ಅರ್ಪಣೆ

ಅರ್ಪಣೆ

ಬರಹ

ನಾ ನಿಮ್ಮ ಮರೆಯಲಾದೀತೇ
ಅಂದು ಅಪ್ಪ ಎಂದು ಕರೆಸಿಕೊಂಡ ಜೀವ
ಈ ಪುಟ್ಟ ಗಿಡವ ಮರವಾಗಿಸಿ
ಮನದಿ ತುಂಬಿಸಿದಿರಿ ಸ್ಪಂದಿಸುವ ಭಾವ

ನಿಮ್ಮ ಪಾದಗಳ ನೋಡಿ ನಡಿಗೆ ಕಲಿತೆ
ನಿಮ್ಮ ಮಾತುಗಳ ಕೇಳಿ ನುಡಿಯ ಕಲಿತೆ
ನಿಮ್ಮ ಹೆಜ್ಜೆಯಲಿ ಹೆಜ್ಜೆ ಇಡುವುದ ಕಲಿತೆ
ನಿಮ್ಮ ದಿಗ್ದರ್ಶನದಲಿ ಬಾಳುವೆ ಕಲಿತೆ

ಏಟನಿತ್ತು ತುಂಟುತನವ ಬಿಡಿಸಿದಿರಿ
ದು:ಖ ಉಮ್ಮಳಿಸೆ ತಲೆಯ ನೇವರಿಸಿದಿರಿ
ವಿದ್ಯೆ ಬುದ್ಧಿ ಕಲಿಸಿ ಕಾಲ ಮೇಲೆ ನಿಲಿಸಿದಿರಿ
ಸ್ನೇಹಿತನಾಗಿ ಸಮಾಜದಿ ಬೆರೆಯಲು ಕಲಿಸಿದಿರಿ

ಕೋಪದಲಿ ಇತ್ತ ಬೆತ್ತದ ಗಾಯ
ಕೈ ಮೈ ಸವರಲು ಮಾಸಿತು
ಮರಳಿ ಬರಲಾರದ ಆ ಜೀವ
ಮನದ ಗಾಯ ಹೇಗೆ ಮಾಸೀತು

ಇಂದು ನಾನಿರುವೆ ನಿಮ್ಮ ಸ್ಥಾನದಲಿ
ಅಂದಿನ ನನ್ನನು ಕಾಣುತಿಹೆ ಮಗನಲಿ
ಅವಗೆ ನಾ ಕಲಿಸುವೆ ನೀವು ಕಲಿಸಿದ ಪಾಠ
ಶ್ರದ್ಧೆಯಿಂದ ನಿಮಗೆ ಒಪ್ಪಿಸುತಿಹೆ ಮನೆ ಪಾಠ

ಈಗಲೂ ನೀವು ಬರಲು ನಾ ಕೂಸಾಗುವೆ
ಕೂಸುಮರಿ ಆಡಲು ನಿಮ್ಮ ಹೆಗಲೇರುವೆ
ತೀರಿಸಲಾರದ ಪಿತೃ ಋಣವ ತೀರಿಸುವೆ
ಬಾರದಿರೆ ಕೊರಗಿ ಕೊರಗಿ ಸೊರಗುವೆ

ಸುರಿಸಲಾರೆ ನಾ ಕಂಬನಿಯ ಧಾರೆ
ನೆನಪಲಿ ಮನವು ಸುರಿಸುತಿದೆ ವರ್ಷಾಧಾರೆ
ಪಿತೃ ಋಣವಾಗಿ ಅರ್ಪಿಸುತಿಹೆ ತಿಲಾಂಜಲಿ
ಜೊತೆಗೆ ಈ ನನ್ನ ಈ ಪುಟ್ಟ ಶ್ರದ್ಧಾಂಜಲಿ