ಅರಿವು ಮೂಡಿದಾಗ

ಅರಿವು ಮೂಡಿದಾಗ

ಬರಹ

ಈಚೆಗೆ ದಿನನಿತ್ಯವೂ ನೆಡೆಯುತ್ತಿರುವ ಹತ್ಯಾಕಾಂಡವನ್ನು ನೋಡುವಾಗ ಅಥವಾ ಅದರ ಬಗ್ಗೆ ಕೇಳಿದಾಗ ’ಜನರಲ್ಲಿ ಅರಿವು ಮೂಡುವುದೇ ಇಲ್ಲವೇ’ ಅನ್ನಿಸುತ್ತದೆ ಅಲ್ಲವೇ? ಈ ಪ್ರಶ್ನೆ ಮನದಲ್ಲಿ ಮೂಡುತ್ತಿದ್ದಂತೆ ಇತಿಹಾಸದ ಹಲವು ಪುಟಗಳನ್ನು ತೆರೆದೆ. ಕ್ರೂರಿಗಳಾದ ಹಲವಾರು ರಾಜಾಧಿರಾಜರುಗಳು, ಕಳ್ಳಕಾಕರು ಒಂದು ದಿವ್ಯ ಕ್ಷಣದಲ್ಲಿ ಅರಿವು ಮೂಡಿದವರಾಗಿ ಸಕಲವನ್ನೂ ತ್ಯಜಿಸಿ ಬೈರಾಗಿಗಳಾಗಿಯೋ ಮತ್ತೇನೋ ಆಗಿ ತಮ್ಮ ಮಿಕ್ಕ ಜೀವಿತವನ್ನು ಮಾನವ ಕಲ್ಯಾಣಕ್ಕಾಗಿಯೇ ಮೀಸಲಿಟ್ಟಂತಹ ಉದಾಹರಣೆಗಳು ಸಿಕ್ಕವು.

ಕೆಲವು ಪ್ರಸಂಗಗಳನ್ನು ಕವನ ರೂಪದಲ್ಲಿ ಹೆಣೆದಿದ್ದೇನೆ...

ಜುಗ್ಗನಾಗಿದ್ದ ಸಿರಿವಂತ ಶ್ರೀನಿವಾಸ ನಾಯಕ
ಬಂದನಾ ವಿಠಲ ನೆನಪಿಸಲು ಇವನ ಕಾಯಕ
ಹರಿಯಿತಂದು ಅಂಧಕಾರ, ದಾಸನಾದನು ನಾಯಕ
ಕೆಡುಕಳಿದು ಮೂಡಿತು ಅರಿವು, ಸತಿಯಾದಳದಕೆ ಪ್ರೇರಕ

ನಂದನಿಂದ ನಿಂದಿತನಾದ ಚಾಣಕ್ಯನೆಂಬ ಆಚಾರ್ಯ
ಹಗೆಕಾರನ ಕಣ್ಣಿಗೆ ಬಿದ್ದ ಚಂದ್ರಗುಪ್ತ ಮೌರ್ಯ
ಮೌರ್ಯ ಮೆರೆದಾಡಿದ ಯುದ್ದಗಳಲಿ ತೋರುತ ತನ್ನ ಶೌರ್ಯ
ಕೆಡುಕಳಿದು ಮೂಡಿತು ಅರಿವು, ಕರುಣೆಯ ಬೈರಾಗಿಯಾದ ರಾಜಸೂರ್ಯ

ತಾ ಚೆಲ್ಲಾಡಿ ರುಂಡ ಮುಂಡ, ’ಚಂಡ’ ನೆಂದೇ ಖ್ಯಾತನಾದ ಅಶೋಕ
ಕ್ರೂರತನದಿ ಅಡ್ಡಬಂದವರನ್ನು ಮರೆವಂತೆ ಮಾಡಿದ್ದ ಈ ಲೋಕ
ಕಳಿಂಗ ಯುದ್ದದಲಿ ಜನರ ಕೊಚ್ಚಿಕೊಂದು ತಾ ಹರಡಿದ್ದ ಎಲ್ಲೆಡೆ ಶೋಕ
ಸಾವು, ನೋವಿನ ಹಿಂಸಾತ್ಮಕ ದೃಶ್ಯವದು ಮಾಡಿತವನ ಮೂಕ
ಕೆಡುಕಳಿದು ಮೂಡಿತು ಅರಿವು, ಆದನವನು ಭಾರತದ ಕುಲ ದೀಪಕ

ಮತ್ಸರದ ಮುಸುಕು ಭರತನಲ್ಲಿ ವಾತ್ಸಲ್ಯವನ್ನು ಮರೆಸಿತ್ತು
ಐಶ್ವರ್ಯದಾ ಮೋಹ ಬಾಹುಬಲಿಯನ್ನು ಯುದ್ದಕ್ಕೆ ಕರೆದಿತ್ತು
ಅಧಿಕಾರಕ್ಕಾಗಿ ಈರ್ವರ ನಡುವೆ ಮಲ್ಲ ಯುದ್ದವು ನೆಡೆದಿತ್ತು
ಕೆಡುಕಳಿದು ಮೂಡಿತು ಅರಿವು, ವೈರಾಗ್ಯವು ಗೊಮ್ಮಟನ ಹೊಕ್ಕಿತ್ತು
ತೀರ್ಥಂಕರನಾದರೂ ತಲೆಬಾಗೆನೆಂಬ ಅಹಂಕಾರವು ಮನೆ ಮಾಡಿತ್ತು
ಅಹಂ ಎಂಬೋ ಆನೆಯ ಇಳಿಯೆಂಬ ಸೋದರಿಯರ ಕೂಗು ತಟ್ಟಿತ್ತು
ಅಹಂ ಅಳಿಯಿತು ಮೂಡಿತು ಅರಿವು ಜ್ಞ್ನಾನದಾ ಜ್ಯೋತಿಯು ಬೆಳಗಿತ್ತು

ದಾರಿಹೋಕರನು ದೋಚಿ ಬಾಚಿ ಕೊಳ್ಳೆಹೊಡೆಯುತ್ತ ಬೀಗಿದ
ನಾರದರ ಮಹಿಮೆ ಅರಿಯದೆ ಅವರನ್ನೇ ಅಡ್ಡಗಟ್ಟಿದ
ಅವರಾಣತಿಯಂತೆ ಮನೆಗೆ ತೆರಳಿ ಪಾಪ ಹೊರುವಂತೆ ಕೇಳಿದ
ತನ್ನ ಪಾಪಕೆ ತಾನೊಬ್ಬನೇ ಹೊಣೆ ಎಂಬ ಜ್ಞ್ನಾನ ಹೊಂದಿದ
ನಾರದರಿಗೆ ಶರಣಾಗಿ ರಾಮನಾಮ ಮಂತ್ರವ ಪಡೆದ
ಕೆಡುಕಳಿದು ಮೂಡಿತು ಅರಿವು, ರಾಮಾಯಣವನ್ನೇ ಬರೆದ

ಹೊಸ ವರ್ಷದಲ್ಲಾದರೂ ದ್ವೇಷ ಅಳಿದು ಅರಿವು ಮೂಡಿ ಎಲ್ಲೆಡೆ ಶಾಂತಿ ನೆಲೆಸಲಿ ಎಂಬುದೇ ಎನ್ನ ಪ್ರಾರ್ಥನೆ....