ಅರ್ಥ ಹೇಳುವವರಾರು ???

ಅರ್ಥ ಹೇಳುವವರಾರು ???

ದೈನ್ಯತೆಯ ಒಳಗೆ ಅಡಗಿದ 
ಹಸಿವಿನ ಬಣ್ಣ ಬಣ್ಣದ ಚಿತ್ತಾರ
ಆಗಾಗ ಉದರದೊಳಗೆ ಸರಿದಾಡಿ 
ಜಾಡಿಸಿ ಒದ್ದಾಗ, ಕೈ ಎರಡು ಜೋಡಿಸಿ 
ನಿಂತವನನು "ಭಿಕ್ಷುಕ" ಎಂಬ 
ಕ್ಷುಲ್ಲಕ ಪದಗಳಿಂದಾ ಕರೆದೊಡನೆ
ಬೆನ್ನಿಗಂಟಿದ ಹೊಟ್ಟೆ ತಣ್ಣಗಾಗುವುದೇ?

ದೀಪದೊಳಗಿನ ಎಣ್ಣೆಗೆ ವಿಷ ಬೆರೆಸಿ
ದಿನವೂ ಹತ್ತಿ ಉರಿದು ಬೆಳಕಿಸು ಎಂದರೆ
ತನ್ನೊಳಗೆ ಸಾಯುವ ಬೆಳಕಿಗೆ 
ದೀಪ ಹೊಣೆಯಾಗುವುದೇ?

ಹಗಲಿನಲಿ ಕಾಡುವ ರಾತ್ರಿಯ ಮೌನ
ಕಿಟಾರನೆ ಕಿರುಚಿ, ತನ್ನೆದೆಯೊಳಗೆ
ಅಡಗಿರುವ ರಾಕ್ಷಸನ ಎಬ್ಬಿಸಿ
ಗುಡುಗು ಸಿಡಿಲಿಲ್ಲದೆ, ಹಲುಬಿ ಹಲುಬಿ 
ಸಿಡಿದೆದ್ದರೆ,,, 
ಅದಕ್ಕೆ ಕ್ರೋದ ಎನ್ನಬಹುದೇ?

ಇಲ್ಲಿ ಅಲ್ಲಿ,,, ವಿಚಾರಗಳನು ಹರಿಸಿ,,,,
ಒಳಗೊಳಗೆ ಕಿತ್ತಾಡಿ, ಕೆಸರೆರಚಿ 
ತಾನು ಮೇಲು, ನೀ ಮೇಲೆಂದು 
ಗೆದ್ದು ಸೋತು, ದಿನಗಳನ್ನು ಕೊಲ್ಲುತ್ತಾ
ಎಲ್ಲರನು ತನ್ನ ತೆಕ್ಕೆಯೊಳಗೆ 
ಬರಸೆಳೆದು ಅಪ್ಪಿ, ಗಹನತೆ ಮೆರೆಯುವ
ಗಟ್ಟಿ ನಾಟಕವನಾಡಿ,,,,,,,,,,,,,
ಹಸಿದವನನು ಸಾಯಲು ಬಿಡುವ 
ವಿಚಿತ್ರ ಜೀವಿಗಳ ಸಮೂಹಕ್ಕೆ 
"ಬುದ್ದಿ ಜೀವಿಗಳು" ಎನ್ನಬಹುದೇ 

ಹರಿಯುವ ನೀರಿಗೆ ಒಂದಷ್ಟು 
ಕಾಸು ಕೊಟ್ಟು, ಕುಡಿದು
ಗಾಳಿಯ ತಂಪಿಗೆ, ತಂಗಾಳಿಯನು 
ಕೊಂದು, ತಿಥಿ ಮಾಡಿ ತಿಂದು
ಮರ ಕಡಿದು, ಮನೆ ಕಟ್ಟಿ 
ದಿನ ದುಡಿದು, ಹೊಟ್ಟೆ ಕಟ್ಟಿ 
ಮನೆಯವರ ಮುಖವನ್ನೆ ನೋಡದೇ 
ಸಾಯುವವನಿಗೆ 
ನಗರದ "ನಾ(ನ)ಗರೀಕ ಎನ್ನಬಹುದೇ?

ನವ ಯುಗದ ಹೊಸ್ತಿಲು ದಾಟಿದ ಮೇಲೆ 
ಯಾವ ಮಾನವನ ಮುಖದಲ್ಲಿ ಬದುಕಿನ ಬೆಳಕಿದೆ?

ದಿನ ದಿನ ಹಣಕ್ಕಾಗಿ, ಮನಸ್ಸಿನಲ್ಲಿಯೇ ಹೆಣವಾಗಿ 
ದುಡಿದು ಸಾಯುವ ಬದುಕಿನ 
ಅರ್ಥ ಹೇಳುವವರಾರು ???

 

 

Comments

Submitted by naveengkn Tue, 08/19/2014 - 09:12

In reply to by kavinagaraj

ಕವಿಗಳೇ, ನಿಮ್ಮ‌ ಮಾತಿನ‌ ಒಳ‌ ಅರ್ಥ‌,,,, ಅರ್ಥವಾಯಿತು,,,,, ನಮ್ಮ‌ ನಮ್ಮ‌ ಬದುಕಿನ‌ ಪ್ರಶ್ನೆಗೆ ನಾವೆ ಉತ್ತರ‌ ಕಂಡುಕೊಳ್ಳಬೇಕು ಎಂದೆಲ್ಲವೇ ?
ಪ್ರತಿಕ್ರಿಯೆಗೆ ಧನ್ಯವಾದಗಳು