ಅರಿವಿನ ಜಾಡು

ಅರಿವಿನ ಜಾಡು

ಪುಸ್ತಕದ ಲೇಖಕ/ಕವಿಯ ಹೆಸರು
ದಾವಲಸಾಬ ನರಗುಂದ
ಪ್ರಕಾಶಕರು
ಬೆರಗು ಪ್ರಕಾಶನ, ವಿಜಯಪುರ - ೫೮೬ ೨೦೨
ಪುಸ್ತಕದ ಬೆಲೆ
ರೂ. ೧೧೦.೦೦ ಮುದ್ರಣ: ೨೦೨೩

‘ಅರಿವಿನ ಜಾಡು' ಎಂಬ ಲೇಖನಗಳ ಸಂಗ್ರಹವನ್ನು ಬರೆದವರು ದಾವಲಸಾಬ ನರಗುಂದ. ಇವರ ಬರವಣಿಗೆಯ ಬಗ್ಗೆ ಸ್ವತಃ ನರಗುಂದರ ಗುರುಗಳಾದ ಧನವಂತ ಹಾಜವಗೋಳ ಇವರು ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ. ಆ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ...

“ಸ್ನಾತಕೋತ್ತರ ಕನ್ನಡ ಎಂ.ಎ ಮಾಡುವಾಗ ದಾವಲಸಾಬ ನರಗುಂದ ಅವರು ನನ್ನ ವಿದ್ಯಾರ್ಥಿ ಅಂತಿಮ ವರ್ಷದಲ್ಲಿ ಆಂಶಿಕ ಅಂಕಗಳಿಗಾಗಿ ಸಿದ್ಧಪಡಿಸುವ ಕಿರುಪ್ರಬಂಧ ರಚನೆಯ ಸಂದರ್ಭದಲ್ಲಿ ನಾನು ಇವರಿಗೆ ಮಾರ್ಗದರ್ಶಕ, 'ಮುಳಗುಂದ ಪರಿಸರದ ಜಾನಪದ ಅಧ್ಯಯನ' ಎಂಬ ಇವರ ಕಿರುಪ್ರಬಂಧ ನೋಡಿ ತುಂಬಾ ಖುಷಿಪಟ್ಟಿದ್ದೆ. ಇವರು ತುಂಬಾ ಪ್ರತಿಭಾವಂತ ಮತ್ತು ಪರಿಶ್ರಮ ಪಡುವ ವಿದ್ಯಾರ್ಥಿ, ಸರಳ ಸಜ್ಜನಿಕೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡ ಇವರ ಆಸಕ್ತಿ ಕ್ಷೇತ್ರ ಸಂಶೋಧನೆ. ಈಗ ಸಂಶೋಧನ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುತ್ತಿದ್ದಾರೆ. ಈಗ ಲೇಖನಗಳ ಸಂಗ್ರಹವನ್ನು ಕೃತಿರೂಪದಲ್ಲಿ ಪ್ರಕಟಿಸಲು ಮುಂದಾಗಿದ್ದಾರೆ.

'ಅರಿವಿನ ಜಾಡು' ಎಂಬ ಕೃತಿ ಇವರ ಕ್ರಿಯಾಶೀಲತೆಗೆ ಒಂದು ಉತ್ತಮ ನಿದರ್ಶನ. ಒಬ್ಬ ಸಂಶೋಧನ ವಿದ್ಯಾರ್ಥಿ ಹೇಗಿರಬೇಕು ಎಂಬುದಕ್ಕೆ ಇವರು ಉತ್ತಮ ಮಾದರಿ ಎನ್ನಬಹುದು. ದಾವಲಸಾಬ ಅವರು ಈ ಕೃತಿಯಲ್ಲಿ ಹನ್ನೆರಡು ಲೇಖನಗಳನ್ನು ಕೊಟ್ಟಿದ್ದಾರೆ. ಇವರು ಮೂಲತಃ ಮುಳಗುಂದದವರು. ನಾನು ಮುಳಗುಂದ ನಾಡನ್ನು ಕುರಿತು ಸಂಶೋಧನ ಅಧ್ಯಯನ ಮಾಡಿ ಮಹಾಪ್ರಬಂಧವನ್ನು ರಚಿಸಿದವನು. ಮುಳಗುಂದದ ಬಗೆಗೆ ಇವರಿಗೂ ತುಂಬಾ ಆಸಕ್ತಿ. ಅಲ್ಲಿಯ ಪ್ರಾಚೀನ ಶಿಲ್ಪಕಲೆ ಮತ್ತು ಸಾಹಿತ್ಯ ಕುರಿತು ಇವರೂ ಅಧ್ಯಯನ ಮಾಡಿದ್ದಾರೆ. ಈ ಕೃತಿಯ ಮೊದಲ ಲೇಖನವಾಗಿ 'ಮುಳಗುಂದ ಪರಿಸರದ ಕಾಲಭೈರವ' ಎಂಬುದು ಚೆನ್ನಾಗಿ ಮೂಡಿಬಂದಿದೆ. ಆರಂಭದಲ್ಲಿ ಮುಳಗುಂದ ಮಹತ್ವ ಹೇಳಿ, ಭೈರವ ಸಂಪ್ರದಾಯದ ಹಿನ್ನೆಲೆಯನ್ನು ಕೊಟ್ಟಿದ್ದಾರೆ. ಕಾಲಭೈರವನ ವಿವಿಧ ಅವತಾರಗಳನ್ನು ಹೆಸರಿಸಿದ್ದಾರೆ. ಮುಳಗುಂದದ ತಿಗಡಿಕೇರಿಯಲ್ಲಿರುವ ಭೈರವನ ಪ್ರಾಚೀನತೆ, ಸ್ವರೂಪವನ್ನು ವಿವರಿಸಿದ್ದಾರೆ.

'ಶಿಶುನಾಳ ಶರೀಫರು ಮತ್ತು ಆಧುನಿಕ ಸಮಾಜ' ಎಂಬ ಲೇಖನದಲ್ಲಿ ಶಿಶುನಾಳ ಶರೀಫರು ಕನ್ನಡ ತತ್ವ ಸಾಹಿತ್ಯ ಪರಂಪರೆಗೆ ಕೊಟ್ಟ ಕೊಡುಗೆಯ ಜೊತೆಗೆ ಅವರು ಆಧುನಿಕ ಸಮಾಜವನ್ನು ಕಂಡ ಪರಿಯನ್ನು ಹಲವು ನಿದರ್ಶನಗಳ ಮೂಲಕ ತೋರಿಸಿದ್ದಾರೆ. ವಸಾಹತುಶಾಹಿಯ ಕಾಲಘಟ್ಟದ ಮನುಷ್ಯನ ಸ್ಥಿತಿ, ಆತ ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ರೀತಿಯನ್ನು ತತ್ವಪದಗಳ ಮೂಲಕ ವಿವರಿಸಿದ್ದಾರೆ. ದಾಸ ಶ್ರೇಷ್ಠರೆನಿಸಿಕೊಂಡ ಕನಕದಾಸರು ಮತ್ತು ಸಾಮಾಜಿಕ ಮೌಲ್ಯಗಳನ್ನು ವಿಶ್ಲೇಷಿಸಿದ್ದಾರೆ. ಸಾಮಾಜಿಕ ವ್ಯವಸ್ಥೆಯಲ್ಲಿ ಮೌಲ್ಯಗಳು ಬದಲಾಗುತ್ತಿರುತ್ತವೆ. ಅವು ಆ ಕಾಲದಲ್ಲಿ ಬದುಕಿದ ವ್ಯಕ್ತಿಗಳನ್ನು ಅವಲಂಬಿಸಿರುತ್ತವೆ. ಪ್ರೀತಿ, ವಿಶ್ವಾಸ, ಸ್ನೇಹ, ಪ್ರಾಮಾಣಿಕತೆ. ನಡತೆ ಮೊದಲಾದವುಗಳು ಮೌಲ್ಯಗಳೆನಿಸುತ್ತವೆ. ಕನಕದಾಸರು ಬೋಧಿಸಿದ ಮೌಲ್ಯಗಳು ಎಷ್ಟು ಸರಳ ಸಹಜವಾಗಿದ್ದವು ಎಂಬುದನ್ನು ಎತ್ತಿ ತೋರಿಸಿದ್ದಾರೆ.

'ಅಲ್ಲಮಪ್ರಭು ಮತ್ತು ಶಿಶುನಾಳ ಶರೀಫರ ದೃಷ್ಟಿಯಲ್ಲಿ ದೇಹ ಮತ್ತು ಮನಸ್ಸು' ಎಂಬ ಲೇಖನ ತುಂಬಾ ಮಾರ್ಮಿಕವಾಗಿದೆ. ದೇಹ ಮತ್ತು ಮನಸ್ಸಿನ ನಿಗೂಢತೆ ಬಗೆಗೆ ಈ ಇಬ್ಬರು ದಾರ್ಶನಿಕರು ತುಂಬಾ ಮೌಲಿಕವಾಗಿ ಮಾತನಾಡಿದ್ದಾರೆ. ದೇಹ ಮತ್ತು ಮನಸಿನ ಗುಣಾದಿಗಳನ್ನು ಒರೆಗೆ ಹಚ್ಚಿದ ಈ ದಾರ್ಶನಿಕರ ಪರಿಯನ್ನು ಲೇಖಕರು ಎಳೆಎಳೆಯಾಗಿ ಬಿಡಿಸಿ ತೋರಿಸಿದ್ದಾರೆ. ಇಂಥ ಗಹನ ವಿಷಯಗಳನ್ನು ಎಲ್ಲರಿಗೂ ತಿಳಿಯುವಂತೆ ವಿವರಿಸುವುದು ದಾವಲಸಾಬ ಅವರ ಶೈಲಿಯ ವಿಶೇಷವಾಗಿದೆ. ಈ ಲೇಖನಕ್ಕೆ ಪೂರಕ ಎಂಬಂತೆ ಅವರ 'ಶಿಶುನಾಳ ಶರೀಫರ ತತ್ವಪದಗಳಲ್ಲಿ ಮನೋವಿಶ್ಲೇಣಾತ್ಮಕ ನೆಲೆ' ಎಂಬ ಲೇಖನವಿದೆ. ಪ್ರಾಣಿ, ಪಕ್ಷಿಗಳ ಪ್ರತೀಕಗಳೊಂದಿಗೆ ಮನೋವಿಶ್ಲೇಷಣೆ ನೆಲೆಗಳನ್ನು ಗುರುತಿಸಿದ್ದಾರೆ. ಹೆಣ್ಣು, ಹೊನ್ನು, ಮಣ್ಣು ಇವನ್ನು ತಿರಸ್ಕರಿಸುವ ಅಗತ್ಯವಿಲ್ಲ. ಇವುಗಳ ವಿಚಾರದಲ್ಲಿ ಮನಸ್ಸು ಮಿತಿ ಮೀರಬಾರದೆಂಬ ತಿಳುವಳಿಕೆಯನ್ನು ಶರೀಫರು ಕೊಟ್ಟಿದ್ದಾರೆ.

'ಶಿಶುನಾಳ ಶರೀಫರ ತತ್ವಪದಗಳಲ್ಲಿ ಪ್ರತಿಮಾಲೋಕ' ಎಂಬ ಲೇಖನದಲ್ಲಿ ಶರೀಫರು ಅನಾವರಣಗೊಳಿಸಿದ ಪ್ರತಿಮಾಲೋಕದ ವಿವರವಿದೆ. ಹೇಳಬೇಕಾದುದನ್ನು ಪರಿಣಾಮಕಾರಿಯಾಗಿ ಹೇಳುವ ಸಂದರ್ಭಗಳಲ್ಲಿ ಕವಿ ಪ್ರತಿಮೆಗಳನ್ನು ಬಳಸುತ್ತಾನೆ. ಶಿಶುನಾಳ ಶರೀಫರು ಆಧ್ಯಾತ್ಮಿಕ ವಿಷಯಗಳನ್ನು ಪ್ರತಿಪಾದಿಸುವಾಗ ಬಳಸಿದ ಪ್ರತಿಮೆಗಳನ್ನು ಅನೇಕ ತತ್ವಪದಗಳಲ್ಲಿ ಹುಡುಕಿ ವಿಶ್ಲೇಷಣೆ ಮಾಡಿದ್ದಾರೆ. ಕೋಳಿ, ನಾಯಿ, ಹುಚ್ಚುನಾಯಿ, ಮರ, ಗಿರಣಿ ಮೊದಲಾದವುಗಳನ್ನು ಪ್ರತಿಮೆಗಳಾಗಿ ಬಳಸಿ ಮನುಷ್ಯನ ತೊಳಲಾಟವನ್ನು ಶರೀಫರು ಚಿತ್ರಿಸಿದ್ದಾರೆ.

ದಾವಲಸಾಬ ನರಗುಂದ ಅವರು ತಮ್ಮ ಆಸಕ್ತಿಯನ್ನು ಈ ಲೇಖನಗಳ ಮೂಲಕ ತೋರಿಸಿದ್ದಾರೆ. ಸಂಶೋಧನ ಅಧ್ಯಯನದ ಜೊತೆಗೆ ವಿವಿಧ ಸಂಶೋಧನಾತ್ಮಕ, ವಿಮರ್ಶಾತ್ಮಾಕ ಲೇಖನಗಳನ್ನು ಬರೆಯುವ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿರುವುದು ಬೆಳವಣಿಗೆಯ ಲಕ್ಷಣವಾಗಿದೆ. ಓದು, ಬರವಣಿಗೆ ಮತ್ತು ಪ್ರಕಟಣೆ ಇವು ಕ್ರಿಯಾಶೀಲ ವ್ಯಕ್ತಿಯ ವಿಶೇಷ ಗುಣಗಳಾಗಿವೆ. ಇಂಥ ಗುಣಗಳನ್ನು ಹೊಂದಿದ ದಾವಲಸಾಬ ನರಗುಂದ ಅವರು ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಲಿ ಎಂದು ಆಶಿಸುವೆ.