ಅರ್ಜುನನ ಸಾವಿಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿ ಕಾರಣವೇ?

ಅರ್ಜುನನ ಸಾವಿಗೆ ಅರಣ್ಯ ಇಲಾಖೆಯ ಬೇಜವಾಬ್ದಾರಿ ಕಾರಣವೇ?

ಜಗತ್ಪ್ರಸಿದ್ಧ ಮೈಸೂರು ದಸರೆಯಲ್ಲಿ ೮ ಬಾರಿ ಅಂಬಾರಿ ಹೊತ್ತು, ನಾಡಿನ ಕಣ್ಮಣಿಯಾಗಿದ್ದ ಅರ್ಜುನ ಆನೆಯು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ದುರ್ಘಟನೆಯಿಂದಾಗಿ ಪ್ರಾಣಿಪ್ರಿಯರ ವಲಯದಲ್ಲಿ ಸೂತಕದ ಛಾಯೆ ಮನೆಮಾಡಿದೆ. ದುರ್ಘಟನೆಯಿಂದಾಗಿ ಪ್ರಾಣಿಪ್ರಿಯರ ವಲಯದಲ್ಲಿ ಸೂತಕದ ಛಾಯೆ ಮನೆಮಾಡಿದೆ. ಕಾಡಾನೆಗಳನ್ನು ಕಾಡುಗಟ್ಟುವ ಭರದಲ್ಲಿ ಅರಣ್ಯ ಇಲಾಖೆಯು ಜೀವದ ಜೊತೆ ಚೆಲ್ಲಾಟ ಆಡಿತಾ ಎಂಬ ಪ್ರಶ್ನೆಯೂ ಅರ್ಜುನನ ಸಾವಿನ ಪ್ರಕರಣದ ಬೆನ್ನಲ್ಲಿ ಕೇಳಿ ಬಂದಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ, ೬೦ ವರ್ಷ ಪೂರೈಸಿದ ಪ್ರಾಣಿಗಳಿಗೆ ಭಾರ ಹೊರೆಸುವಂತಿಲ್ಲ. ಜತೆಗೆ ಭಾರದ ಕಾರ್ಯಗಳಿಗೆ ಅವುಗಳನ್ನು ಬಳಸುವಂತಿಲ್ಲ. ೬೪ ವರ್ಷದ ಅರ್ಜುನನ್ನು ಆ ಕಾರಣಕ್ಕಾಗಿಯೇ ೭೫೦ ಕೆ.ಜಿ. ತೂಕದ ಅಂಬಾರಿ ಹೊರುವ ದಸರಾ ಸಡಗರಕ್ಕೆ ಬಳಸಿಕೊಳ್ಳದೆ, ಅಭಿಮನ್ಯು ಆನೆಗೆ ಈ ಅವಕಾಶವನ್ನು ನೀಡಲಾಗಿತ್ತು. ಮೈಸೂರು ಜಿಲ್ಲಾಡಳಿತದ ಈ ನಿಲುವಿನಲ್ಲೇ ಅರಣ್ಯ ಇಲಾಖೆಯು ಅರ್ಜುನನ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಿತ್ತು. ಅಂಬಾರಿ ವಿಚಾರದಲ್ಲಿ ಕಾರ್ಯನಿರ್ವಹಣೆಯ ನಿಯಮಾವಳಿಗಳನ್ನು (ಎಸ್ ಒ ಪಿ) ಪಾಲನೆ ಮಾಡಿರುವಾಗ, ಕಾಡಾನೆ ಸೆರೆಯ ಕಾರ್ಯಾಚರಣೆಯಲ್ಲೇಕೆ ಅರಣ್ಯ ಇಲಾಖೆ ಅರ್ಜುನನ್ನು ಬಳಸಿಕೊಂಡಿತು? ಇಲಾಖೆ ಇದಕ್ಕೆ ಉತ್ತರ ನೀಡಲೇಬೇಕಿದೆ. ಸಾಮಾನ್ಯವಾಗಿ ಸಾಕಾನೆಗಳೇನೋ ಮಾವುತನ ಮಾತು ಕೇಳಬಹುದು. ಆದರೆ, ಮದ ಬಂದ ಕಾಡಾನೆಗಳು ಯಾರ ಮಾತನ್ನೂ ಕೇಳುವುದಿಲ್ಲ. ತಿವಿಯುವುದು, ಗಾಯಗೊಳಿಸುವುದು ಸೇರಿದಂತೆ ತನ್ನ ದೈತ್ಯ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಂಡು ಕಾಡಾನೆಗಳು ನೇರ ದಾಳಿಗೈಯುತ್ತವೆ. ಅವುಗಳ ವರ್ತನೆಯಲ್ಲಿ ಕ್ರೌರ್ಯವೇ ಜಾಸ್ತಿ ಇರುತ್ತದೆ. ಈ ವಾಸ್ತವಗಳನ್ನು ತಿಳಿದೂ ಅರಣ್ಯ ಇಲಾಖೆ ಅಧಿಕಾರಿಗಳು ಅರ್ಜುನನ ವಿಚಾರದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಅನುಭವವಿದೆ ಎಂಬ ಒಂದೇ ಕಾರಣಕ್ಕಾಗಿ ಅರ್ಜುನನ ಜೀವದ ಜತೆ ಆಟವಾಡಿದ್ದು ಅಕ್ಷಮ್ಯ.

ಎಲ್ಲಕ್ಕಿಂತ ಹೆಚ್ಚಾಗಿ, ಮಾವುತ ಆರೋಪಿಸುವಂತೆ ಕಾಡಾನೆಗೆ ಪ್ರಯೋಗಿಸಬೇಕಿದ್ದ ಅರಿವಳಿಕೆ ಮದ್ದು ಗುರಿ ತಪ್ಪಿ ಅರ್ಜುನನಿಗೆ ತಗುಲಿ, ಈ ದುರಂತ ಸಂಭವಿಸಿದೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕಿದೆ. ಅಲ್ಲದೆ,

ಯಾವುದೇ ವನ್ಯಜೀವಿಗಳ ಸೆರೆ ಕಾರ್ಯಾಚರಣೆ ಮಾಡಬೇಕಾದರೂ ಅದಕ್ಕೆ ವನ್ಯಜೀವಿ ಕಾಯ್ದೆ ಅಡಿ ಸಾಕಷ್ಟು ನಿಯಮಗಳಿವೆ. ಅದನ್ನು ಯಾರೂ ಮೀರುವಂತಿಲ್ಲ. ಹಾಗೊಮ್ಮೆ ಮೀರಿದರೂ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ. ಹೀಗಿದ್ದರೂ ಆನೆ ಕಾರ್ಯಾಚರಣೆ ವಿಚಾರದಲ್ಲಿ ಎಸ್ ಒ ಪಿಯನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಆರೋಪಗಳೂ ಬಲವಾಗಿವೆ. ಮೂಡಿಗೆರೆ ತಾಲೂಕಿನ ದೊಡ್ಡಪಳ್ಳ ಸಮೀಪ ಹಾಗೂ ಸಾರಗೋಡ ಸಮೀಪದ ಕಾರ್ಯಾಚರಣೆಗಳಲ್ಲೂ ಎಸ್ ಒ ಪಿ ಗೆ ಆದ್ಯತೆ ನೀಡದೆ ಅವಘಡ ಸಂಭವಿಸಿತ್ತು.

ವನ್ಯಮೃಗಗಳೂ ಮನುಷ್ಯರಂತೆ ಜೀವ ಎಂದು ಯೋಚಿಸದ ಹೊರತು, ಅನುಭವಿ ವನ್ಯಜೀವಿ ಪಶುವೈದ್ಯರ ಕೊರತೆಯನ್ನು ನೀಗಿಸದ ಹೊರತು, ಎಸ್ ಒ ಪಿಗಳನ್ನು ಪಾಲಿಸದ ಹೊರತು ಇಂಥ ದುರಂತಗಳಿಗೆ ನಿಯಂತ್ರಣ ಬೀಳದು. ಅರಣ್ಯ ಇಲಾಖೆ ಹಾಗೂ ಸರಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಲಿ. ವನ್ಯಮೃಗಗಳನ್ನು ರಕ್ಷಿಸಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೭-೧೨-೨೦೨೩ 

ಚಿತ್ರ ಕೃಪೆ: ಅಂತರ್ಜಾಲ ತಾಣ