ಅರೇಬಿಯದ ಇರುಳು
ನಾವೆಲ್ಲಾ ಸಣ್ಣವರಿರುವಾಗ ಓದುತ್ತಿದ್ದ ಪುಸ್ತಕವಿದು. ‘ಅರೇಬಿಯನ್ ನೈಟ್ಸ್' ಎಂಬ ಪುಸ್ತಕದ ಕಥೆಗಳನ್ನು ಅರೇಬಿಯದ ಇರುಳು ಎಂಬ ಹೆಸರಿನಲ್ಲಿ ಎಸ್. ರಮಾನಂದ ಇವರು ಅನುವಾದಿಸಿದ್ದಾರೆ. ಪ್ರಕಾಶಕರು ಪ್ರಸ್ತಾವನೆಯಲ್ಲಿ ಅರೇಬಿಯನ್ ನೈಟ್ಸ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ಹಲವಾರು ಸಣ್ಣ ಹಾಗೂ ದೊಡ್ಡ ಕಥೆಗಳು ಇವೆ. ಬಹಳ ಹಿಂದೆ ಮಧ್ಯಪೂರ್ವ ದೇಶಗಳು ಎಂದು ಕರೆಯಲ್ಪಡುವ ಅರೇಬಿಯಾದಲ್ಲಿ ಅರಸರು (ಖಲೀಫರು) ಆಳುತ್ತಿದ್ದರು. ಶಹರಿಯಾರ್ ಎಂಬ ದೊರೆಯು ಆಳುತ್ತಿದ್ದ ಸಂದರ್ಭದಲ್ಲಿ ದೇಶವು ಸುಭಿಕ್ಷವಾಗಿತ್ತು. ಅವನ ಬಳಿ ಹಲವಾರು ಸಿಪಾಯಿಗಳಿದ್ದರು. ರಕ್ಷಕರು, ಸೇವಕರು ಹಾಗೂ ಗುಲಾಮರೂ ಇದ್ದರು. ಅಧ್ಭುತವಾದ ಅರಮನೆಯಿತ್ತು. ಆದರೆ ಅವನಿಗೆ ಕೊರತೆಯಿದ್ದದ್ದು ವಿಶ್ವಾಸಾರ್ಹ ಪತ್ನಿಯದ್ದು. ಅವನು ಹಲವಾರು ಮಂದಿ ಹುಡುಗಿಯರನ್ನು ಮದುವೆಯಾದರೂ ಅವನಿಗೆ ಅವರಲ್ಲಿ ಒಂದಲ್ಲಾ ಒಂದು ಕೊರತೆ ಕಾಣಿಸುತ್ತಿತ್ತು. ಮದುವೆಯ ಮೊದಲ ರಾತ್ರಿ ಕಳೆದು ಬೆಳಗ್ಗೆಯಾದ ತಕ್ಷಣ ಅವನು ತನ್ನ ಹೆಂಡತಿಯನ್ನು ಕೊಲ್ಲಿಸುತ್ತಿದ್ದ. ಹೀಗಾಗಿ ಅವನಿಗೆ ಹುಡುಗಿಯನ್ನು ಕೊಡಲು ಯಾರೂ ಮುಂದೆ ಬರುವುದಿಲ್ಲ. ಅದೇ ಚಿಂತೆಯಲ್ಲಿ ಸುಲ್ತಾನನು ತನ್ನ ಮಂತ್ರಿಯಲ್ಲಿ ಈ ವಿಷಯ ತಿಳಿಸಿ ತನಗಾಗಿ ಹುಡುಗಿ ಹುಡುಕಲು ಹೇಳುತ್ತಾನೆ. ಮಂತ್ರಿಗೆ ಸಂಕಷ್ಟಕರ ಪರಿಸ್ಥಿತಿ. ಅವನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಶಹರಾಜಾದಾ ಹಾಗೂ ದುನಿಯಾಜಾದಾ. ದೊಡ್ಡವಳಿಗೆ ಕತೆ-ಕಾವ್ಯ ರಚನೆಯಲ್ಲಿ ಬಹಳ ಆಸಕ್ತಿ ಇತ್ತು. ತನ್ನ ತಂದೆಯ ನೋವು ಅರಿತ ಶಹರಾಜಾದಾ ತಾನು ರಾಜನನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಾಳೆ. ಒಲ್ಲದ ಮನಸ್ಸಿನಿಂದ ಮಂತ್ರಿ ಈ ವಿಷಯವನ್ನು ಮಹಾರಾಜನಲ್ಲಿ ತಿಳಿಸಿದಾಗ ಅವನಿಗೆ ಬಹಳ ಸಂತೋಷವಾಗುತ್ತದೆ. ಶಹರಾಜಾಳ ಸಹೋದರಿಯೂ ಅರಮನೆಯ ನೌಕರಳಾಗಿ ಸೇರಿಕೊಳ್ಳುತ್ತಾಳೆ.
ಶಹರಿಯಾರ್ ದೊರೆಗೆ ನಿದ್ರಾಹೀನತೆಯ ಸಮಸ್ಯೆ ಇತ್ತು. ಆ ಕಾರಣದಿಂದ ಅವನು ಸದಾ ಮಂಪರಿನಲ್ಲೇ ಇರುತ್ತಿದ್ದ. ಇದನ್ನು ಅರಿತ ಶಹರಾಜಾ ರಾಜನಿಗೆ ಪ್ರತೀ ದಿನ ಒಂದು ಕತೆ ಹೇಳುತ್ತೇನೆ ಎಂದು ಯೋಚನೆ ಮಾಡುತ್ತಾಳೆ. ರಾಜನಿಗೂ ಅವಳ ಈ ಉಪಾಯ ಇಷ್ಟವಾಗುತ್ತದೆ. ಕಥೆಗಳು ಎಷ್ಟು ರೋಚಕವಾಗಿರುತ್ತಿದ್ದುವೆಂದರೆ ರಾಜನಿಗೆ ಪ್ರತೀ ರಾತ್ರಿ ಕಥೆ ಕೇಳಲೇ ಬೇಕೆಂಬ ಆಶೆಯಾಗುತ್ತಿತ್ತು, ಅವನ ಗಮನವೆಲ್ಲಾ ಹೆಂಡತಿ ಹೇಳುವ ರೋಚಕ ಕಥೆಗಳ ಮೇಲೇಯೇ ಇದ್ದುದರಿಂದ ಅವನಿಗೆ ಪತ್ನಿಯ ಯಾವುದೇ ಕೊರತೆ ಕಂಡು ಬರುವುದೇ ಇಲ್ಲ. ಪ್ರತೀ ರಾತ್ರಿ ಶಹರಾಜಾ ಹೇಳಿದ ಕಥೆಗಳೇ ಅರೇಬಿಯನ್ ನೈಟ್ಸ್ ಎಂದು ಖ್ಯಾತಿಯಾಗಿವೆ.
ಈ ಪುಸ್ತಕದಲ್ಲಿ ಭೂ ಪ್ರದೇಶದ ಅಬ್ದುಲ್ಲಾ, ಜಲಪ್ರದೇಶದ ಅಬ್ದುಲ್ಲಾ, ಸುಂದರ ಗುಲಾಮ ಮತ್ತು ಆಲಿಶಾರ, ಜಾಣ ಹುಡುಗ, ಹೆಣ್ಣು ನವಿಲು, ಗಂಡು ನವಿಲು, ಬಾತುಕೋಳಿ, ಚಿಕ್ಕ ಸಿಂಹ, ಕತ್ತೆ, ಕುದುರೆ, ಒಂಟೆ ಮೊದಲಾವುದುವುಗಳ ಕಥೆ, ನಿರಕ್ಷರಿ ಶಿಕ್ಷಕ ಮುಂತಾದ ಕಥೆಗಳಿವೆ. ಈ ಪುಸ್ತಕವನ್ನು ಮಕ್ಕಳಿಗಾಗಿಯೇ ತಯಾರು ಮಾಡಿರುವುದರಿಂದ ಸ್ವಲ್ಪ ಕಥೆಗಳು ಮಾತ್ರ ಇವೆ. ಸುಮಾರು ನೂರು ಪುಟಗಳ ಪುಸ್ತಕವು ೧೯೮೬ರಲ್ಲಿ ಮುದ್ರಿತವಾಗಿದೆ.