ಅರ್ಧರಾತ್ರಿಯ ಸಂಭಾಷಣೆ

ಅರ್ಧರಾತ್ರಿಯ ಸಂಭಾಷಣೆ

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ, ಹಾಸನ.
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೧

‘ಮಲೆನಾಡಿನ ರೋಚಕ ಕಥೆಗಳು' ಖ್ಯಾತಿಯ ಲೇಖಕ ಗಿರಿಮನೆ ಶ್ಯಾಮರಾವ್ ಅವರು ಬರೆದ ಸಣ್ಣ ಕತೆಗಳ ಸಂಗ್ರಹವೇ ‘ಅರ್ಧರಾತ್ರಿಯ ಸಂಭಾಷಣೆ'. ಗಿರಿಮನೆಯವರು ತಮ್ಮ ಮುನ್ನುಡಿ ‘ನಮಸ್ಕಾರ' ದಲ್ಲಿ ಬರೆದಂತೆ “ಮನುಷ್ಯರಲ್ಲಿ ಮುಖ್ಯವಾಗಿ ಮೂರು ವಿಷಯಗಳ ಬಗ್ಗೆ ಅಜ್ಞಾನ ಆವರಿಸಿರುತ್ತದೆ. ದೇವರು, ವಿದ್ಯೆ ಮತ್ತು ಆರೋಗ್ಯ. ಅದನ್ನೇ ಕ್ಯಾಷ್ ಮಾಡಿಕೊಳ್ಳುವ ವರ್ಗ ಕೆಲವರನ್ನು ಮತ್ತೂ ಅಜ್ಞಾನಕ್ಕೆ ತಳ್ಳಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತದೆ. ವಿಶೇಷವೆಂದರೆ ಹಾಗೆ ಜನರನ್ನು ಅಜ್ಞಾನಕ್ಕೆ ತಳ್ಳುವವರಿಗೂ ಸತ್ಯ ತಿಳಿದಿರುವುದಿಲ್ಲ. ಆದರೆ ಅಲ್ಲೊಂದು ಅವಕಾಶವಿದೆ ಎಂದು ಅದರ ದುರುಪಯೋಗ ಮಾಡಿ ಅದರ ಲಾಭ ಪಡೆಯಲು ಮಾತ್ರ ತಿಳಿದಿರುತ್ತದೆ. ಇವು ಮೂರೂ ವಿಷಯಗಳಲ್ಲಿ ಅನರ್ಥಕಾರಿಯಾದ ಅರ್ಧ ಸತ್ಯದ ಲಾಭ ಪಡೆದು ದುರುಪಯೋಗ ಮಾಡುವುದು ಸುಲಭ.

ಈ ಮೂರೂ ಸಂದರ್ಭಗಳಲ್ಲಿ ಜನ ಪೂರ್ಣ ಸತ್ಯ ತಿಳಿಯದೆ ಭಾವನಾತ್ಮಕವಾಗಿ ವರ್ತಿಸುವುದನ್ನು ಕಾಣುತ್ತೇವೆ. ಕಾರಣ - ದೇವರ ವಕ್ತಾರರು ಹೇಳಿದಂತೆ ಕೇಳದೆ ಹೋದರೆ ಏನೋ ಆಗುತ್ತದೆ ಎಂದು ಬಿಂಬಿಸುವ ಕಾರಣಕ್ಕೆ ಕಾಡುವ ದೇವರ ಭಯ. ಆಧುನಿಕ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸದಿದ್ದರೆ ಅವರ ಭವಿಷ್ಯವೇ ಅಂಧಕಾರವಾಗಬಹುದೆಂಬ ಆತಂಕದ ಭಯ. ಆಧುನಿಕ ನರ್ಸಿಂಗ್ ಹೋಮಿಗೆ ಹೋಗದಿದ್ದರೆ ಸಾವೇ ಬರಬಹುದು ಎಂದು ಕಾಡುವ ಭಯ !

ಈ ಭಯ, ಆತಂಕಕ್ಕೆ ಕಾರಣ ಅವುಗಳ ಬಗ್ಗೆ ಸ್ವಲ್ಪವೂ ತಿಳಿಯದಿರುವುದು. ಸರಿಯಾಗಿ ತಿಳಿದಿದ್ದರೆ ಮೋಸ ಹೋಗುವ ಪ್ರಮೇಯ ಬರುವುದಿಲ್ಲ. ಹಾಗೆಂದು ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯ ಎಂದಲ್ಲ. ಕನಿಷ್ಟ ಎಲ್ಲೆಲ್ಲಿ, ಹೇಗೆ ಮೋಸ ನಡೆಯುತ್ತದೆ ಎಂದಾದರೂ ತಿಳಿಯಬೇಕಲ್ಲ ! ದುರದೃಷ್ಟವೆಂದರೆ ವಿದ್ಯಾವಂತರೆಂದು ನಾವು ನಂಬಿರುವವರು ಕೂಡಾ ಧಾರಾಳವಾಗಿ ಇದರೊಳಗೆ ಸಿಕ್ಕಿಕೊಳ್ಳುತ್ತಾರೆ. ಅದಕ್ಕೆ ಕಾರಣ ವಿಚಾರವಂತಿಕೆ ಇಲ್ಲದ ವಿದ್ಯೆ ಮತ್ತು ಜನರನ್ನು ಅಜ್ಞಾನಕ್ಕೆ ತಳ್ಳುವವರ ಬಣ್ಣ ಬಯಲಾಗದಿರುವುದು !

ನಮಗೆ ಒಳ್ಳೆಯ ಮತ್ತು ಕೆಟ್ಟ ಎರಡೂ ತರಹದ ಜನರ ಬಗ್ಗೆ ಅರಿವಿರಬೇಕು. ಆಯ್ಕೆ ನಮ್ಮ ಕೈಯಲ್ಲಿರಬೇಕು. ತಿಳುವಳಿಕೆಯುಕ್ತ ಸದಾ ಎಚ್ಚರವೇ ನಮ್ಮನ್ನು ಕಾಪಾಡುವುದು ! ಇವು ಇನ್ನೊಬ್ಬರಿಂದ ನಮಗಾಗುವ ತೊಂದರೆಗಳಾದರೆ ನಮ್ಮನ್ನು ಕಾಡುವ ನಮ್ಮದೇ ದೋಷ ಸ್ವದೋಷ.

ನಮ್ಮ ದೋಷಗಳನ್ನು ನಾವೇ ಅರಿತುಕೊಳ್ಳುವುದು ನಮಗಿರುವ ದೊಡ್ಡ ಕಷ್ಟ. ನಮ್ಮ ಅಕ್ಕಪಕ್ಕದವರು, ನಮ್ಮ ಜೊತೆ ವ್ಯವಹಾರ ಮಾಡುವ ಜನರು ಇತ್ಯಾದಿ ನಮ್ಮ ಸಂಪರ್ಕಕ್ಕೆ ಬರುವ ಎಲ್ಲರ ದೋಷಗಳನ್ನೂ ಪಟ್ಟಿ ಮಾಡಿಕೊಡುತ್ತೇವೆ. ಆದರೆ ನಮ್ಮ ದೋಷ ಯಾವುದು ಎಂದು ಯಾರಾದರೂ ಕೇಳಿದರೆ ಅಪರೂಪದ ಕೆಲವು ತಿಳುವಳಿಕೆಯುಳ್ಳವರ ಹೊರತು ಪಡಿಸಿ ಎಲ್ಲರೂ ನನ್ನಲ್ಲಿ ದೋಷವೇ ಇಲ್ಲ ಎನ್ನುವವರೇ. ಅಲ್ಲೂ ತಮ್ಮಲ್ಲಿರುವ ದೋಷಗಳನ್ನು ಪ್ರೀತಿಸುವವರೇ ಹೆಚ್ಚು ! ಮೇಲ್ನೋಟಕ್ಕೆ ಇವೆಲ್ಲಾ ಸಣ್ಣ ವಿಷಯಗಳಂತೆ ಕಂಡರೂ ನಮ್ಮ ಬದುಕನ್ನು ನಿಯಂತ್ರಿಸುವ ಸಾಮರ್ಥ್ಯ ಈ ವಿಷಯಗಳಿವೆ. 

ಹಾಗಾಗಿ ಇಂತಹಾ ವಿಚಾರಗಳೂ ಒಳಗೊಂಡಂತೆ ಆಚೀಚೆ ಕಣ್ಣು ಬಿಟ್ಟು ನೋಡಿದಾಗ ಗಮನಕ್ಕೆ ಬಂದ, ಅನುಭವದ ಒಂದಿಷ್ಟು ಘಟನೆಗಳನ್ನೂ ಆಯ್ದು ಸಣ್ಣ ಕತೆಗಳ ರೂಪ ಕೊಟ್ಟಿದ್ದೇನೆ.” ಎಂದು ಸಣ್ಣ ಕತೆಗಳ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ. 

ಈ ಕೃತಿಯಲ್ಲಿ ೧೭ ಸಣ್ಣ ಕತೆಗಳಿವೆ. ಪ್ರತಿಯೊಂದು ಕಥೆಯಲ್ಲೂ ಹೊಸ ವಿಷಯ ಮತ್ತು ವಿಚಾರಗಳಿವೆ. ಮೊದಲ ಕಥೆ ‘ಅಮಾಯಕ?’, ಮದುವೆಯಾದ ಕೆಲವೇ ದಿನಕ್ಕೆ ಸೊಸೆ ಮಂಜುಳ ಐದು ತಿಂಗಳ ಗರ್ಭಿಣಿ ಎಂದು ತಿಳಿದುಕೊಳ್ಳುವ ಅತ್ತೆ ನಾಗರತ್ನ ಬಹಳ ಕೋಪಗೊಂಡು ತನ್ನ ಗಂಡ ಗಿರಿಜೇಶನ ಬಳಿ ದೂರು ಸಲ್ಲಿಸುತ್ತಾಳೆ. ತನ್ನ ಮಗ (ಅಮಾಯಕ?) ನವೀನನ ಬಳಿಯೂ ಈ ವಿಚಾರ ಹೇಳಲು ಹೋದರೂ ಸಮಯ ಸಂದರ್ಭಗಳು ಜೊತೆಯಾಗದೇ ಹೋಗುತ್ತದೆ. ಸೊಸೆಯು ಹೇಳುವ ಮಾತನ್ನೂ ಕೇಳದೆ ಆಕೆಯನ್ನು ತವರು ಮನೆಯಲ್ಲಿ ಬಿಟ್ಟು ಬರುತ್ತಾರೆ. ಆಕೆ ಗರ್ಭಿಣಿಯಾಗಲು ಕಾರಣ ಯಾರು? ಎಂಬ ಕುತೂಹಲ ಎಲ್ಲರ ಜೊತೆ ಓದುಗರಿಗೂ ಕಾಡುತ್ತದೆ.

ಅದೇ ರೀತಿ ಕೃತಿಯ ಶೀರ್ಷಿಕೆಯಾದ ‘ಅರ್ಧರಾತ್ರಿಯ ಸಂಭಾಷಣೆ' ಕಥೆಯು ತಾಯಿ ಮತ್ತು ಮಗಳ ನಡುರಾತ್ರಿಯ ಮಾತುಕತೆಯ ಬಗ್ಗೆ ಇದೆ. ಇನ್ ಕಮ್ ಟ್ಯಾಕ್ಸ್ ರೈಡ್ ಆಗಿ ಗಂಡ ಜೈಲು ಸೇರಿದ ಬಳಿಕ ಆತನ ಬಗ್ಗೆ ತಿರಸ್ಕಾರದಿಂದ ಮಾತನಾಡುವ ತಾಯಿಗೆ ಮಗಳು ಹೇಳುವ ಬುದ್ಧಿವಾದ ಪರಿಣಾಮ ಬೀರುವುದೇ? ಎಂಬುದೇ ಕಥಾ ವಸ್ತು. 

ಹೀಗೆ ಇಲ್ಲಿರುವ ಪ್ರತಿಯೊಂದು ಕಥೆಯೂ ಹೊಸ ಹೊಸ ಕಥಾ ವಸ್ತುವನ್ನು ಹೊಂದಿದ್ದು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸುಮಾರು ೧೮೦ ಪುಟಗಳ ಈ ಕಥಾ ಸಂಕಲನವನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದಾಗಿದೆ.