ಅರುಣೋದಯ

ಅರುಣೋದಯ

ಕವನ

ಏಳು ,ಎದ್ದೇಳು
ನಿದ್ದೆಗಣ್ಣನು ತೆರೆದೊಮ್ಮೆ ನೋಡು
ಹೊಸ ಶತಮಾನದ
ಅರುಣೋದಯವಾಗಿದೆ ಇಂದು...!

ಮೂಡಣದಲ್ಲಿ ಉಷೆ
ಮೂಡಿ ಬರುತಿಹಳು
ಕೆಂಬಣ್ಣದ ಓಕುಳಿಯ ಚೆಲ್ಲಿ
ಹೂಬನಗಳೆಲ್ಲಾ
ಕಾದು ನಿಂತಿಹವು ಇಂದು
ರಂಗು ರಂಗಿನ ಉಡುಗೆಯಲ್ಲಿ

ಹಕ್ಕಿಗಳೆಲ್ಲ ಹಾಡುತಿಹವು
ಸುಪ್ರಭಾತ ಇನಿದನಿಯಲಿಂದು
ಪುಷ್ಪವೃಷ್ಟಿಗೈಯುತಿಹವು ತರುಲತೆಗಳೆಲ್ಲ
ತಲೆಬಾಗಿ ನಿಂದು
ಕಾಲನ ಪಯಣದಲಿ
ಹೊಸ ಹೆಜ್ಜೆಯ ಪ್ರಾರಂಭ
ಮಾತು ಮಾತಿಗೆ ನಿಲುಕದ
ಸೃಷ್ಟಿಯ ಸೊಬಗಿನ ಸಂಭ್ರಮ..!
ಚರಾಚರಗಳಲ್ಲಿ ಹರ್ಷದ
ಹೊನಲುಕ್ಕಿ ಹರಿಯಲಿ
ಹೊಸ ವರ್ಷದ ಆಗಮನ
ಸರ್ವರಿಗೂ ಸಂತಸವ ನೀಡಲಿ....!!