ಅಲಾರಮ್ ತಂತ್ರ
ಬಾಗೂರು ಗ್ರಾಮದಲ್ಲಿ ತೀರಾ ಅಪ್ರಾಮಾಣಿಕ ಕುಳ್ಳನೊಬ್ಬನಿದ್ದ. ಅವನ ಹೆಸರು ಚತುರಾಂಗುಲಿ. ಯಾಕೆಂದರೆ ಅವನು ಇತರರ ಎಷ್ಟು ವಸ್ತುಗಳನ್ನು ಅವರಿಗೆ ತಿಳಿಯದಂತೆ ತೆಗೆದಿದ್ದನೆಂಬುದಕ್ಕೆ ಲೆಕ್ಕವೇ ಇರಲಿಲ್ಲ.
ಅವನು ಮೂಸಾನ ಹಣ್ಣಿನಂಗಡಿಯಿಂದ ಕಿತ್ತಳೆಯೊಂದನ್ನು ತೆಗೆಯುತ್ತಾನೆ. ಅನಂತರ ಕಾಮತರ ಕಿರಾಣಿ ಅಂಗಡಿಯಿಂದ ಬಿಸ್ಕಿಟ್ ಪೊಟ್ಟಣವೊಂದನ್ನು ಎತ್ತಿಕೊಳ್ಳುತ್ತಾನೆ. ಮುದುಕಿ ಕಮಲಮ್ಮನ ಹೂವಿನಂಗಡಿಯಿಂದ ಆಕೆ ಅತ್ತ ಹೋದಾಗ ಹೂಗಳನ್ನು ಕದಿಯುತ್ತಾನೆ. ರೈತ ಗಂಗಣ್ಣನ ತೋಟದಿಂದ ಮಾವಿನ ಹಣ್ಣುಗಳನ್ನು ಕಿತ್ತುಕೊಳ್ಳುತ್ತಾನೆ. ಗ್ರಾಮದ ಪ್ರತಿಯೊಬ್ಬರಿಗೂ ಇದನ್ನೆಲ್ಲ ಕದಿಯುತ್ತಿರೋದು ಚತುರಾಂಗುಲಿ ಎಂದು ಗೊತ್ತಿದ್ದರೂ, ಯಾರೊಬ್ಬರಿಗೂ ಅವನು ಕದಿಯುವುದನ್ನು ಕಣ್ಣಾರೆ ಕಾಣಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ ಅವನು ಕದಿಯುವುದರಲ್ಲಿ ಬಹಳ ಚತುರ.
"ಅವನನ್ನು ಹಿಡಿಯಲು ಯಾವುದಾದರೂ ತಂತ್ರ ಹುಡುಕಲೇ ಬೇಕು” ಎನ್ನುತ್ತಿದ್ದ ರೈತ ಗಂಗಣ್ಣ. “ಆದರೆ ಕಣ್ಣಾರೆ ಕಾಣದೆ ಅವನು ಕದಿಯುತ್ತಾನೆಂದು ಹೇಗೆ ಹೇಳುವುದು” ಎಂಬುದು ಕಮಲಮ್ಮನ ಕೊರಗು. ಗ್ರಾಮದವರು ಹೀಗೆ ಮಾತಾಡಿ ಕೊಳ್ಳುತ್ತಿದ್ದಾಗ ವಾಚು ರಿಪೇರಿ ಮಾಡುವ ವಾಚಣ್ಣ ಅಲ್ಲಿಗೆ ಬಂದ. ಹಿರಿಯ ವಾಚಣ್ಣನ ಕಣ್ಣುಗಳು ಬಹು ಚುರುಕು. ಎಲ್ಲರೂ ಅವನತ್ತ ತಿರುಗಿ, ಒಂದೇ ಧ್ವನಿಯಲ್ಲಿ ಕೇಳಿದರು, "ಈಗ ನಿನ್ನ ಬುದ್ಧಿವಂತಿಕೆಯಿಂದ ನಮಗೆ ಸಹಾಯ ಮಾಡು ನೋಡೋಣ. ಚತುರಾಂಗುಲಿಯನ್ನು ಕದಿಯುವಾಗಲೇ ಹಿಡಿದು, ಅವನ ಕಳ್ಳತನಕ್ಕಾಗಿ ಶಿಕ್ಷೆ ಕೊಡಬೇಕಾಗಿದೆ. ಆದರೆ ಆ ಆಸಾಮಿಯನ್ನು ಹೇಗೆ ಹಿಡಿಯುವುದು ಎಂಬುದೇ ನಮಗೆ ಗೊತ್ತಾಗುತ್ತಿಲ್ಲ. ನೀನೇ ನಮಗೊಂದು ದಾರಿ ತೋರಿಸಬೇಕು.”
ಸ್ವಲ್ಪ ಹೊತ್ತು ಯೋಚನೆ ಮಾಡಿದ ವಾಚಣ್ಣ ಕೊನೆಗೊಂದು ಉಪಾಯ ಸೂಚಿಸಿದ: “ಆ ಚತುರಾಂಗುಲಿ ಪ್ರತಿದಿನವೂ ಮಾರುಕಟ್ಟೆಗೆ ಹೋಗುವಾಗ ಮತ್ತು ಅಲ್ಲಿಂದ ಹಿಂತಿರುಗುವಾಗ ನನ್ನ ವಾಚಿನ ಅಂಗಡಿಗೆ ಬರುತ್ತಾನೆ. ನಾನು ನನ್ನ ಕಿಟಿಕಿಯ ಅಂಚಿನಲ್ಲಿ ಒಂದು ಪುಟ್ಟ ಗಡಿಯಾರವನ್ನು ಇಡುತ್ತೇನೆ ಮತ್ತು “ಮಾಲೀಕರು ಹೊರಗೆ ಹೋಗಿದ್ದಾರೆ” ಎಂಬ ನೋಟೀಸನ್ನು ನನ್ನ ಅಂಗಡಿಯ ಬಾಗಿಲಿಗೆ ತಗಲಿಸುತ್ತೇನೆ. ಆಗ ಚತುರಾಂಗುಲಿ ಆ ಗಡಿಯಾರವನ್ನು ಖಂಡಿತವಾಗಿ ಕದಿಯುತ್ತಾನೆ."
"ಆದರೆ ಅವನನ್ನು ಮಾಲು ಸಮೇತ ಹಿಡಿಯುವುದು ಹೇಗೆ? ನಾವೆಲ್ಲಾದರೂ ಅವಿತು ಕುಳಿತರೆ ಅವನಿಗೆ ಗೊತ್ತಾಗುತ್ತದೆ" ಎಂಬುದು ರೈತ ಗಂಗಣ್ಣನ ಪ್ರಶ್ನೆ. ಅದಕ್ಕೆ ವಾಚಣ್ಣನ ಉತ್ತರ, “ನಾನು ಅಲ್ಲಿಡೋದು ಒಂದು ಅಲಾರಮ್ ಗಡಿಯಾರವನ್ನು. ಅಂದರೆ ಒಂದು ಗೊತ್ತಾದ ಸಮಯದಲ್ಲಿ ಅದರ ಅಲಾರಮ್ ಜೋರಾಗಿ ಸದ್ದು ಮಾಡುತ್ತದೆ. ನಾನು ನಡು ಮಧ್ಯಾಹ್ನ ಹನ್ನೆರಡು ಗಂಟೆಗೆ ಗಡಿಯಾರದ ಅಲಾರಮ್ ಸೆಟ್ ಮಾಡುತ್ತೇನೆ. ಹಾಗಾಗಿ, ಚತುರಾಂಗುಲಿ ಮಧ್ಯಾಹ್ನ ಮಾರುಕಟ್ಟೆಯಲ್ಲಿ ಖರೀದಿ ಮಾಡುತ್ತಿರುವಾಗ ಅಲಾರಮ್ ಮೊಳಗುತ್ತದೆ. ಆಗ ನಾನಲ್ಲಿಗೆ ಬಂದು ನನ್ನ ಗಡಿಯಾರ ಕೊಡಬೇಕೆಂದು ಅವನನ್ನು ಕೇಳ್ತೇನೆ. ಅವನು ಆಗ ಕದ್ದ ವಸ್ತು ಸಮೇತ ಸಿಕ್ಕಿ ಬೀಳ್ತಾನೆ” ಚತುರಾಂಗುಲಿ ಗಡಿಯಾರವನ್ನು ಕದಿಯುವಾಗ ಯಾರೂ ಅಲ್ಲಿರಬಾರದು. ಆದರೆ ಹನ್ನೆರಡು ಗಂಟೆಗೆ ಮಾರುಕಟ್ಟೆಯಲ್ಲಿ ಎಲ್ಲರೂ ಒಟ್ಟು ಸೇರಬೇಕೆಂದು ಅವರೆಲ್ಲರೂ ನಿರ್ಧರಿಸಿದರು.
ಮರುದಿನ ಪೂರ್ವಾಹ್ನ ಎಂದಿನಂತೆ ವಾಚಣ್ಣನ ವಾಚಿನಂಗಡಿಯ ಎದುರು ಚತುರಾಂಗುಲಿ ಹಾದು ಹೋಗುತ್ತಿದ್ದ. ಅವನ ಚುರುಕಾದ ಕಣ್ಣುಗಳಿಗೆ ಅಂಗಡಿಯ ಕಿಟಕಿಯ ಅಂಚಿನಲ್ಲೊಂದು ಹಸುರು ಬಣ್ಣದ ಗಡಿಯಾರ ಕಾಣಿಸಿತು. ಜೊತೆಗೆ, ಬಾಗಿಲಿಗೆ ಅಂಟಿಸಿದ್ದ “ಮಾಲೀಕರು ಹೊರಗೆ ಹೋಗಿದ್ದಾರೆ” ಎಂಬ ನೋಟೀಸೂ ಕಾಣಿಸಿತು. ಚತುರಾಂಗುಲಿ ಅತ್ತಿತ್ತ ನೋಡಿದ. ಅವನಿಗೆ ಅಲ್ಲಿ ಯಾರೂ ಕಾಣಿಸಲಿಲ್ಲ. "ನನ್ನ ಅದೃಷ್ಟ ಚೆನ್ನಾಗಿದೆ” ಎಂದು ಕೊಳ್ಳುತ್ತಾ ಚತುರಾಂಗುಲಿ ಆ ಹಸುರು ಗಡಿಯಾರವನ್ನು ಚಕ್ಕನೆ ಎತ್ತಿಕೊಂಡು ತನ್ನ ಉದ್ದ ಕೋಟಿನ ದೊಡ್ದ ಕಿಸೆಯೊಳಗೆ ಹಾಕಿಕೊಂಡ. ಅದರ ಮೇಲೆ ತನ್ನ ಕೆಂಪು ಕರವಸ್ತ್ರ ಮುಚ್ಚಿದ.
ಅನಂತರ ಚತುರಾಂಗುಲಿ ಸಿಳ್ಳೆ ಹಾಕುತ್ತಾ ಖುಷಿಯಿಂದ ಮಾರುಕಟ್ಟೆಗೆ ನಡೆದ. ಅಲ್ಲಿ ಆಗಲೇ ಗ್ರಾಮದ ಹಲವರು ಸೇರಿದ್ದರು. ಅವರೆಲ್ಲರೂ ಪಿಸುಗುಟ್ಟುತ್ತಾ ಮಾತನಾಡುತ್ತಿದ್ದರು. ಅದೇನೆಂದು ಅವನಿಗೆ ಯಾರೂ ಹೇಳಲಿಲ್ಲ.
ಹನ್ನೊಂದು ಗಂಟೆಗೆ ಸರಿಯಾಗಿ ಗ್ರಾಮದ ಡಂಗುರ ಸಾರುವಾತ ಮಾರುಕಟ್ಟೆಗೆ ಬಂದ. ತನ್ನ ಡೋಲು ಬಡಿಯುತ್ತಾ ಆತ ಕೂಗಿ ಹೇಳಿದ, “ಕೇಳಿರಿ, ಕೇಳಿರಿ. ಹಸುರು ಬಣ್ಣದ ಪುಟ್ಟ ಗಡಿಯಾರವೊಂದು ಅಂಗಡಿಯ ಕಿಟಕಿಯ ಅಂಚಿನಿಂದ ಕಾಣೆಯಾಗಿದೆ. ಅದು ನಿಮ್ಮಲ್ಲಿದ್ದರೆ ತಕ್ಷಣವೇ ನನಗೆ ತಂದು ಕೊಡಿ.”
ಅಲ್ಲೇ ಇದ್ದ ವಾಚಣ್ಣ, ಚತುರಾಂಗುಲಿಯ ಬಳಿ ಕೇಳಿದ, ”ಕಳ್ಳ ಸಿಕ್ಕಿ ಬಿದ್ದರೆ ಅವನಿಗೆ ಏನು ಶಿಕ್ಷೆ ಕೊಡಬೇಕೆನ್ನುತ್ತಿ?” ಆತ ಕಣ್ಣು ಮಿಟುಕಿಸದೆ ಉತ್ತರಿಸಿದ, “ಗ್ರಾಮದ ಪ್ರತಿಯೊಬ್ಬರೂ ಕಳ್ಳನಿಗೆ ಒಂದೇಟು ಹೊಡೆಯಬೇಕು. ಅನಂತರವೂ ಕಳ್ಳ ತನ್ನ ಕಳ್ಳತನ ನಿಲ್ಲಿಸದಿದ್ದರೆ ಅವನನ್ನು ಗ್ರಾಮ ದೇವತೆಯ ಬಳಿಗೆ ಒಯ್ಯಬೇಕು - ಅವನಿಗೆ ತಕ್ಕ ಶಾಸ್ತಿ ಮಾಡಲಿಕ್ಕಾಗಿ.”
“ಒಳ್ಳೇ ಐಡಿಯಾ” ಎಂದು ವಾಚಣ್ಣ ತಲೆಯಾಡಿಸಿದ. ಅದಾಗಿ ಹನ್ನೆರಡು ಗಂಟೆ ಹತ್ತಿರವಾಗುತ್ತಿದ್ದಂತೆ ಅಲ್ಲಿ ಜಮಾಯಿಸಿದ್ದ ಎಲ್ಲರೂ ಚತುರಾಂಗುಲಿಯ ಸುತ್ತ ಸೇರ ತೊಡಗಿದರು. ಗೊಂದಲಕ್ಕೊಳಗಾದ ಚತುರಾಂಗುಲಿ ಅಲ್ಲಿಂದ ಜಾರಿ ಕೊಳ್ಳಲು ಪ್ರಯತ್ನಿಸಿದರೂ ಜನಜಂಗುಳಿಯಿಂದಾಗಿ ಅವನಿಗೆ ಸಾಧ್ಯವಾಗಲಿಲ್ಲ.
ಅಷ್ಟರಲ್ಲಿ ಮಾರುಕಟ್ಟೆಯ ಗಡಿಯಾರ ಗೋಪುರದಲ್ಲಿ ಹನ್ನೆರಡು ಗಂಟೆಯ ಸದ್ದು ಮೊಳಗಿತು. ತಕ್ಷಣವೇ ಅಲಾರಮ್ ಗಡಿಯಾರವೂ ಕಿವಿಗಡಚಿಕ್ಕುವ ಸದ್ದಿನೊಂದಿಗೆ ಮೊಳಗಿತು. ಅಬ್ಬ, ಆ ಸದ್ದಿಗೆ ಚತುರಾಂಗುಲಿ ನಿಂತಲ್ಲಿಯೇ ಜಿಗಿದ. ತನ್ನ ಕೋಟಿನ ಜೇಬಿಗೆ ಕೈಯಿಂದ ಜೋರಾಗಿ ಬಡಿಯುತ್ತಾ ಅತ್ತಿತ್ತ ನೋಡಿದ. “ಏನಿದು, ಈ ದೊಡ್ಡ ಸದ್ದು ಎಲ್ಲಿಂದ ಬರುತ್ತಿದೆ?” ಎಂದು ಚತುರಾಂಗುಲಿ ಕಂಗಾಲಾಗಿ ಕೂಗಿದ.
"ಆ ಸದ್ದು ನಿನ್ನ ಕೋಟಿನ ಜೇಬಿನಿಂದ ಬರುತ್ತಿದೆ. ಬೇಗ ಹೇಳು, ಏನಿದೆ ನಿನ್ನ ಕೋಟಿನ ಜೇಬಿನಲ್ಲಿ?” ಎಂದು ವಾಚಣ್ಣ ಜೋರಾಗಿ ಕೇಳಿದ. “ಅರೆರೆ, ಅಲ್ಲೇನೂ ಇಲ್ಲ. ನನ್ನ ಕರವಸ್ತ್ರ ಮಾತ್ರ ಇದೆ” ಎಂದು ಉತ್ತರಿಸಿದ ಚತುರಾಂಗುಲಿ. “ಕರವಸ್ತ್ರ ಅಂತಹ ಸದ್ದು ಮಾಡೋದಿಲ್ಲ" ಎಂದ ವಾಚಣ್ಣ ಚತುರಾಂಗುಲಿಯನ್ನು ದುರುಗುಟ್ಟಿ ನೋಡುತ್ತಾ.
ಪುನಃ ಅದೇ ಅಲಾರಮ್ ಸದ್ದು ಮೊಳಗಿತು. ಈಗ ಚತುರಾಂಗುಲಿಯ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡ ವಾಚಣ್ಣ ಕೇಳಿದ, “ನಿನ್ನ ಜೇಬಿನಲ್ಲಿ ಕರವಸ್ತ್ರ ಮಾತ್ರ ಇರೋದಾದರೆ, ಈ ಸದ್ದು ಮಾಡುತ್ತಿರುವ ವಸ್ತು ಅದೇನೆಂದು ನೋಡೋಣ." ಚತುರಾಂಗುಲಿ “ನೀನು ಹಾಗೆಲ್ಲ ಮಾಡುವಂತಿಲ್ಲ” ಎನ್ನುತ್ತಿದ್ದಂತೆಯೇ, ವಾಚಣ್ಣ ಅವನ ಕೋಟಿನ ಜೇಬಿನೊಳಗೆ ಕೈ ಹಾಕಿ, ಇನ್ನೂ ಮೊಳಗುತ್ತಲೇ ಇದ್ದ ತನ್ನ ಹಸುರು ಅಲಾರಮ್ ಗಡಿಯಾರವನ್ನು ಹೊರತೆಗೆದ.
“ಹೋ ಹೋ, ಚತುರಾಂಗುಲಿ! ನನ್ನ ಹಸುರು ಅಲಾರಮ್ ಗಡಿಯಾರ ನಿನ್ನ ಕೋಟಿನ ಜೇಬಿಗೆ ಹೋಗಿತ್ತು. ಅಂದರೆ ನಮ್ಮ ಗ್ರಾಮದಲ್ಲಿ ಕಾಣೆಯಾದ ಇನ್ನೂ ಹಲವಾರು ವಸ್ತುಗಳು ನಿನ್ನದೇ ಜೇಬಿಗೆ ಹೋಗಿವೆ ಎಂದಾಯಿತು. ಚತುರಾಂಗುಲಿ, ನೀನೊಬ್ಬ ದರಿದ್ರ ಕಳ್ಳ. ಇಂತಹ ಕಳ್ಳನಿಗೆ ಏನು ಶಿಕ್ಷೆ ಕೊಡಬೇಕೆಂದು ಈಗಷ್ಟೇ ನೀನೇ ಹೇಳಿದ್ದಿಯಲ್ಲ. ಅದೇನದು?" ಕೇಳಿದ ವಾಚಣ್ಣ.
ಚತುರಾಂಗುಲಿ ಭಯದಿಂದ “ಅದೇನೆಂದು ನನಗೆ ನೆನಪಿಲ್ಲ" ಎಂದ. ಆಗ ಅಲ್ಲಿ ಜಮಾಯಿಸಿದ್ದ ಗ್ರಾಮದವರೆಲ್ಲ ಒಕ್ಕೊರಲಿನಲ್ಲಿ ಹೇಳಿದರು, “ಗ್ರಾಮದ ಪ್ರತಿಯೊಬ್ಬರೂ ಕಳ್ಳನಿಗೆ ಒಂದೇಟು ಹೊಡೆಯಬೇಕೆಂದು ಅವನು ಹೇಳಿದ್ದ.” ಅಲ್ಲಿದ್ದ ಪ್ರತಿಯೊಬ್ಬರ ಒಂದಲ್ಲ ಒಂದು ವಸ್ತುವನ್ನು ಚತುರಾಂಗುಲಿ ಕದ್ದಿದ್ದ. ಅದಕ್ಕಾಗಿ ಅವರೆಲ್ಲರೂ ಅವನಿಗೆ ಒಂದೇಟು ಬಾರಿಸಲು ಕಾಯುತ್ತಿದ್ದರು.
ಅಂತೂ, ತಾನೇ ಹೇಳಿದ ಶಿಕ್ಷೆಯನ್ನು ಗ್ರಾಮದ ಎಲ್ಲರಿಂದಲೂ ಚತುರಾಂಗುಲಿ ಕೈತುಂಬ ಪಡೆದ. ಅವನಿಗೆ ಸರಿಯಾಗಿ ಏಟಿನ ಮೇಲೆ ಏಟು ಬಿತ್ತು. ರೈತ ಗಂಗಣ್ಣ ಏಟು ಹೊಡೆಯುವಾಗಲಂತೂ ಚತುರಾಂಗುಲಿ ತತ್ತರಿಸಿ ಹೋದ; ಯಾಕೆಂದರೆ ಗಂಗಣ್ಣನದು ಹೊಲದ ಕೆಲಸ ಮಾಡಿಮಾಡಿ ಬಿರುಸಾಗಿದ್ದ ಕೈ.
ವಾಚಣ್ಣ ತನ್ನ ಹಸುರು ಅಲಾರಮ್ ಗಡಿಯಾರ ತೆಗೆದುಕೊಂಡು ಮನೆಗೆ ನಡೆದ. ಎಲ್ಲರೂ ಆ ಗಡಿಯಾರ ಚತುರಾಂಗುಲಿಗೆ ಬುದ್ಧಿ ಕಲಿಸಿದ್ದನ್ನು ನೆನೆದು ನಕ್ಕರು. ಅಲ್ಲಿಂದ ಹೊರಡುವ ಮುನ್ನ ವಾಚಣ್ಣ ಹೇಳಿದ್ದ, “ಚತುರಾಂಗುಲಿ, ಇನ್ನೂ ನಿನ್ನ ಕದಿಯುವ ಚಟ ಬಿಡದಿದ್ದರೆ ಏನು ಮಾಡಬೇಕೆಂದು ನೀನೇ ಹೇಳಿದ್ದನ್ನು ಚೆನ್ನಾಗಿ ನೆನಪಿಟ್ಟುಕೋ. ಆ ದಿನ ಬಂದೀತು." ಚತುರಾಂಗುಲಿ ಅದನ್ನು ಚೆನ್ನಾಗಿ ನೆನಪಿಟ್ಟುಕೊಂಡಿದ್ದಾನೆ. ಯಾಕೆಂದರೆ ಇತ್ತೀಚೆಗೆ ಅವನು ಯಾವುದನ್ನೂ ಕದ್ದಿಲ್ಲ.
ಚಿತ್ರ ಕೃಪೆ: "ದ ಟೆಡ್ಡಿ ಬೇರ್ಸ್ ಟೇಯ್ಲ್" ಪುಸ್ತಕ