ಅರ್ಧನಾರೀಶ್ವರ
ಹೇರಳವಾಗಿ ಗ್ರಾಮೀಣ ಪದಗಳು, ಗಾದೆಗಳು, ನುಡಿಗಟ್ಟುಗಳಿಂದ ಕೂಡಿರುವ, ಅನುವಾದಿಸಲು ಕ್ಲಿಷ್ಟವೆನಿಸುವ ಈ ಕಾದಂಬರಿಯನ್ನು ಕೆ.ನಲ್ಲತಂಬಿಯವರು ಸೊಗಸಾಗಿಯೂ, ಸಮರ್ಥವಾಗಿಯೂ ಅನುವಾದಿಸಿದ್ದಾರೆ ಎನ್ನುತ್ತಾರೆ ಲೇಖಕಿ, ಕಾದಂಬರಿಕಾರ್ತಿ ಆಶಾ ರಘು. ಲೇಖಕ ಕೆ. ನಲ್ಲತಂಬಿಯವರ ಅರ್ಧನಾರೀಶ್ವರ ಕೃತಿಯ ಕುರಿತು ಅವರು ಬರೆದ ಲೇಖನ ನಿಮ್ಮ ಓದಿಗಾಗಿ..
ಪೆರುಮಾಳ್ ಮುರುಗನ್ ಅವರ 'ಮದೋರುಬಾಗನ್' ಎಂಬ ತಮಿಳು ಕಾದಂಬರಿಯ ಕನ್ನಡ ಅನುವಾದ ಕೆ.ನಲ್ಲತಂಬಿಯವರ 'ಅರ್ಧನಾರೀಶ್ವರ' ಈಚೆಗೆ ನಾನು ನನ್ನ ಕಾದಂಬರಿಯ ರಚನೆಯನ್ನು ಬದಿಗಿಟ್ಟು ಓದಲು ಕೈಗೆತ್ತಿಕೊಂಡ ಪುಸ್ತಕ.
ಕಾದಂಬರಿಯ ಮೊದಲಿಗೆ ನಲ್ಲತಂಬಿಯವರು Paulo Coelho ನ 'When you really want something, the universe always conspires in your favour' ಎಂಬ ಮಾತನ್ನು ತಾವು ಅನುವಾದಿಸಲು ಬಯಸಿದ ಕೃತಿಯೇ ತಮ್ಮನ್ನು ಅನುವಾದಿಸೆಂದು ದೊರಕಿದ ವಿಸ್ಮಯವನ್ನು ಹಂಚಿಕೊಳ್ಳುತ್ತಾ ಉಲ್ಲೇಖಿಸಿದ್ದಾರೆ. ಅಂತಹುದೇ ಅನುಭವ ಈ ಕಾದಂಬರಿಯನ್ನು ಓದಿದಾಗ ನನಗೂ ಆಯಿತು. ಪ್ರಸ್ತುತ ನಾನು ಬರೆಯುತ್ತಿರುವ ಕಾದಂಬರಿಗೆ ಪೂರಕವಾಗಿ ಗ್ರಾಮೀಣ ಬದುಕಿನ ಚಿತ್ರಣವಿರುವ ಯಾವುದಾದರೂ ಕೃತಿಯನ್ನು ಓದಬೇಕು ಎಂದುಕೊಂಡಿದ್ದೆ. ಅದರಂತೆಯೇ ಆಕಸ್ಮಿಕವಾಗಿ ಓದಲು ಕೈಗೆತ್ತಿಕೊಂಡ 'ಅರ್ಧನಾರೀಶ್ವರ' ಕಾದಂಬರಿಯು ತಮಿಳುನಾಡಿನ ಗ್ರಾಮೀಣ ಬದುಕಿನ ಚಿತ್ರಣವನ್ನು ಸಮೃದ್ಧವಾಗಿ ಮೊಗೆಮೊಗೆದು ನೀಡಿತು.
ಮದುವೆಯಾಗಿ ಹತ್ತು ವರ್ಷಗಳು ಕಳೆದರೂ ಮಕ್ಕಳಾಗದ ಕಾಳಿ ಹಾಗೂ ಪೊನ್ನಾ ದಂಪತಿಗಳು ಸಮಾಜದಲ್ಲಿ ಹೆಜ್ಜೆಹೆಜ್ಜೆಗೂ ಹಲವು ರೀತಿಯಲ್ಲಿ ನೋವು, ಅವಮಾನ, ನಿಂದೆಗಳಿಗೆ ಗುರಿಯಾಗುತ್ತಾರೆ. ಮಕ್ಕಳಿಲ್ಲದ ದಂಪತಿಗಳಲ್ಲಿ ಲೋಪ ಯಾರದ್ದೇ ಇದ್ದರೂ, ಸಹಜವಾಗಿ ಹೆಣ್ಣನ್ನೇ ಬಂಜೆಯೆಂದು ಲೋಕ ಮೂದಲಿಸುತ್ತದೆ. ಆದರೆ ಈ ಕೃತಿಯಲ್ಲಿ ಪೊನ್ನಾಳಂತೆ ಕಾಳನೂ ಷಂಡನೆಂದು ಅವಹೇಳನಕ್ಕೆ ಗುರಿಯಾಗುವುದು ಗಮನಾರ್ಹ. ಹಲವು ಪೂಜೆ, ವ್ರತ, ಆಚರಣೆಗಳ ತರುವಾಯ ಹತ್ತಿರದ ತಿರುಚ್ಚೆಂಗೋಡಿನ ದೇವಾಲಯದ ಮಾದೋರುಬಾಗನ್ ಅಥವಾ ಅರ್ಧನಾರೀಶ್ವರನೆಂದು ಹೆಸರಾದ ಶಕ್ತಿ ಸಮೇತನಾದ ಶಿವನ ಜಾತ್ರೆಯ ಹದಿನಾಲ್ಕನೆಯ ದಿನದ ವಿಶಿಷ್ಟ ಆಚರಣೆಯೊಂದು ಪೊನ್ನಾ ಹಾಗೂ ಕಾಳಿಯರ ಪೋಷಕರಲ್ಲಿ ಹೊಸ ಕನಸು ಬಿತ್ತುತ್ತದೆ. ಹದಿನಾಲ್ಕನೆಯ ದಿನ ಜಾತ್ರೆಯಂದು ಆ ಕ್ಷೇತ್ರಕ್ಕೆ ಬರುವ ಯಾವುದೇ ಗಂಡೂ ಯಾವುದೇ ಹೆಣ್ಣೂ ದೈಹಿಕವಾಗಿ ಬೆರೆಯಬಹುದೆಂಬುದೂ, ಮತ್ತು ಅಂತಹ ಅವಕಾಶವನ್ನು ಮಕ್ಕಳಿಲ್ಲದ ಹೆಣ್ಣೊಬ್ಬಳು ಬಳಸಿಕೊಂಡು ಮಕ್ಕಳಾದರೆ ಅದು ದೈವ ಕೊಟ್ಟ ಮಗುವೇ ಅನ್ನಿಸಿಕೊಳ್ಳುತ್ತದೆಯೆಂಬುದೇ ಈ ಆಚರಣೆ. ಹೇಗಾದರೂ ಮಾಡಿ ದಂಪತಿಗಳಿಗೆ ಮಕ್ಕಳಾಗುವಂತೆ ಮಾಡಬೇಕೆಂದು ಕಾಳಿ ಒಪ್ಪಿದ್ದಾನೆಂದು ಹೇಳಿ ಪೊನ್ನಾಳನ್ನು ಜಾತ್ರೆಗೆ ಒಯ್ಯಲಾಗುತ್ತದೆ. ಆ ನಂತರ ವಿಷಯ ತಿಳಿಯುವ ಕಾಳಿಯ ಮನಸ್ಸು ಒಡೆಯುತ್ತದೆ. ನಿಜದಲ್ಲಿ ಅನುಗಾಲವೂ ಅರ್ಧನಾರೀಶ್ವರರಂತೆ ಬಾಳಿದ ದಂಪತಿಗಳ ಮನಸ್ಸು ಈ ನಂಬಿಕೆಯ ದೆಸೆಯಿಂದ ಕಡೆಯಲ್ಲಿ ಹೀಗೆ ಒಡೆದುಹೋಗುವುದು ವಿಪರ್ಯಾಸ!
ಹೇರಳವಾಗಿ ಗ್ರಾಮೀಣ ಪದಗಳು, ಗಾದೆಗಳು, ನುಡಿಗಟ್ಟುಗಳಿಂದ ಕೂಡಿರುವ, ಅನುವಾದಿಸಲು ಕ್ಲಿಷ್ಟವೆನಿಸುವ ಈ ಕಾದಂಬರಿಯನ್ನು ಕೆ.ನಲ್ಲತಂಬಿಯವರು ಸೊಗಸಾಗಿಯೂ, ಸಮರ್ಥವಾಗಿಯೂ ಅನುವಾದಿಸಿದ್ದಾರೆ. ಪುಸ್ತಕ ಕಳಿಸಿ, ಒಂದು ಮಹತ್ವದ ಕೃತಿಯನ್ನು ಓದಿಸಿದ ಅವರಿಗೆ ತುಂಬು ಹೃದಯದ ವಂದನೆಗಳು.
-ಆಶಾ ರಘು