ಅಲಸಂಡೆ ಬೆಳೆಯಲ್ಲಿ ಸಸ್ಯ ಹೇನು ನಿಯಂತ್ರಣ

ಅಲಸಂಡೆ ಬೆಳೆಯಲ್ಲಿ ಸಸ್ಯ ಹೇನು ನಿಯಂತ್ರಣ

ಅಲಸಂಡೆ ಮಳೆಗಾಲದಲ್ಲಿ ಬೆಳೆಯಬಹುದಾದ ಉತ್ತಮ ತರಕಾರಿ ಬೆಳೆಯಾಗಿದ್ದು ಈ ವರ್ಷ ಉತ್ತಮ ಧಾರಣೆಯನ್ನು ಹೊಂದಿದೆ. ಇನ್ನು ಹಬ್ಬಗಳ ಸರಪಳಿಯೇ ಮುಂದಿರುವುದರಿಂದ ಅಲಸಂಡೆಗೆ ಗರಿಷ್ಟ ದರ ಸಿಗುವ ಸಾಧ್ಯತೆ ಇದೆ. ಈಗಾಗಲೇ ಅಲಸಂಡೆಯ ಬೆಲೆ ಸುಮಾರು ರೂ. ೭೦-೮೦ರವರೆಗೆ ಇದೆ. ಅದರಲ್ಲೂ ಸ್ಥಳೀಯವಾಗಿ ಬೆಳೆಸಿರುವ ಊರಿನ ನಾಟಿ ಅಲಸಂಡೆಗೆ ನೂರು ರೂ. ಗೂ ಮಿಕ್ಕಿದ ಬೆಲೆ ಇದೆ. ಈ ಕಾರಣದಿಂದ ಈ ಬೆಳೆಯನ್ನು ರೋಗ ರಹಿತವಾಗಿ ಬೆಳೆದರೆ ಅಪಾರ ಲಾಭವಿದೆ.

ಈ ಬೆಳೆಗೆ ಬರುವ ಪ್ರಮುಖ ಕೀಟ ಹೇನು. ಈ ಹೇನು ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ, ಕಾಯಿಯ ಬೆಳವಣಿಗೆಯನ್ನು  ಕುಂಠಿತಗೊಳಿಸುತ್ತದೆ, ಹೂ ಮೊಗ್ಗು ಬರುವ ಭಾಗವನ್ನು ಸಹ ಹಾಳು ಮಾಡುತ್ತದೆ. ಹೇನಿನ ಕಾರಣಕ್ಕೆ ಅಲಸಂಡೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗುತ್ತದೆ.  

ಸಸ್ಯ ಹೇನುಗಳಲ್ಲಿ ಸುಮಾರು ೨೫೦ ಬಗೆಯ ಪ್ರಭೇಧಗಳಿದ್ದು, ಹೆಚ್ಚಿನವುಗಳು ಬೆಳೆಗಳಿಗೆ ಹಾನಿ ಮಾಡುವವುಗಳಾಗಿವೆ. ಇವು ರಸ ಹೀರುವುದು ಮಾತ್ರವಲ್ಲದೆ ಕೆಲವು ರೋಗಗಳನ್ನೂ ಪ್ರಸರಿಸುತ್ತವೆ. ಇದರ ನಿಯಂತ್ರಣಕ್ಕೆ ಬೇರೆ ಬೇರೆ ಉಪಾಯಗಳಿದ್ದು, ರಾಸಾಯನಿಕವಾಗಿ ಡೈಮಿಥೋಯೇಟ್ ಕೀಟನಾಶಕವನ್ನು ಬಳಸಿ ಇದನ್ನು ನಿಯತ್ರಿಸಲಾಗುತ್ತದೆ. ೨.೫ ಮಿಲಿ ೧ ಲೀ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಡೈಮಿಥೊಯೇಟ್ (ರೋಗರ್) ಇದನ್ನು ಬಳಕೆ ಮಾಡಿ ಸುಮಾರು ೧ ವಾರ ತನಕವಾದರೂ ಅದನ್ನು ಬಳಕೆ  ಮಾಡಬಾರದು. ಆದರೆ ಹಾಗೆ ಮಾಡಲಿಕ್ಕಾಗುವುದಿಲ್ಲ. ಇದರ ಬದಲಿಗೆ ಇನ್ನೂ ಕೆಲವೊಂದು ನಿವಾರಣಾ ಉಪಾಯಗಳಿವೆ.

* ಹೆಚ್ಚಾಗಿ ಸಸ್ಯ ಹೇನುಗಳು ಎಳೆ ಚಿಗುರಿನ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮೊದಲಾಗಿ ಇದನ್ನು ಗುರುತಿಸಿದ್ಡೇ ಆದರೆ ಎಲ್ಲಿ ಇದರ ಹಿಂಡು ಇದೆಯೋ ಆ ಭಾಗವನ್ನು ಕತ್ತರಿಸಿ ತೆಗೆದು ಬೆಂಕಿಗೆ ಹಾಕಿ ನಾಶ ಮಾಡಬಹುದು.

* ಅಧಿಕ ಒತ್ತಡದಲ್ಲಿ ನೀರನ್ನು ಈ ಸಸ್ಯ ಹೇನುಗಳು ಇರುವ ಭಾಗಕ್ಕೆ ಸಿಂಪಡಿಸಿದಾಗ ಅದು ಸಣ್ಣ ಜೀವಿಯಾದ ಕಾರಣ ತೊಳೆದು ಹೋಗಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ.

* ಸಾಬೂನಿನ ದ್ರಾವಣ (ಧೋಬಿ ಸಾಬೂನು ಅಥವಾ ಡಿಷ್ ವಾಶ್) ಒಂದು ೫೦ ಗ್ರಾಂ ನಷ್ಟು ಇರುವ ಒಂದು ತುಂಡು ಸಾಬೂನನ್ನು ನೀರಿನಲ್ಲಿ ಕರಗಿಸಿ ಅದನ್ನು ಸುಮಾರು ೫ ಲೀ ನೀರಿಗೆ ಮಿಶ್ರಣ ಮಾಡಿ ಅದನ್ನು ಸಿಂಪರಣೆ ಮಾಡುವುದರಿಂದ ಸಸ್ಯ ಹೇನುಗಳು ಕಡಿಮೆಯಾಗುತ್ತವೆ. ಸಾಬೂನಿನ ಖಾರ ಸಸ್ಯ ಹೇನುಗಳಿಗೆ ಮಾರಕವಾಗಿರುತ್ತದೆ.

* ಬೇವಿನ ಎಣ್ಣೆ ಅಥವಾ ಹೊಂಗೆ ಎಣ್ಣೆಯನ್ನು ಸಾಬೂನು ನೀರಿನ ಜೊತೆಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಿಯೂ  ಸಸ್ಯ ಹೇನು ನಿಯಂತ್ರಣ ಮಾಡಬಹುದು. ಈ ಸಿಂಪರಣೆಯನ್ನು ಮಾಡುವಾಗ ಅಧಿಕ ಒತ್ತಡದಲ್ಲಿ ಹೇನುಗಳು ಇರುವ ಭಾಗಕ್ಕೆ ಬೀಳುವಂತೆ ಸಿಂಪಡಿಸಬೇಕು.

* ಕೆಲವು ಕಡೆ ಕೀಟ ನಿಯಂತ್ರಕ ಸಾಬೂನುಗಳು ಲಭ್ಯವಿದೆ. ಈ ಸಾಬೂನಿನಲ್ಲಿ ಬೇವು, ಹೊಂಗೆ ಜೊತೆಗೆ ಸಾಬೂನಿಗೆ ಬಳಕೆ ಮಾಡುವ ಮೂಲವಸ್ತುಗಳನ್ನು ಸೇರಿಸಿರುತ್ತಾರೆ. ಇದನ್ನು ಕಲಕಿ (ನೀರಿನಲ್ಲಿ ಮಿಶ್ರ ಮಾಡಿ) ಸಿಂಪರಣೆ ಮಾಡಿಯೂ ಸಸ್ಯ ಹೇನು ನಿಯಂತ್ರಿಸಬಹುದು.

* ಪ್ರಕೃತಿಯಲ್ಲಿ ಕೆಲವೊಂದು ಉಪಕಾರೀ ಕೀಟಗಳಿದ್ದು, ಹಸುರು ಬಣ್ಣದ ಮಿಡತೆಯೊಂದು ಸಸ್ಯ ಹೇನುಗಳನ್ನು ತಿನ್ನುತ್ತದೆ. ಇದನ್ನು ಗುರುತಿಸಿ ಅಲಸಂಡೆ ಬೆಳೆಯುವಲ್ಲಿ ಬಿಡುವುದರಿಂದ ಸಸ್ಯ ಹೇನು ನಿಯಂತ್ರಿಸಬಹುದು.    

ಹೀಗೆ ರಾಸಾಯನಿಕ ರಹಿತವಾದ ಕೆಲವು ಉಪಾಯಗಳನ್ನು ಬಳಸಿಕೊಂಡು ಸಸ್ಯ ಹೇನಿನಿಂದ ಅಲಸಂಡೆ ಬೆಳೆಯನ್ನು ಕಾಪಾಡಿಕೊಳ್ಳಬಹುದು.

ಮಾಹಿತಿ: ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ