ಅರ್ತಿ

ಅರ್ತಿ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಭಾವನಾ ಪ್ರಕಾಶನ, ಪದ್ಮನಾಭನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೪

“ರವಿ ಬೆಳಗೆರೆ ! ಅವರು ಕನ್ನಡಿಗರ ಮನೆ ಮಾತು. ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ. ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ ಕಾಯುತ್ತಿದ್ದರು. ಅವರು ಒಂದು ವಿಷಯ, ಒಂದು ಸಂಗತಿ ಅಥವಾ ಒಂದು ಸಬ್ಜೆಕ್ಟ್ ಇಟ್ಟುಕೊಂಡು ಬರೆದವರಲ್ಲ. ಮನುಷ್ಯ ಸಂಬಂಧಗಳು ಅವರ ಆಸಕ್ತಿಯ ಪ್ರಥಮ ವಿಷಯ. ಆದರೆ ಅವರು ಅತ್ಯಂತ ಆಸಕ್ತಿಯಿಂದ ದೇಶ, ಇತಿಹಾಸ, ಯುದ್ಧಗಳ ಬಗ್ಗೆ ಬರೆದಿದ್ದಾರೆ. ಯುದ್ಧಗಳ ಪ್ರತ್ಯಕ್ಷ ವರದಿ ಮಾಡಿದ್ದಾರೆ. ಕಾರ್ಗಿಲ್ ಕದನ ಭೂಮಿ, ಅಫಘಾನಿಸ್ತಾನ ಮತ್ತು ಪುಲ್ವಾಮಾದ ಮಹಾ ಯುದ್ಧರಂಗದಲ್ಲಿ ಓಡಾಡಿದ್ದಾರೆ. ಅಂತೆಯೇ ಅವರ ಕಾದಂಬರಿಗಳಲ್ಲಿ ಪ್ರೀತಿ, ತಂತ್ರ, ಅಂಡರ್ ವರ್ಲ್ದ್, ರಾಜಕಾರಣ, ಕಾಮ, ಟೆರರಿಸಂ ವಿಜೃಂಭಿಸಿವೆ. ಅವರ ತನಿಖಾ ವರದಿ ಪುಸ್ತಕವಾಗಿದೆ. ಮೂಲತಃ ರವಿ ಬೆಳಗೆರೆ ಕಥೆಗಾರರೆಂದೇ ಹೆಸರಾದವರು. ಅವರು ತಮ್ಮ ಇಷ್ಟದ ಕವಿ ಸಾಹಿರ್ ಲುಧಿಯಾನವಿಯಿಂದ ಹಿಡಿದು ತೆಲುಗು ಲೇಖಕ ಗುಡಿಪಾಟು ವೆಂಕಟ ಚಲಂ ತನಕ ಅನೇಕರ ಜೀವನ ಕಥನ ಬರೆದಿದ್ದಾರೆ, ಅನುವಾದಿಸಿದ್ದಾರೆ. ರವಿ ಬೆಳಗೆರೆ ಬರೆದ ‘ಅರ್ತಿ' ಸೈಕಿಯಾಟ್ರಿಕ್ ಸಬ್ಜೆಕ್ಟ್ ನ ಕುರಿತಾಗಿದ್ದು, ಇದು ಸೈಕಾಲಜಿ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಪುಸ್ತಕವಾಗಿರುತ್ತದೆ. ಈ ಪುಸ್ತಕ ಮೂವತ್ತೈದು ವರ್ಷಗಳ ನಂತರ ಮರು ಮುದ್ರಣಗೊಂಡಿದೆ.” ಇದು ಈ ಕೃತಿಯ ಬೆನ್ನುಡಿಯಲ್ಲಿ ರವಿ ಬೆಳಗೆರೆ ಅವರ ಮಗಳು ಭಾವನಾ ಬೆಳಗೆರೆ ಬರೆದ ಮಾತುಗಳು. 

ಈ ಕಾದಂಬರಿಯನ್ನು ತಿದ್ದಿ ತೀಡಿ ಮೂರು ಬಾರಿ ಬರೆದ ರವಿ ಬೆಳಗೆರೆಯವರು ಹಸ್ತ ಪ್ರತಿಯನ್ನು ಕಳೆದು ಹಾಕಿದ್ದು ಇತಿಹಾಸ. ಮತ್ತೆ ಹೇಗೂ ಸಿಕ್ಕಿ ಅದನ್ನು ಬಿಟ್ಟು ಮತ್ತೊಮ್ಮೆ ಬರೆದು ಅದು ಮುದ್ರಣ ಭಾಗ್ಯ ಕಂಡದ್ದು ಮತ್ತೊಂದು ಅದ್ಭುತ ಸಂಗತಿ. ಸುಮಾರು ಮೂವತ್ತೈದು ವರ್ಷಗಳ ಹಿಂದೆ (ಮೊದಲ ಮುದ್ರಣ ೧೯೯೦) ರವಿ ಬೆಳಗೆರೆ ಅವರು ಬರೆದ ಮುನ್ನುಡಿಯ ಆಯ್ದ ಭಾಗಗಳು ಇಲ್ಲಿವೆ... “ಹಸ್ತ ಪ್ರತಿಯನ್ನು ಹಿರಿಯ ಮಿತ್ರ ‘ತುಷಾರ'ದ ಸಂಪಾದಕರಾದ ಈಶ್ವರಯ್ಯನವರ ಟೇಬಲ್ಲಿಗೆ ಕಳುಹಿಸಿದೆ.

ಅವರು ಈ ತನಕ ನನಗೆ ಭೇಟಿಯಾಗದ, ಆದರೆ ಉತ್ತಮ ಸ್ನೇಹ ಬೆಳೆಸಿಕೊಂಡ ಮಿತ್ರರು. ಕಾದಂಬರಿ ಓದಿ ಏನೆಲ್ಲಾ ಶಪಿಸಿಕೊಂಡರೋ? ಹತ್ತು ಹಲವು ವಿಷಯ ತುರುಕಿ ಓದುಗರನ್ನು ದಾರಿ ತಪ್ಪಿಸಿದ್ದೀರಿ. ಕಾದಂಬರಿಯ ತುಂಟ ಕೊಂಬೆಗಳನ್ನೆಲ್ಲ ಕತ್ತರಿಸಿ ಮಟ್ಟಸ ಮಾಡಿಕೊಟ್ಟರೆ ಪ್ರಕಟಿಸುವ ಬಗ್ಗೆ ಯೋಚಿಸಬಹುದು ಎಂದು ಬರೆದರು.

ನಾನೇ ಕೂತು ಮತ್ತೊಮ್ಮೆ ಓದಿದೆ. ಹಸ್ತಪ್ರತಿ ಕಣ್ಣಿಗೆ ಕಾಣದಂತೆ ಎತ್ತಿಟ್ಟು ಆ ತನಕ ಮಾಡಿಕೊಂಡ ನೋಟ್ಸ್ ಗಳ ಗೊಂದಲದಿಂದ ಹೊರಬಿದ್ದು ಸುಮ್ಮನೆ ಬರೆಯತೊಡಗಿದೆ. ನೂರೈವತ್ತು ಪುಟಕ್ಕೆ ಬಂದು ನಿಂತಿತು. ಮೂರನೆಯ ಸಲ ಬರೆದುದಾಗಿತ್ತು. ಮತ್ತೆ ಅದನ್ನೆಲ್ಲಾದರೂ ಪ್ರಕಟಣೆಗೆ ಸಾಗಹಾಕಬೇಕೆನ್ನುವಷ್ಟರಲ್ಲಿ ದಾವಣಗೆರೆಯಿಂದ ವಿಜಿ ಬಂದಳು. ನನ್ನ ಮನೆಯವಳ ತಂಗಿ. ಓದಿ ಕೊಡ್ತೇನೆ ಎಂದು ಹೇಳಿ ತೆಗೆದುಕೊಂಡು ಹೋದಳು.

ಮುಂದೆಂದೋ ನಾನೇ ದಾವಣಗೆರೆಗೆ ಹೋಗಿದ್ದೆ. ಆಗ ಹಸ್ತಪ್ರತಿ ಇಸಿದುಕೊಂಡು ಬಂದೆ, ಬಸ್ ಸ್ಟ್ಯಾಂಡಿನ ತನಕ. ಅಲ್ಲೇ ಆದದ್ದು ತಪ್ಪು! ಬಸ್ ನಿಲ್ದಾಣದೆದುರಿಗೆ ಒಂದು ಕ್ಷುದ್ರ ಜಾಗವಿತ್ತು. ನನ್ನನ್ನಾಗಲೇ ಸುರೆಯ ವಿಷ ಆವರಿಸಿಕೊಳ್ಳುತ್ತಿದ್ದ ಕಾಲ. ಬಾರ್ ನಲ್ಲಿ ಕೂತು ಹೊರ ಬಂದವನ ಕೈಲಿ ಹಸ್ತಪ್ರತಿ ಇದ್ದುದು ನೆನಪಿದೆ. ಬಳ್ಳಾರಿಯಲ್ಲಿ ಬಸ್ಸಿಳಿದಾಗ ಮಾತ್ರ ಕೈ ಖಾಲಿಯಾಗಿತ್ತು. ತಲೆ ಕೂಡ!

‘ಅರ್ತಿ' ಯ ಆಸೆ ಬಿಟ್ಟೆ. ಅಭ್ಯಾಸವನ್ನು ಬೈದುಕೊಂಡು ಸುಮ್ಮನಾದೆ. ಅದಾದ ಆರು ತಿಂಗಳಾಗಿರಬಹುದು. ಒಂದು ದಪ್ಪನೆಯ ಲಕೋಟೆ ಅಂಚೆಯಲ್ಲಿ ಬಂತು. ಶಿಕಾರಿಪುರದ ಹೆಣ್ಣುಮಗಳೊಬ್ಬಳು ‘ಅರ್ತಿ' ಯ ಹಸ್ತಪ್ರತಿಯನ್ನು ಅಂಚೆಯಲ್ಲಿ ಕಳುಹಿಸಿದ್ದಳು. ಅದು ಆಕೆಗೆ ಅಂಗಡಿಯ ರದ್ದಿಯಲ್ಲಿ ಸಿಕ್ಕಿತಂತೆ. (ಸಿಗಬೇಕಿದ್ದ ಜಾಗವೇ!) ಗೌರಿ ಹಬ್ಬಕ್ಕೆ ಅರಶಿನ ಕುಂಕುಮ ಕಳುಹಿಸಿ ‘thanks ತಂಗೀ’ ಅಂದೆ.

ಆದರೆ ‘ಅರ್ತಿಯನ್ನು ಪ್ರಕತಿಸುವುದಿರಲಿ, ಮತ್ತೊಮ್ಮೆ ಅದನ್ನು ತಿರುಗಿ ನೋಡುವ ಪೇಶನ್ಸೂ ನನಗಿರಲಿಲ್ಲ. ಕ್ಷುದ್ರ ಸುರೆ ಎಲ್ಲವನ್ನೂ ನುಂಗಿತ್ತು. ಅದನ್ನು ಅತಿಕಷ್ಟದಿಂದ ನೂಕಿ ಒಬ್ಬನೇ ಕೂತಾಗ ‘ಅರ್ತಿ'ಯ ನೆನಪು ! ಏನೂ ಬರೆಯಲಾರದ ಸ್ಥಿತಿಗೆ ನನಗೇ ನಾಚಿಕೆ. ಕಡೇ ಪಕ್ಷ ಓದೋಣ ಎಂದುಕೊಂಡವನಿಗೆ ಅದೆಲ್ಲಿಂದ ಹುಕಿ ಹತ್ತಿತೋ ಕಾಣೆ. ಮತ್ತೆ ಬರೆಯಬೇಕೆನ್ನಿಸಿತು. ಎಂಟು ವರ್ಷಗಳ ಹಿಂದೆ ಬರೆದಷ್ಟೇ ವೇಗವಾಗಿ, ಧಾರಾಕಾರವಾಗಿ ಒಂದೇ ಉಸುರಿನಲ್ಲಿ ಬರೆದು ಮುಗಿಸಿದೆ. ನಾಲ್ಕನೇ ಸಲ !

‘ಸಿಂಚನ ಗ್ರಂಥ ಮಾಲೆ'ಯ ಗೆಳೆಯರು ಪ್ರಕಟಿಸುತ್ತಿದ್ದಾರೆ. ಸುರೆಯ ಶಾಪದಿಂದ ಮುಕ್ತನಾಗಿ ನಿಲ್ಲುತ್ತಿರುವವನಿಗೆ ಈ ಪ್ರೋತ್ಸಾಹದ ನೆರವು ದೊಡ್ಡ ಆಸರೆ. ಪೊರೆ ಬಿಟ್ಟು ಆಕಳಿಸುವ ಮನಸ್ಸಿಗೆ ಹತ್ತು ಹಲವು ವಿಷಯ ಗೋಚರವಾಗುತ್ತಿದೆ. ಇನ್ನು ಬರವಣಿಗೆಗೆ ಸದ್ಯಕ್ಕೆ ವಿರಾಮವಿಲ್ಲ. ಮೊದಲು ಸಂಗ್ರಹಿಸಿದ ಬಾನಾಮತಿ, ಮಾಟ, ತಂತ್ರ ಇತ್ಯಾದಿಗಳ ನೋಟ್ಸು ಕೈಲಿದೆಯಾದ್ದರಿಂದ ನಿಮಗೆ ನನ್ನ ಕಾಟ ತಪ್ಪಿದ್ದಲ್ಲ, ಹೀಗೇ ಪ್ರೇಮದಿಂದ ಸಹಿಸಿಕೊಳ್ಳಿ.

ಹಾಂ, ಕಡೆಯ ಮಾತು. ‘ಅರ್ತಿ' ಅಂದರೆ ಅರ್ಥ ಹಲವಾರು. ‘ಲಂಪಟತೆ' ಎಂಬುದು ಪ್ರಮುಖ ಅರ್ಥವೇ ಆದರೂ ಕಾದಂಬರಿಯಲ್ಲಿ ಅದನ್ನು ಆಂಧ್ರದ ಹೆಂಗಸರು ಬಳಸುವ ‘ಅಂಟುವಾಳ ಕಾಯಿಯಂತಹ ಪುಡಿ' ಎಂಬ ಅರ್ಥದಲ್ಲೂ ವಿವರಿಸಲಾಗಿದೆ.” 

ಸುಮಾರು ೯೦ ಪುಟಗಳ ಈ ಪುಟ್ಟ ಕಾದಂಬರಿಯನ್ನು ಭಾವನಾ ಬೆಳಗೆರೆ ಅವರು “ಪ್ರಪಂಚದಲ್ಲಿ ಅತಿ ಹೆಚ್ಚು ಜನ ನಂಬಿರುವ ಹೆಸರು ‘ಭರವಸೆ' ಅದನ್ನು ಸದಾಕಾಲ ನನಗೆ ನೀಡುತ್ತಾ ಬರುತ್ತಿರುವ ನನ್ನ ವಿಜಿ ಚಿಕ್ಕಿ (ವಿಜಯ ಕುಮಾರಿ) ಯವರಿಗೆ” ದ್ವಿತೀಯ ಮುದ್ರಣದ ಸಮಯದಲ್ಲಿ ಅರ್ಪಣೆ ಮಾಡಿದ್ದಾರೆ. ಈ ಕಾದಂಬರಿ ರವಿ ಬೆಳಗೆರೆ ಅವರ ನಿಧನದ ಬಳಿಕ ಪುನರ್ ಮುದ್ರಣ ಕಾಣುತ್ತಿದೆ.