದರು ನಾನು ನನ್ನ ನಲವತ್ತನೇ ವಯಸ್ಸಿನಲ್ಲಿ ಸ್ಕೂಟಿ ಕಲಿಯುವಾಗ.  ಅಜ್ಜಿಯ ವಿಚಾರಧಾರೆ ಅದೆಷ್ಟು ಅಮೋಘ,ಶ್ಲಾಘನೀಯ.  ಇಂದಿಗೂ ನೆನಪಿಸಿಕೊಂಡು ನಾ ತುಳಿದಿರುವ ದಾರಿ ತಪ್ಪಿಲ್ಲ ಈ ವಯಸ್ಸಿನಲ್ಲಿ ಎಂದು ನನಗೆ ನಾನೇ ಹೆಮ್ಮೆ ಪಡುತ್ತಿರುವೆ.☺
 
27-7-2017. 12.12pm