ಅರಿವಿನ ಬಂಡಾಯ
ನರಹಳ್ಳಿ ಬಾಲಸುಬ್ರಹ್ಮಣ್ಯ ಇವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಇವರು ಹಲವಾರು ವಿಮರ್ಶಾ ಕೃತಿಗಳನ್ನು, ಪ್ರಬಂಧ ಸಂಕಲನಗಳನ್ನು ರಚಿಸಿದ್ದಾರೆ. ಇವರ ನೂತನ ಕೃತಿ 'ಅರಿವಿನ ಬಂಡಾಯ'ವನ್ನು ಕಣ್ಣ ಕೈದೀವಿಗೆಯ ಬೆಳಕು ಎಂದಿದ್ದಾರೆ. ಪುಸ್ತಕದ ಒಳಪುಟಗಳಿಂದ ಆಯ್ದ ಕೆಲವು ಸಾಲುಗಳೂ ಇಲ್ಲಿವೆ…
"...ಇಂದು ಜಗತ್ತನ್ನು ಗಾಢವಾಗಿ ಪ್ರಭಾವಿಸುತ್ತಿರುವ ಮೂರು ಪ್ರಭಾವೀ ಶಕ್ತಿಗಳೆಂದರೆ ರಾಜಕೀಯ, ಧರ್ಮ ಹಾಗೂ ತಂತ್ರಜ್ಞಾನ. ಇವುಗಳಲ್ಲಿ ರಾಜಕೀಯ ಹಾಗೂ ಧರ್ಮ ಅಧಿಕಾರ ಕೇಂದ್ರಗಳಾಗಿದ್ದು ಅಧೀನ ಮನೋವೃತ್ತಿಯನ್ನು ಮಾತ್ರ ಪೋಷಿಸುತ್ತವೆ. ಸ್ವತಂತ್ರ ಚಿಂತನೆಗೆ, ಸೃಜನಶೀಲ ಕ್ರಿಯಾತ್ಮಕತೆಗೆ ಇಲ್ಲಿ ಅವಕಾಶವಿಲ್ಲ. ಇನ್ನು ಪ್ರಕೃತಿಯ ಜೊತೆ ಶೋಷಣಾತ್ಮಕ ಸಂಬಂಧ ಹೊಂದಿರುವ ತಂತ್ರಜ್ಞಾನ ಅಭಿವೃದ್ಧಿಯ ಹೆಸರಿನಲ್ಲಿ ಆತ್ಮ ಸಂಯಮವಿರದ ಭೋಗಾಸಕ್ತಿಗೆ ಕಾರಣವಾಗಿ ಸ್ಪರ್ಧಾ ಜಗತ್ತೊಂದನ್ನು ಸೃಷ್ಟಿಸಿದೆ. ಪರಿಣಾಮವಾಗಿ ಸರ್ವಾಂಗೀಣ ಬೆಳವಣಿಗೆಯ ಬದಲು ಸಂಪತ್ತು ಮತ್ತು ಅಧಿಕಾರಗಳ ಕೇಂದ್ರೀಕರಣ ಹಾಗೂ ಮಾರುಕಟ್ಟೆ ಆಧಾರಿತ ಅಭಿವೃದ್ಧಿಪಥದತ್ತ ಸಾಗುತ್ತಿದ್ದೇವೆ. ರಾಜಕೀಯ ಹಾಗೂ ಧರ್ಮ ನಮ್ಮ ಭವಲೋಕದ ವಿನ್ಯಾಸವನ್ನು ತಮ್ಮ ಅಧೀನದಲ್ಲಿರುವಂತೆ ರೂಪಿಸುತ್ತಿದ್ದರೆ, ಧರ್ಮ ನಮ್ಮ ಭಾವಜಗತ್ತನ್ನು ಭ್ರಷ್ಟಗೊಳಿಸುತ್ತಿದೆ. ಮನುಷ್ಯನ ಸಹಜ ಚೈತನ್ಯವನ್ನು ಈ ಮೂರೂ ಶಕ್ತಿಗಳು ನಿಯಂತ್ರಿಸುತ್ತಿವೆ. ಇಂತಹ ಹೊತ್ತಿನಲ್ಲಿ "ಸ್ವಾಯತ್ತಪ್ರಜ್ಞೆ"ಯ ಸಾಹಿತ್ಯ ಮಾತ್ರ ಇಂದು ಎದುರಿಸುತ್ತಿರುವ ಬಿಕ್ಕಟ್ಟುಗಳಿಂದ ನಮ್ಮನ್ನು ಪಾರು ಮಾಡಬಲ್ಲದು. ಮಾನವೀಯ ನೆಲೆಯಲ್ಲಿ ನಿಂತು ಪರಿಭಾವಿಸುವ ಶಕ್ತಿಯನ್ನು ಸಮಾಜ ಪಡೆದುಕೊಂಡಾಗ ಪರಿಹಾರದ ಇತ್ಯಾತ್ಮಕ ಸಾಧ್ಯತೆಗಳು ಹೊಳೆಯಬಲ್ಲವು. ಸಾಹಿತ್ಯ ಸದ್ದುಗದ್ದಲವಿಲ್ಲದೆ ತನ್ನ ಅಂತಃಶಕ್ತಿಯಿಂದಲೇ ಜನಮಾನಸದಲ್ಲಿ ಪ್ರಗತಿಪರ ಬದಲಾವಣೆ ತರಬಲ್ಲುದು ಎಂಬುದನ್ನು ಇತಿಹಾಸ ಹೇಳುತ್ತದೆ. ಇಲ್ಲಿನ ಲೇಖನಗಳ ಹಿಂದೆ ಈ ನಂಬಿಕೆಯಿದೆ."