ಅರ್ಹ ಅಭ್ಯರ್ಥಿಗಳಿಗೆ ವರದಾನ

ಅರ್ಹ ಅಭ್ಯರ್ಥಿಗಳಿಗೆ ವರದಾನ

ಗ್ರಾಮಲೆಕ್ಕಿಗ ಹುದ್ದೆಗಳನ್ನು ನೇರ ನೇಮಕಾತಿಯ ಬದಲಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಂದಾಯ ಇಲಾಖೆ ಚಿಂತಿಸಿರುವುದು ಯೋಗ್ಯ ಕ್ರಮ. ದ್ವಿತೀಯ ಪಿಯುಸಿಯಲ್ಲಿ ನ ಅತ್ಯುತ್ತಮ ಅಂಕಗಳು ಹಾಗೂ ಮೀಸಲು ಮಾನದಂಡವನ್ನು ಬದಿಗಿಟ್ಟು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ ಇ ಟಿ) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿಂತಿದೆ. ಸರಕಾರದ ಈ ಕ್ರಮ ನ್ಯಾಯದ ಬಾಗಿಲನ್ನು ತೆರೆದಿರುವುದಂತೂ ನಿಜ..

ಕಂದಾಯ ಇಲಾಖೆ ಈ ಚಿಂತನೆಯ ಕುರಿತ ಸಾಧಕ ಬಾದಕ ನಿರ್ಧರಿಸಲು ೬ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ೧೫ ದಿನಗಳ ಒಳಗಾಗಿ ಸಮಿತಿ ವರದಿಯನ್ನೂ ಸಲ್ಲಿಸಲಿದೆ. ೨೦೨೦-೨೧ ನೇ ಸಾಲಿನಲ್ಲಿ ಕೊರೋನಾ ಕಾರಣಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೆಯೇ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಯಿತು. ಹಾಗಾಗಿ ಕಂದಾಯ ಇಲಾಖೆಗೆ ನೂತನ ಹೆಜ್ಜೆ ಇಡಬೇಕಾದ ಪರಿಸ್ಥಿತಿ ಬಂದಿದೆಯಾದರೂ, ಭವಿಷ್ಯದ ದಿನಗಳಲ್ಲಿ ದಕ್ಷ ಹಾಗೂ ಅರ್ಹ ಅಭ್ಯರ್ಥಿಗಳನ್ನೇ ಹುದ್ದೆಗೆ ನೇಮಕ ಮಾಡಿಕೊಳ್ಳಲು ಈ ಕ್ರಮ ಅನುವು ಮಾಡಿಕೊಡಲಿದೆ.

ಇದುವರೆಗೆ ಗ್ರಾಮಲೆಕ್ಕಿಗ ಹುದ್ದೆ ನೇಮಕಾತಿಯ ಅಂತಿಮ ಪಟ್ಟಿ ಹಲವೆಡೆ ಶೇಕಡ ೯೫ ರಿಂದ ೯೯ಕ್ಕೆ (ಪಿಯುಸಿ ಅಂಕ ಶ್ರೇಣಿ) ನಿಲುಗಡೆಯಾಗುತ್ತಿತ್ತು. ಯಾವುದೋ ಕಾರಣಕ್ಕಾಗಿ ಪಿಯುಸಿಯಲ್ಲಿ ಶೇಕಡ ೯೦ ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳೆಲ್ಲ ಇದರಿಂದಾಗಿ ತೀವ್ರ ನಿರಾಶೆಗೆ ಒಳಪಡುತ್ತಿದ್ದರು. ಈ ಪೈಕಿ ಅರ್ಹ, ಪ್ರತಿಭಾವಂತ ಅಭ್ಯರ್ಥಿಗಳಿದ್ದರೂ ಅವರಿಗೆ ಪಿಯುಸಿ ಅಂಕಗಳೇ ಮಾನದಂಡವಾಗಿ ಇದ್ದ ಕಾರಣ ಹುದ್ದೆಗಳು ಕೈತಪ್ಪಿ ಹೋಗುತ್ತಿದ್ದವು. ಪ್ರಸ್ತುತ ನೂತನ ಕ್ರಮ ಅರ್ಹ ಅಭ್ಯರ್ಥಿಗಳಿಗೆ ವರದಾನವೇ ಆಗಲಿದೆ

ವರ್ತಮಾನದ ಪ್ರಪಂಚದಲ್ಲಿ ಸರಕಾರಿ ಮತ್ತು ಖಾಸಗಿ ವಲಯಗಳು ನಿರಂತರವಾಗಿ ಬದಲಾವಣೆಗೆ ತೆರೆದುಕೊಳ್ಳುತ್ತಿವೆ. ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಆಯಾ ಶೈಕ್ಷಣಿಕ ಸಂಸ್ಥೆಗಳು ಡಿಸ್ಟಿಂಕ್ಷನ್ ಪಟ್ಟ ನೀಡಿ, ಬುದ್ಧಿವಂತ ಎಂದು ಹೇಳುತ್ತಿದ್ದವು. ಆದರೆ, ಸಿಇಟಿ ವ್ಯವಸ್ಥೆ ಪರಿಚಯಗೊಂಡ ಬಳಿಕ ಎಲ್ಲಾ ವಲಯಗಳು ನಮ್ಮದೇ ಆದ ಪ್ರವೇಶ ಪ್ರಕ್ರಿಯೆ ವ್ಯವಸ್ಥೆ ರೂಪಿಸಿಕೊಂಡಿವೆ. ವಿದ್ಯಾಸಂಸ್ಥೆಗಳು 'ಬುದ್ಧಿವಂತ' ಎಂದು ಹೇಳಿದ ಮಾತ್ರಕ್ಕೆ ನೌಕರಿ ಕೊಡುವ ಕಂಪನಿಗಳು ಆ ಅಭ್ಯರ್ಥಿಯನ್ನು ಒಪ್ಪ ಬೇಕೆಂದೇನೂ ಇಲ್ಲ.

ಬಹುತೇಕ ಎಲ್ಲಾ ಮುಂದುವರಿದ ರಾಷ್ಟ್ರಗಳಲ್ಲೂ ಉದ್ಯೋಗ ನೀಡುವ ಯಾವುದೇ ಸಂಸ್ಥೆಗಳು, ಉದ್ಯೋಗ ಬಯಸಿ ಬರುವವರಲ್ಲಿ ಪದವಿಯ ಶ್ರೇಷ್ಠತೆಯನ್ನು ಪರಿಗಣಿಸುವುದಿಲ್ಲ. ಯಾವುದೋ ವಿವಿಗಳು., ಉನ್ನತ ಶಿಕ್ಷಣ ಸಂಸ್ಥೆಗಳು ನೀಡುವ ಅಂಕ ಪ್ರಮಾಣ ಪತ್ರಗಳನ್ನು ಪ್ರವೇಶ ಅರ್ಹತೆಗೆ ಮಾತ್ರವಾಗಿರುತ್ತವೆ. ಉಳಿದಂತೆ ನೌಕರಿ ನೀಡುವ ಏಜೆನ್ಸಿಗಳೇ ಅಭ್ಯರ್ಥಿಗಳಿಗೆ ತಾವು ನಿರ್ಧರಿಸಿದ ಕ್ರಮದಲ್ಲಿ ಪರೀಕ್ಷೆ ನಡೆಸಿ, ಸೂಕ್ತ ರನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಆದರೆ, ಭಾರತದಲ್ಲಿ ಮಾತ್ರ ರಾಂಕ್ ವಿಜೇತರಿಗೆ ಹೆಚ್ಚು ಮನ್ನಣೆ ಎಂಬ ಪರಿಪಾಠ ರೂಢಿಗತವಾಗಿತ್ತು. ಕಳೆದೆರಡು ದಶಕದಲ್ಲಿ ಸಿಇಟಿ ಇಲ್ಲಿ ಸಾಕಷ್ಟು ಕ್ರಾಂತಿಯನ್ನೇ ಸೃಷ್ಟಿಸಿದ್ದು ಖಾಸಗಿ ಕಂಪನಿಗಳಿಂದ ಹಿಡಿದು ಗ್ರಾಮ ಲೆಕ್ಕಿಗ ಹುದ್ದೆಯ ತನಕ ಈ ಕ್ರಮದ ಮಾದರಿಯಲ್ಲೇ ನೌಕರರನ್ನು ಶೋಧಿಸುತ್ತಿರುವುದು ಅಭಿನಂದನಾರ್ಹ ಸಂಗತಿ.

ಈ ವ್ಯವಸ್ಥೆಯಲ್ಲಿ ವೃತ್ತಿ ಕೌಶಲವಿದ್ದ ಕಡಿಮೆ ಅಂಕ ಪಡೆದವರು ನೌಕರಿ ಗಿಟ್ಟಿಸಿಕೊಳ್ಳಬಹುದು. ಕೌಶಲವಿಲ್ಲದ ರಾಂಕ್ ವಿಜೇತ ಮತ್ತೆ ನೌಕರಿಗೆ ಪ್ರಯತ್ನಿಸಬಹುದು. ಹಾಗಾಗಿ ಇಂಥ ಕ್ರಮಗಳನ್ನು ವ್ಯವಸ್ಥೆ ಸುಧಾರಣೆಯ ಭಾಗವಾಗಿ ನೋಡಬೇಕೇ ಹೊರತು ಸಾಂಪ್ರದಾಯಿಕವಾಗಿ ಅಲ್ಲ. ನೂತನ ಪರೀಕ್ಷಾ ಕ್ರಮದ ಜೊತೆ ಹೊಂದಾಣಿಕೆ ಮಾಡಿಕೊಂಡು ಹೆಜ್ಜೆ ಇಡಬೇಕಾಗಿದೆ. ಉತ್ತಮ ಅಂಕ ಸಂಪಾದಿಸಿದ ಪ್ರತಿಭಾವಂತ ಅರ್ಹ ಅಭ್ಯರ್ಥಿಗಳಿಗೆ ಒಂದಲ್ಲ ಒಂದು ಜಾಗದಲ್ಲಿ ಸೂಕ್ತ ಗೌರವ ಮನ್ನಣೆ ಸಿಕ್ಕಿಯೇ ಸಿಗುತ್ತದೆ. ಧೃತಿಗೆಡುವ ಅವಶ್ಯಕತೆ ಬೇಕಿಲ್ಲ

-ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೨-೧೦-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ