ಅರಿವು

ಅರಿವು

ಕವನ

ಸಿಂಗಾರದ ಹುಡುಗಿ ಬಂಗಾರದ ಗುಣ

ಚಂದುಳ್ಳಿ ಚಲುವೆ ಇನ್ನೆಲ್ಲಿ ದೊರೆತಾಳು

ಎಂದೆಲ್ಲಾ ಬಣ್ಣಿಸಿ ಮಗನ ಮಡದಿಮಾಡಿ

ಮನೆ ತುಂಬಿಸಿಕೊಂಡು ಮೆರೆದರಂದು

ಮನ ತುಂಬಲಿಲ್ಲ ಮಮತೆ ಮೂಡಲಿಲ್ಲ

ಅನುರಾಗವರಳಲೇ ಇಲ್ಲ, ಇನ್ನೆಲ್ಲಿ ವಾತ್ಸಲ್ಯ ?

ಇನ್ನೆಲ್ಲಿಯ ಬದುಕು ? ಇನ್ನೆಲ್ಲಿಯ ಬಾಂಧವ್ಯ?

ಆಳಿತ್ತು ಕಾಳಿತ್ತು ಮನೆತುಂಬ

ಧನಧಾನ್ಯ ತುಂಬಿ ತುಳುಕಾಡಿತ್ತು

ಮಾವನಾ ಕಣ್ಣು ಅಪ್ಪಯ್ಯನಾ ಆಸ್ತಿಯ ಮೇಲಿತ್ತು

ಅತ್ತೀಯಾ ಮನವು ಅವ್ವನಾ ಒಡವೀಯಾ ಬಯಸಿತ್ತು !

ಪತಿರಾಯನ ದೃಷ್ಟಿ ಆಕಿಯ ಸಂಪಾದನೆಯ ಮೇಲಿತ್ತು !

ಭವ್ಯ ಬಂಗಲೆಯಿತ್ತು ಬೆಳ್ಳಿ ಮಂಚಿತ್ತು

ಹೂವಿನಾ ಸುಪ್ಪತ್ತಿಗೆ ಹಾಸಿತ್ತು

ಕೊಟ್ಟಿಗೆಯಂತ ವಾಸ ಅವಳಿಗೆ ಕಾದಿತ್ತು.

ಹರಕಲು ಚಾಪೆ ಕೈ ಬೀಸಿ ಅವಳ ಕರೆದಿತ್ತು

ಭಕ್ಷ ಭೋಜ್ಯದ ಪರಿಮಳ ಮನೆಯಲ್ಲಿ ಹರಡಿತ್ತು

ಹಾಲು ವೊಸರು ತುಪ್ಪದ ಹೊಳಿ ಹರಿದಿತ್ತು

ತಂಗಳು, ಎಂಜಲು ಊಟವು ಅವಳ ಕರೆದಿತ್ತು

ಕುಡಿಯುವ ನೀರಿಗೂ ಗತಿಯಿಲ್ಲದಂತಾಗಿತ್ತು

ಅಪ್ಪೈನ ಮರ್ಯಾದಿ, ಅವ್ವಯ್ಯನ ಸಂಕಟ

ತಂಗಿಯರ ಭವಿಷ್ಯದರಿವು ಎಲ್ಲವನ್ನು ಸಹಿಸಿತ್ತು

ತಾಯ್ತನದ ಸುಖದ ಸವಿ ದೂರವೇ ಉಳಿದಿತ್ತು

ಕಟ್ಟಿದ ಕನಸುಗಳೆಲ್ಲ ಕ್ಷಣಾರ್ಧದಲಿ ನುಚ್ಚುನೂರಾಗಿತ್ತು

ತನ್ನತನದರಿವು ಎಲ್ಲವನೂ ಮೆಟ್ಟಿ ನಿಲ್ಲುವಂತೆ ಮಾಡಿತ್ತ್ತು

ತನ್ನ ಬದುಕ ತಾ ಹಸನುಗೊಳಿಸಿಕೊಳ್ಳುವ ಹಾದಿತೆರೆದಿತ್ತು

ಆತಂಕದ ಕ್ಷಣವಳಿದು ಸಾಧಿಸುವ ಛಲವು ತುಂಬಿ ತುಳುಕಿತ್ತು.

ಭವಿಷ್ಯದಾ ಹಾದಿ ಸ್ಪಷ್ಟವಾಗಿ ಮನದಲಿ ರೂಪುಗೊಂಡಿತ್ತು!

ಆತ್ಮಸ್ಥೈರ್ಯದ ಮುಂದೆ ಎಲ್ಲವೂ ಗೌಣ ಎಂಬರಿವ ಮೂಡಿಸಿತ್ತು!

********************

Comments