ಅಲೆಕ್ಸಾಂಡರನ ದಂಡಯಾತ್ರೆ ಮತ್ತು ಹಿಂದೂ ಗುರು ಫಣೀಶ

ಅಲೆಕ್ಸಾಂಡರನ ದಂಡಯಾತ್ರೆ ಮತ್ತು ಹಿಂದೂ ಗುರು ಫಣೀಶ

ಅಲೆಕ್ಸಾಂಡರ್ ‘ದಿ ಗ್ರೇಟ್' ಎಂಬ ಗ್ರೀಕ್ (ಗ್ರೀಸ್) ಚಕ್ರವರ್ತಿಯ ಬಗ್ಗೆ ಇತಿಹಾಸ ಜ್ಞಾನವಿರುವ ಯಾರಿಗೆ ತಾನೇ ಗೊತ್ತಿಲ್ಲ? ಇಡೀ ವಿಶ್ವವನ್ನು ಜಯಿಸಿ ‘ವಿಶ್ವ ವಿಜೇತ’ನಾಗಬೇಕೆಂಬ ಕನಸು ಹೊತ್ತ ಅಲೆಕ್ಸಾಂಡರ್ ಅದರಲ್ಲಿ ಅಸಫಲವಾಗುತ್ತಾನೆ. ಅಲೆಕ್ಸಾಂಡರ್ ಬದುಕಿದ್ದು ಕೇವಲ ೩೩ ವರ್ಷ ಮಾತ್ರ. ಆದರೆ ಅವನ ಸಾಹಸ ಕಥೆಗಳು ಈಗಲೂ ಜನಜನಿತ. ಇವನು ಭಾರತದಲ್ಲೂ ಸುಮಾರು ೧೯ ತಿಂಗಳು ತನ್ನ ದಂಡಯಾತ್ರೆಯನ್ನು ಮಾಡಿದ್ದ. ಅವನಿಗೆ ಜಮ್ಮುವಿನ ರಾಜ ಪುರೂರವ ಅಥವಾ ಪೋರಸ್ ಮಾತ್ರ ತೀವ್ರ ಪೈಪೋಟಿ ನೀಡಿದ್ದ. ಅಲೆಕ್ಸಾಂಡರ್ ವಿರುದ್ಧ ವೀರಾವೇಷದಿಂದ ಹೋರಾಡಿದ್ದ ವೀರ ಪುರೂರವ. ಆ ಯುದ್ಧದಲ್ಲಿ ಅಲೆಕ್ಸಾಂಡರ್ ಜಯಶಾಲಿಯಾದರೂ, ತನ್ನ ಶತ್ರು ಪುರೂರವನ ಸಾಮರ್ಥ್ಯವನ್ನು ಅಭಿನಂದಿಸಿ ಅವನನ್ನು ತನ್ನ ಬಂಧನದಿಂದ ಬಿಡುಗಡೆ ಮಾಡಿದ್ದ.

ಅಲೆಕ್ಸಾಂಡರ್ ತನ್ನ ೨೨ನೇ ವಯಸ್ಸಿನಲ್ಲಿ ವಿಶ್ವವನ್ನು ಗೆಲ್ಲಲು ದಂಡಯಾತ್ರೆ ಪ್ರಾರಂಭಿಸಿದ್ದ. ಗ್ರೀಕ್ ಚಕ್ರವರ್ತಿಯಾಗಿದ್ದ ಫಿಲಿಪ್ ಮ್ಯಾಸಿಡೋನಿಯಾ ಹಾಗೂ ಒಲಂಪಿಯಾ ದಂಪತಿಗಳ ಪುತ್ರನೇ ಅಲೆಕ್ಸಾಂಡರ್. ಒಲಂಪಿಯಾ ಸರ್ಪಗಳ ಆರಾಧಕಿಯಾಗಿದ್ದಳು. ಅವಳು ತನ್ನ ಅರಮನೆಯಲ್ಲಿ ಭಾರೀ ಗಾತ್ರದ ಹೆಬ್ಬಾವುಗಳನ್ನು ಸಾಕಿ, ಅವುಗಳನ್ನು ಪೂಜಿಸುತ್ತಿದ್ದಳು ಎಂದು ಇತಿಹಾಸಕಾರರು ಹೇಳುತ್ತಾರೆ. ಅವಳ ಪೂಜಾ ವಿಧಾನಗಳು ಭಾರತೀಯ ವಿಧಿವಿಧಾನಗಳನ್ನು ಬಹಳಷ್ಟು ಹೋಲುತ್ತಿದ್ದವು. ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಸರ್ಪಾರಾಧನೆ ಗ್ರೀಕ್ ದೇಶಕ್ಕೂ ಹಬ್ಬಿತ್ತು ಎಂದು ಇದರಿಂದ ತಿಳಿಯ ಬಹುದು. ಒಲಂಪಿಯಾಳ ವಿಪರೀತ ಸರ್ಪಾರಾಧನೆ ಅವಳ ಗಂಡ ಫಿಲಿಪ್ ಗೆ ಸರಿಕಾಣುತ್ತಿರಲಿಲ್ಲ. ಇದೇ ಕಾರಣದಿಂದ ಅವರ ನಡುವೆ ವಿರಸವಾಗಿ ನಂತರ ಅದು ವಿಚ್ಚೇದನದಲ್ಲಿ ಕೊನೆಯಾಯಿತು. ಮುಂದೆ ಭವಿಷ್ಯದಲ್ಲಿ ಫಿಲಿಪ್ ಕೊಲೆಯಾದಾಗ ಬಹಳಷ್ಟು ಮಂದಿ ಇದರ ಹಿಂದೆ ಒಲಂಪಿಯಾಳ ಕೈವಾಡ ಇದೆ ಎಂದೇ ನಂಬಿದ್ದರು. 

ಅಲೆಕ್ಸಾಂಡರ್ ಬಾಲ್ಯದಿಂದಲೂ ಯುದ್ಧ ಕಲೆಯಲ್ಲಿ ಆಸಕ್ತಿ ಹೊಂದಿದ್ದ. ಯಾರಿಂದಲೂ ಪಳಗಿಸಲಾಗದ ಎತ್ತರವಾದ ಬೂಕೆ ಫಾಲಸ್ ಎಂಬ ಯುದ್ಧ ಕುದುರೆಯನ್ನು ಅವನು ಸವಾರಿ ಮಾಡಿದ್ದ. ತನ್ನ ೧೯ನೇ ವಯಸ್ಸಿನಲ್ಲೇ ತಂದೆಗೆ ಅವರ ಶತ್ರುಗಳನ್ನು ಹಿಮ್ಮೆಟ್ಟಿಸುವುದರಲ್ಲಿ ಸಹಾಯ ಮಾಡಿದ್ದ. ಪ್ರಾಚೀನ ಗ್ರೀಸ್ ನಾಗರಿಕತೆಯ ಕಾಲದಲ್ಲಿ ಪರ್ಶಿಯಾ ಸಾಮ್ರ್ಯಾಜ್ಯ (ಇರಾನ್) ಗ್ರೀಸ್ ಗಡಿಯಿಂದ ಸಿಂಧ್ ಪ್ರಾಂತ್ಯದವರೆಗೂ ಹಬ್ಬಿತ್ತು. ಆ ಸಮಯದಲ್ಲಿ ಪರ್ಶಿಯನ್ ಚಕ್ರವರ್ತಿಗಳಾಗಿದ್ದ ಇಬ್ಬರು ಗ್ರೀಸ್ ಮೇಲೆ ಆಕ್ರಮಣ ಮಾಡಿದ್ದರು. ಆದರೆ ಅವರ ಈ ದಾಳಿ ವಿಫಲವಾಗಿತ್ತು, ಆದರೆ ಇವರ ದಾಳಿಯಿಂದ ಗ್ರೀಸ್ ನ ರಾಜಧಾನಿಯಾಗಿದ್ದ ಅಥೆನ್ಸ್ ನಗರ ಸುಟ್ಟು ನಾಶವಾಗಿ ಹೋಗಿತ್ತು. ಇದರಿಂದ ಕ್ರೋಧಕೊಂಡ ಫಿಲಿಪ್ ತನ್ನ ಸಾಮ್ರಾಜ್ಯದ ಸಣ್ಣ ಪುಟ್ಟ ರಾಜರನ್ನು ಒಳಗೊಂಡ ಒಂದು ಅಖಂಡ ಗ್ರೀಸ್ ಸೈನ್ಯವನ್ನು ಒಗ್ಗೂಡಿಸಿ ಪರ್ಶಿಯಾದ ಮೇಲೆ ಯುದ್ಧಕ್ಕೆ ಅಣಿಯಾಗುತ್ತಿರುವಾಗಲೇ ಕೊಲೆಯಾಗಿ ಹೋದ. ನಾಯಕನಿಲ್ಲದ ಗ್ರೀಕ್ ಸೈನ್ಯವನ್ನು ಹದಿಹರೆಯದ ಕೇವಲ ೨೨ ವರ್ಷ ಪ್ರಾಯದ ಅಲೆಕ್ಸಾಂಡರ್ ಮುನ್ನಡೆಸಲು ಮುಂದಾದಾಗ ಹಲವಾರು ಮಂದಿ ಅವನ ಸಾಮರ್ಥ್ಯದ ಬಗ್ಗೆ ಅಪಸ್ವರ ಎತ್ತಿದ್ದರು. ಆದರೆ ತನ್ನ ಅಪ್ರತಿಮ ಶೌರ್ಯದಿಂದ ಆ ವಿರೋಧಿ ಗ್ರೀಕ್ ಸಾಮಂತರನ್ನು ಸದೆಬಡಿದು ಅವರನ್ನು ನಿರ್ನಾಮ ಮಾಡಿದ್ದ ಅಲೆಕ್ಸಾಂಡರ್. ಲಕ್ಷಾಂತರ ಸೈನಿಕರನ್ನು ಹೊಂದಿದ್ದ ಪರ್ಶಿಯಾ ಸಾಮ್ರಾಜ್ಯವನ್ನು ತನ್ನ ೪೫ ಸಾವಿರ ಸೈನಿಕರ ಸಹಾಯದಿಂದ ಸದೆಬಡಿದು ಅಪಾರವಾದ ಸಂಪತ್ತನ್ನು ವಶಪಡಿಸಿಕೊಂಡನು.

ವಿಶ್ವ ದಂಡಯಾತ್ರೆಯ ಕನಸಿನಲ್ಲಿ ಕ್ರಿ.ಪೂ.೩೭೨ರಲ್ಲಿ ಅಫಘಾನಿಸ್ತಾನದ ಮೂಲಕ ಭಾರತ ಪ್ರವೇಶಿಸಿದ ಅಲೆಕ್ಸಾಂಡರ್ ತನ್ನ ದಂಡಯಾತ್ರೆಯನ್ನು ತಕ್ಷಶಿಲೆಯ ನಗರದ ರಾಜ ಅಂಬೇಶನನ್ನು ಸೋಲಿಸುವ ಮೂಲಕ ಪ್ರಾರಂಭಿಸಿದ. ಮುಂದಿನ ದಿನಗಳಲ್ಲಿ ಅಂಬೇಶ ಅಲೆಕ್ಸಾಂಡರನ ಸಾಮಂತ ರಾಜನಾದ. 

ತಕ್ಷಶಿಲೆಯಲ್ಲಿ ಅಲೆಕ್ಸಾಂಡರನಿಗೆ ಓರ್ವ ಹಿಂದೂ ಯೋಗಿಯ ಪರಿಚಯವಾಗುತ್ತದೆ. ಅವನ ಹೆಸರೇ ಫಣೀಶ. ಮುಂದಿನ ದಿನಗಳಲ್ಲಿ ಗ್ರೀಕರು ಅವನನ್ನು ಕ್ಯಾಲನೋಸ್ ಎಂದು ಕರೆದರು. ಫಣೀಶ ಯಾರನ್ನು ಭೇಟಿಯಾದರೂ ‘ಜೈ ಕಾಳಿ' ಎಂಬ ಘೋಷ ವಾಕ್ಯದೊಡನೆಯೇ ಎದುರುಗೊಳ್ಳುತ್ತಿದ್ದ. ಅಲೆಕ್ಸಾಂಡರ್ ಈ ಹಿಂದೂ ಯೋಗಿಯ ವರ್ಚಸ್ಸಿಗೆ ಹಾಗೂ ಪಾಂಡಿತ್ಯಕ್ಕೆ ಮಾರುಹೋದ. ಅಲೆಕ್ಸಾಂಡರ್ ತನ್ನ ಮಹಾ ಸಾಮ್ರಾಜ್ಯವನ್ನು ಯುರೋಪಿನ ದಾನೂಬ್ ಮತ್ತು ಈಜಿಪ್ಟ್ ನ ನೈಲ್ ನದಿಯಿಂದ ಪಂಜಾಬಿನ ಸಿಂಧೂ ನದಿಯವರೆಗೂ ವ್ಯಾಪಿಸಿದ. ಅಷ್ಟು ವಿಸ್ತಾರವಾದ ಸಾಮ್ರಾಜ್ಯಕ್ಕೆ ಎಲ್ಲಿ ರಾಜಧಾನಿ ಮಾಡಬೇಕು ಎಂಬ ಪ್ರಶ್ನೆ ಅಲೆಕ್ಸಾಂಡರ್ ಮನದಲ್ಲಿ ಕೊರೆಯುತ್ತಿತ್ತು. ಯೋಗಿ ಕ್ಯಾಲನೋಸ್ (ಫಣೀಶ) ಬಳಿ ಕೇಳಿದಾಗ ಅವರು ತಮ್ಮ ಕೃಷ್ಣಾಜಿನವನ್ನು ನೆಲದ ಮೇಲೆ ಹಾಸಿ ಅದರ ಒಂದು ಅಂಚಿನಲ್ಲಿ ನಿಂತರು. ತಕ್ಷಣ ಕೃಷ್ಣಾಜಿನದ ಇತರ ಮೂಲೆಗಳು ಮೇಲೆದ್ದವು. ಅದರ ನಂತರ ಅವರು ಕೃಷ್ಣಾಜಿನದ ನಡುವೆ ಬಂದು ನಿಂತಾಗ ಎಲ್ಲಾ ಮೂಲೆಗಳು ಹರಡಿಕೊಂಡು ಯಥಾ ಸ್ಥಾನ ಸೇರಿಕೊಂಡವು. ಕೃಷ್ಣಾಜಿನ ಸಮಾನವಾಗಿ ಎಲ್ಲೆಡೆ ಹರಡಿಕೊಂಡಿತು. ಇದರಿಂದ ಅಲೆಕ್ಸಾಂಡರ್ ತನ್ನ ಸಾಮ್ರಾಜ್ಯದ ರಾಜಧಾನಿಯನ್ನು ಮಧ್ಯದಲ್ಲಿ ಸ್ಥಾಪಿಸಬೇಕು ಎಂದು ಅರಿತುಕೊಂಡನು. ಪುರೂರವನ ಜೊತೆಗಿನ ಯುದ್ಧದ ಬಳಿಕ ಅಲೆಕ್ಸಾಂಡರನ ಸೈನಿಕರು ತುಂಬಾನೇ ಬಸವಳಿದಿದ್ದರು. ನಿರಂತರ ಯುದ್ಧದಿಂದ ಅವರಿಗೆ ತುಂಬಾನೆ ಸಾಕಾಗಿತ್ತು. ತಮ್ಮ ಮನೆಗೆ ತೆರಳಲು ಅವರೆಲ್ಲಾ ಬಯಸುತ್ತಿದ್ದರು. ಅವರೆಲ್ಲರ ಆಶಯದಂತೆ ಅಲೆಕ್ಸಾಂಡರನು ಕ್ರಿ.ಪೂ. ೩೨೫ರಲ್ಲಿ ಭಾರತದಿಂದ ನಿರ್ಗಮಿಸುತ್ತಾನೆ. ಆದರೆ ಹೊರಡುವ ಸಮಯದಲ್ಲಿ ಅವನ ಹಿಂದೂ ಗುರು ಫಣೀಶರನ್ನು ತನ್ನ ಜೊತೆ ಬರಲು ತಿಳಿಸಿದ್ದ. ಅದರನ್ನು ಒಪ್ಪಿಕೊಂಡ ಫಣೀಶ ಅಲೆಕ್ಸಾಂಡರ್ ಜೊತೆ ಯುರೋಪಿನತ್ತ ಪ್ರವಾಸ ಬೆಳೆಸಿದ. ಆದರೆ ಮಾರ್ಗ ಮಧ್ಯೆ ಗ್ರೀಕ್ ಆಕ್ರಮಿತ ಪರ್ಶಿಯಾದ ಇಸ್ಯುಸಾ ನಗರ ತಲುಪಿದಾಗ ಫಣೀಶನ ಆರೋಗ್ಯ ಹದಗೆಟ್ಟಿತು. ಇನ್ನು ಬದುಕುವುದಿಲ್ಲ ಎಂದು ತಿಳಿದಾಗ ಅವರು ಅಗ್ನಿ ಪ್ರವೇಶ ಮಾಡಿ ಮೋಕ್ಷ ಹೊಂದುವುದಾಗಿ ಅಲೆಕ್ಸಾಂಡರನಿಗೆ ತಿಳಿಸುತ್ತಾರೆ.

ಅಲೆಕ್ಸಾಂಡರನಿಗೆ ತನ್ನ ಗುರುಗಳಾದ ಫಣೀಶರ ಮೇಲೆ ಅಪಾರ ಗೌರವಾದರಗಳಿದ್ದವು. ಅದಕ್ಕಾಗಿ ಅವನು ಅವರನ್ನು ಅಗ್ನಿ ಪ್ರವೇಶ ಮಾಡಬೇಡಿ ಎಂದು ಪರಿ ಪರಿಯಾಗಿ ವಿನಂತಿಸುತ್ತಾನೆ. ಆದರೆ ಗುರು ಫಣೀಶರು ತಮ್ಮ ಯೋಜನೆಯನ್ನು ಬದಲಾಯಿಸಲು ಒಪ್ಪುವುದಿಲ್ಲ. ಮರುದಿನ ಬೆಳಿಗ್ಗೆ ಗುರುಗಳಿಗಾಗಿ ಚಿತೆಯು ಸಿದ್ಧವಾಗುತ್ತದೆ. ಆ ಚಿತೆಯ ಬಳಿಗೆ ಬಂದಾಗ ಗುರುಗಳು ಅಲೆಕ್ಸಾಂಡರನ್ನು ಉದ್ದೇಶಿಸಿ ಒಂದು ಮಾತು ಹೇಳುತ್ತಾರೆ. ‘ ನಾನು ಆರು ತಿಂಗಳ ಬಳಿಕ ಬೆಬಿಲಾನ್ ನಗರದಲ್ಲಿ ನಿನ್ನನ್ನು ಭೇಟಿಯಾಗುತ್ತೇನೆ’. ಈ ಮಾತಿನಿಂದ ಎಲ್ಲರೂ ಚಕಿತರಾಗುತ್ತಾರೆ. ನಂತರ ಯೋಗಿಯು ಅಗ್ನಿ ಪ್ರವೇಶ ಮಾಡುತ್ತಾರೆ. ಕೆಲವೇ ಕ್ಷಣಗಳಲ್ಲಿ ಅವರ ಶರೀರ ಅಗ್ನಿಗೆ ಆಹುತಿಯಾಗುತ್ತದೆ. ಈ ವಿಷಯವನ್ನು ಗ್ರೀಕ್ ಇತಿಹಾಸಕಾರ ಪ್ಲುಟಾರ್ಕ್ ತಮ್ಮ ಚರಿತ್ರೆಯಲ್ಲಿ ಬರೆದಿದ್ದಾರೆ.

ಗುರುಗಳನ್ನು ಕಳೆದುಕೊಂಡು ಭಾರೀ ಬೇಸರದಿಂದ ಅಲೆಕ್ಸಾಂಡರ್ ತನ್ನ ಸೇನೆಯ ಜೊತೆ ಈಗಿನ ಇರಾಕ್ ಪ್ರದೇಶದಲ್ಲಿರುವ ಬೆಬಿಲಾನ್ ಪಟ್ಟಣಕ್ಕೆ ತಲುಪಿದ. ಆಗಲೇ ಯೋಗಿ ನಿಧನಹೊಂದಿ ಸರಿಯಾಗಿ ಆರು ತಿಂಗಳುಗಳು ಕಳೆದಿತ್ತು. ಅಲೆಕ್ಸಾಂಡರ್ ಯೋಗಿಯನ್ನು ಅಪಾರವಾಗಿ ನಂಬಿದ್ದ. ಆ ಕಾರಣದಿಂದ ಬಿಬೆಲಾನ್ ನಗರದಲ್ಲಿ ಡೇರೆ ಹಾಕಿ ವಾಸ ಮಾಡತೊಡಗಿದ. ಆ ಸಂದರ್ಭದಲ್ಲೇ ಅವನಿಗೆ ತೀವ್ರವಾದ ಜ್ವರ ಕಾಣಿಸಿತು. ಯಾವ ಮದ್ದಿನಿಂದಲೂ ಗುಣವಾಗಲಿಲ್ಲ. ಮೂರು ವಾರಗಳ ಕಾಲ ನರಳಿ ತನ್ನ ೩೩ ನೇ ವಯಸ್ಸಿನಲ್ಲಿ ಅಲೆಕ್ಸಾಂಡರ್ ನಿಧನಹೊಂದಿದ. ಈ ರೀತಿಯಾಗಿ ಮರಣದ ನಂತರ ಯೋಗಿ ಫಣೀಶ್ ನನ್ನು ಸೇರಿಕೊಂಡ ಅಲೆಕ್ಸಾಂಡರ್ ತಮ್ಮ ಗುರುಗಳ ಮಾತನ್ನು ಸಾವಿನಲ್ಲಿ ಒಂದಾಗುವ ಮೂಲಕ ನಿಜ ಮಾಡಿದರು. ಹೀಗೆ ಆರು ತಿಂಗಳ ಬಳಿಕ ತಮ್ಮ ಗುರುಗಳು ಹೇಳಿದ ಮಾತಿನಂತೆ ಯಾರೂ ಊಹಿಸಲಾಗದ ರೀತಿಯಲ್ಲಿ ಅಲೆಕ್ಸಾಂಡರ್ ಅವರನ್ನು ಸೇರಿಕೊಂಡರು. ಇದರಿಂದ ಗುರು ಫಣೀಶ್ ಮಾತು ನಿಜವಾಗಿಯೂ ಕಾರ್ಯರೂಪಕ್ಕೆ ಬಂತು. ಎಷ್ಟೇ ಐಶ್ವರ್ಯ, ಸಾಮರ್ಥ್ಯ, ಸೈನ್ಯವಿದ್ದರೂ ಸಾವನ್ನು ಗೆಲ್ಲಲು ಸಾಧ್ಯವಿಲ್ಲ ಹಾಗೂ ಮರಣದ ನಂತರ ಯಾರಿಗೂ ಇಲ್ಲಿಂದ ಏನನ್ನೂ ತೆಗೆದುಕೊಂಡು ಹೋಗಲು ಆಗುವುದಿಲ್ಲ ಎಂದು ಅಲೆಕ್ಸಾಂಡರ್ ನಿಗೆ ಅರಿವಾಯಿತು. ಅದಕ್ಕಾಗಿಯೇ ಅವನು ತನ್ನ ಶವ ಪೆಟ್ಟಿಗೆಗೆ ಎರಡು ತೂತುಗಳನ್ನು ಮಾಡಿ ಖಾಲಿ ಕೈಗಳನ್ನು ಹೊರ ಚಾಚುವಂತೆ ಇಡಲು ಹೇಳಿದ್ದನಂತೆ. ಇದರಿಂದ ಮರಣದ ನಂತರ ಏನನ್ನೂ ತೆಗೆದುಕೊಂಡು ಹೋಗಲಾಗುವುದಿಲ್ಲ. ಬರಿಗೈಯಲ್ಲಿ ಭೂಮಿಗೆ ಬಂದು ಬರಿಗೈಯಲ್ಲೇ ಹೋಗಬೇಕು ಎಂದು ಜನರಿಗೆ ತಿಳುವಳಿಕೆ ಬರುವಂತೆ ಮಾಡಿದ.       

ಚಿತ್ರ ಕೃಪೆ: ಅಂತರ್ಜಾಲ ತಾಣ