ಅಲೆದಾಟದ ಅಂತರಂಗ
‘ಅಲೆದಾಟದ ಅಂತರಂಗ’ ಎನ್ನುವುದು ನವೀನಕೃಷ್ಣ ಎಸ್ ಉಪ್ಪಿನಂಗಡಿ ಇವರ ಪ್ರವಾಸ ಕಥನ. ನಮಗೆ ಗೊತ್ತಿಲ್ಲದ ಊರಿನ ವಿಶೇಷತೆಗಳನ್ನು ರೋಚಕವಾಗಿ ಹರಡುವ ನವೀನಕೃಷ್ಣ ಅವರ ಪ್ರವಾಸಕಥನಗಳು ಓದಲು ಬಹಳ ಸೊಗಸಾಗಿರುತ್ತವೆ. ಅವರೊಂದಿಗೆ ನಾವೂ ಪ್ರವಾಸ ಮಾಡುತ್ತಿದ್ದೇವೆ ಎನ್ನುವಷ್ಟು ಹಿತವಾಗಿರುತ್ತದೆ. ಈ ಪ್ರವಾಸ ಕಥನಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ವಿವೇಕಾನಂದ ಕಾಲೇಜು ಪುತ್ತೂರು ಇದರ ಕುಲ ಸಚಿವರಾದ ಡಾ. ಶ್ರೀಧರ್ ಎಚ್ ಜಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಶ್ರೀಯುತ ನವೀನಕೃಷ್ಣ ಎಸ್. ಉಪ್ಪಿನಂಗಡಿ ಇವರ ‘ಅಲೆದಾಟದ ಅಂತರಂಗ’ ದೇವರ ನಾಡಿಗೊಂದು ಪಯಣ ಎಂಬ ಪ್ರವಾಸ ಕಥನವು ಕೇರಳದ ಪ್ರಾಕೃತಿಕ ಸೌಂದರ್ಯವನ್ನು ಅನನ್ಯವಾದ ರೀತಿಯಲ್ಲಿ ಕಟ್ಟಿಕೊಡುತ್ತದೆ. ೨೦೨೪ರಲ್ಲಿ ‘ಹೆಜ್ಜೆ ಊರುವ ತವಕ’ ಎಂಬ ಪರಿಸರ ಸಂಬಂಧಿಯಾದ ಕೃತಿಯನ್ನು ನೀಡಿರುವ ಶ್ರೀಯುತ ನವೀನಕೃಷ್ಣ ಇವರು ಇನ್ನೊಂದು ಕೃತಿ ಪ್ರಕಟಣೆಗೆ ಅಣಿಯಾಗುತ್ತಿರುವುದು ಸಂತಸದ ವಿಷಯ.
“ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ” ಎಂಬ ಗಾದೆಗೆ ಸರಿಹೊಂದುವಂತೆ ಚಿಕ್ಕಪ್ಪನ ಮನೆಯವರು ಉತ್ತರ ಭಾರತದ ಭರತ್ ರಾಥೋಡ್ ಕುಟುಂಬದವರ ಜೊತೆಗೆ ದೇವರನಾಡು ಕೇರಳದಲ್ಲಿ ಪ್ರವಾಸ ಹೋಗುವುದಕ್ಕೆ ಆಹ್ವಾನಿಸಿದರು. ಚಿಕ್ಕಪ್ಪನ ಆಹ್ವಾನದಿಂದ ಉತ್ಸಾಹಗೊಂಡ ನವೀನಕೃಷ್ಣ ಇವರು ರೈಲಿನಲ್ಲಿ ಅಣ್ಣನ ಮನೆಯಿರುವ ಪಾಲಕ್ಕಾಡನ್ನು ತಲುಪುವರು. ಮರುದಿನದಿಂದ ಇವರ ನಿಜವಾದ ಪ್ರವಾಸ ಆರಂಭವಾಗುವುದು. ಮೂರು ಅಥವಾ ನಾಲ್ಕು ದಿನದ ಪ್ರವಾಸದ ಅನುಭವಗಳು ಒಂದು ಕೃತಿಯಾಗಿ ರೂಪುಗೊಂಡಿರುವುದು ನಿಜಕ್ಕೂ ಬೆರಗನ್ನು ಉಂಟುಮಾಡುತ್ತದೆ.
“ದೇಶ ತಿರುಗಿ ನೋಡು ಕೋಶ ಓದಿ ನೋಡು” ಎಂಬ ಮಾತು ಪ್ರವಾಸವನ್ನೇ ಕುರಿತು ಹೇಳಿದಂತೆ ಕಾಣುತ್ತದೆ. ಪ್ರವಾಸ ಸಾಹಿತ್ಯವು ಒಂದು ಪ್ರದೇಶದ ಪ್ರಾಕೃತಿಕ ಸಂಪತ್ತು, ಸಂಸ್ಕೃತಿಯ ವಿವರಗಳನ್ನು ಸಾಕಷ್ಟು ವಿವರವಾಗಿ ನೀಡುತ್ತದೆ. ಸಾಮಾನ್ಯವಾಗಿ ಪ್ರವಾಸ ಕಥನಗಳು ಗದ್ಯದಲ್ಲಿರುತ್ತವೆ. ಆದರೆ ವಿ.ಕೃ. ಗೋಕಾಕರ ‘ಸಮುದ್ರಗೀತೆಗಳು’ ಪದ್ಯದಲ್ಲಿದೆ ಎಂಬುದು ಗಮನಿಸಬೇಕಾದ ಅಂಶ. ಪ್ರತಿಯೊಬ್ಬ ವ್ಯಕ್ತಿಗೂ ಪ್ರವಾಸದ ಅನುಭವ ವ್ಯಕ್ತಿ ವಿಶಿಷ್ಟ ಮನೋಧರ್ಮಕ್ಕೆ ಅನುಗುಣವಾಗಿ ಇರುತ್ತದೆ. ತಮ್ಮ ಅನುಭವದಲ್ಲಿ ಸಾರ್ವತ್ರಿಕತೆ ಇರಬಹುದಾದರೂ ಅದರಲ್ಲಿಯೂ ವ್ಯಕ್ತಿವಿಶಿಷ್ಟ ಪ್ರತ್ಯೇಕತೆ ಇರುತ್ತದೆ.
ಕೃತಿಯ ಆರಂಭದಲ್ಲಿ ಪಾಲಕ್ಕಾಡ್ ಜಿಲ್ಲೆ, ಅಲ್ಲಿನ ಪ್ರಾಕೃತಿಕ ಸೌಂದರ್ಯ ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳನ್ನು ತಮ್ಮ ಪ್ರವಾಸಕ್ಕೆ ಹಿನ್ನೆಲೆಯಾಗಿ ದಾಖಲಿಸಿದ್ದಾರೆ. ಆರಂಭದಲ್ಲಿ ಮಲಂಪುಳ ಆಣೆಕಟ್ಟಿನ ವರ್ಣನೆ ಬರುತ್ತದೆ. ನವೀನ ಅವರು ಅತ್ಯಂತ ಸೂಕ್ಷ್ಮವಾಗಿ ನಿಸರ್ಗವನ್ನು ಗಮನಿಸುವ ಗುಣವನ್ನು ಹೊಂದಿದ್ದಾರೆ. “ಮಲಂಪುಳ ಅಣೆಕಟ್ಟಿನ ನಿರ್ಮಾಣ ಸ್ಥಳೀಯರಿಗೆ ಹಲವು ಪ್ರಯೋಜನಗಳನ್ನು ತಂದಿದೆ. ಆದರೆ ಇದು ಪರಿಸರದ ಮೇಲೆ ಸ್ವಲ್ಪ ಅಡ್ಡಪರಿಣಾಮವನ್ನೂ ಬೀರಿದೆ. ಜಲಾಶಯದ ರಚನೆಯಿಂದ ಸಹಜವಾಗಿ ಇಲ್ಲಿರುವ ಕೆಲವು ಪ್ರದೇಶಗಳು ಮುಳುಗಡೆಯಾದವು. ಇದು ಸ್ಥಳೀಯ ಮರ, ಸಸ್ಯ ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರಿತು. ಅರಣ್ಯೀಕರಣ ಮತ್ತು ಸಂರಕ್ಷಣಾ ಕಾರ್ಯಕ್ರಮಗಳ ಮೂಲಕ ಈ ಪರಿಣಾಮಗಳನ್ನು ತಗ್ಗಿಸಲು ಪ್ರಯತ್ನ ಮಾಡಲಾಗಿದೆ. ಅಭಿವೃದ್ಧಿ ಬೇಕಿದ್ದರೆ ಒಂದಷ್ಟು ತ್ಯಾಗವೂ ಅನಿವಾರ್ಯವೇನೋ . . . !” ಲೇಖಕರ ಮಾತಿನಲ್ಲಿ ಅಭಿವೃದ್ಧಿ ಮತ್ತು ಪರಿಸರದ ನಡುವಣ ಸಂಘರ್ಷ ಮತ್ತು ಸಂಬಂಧದ ವಿವರಣೆ ಮಲಂಪುಳ ಅಣೆಕಟ್ಟು ಲೇಖನದಲ್ಲಿದೆ. ಕೃತಿಯಲ್ಲಿ ಪ್ರವಾಸದ ಸಮಯದಲ್ಲಿ ಸಿಗುವ ಇನ್ನಿತರ ಅಣೆಕಟ್ಟುಗಳಾದ ತುಂಬೂರ್ಮೊಳಿ ಅಣೆಕಟ್ಟು, ಮಟ್ಟುಪೆಟ್ಟಿ ಅಣೆಕಟ್ಟುಗಳ ಬಗೆಗೆ ವಿವರಗಳು ದೊರೆಯುತ್ತವೆ.
ಲೇಖಕರಿಗೆ ಅತ್ಯಂತ ಇಷ್ಟವಾದ ಇನ್ನೊಂದು ಆಸಕ್ತಿಯ ವಿಷಯ ಜಲಪಾತಗಳು. ದೇವರನಾಡು ಕೇರಳದಲ್ಲಿ ಹಲವು ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇವುಗಳಲ್ಲಿ ಅದಿರಪ್ಪಳ್ಳಿ ಜಲಪಾತವನ್ನು ಲೇಖಕರು 'ಭಾರತದ ನಯಾಗರ' ಎಂದು ಕರೆಯುತ್ತಾರೆ. ಚಾರ್ಪಾ ಜಲಪಾತ, ವಳಾಚಲ್ ಜಲಪಾತದ ವಿವರಗಳನ್ನು ನೋಡಬಹುದು. ಲೇಖಕರು ಜಲಪಾತವನ್ನು ಮಾತ್ರ ವಣ ðಸುವುದಿಲ್ಲ. ಜಲಪಾತಕ್ಕೆ ಕಾರಣವಾದ ನದಿಯ ಹುಟ್ಟು, ನದಿಯ ಹುಟ್ಟಿಗೆ ಇರುವ ಐತಿಹ್ಯ, ಪುರಾಣದ ಕಥೆಗಳನ್ನು ಸ್ವಾರಸ್ಯಕರವಾಗಿ ವಿವರಿಸುತ್ತಾರೆ.
ಧಾರ್ಮಿಕವಾಗಿ ಕೇರಳದಲ್ಲಿ ಹಲವು ಪ್ರಸಿದ್ಧ ದೇಗುಲಗಳಿವೆ. ತ್ರಿಕ್ಕಣದೇವನ್ ದೇವಸ್ಥಾನ ಕಾಟುಶ್ಯೇರಿ, ತ್ರಿಶ್ಯೂರಿನ ವಡಕ್ಕುಂನಾಥನ್ ಕ್ಷೇತ್ರ, ಶ್ರೀಕಚನಂಕುಲಂ ತಿರುಪುರೈಕ್ಕಲ್ ಶಿವ ಕಣ್ಣಕಿ ಭಗವತಿ ಕ್ಷೇತ್ರ, ಅಂಬಲಪ್ಪುಳ ಶ್ರೀಕೃಷ್ಣಸ್ವಾಮಿ ದೇವಸ್ಥಾನಗಳ ಬಗೆಗೆ ಪರಿಚಯಾತ್ಮಕ ವಿವರಣೆಯಿದೆ. ದೇಗುಲಗಳಿಗೆ ಸಂಬಂಧಿಸಿ ಇರುವ ಸ್ವಾರಸ್ಯಕರ ಕಥೆಗಳನ್ನು ಪೂರಕವಾಗಿ ವಿವರಿಸುವುದು ಲೇಖಕರ ಸೂಕ್ಷ್ಮ ಗ್ರಹಿಕೆಯನ್ನು ಸೂಚಿಸುತ್ತದೆ. ತ್ರಿಶ್ಯೂರಿನ ಪೂರಮ್ ಉತ್ಸವದ ವಿವರಣೆಯು ಸಾಕಷ್ಟು ವಿವರವಾಗಿ ಬಂದಿದೆ. ಸೆಖೆಯ ನಾಡಿನಲ್ಲಿ ನಿರ್ಮಾಣವಾಗಿರುವ ಸ್ನೋಪಾರ್ಕ್ ನ ರೋಚಕ ಅನುಭವವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ತೆಂಗಿನ ರಾಜಧಾನಿ ಪೊಳ್ಳಾಚಿಯನ್ನು ವಿವರಿಸುವ ಸಂದರ್ಭದಲ್ಲಿ ಇದು ಬೆಲ್ಲ, ತರಕಾರಿ, ಹಾಲಿನ ಪ್ರಮುಖ ಉತ್ಪಾದನಾ ಕೇಂದ್ರ, ಮಾತ್ರವಲ್ಲ ಇದು ಏಷ್ಯಾದ ಅತಿದೊಡ್ಡ ಬೆಲ್ಲದ ಮಾರುಕಟ್ಟೆಗೆ ನೆಲೆಯಾಗಿದೆ ಎಂದು ಗುರುತಿಸುತ್ತಾರೆ.
ಅರಣ್ಯಗಳು ಲೇಖಕರ ಇನ್ನೊಂದು ಆಸಕ್ತಿಯ ಕ್ಷೇತ್ರ. ಕಾಡಿನಲ್ಲಿರುವ ಮರಗಳು, ಪಕ್ಷಿಗಳು, ಪ್ರಾಣಿಗಳು, ಉದ್ಯಾನವನಗಳಲ್ಲಿ ಕಾಣುವ ಚಿಟ್ಟೆಗಳನ್ನು ಅತ್ಯಂತ ಕುತೂಹಲದಿಂದ ಗಮನಿಸುತ್ತಾರೆ. ಉಡುಮಲೈಪೆಟ್ಟೈ ಅರಣ್ಯಗಳ ಹೆಬ್ಬಾಗಿಲು ಲೇಖನದಲ್ಲಿ ಇಲ್ಲಿನ ರಮಣೀಯ ಸೌಂದರ್ಯ, ಆಹ್ಲಾದಕರ ಹವಾಮಾನ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸುತ್ತಾರೆ. ವರ್ತಮಾನದಲ್ಲಿ ಇಲ್ಲಿ ಹಲವಾರು ಸಣ್ಣ ಮತ್ತು ಮಧ್ಯಮಗಾತ್ರದ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ, ಕೈಗಾರಿಕೀಕರಣದ ಕಡೆಗೆ ಈ ಊರು ಬದಲಾಗುತ್ತಿದೆ ಎಂದು ಗುರುತಿಸುತ್ತಾರೆ. ಅಣ್ಣಾಮಲೈ ಹುಲಿಸಂರಕ್ಷಿತ ಅರಣ್ಯ, ಚಿನ್ನಾರ್ ವನ್ಯಜೀವಿ ಅಭಯಾರಣ್ಯ, ಇರವಿಕ್ಕುಳಂ ರಾಷ್ಟ್ರೀಯ ಉದ್ಯಾನವನ, ಕಾರ್ಮಿಲಗಿರಿ ಬೊಟಾನಿಕಲ್ ಉದ್ಯಾನವನ, ಕಾರ್ಮೆಲಗಿರಿ ಆನೆ ಉದ್ಯಾನವನ, ಕೆ.ಎಫ್.ಡಿ.ಸಿ. ಪ್ಲೋರಿಕಲ್ಚರ್ ಸೆಂಟರ್ ಮುಂತಾದ ಲೇಖನಗಳು ಸಸ್ಯಸಂಪತ್ತಿನ ಬಗ್ಗೆ ಲೇಖಕರಿಗೆ ಇರುವ ಅದಮ್ಯ ಪ್ರೀತಿಯನ್ನು ಸೂಚಿಸುತ್ತದೆ. ಪ್ರಾಕೃತಿಕ ಸೌಂದರ್ಯವನ್ನು ವಣ ðಸುವ ಸಂದರ್ಭದಲ್ಲಿ ನವೀನ ಅವರ ಮನಸ್ಸು ಉತ್ಸಾಹದ ಬುಗ್ಗೆಯಾಗುತ್ತದೆ. ‘ಪ್ರವಾಸಿಗರ ಸ್ವರ್ಗ ಮುನ್ನಾರ್’ ಲೇಖನದ ನಾಲ್ಕು ಮಾತುಗಳನ್ನು ಇಲ್ಲಿ ಗಮನಿಸಬಹುದು.
“ಹಸುರು ಬೆಟ್ಟಗಳ ಮೇಲೆ ಕವಿಯುವ ಮಂಜು. ತಾಜಾ ಗಾಳಿ ಹೊರಸೂಸುವ ಚಹಾ ಪರಿಮಳ. ಅಸಂಖ್ಯ ಜಲಪಾತಗಳು ಹೊರಡಿಸುವ ದೊಡ್ಡ ಧ್ವನಿ. ಎಲ್ಲಿ ನೋಡಿದರೂ ಶೃಂಗಾರಗೊಂಡು ಅಪ್ರತಿಮ ಚೆಲುವೆಯರಂತೆ ನಿಂತ ಚಹಾತೋಟಗಳು. ಎತ್ತರೆತ್ತರ ಶಿಖರಗಳು ಆಕಾಶದತ್ತ ನಾಚಿ ಚುಂಬಿಸುತ್ತಿರುವಂತೆ ಕಾಣುವ ಭೂದೃಶ್ಯ. ಜೀವಂತ ಚಿತ್ರಕಲೆಯನ್ನೇ ನೋಡುತ್ತಿರುವಂತೆ ಭಾಸವಾಗುವ ಸೊಬಗಿನ ಪ್ರದೇಶಗಳು. ಪ್ರತೀ ನೋಟವೂ ನೀಡುವ ಅಪೂರ್ವ ದೃಷ್ಟಿಕೋನ ನೈಸರ್ಗಿಕ ಅದ್ಭುತಗಳೇ ಮೇಳೈಸಿರುವ ಇದು ಮುನ್ನಾರ್ !” ಇಲ್ಲಿನದು ಕಾವ್ಯಾತ್ಮಕ ಶೈಲಿ.
ಹೌಸ್‌ಬೋಟ್ ಎಂಬ ಅದ್ಭುತ ಅನುಭವ, ಸಂಜೆಯ ವೇಳೆಗೆ ಅಲೆಪ್ಪಿ ಬೀಚ್ ಎಂಬ ಲೇಖನಗಳು ಅತ್ಯಂತ ಲವಲವಿಕೆಯಿಂದ ಓದಿಸಿಕೊಂಡು ಹೋಗುತ್ತದೆ. ತಮ್ಮ ಲೇಖನದ ನಡುವೆ ಸಾಂದರ್ಭಿಕವಾಗಿ ಸರಿಹೊಂದುವ ಕನ್ನಡ ಕವಿಗಳ ಸಾಲುಗಳನ್ನು ಉಲ್ಲೇಖಿಸುವುದು ಲೇಖಕರಿಗಿರುವ ಸಾಹಿತ್ಯ ಬಗೆಗಿನ ಅಭಿರುಚಿಯನ್ನು ಸೂಚಿಸುತ್ತದೆ. ಕೃತಿಯ ಕೊನೆಯಲ್ಲಿ ಬರುವ ಈಶಾ ಯೋಗಕೇಂದ್ರ, ಲೇಖನದಲ್ಲಿ ಅಲ್ಲಿನ ಸಂಪ್ರದಾಯ, ಆಚರಣೆಗಳ ಸಮಗ್ರ ವಿವರಗಳಿವೆ.
ಇಡಿಯಾಗಿ ಕೃತಿಯನ್ನು ಗಮನಿಸಿದರೆ ಲೇಖಕರ ಸೂಕ್ಷ್ಮಗ್ರಹಿಕೆ, ಪರಿಸರದ ಮೇಲಿನ ಪ್ರೀತಿ ನಿಚ್ಚಳವಾಗಿ ಕಾಣುತ್ತದೆ. ಇದೇ ಹೊತ್ತಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾದಂತೆಲ್ಲ ಪರಿಸರದ ಮೂಲಸ್ವರೂಪಕ್ಕೆ ಧಕ್ಕೆಯಾಗುತ್ತಿರುವುದರ ಬಗೆಗೆ ಲೇಖಕರಿಗೆ ವಿಷಾದವಿದೆ. ಕೇರಳದ ಪಾಲಕ್ಕಾಡ್ ಪರಿಸರದ ಸಮಗ್ರ ಚಿತ್ರಣ ಈ ಕೃತಿಯಲ್ಲಿ ಸಿಗುತ್ತದೆ.
ಒಂದು ಸ್ಥಳೀಯ ಸಂಸ್ಕೃತಿ, ಪ್ರಾದೇಶಿಕ ಪರಿಸರವನ್ನು ಹೇಗೆ ಗಮನಿಸಬಹುದು ಎಂಬುದಕ್ಕೆ 'ಅಲೆದಾಟದ ಅಂತರಂಗ' ಒಂದು ಉತ್ತಮ ಮಾದರಿ ಕೃತಿ ಎಂಬುದರಲ್ಲಿ ಸಂಶಯವಿಲ್ಲ. ಈ ಕೃತಿ ಕೇವಲ ಒಂದು ಪ್ರದೇಶದ ವಿವರಗಳನ್ನು ಕಟ್ಟಿಕೊಡುವುದಿಲ್ಲ; ಬದಲಾಗಿ ಒಂದು ನಾಡಿನ ಸಾಂಸ್ಕೃತಿಕ ಆತ್ಮವನ್ನು ನಮ್ಮೆದುರು ತೆರೆದಿಡುತ್ತದೆ. ಅಭಿವೃದ್ಧಿ, ಪ್ರಕೃತಿ ಮತ್ತು ಮಾನವನ ನಡುವೆ ಇರಬೇಕಾದ ಸಂಬಂಧದ ಸೂಕ್ಷ್ಮಗಳನ್ನು ಕಥನದ ರೀತಿಯಲ್ಲಿ ತೆರೆದಿಡುತ್ತದೆ. ಕನ್ನಡ ಪ್ರವಾಸ ಸಾಹಿತ್ಯದ ವೈವಿಧ್ಯ ಮತ್ತು ಸತ್ವವನ್ನು ಇಂಥ ಕೃತಿಗಳು ಹೆಚ್ಚಿಸಿವೆ. ಆಧುನಿಕ ಕನ್ನಡ ಸಾಹಿತ್ಯದ ವೈವಿಧ್ಯವನ್ನು ಹೆಚ್ಚಿಸುವಲ್ಲಿ ಪ್ರವಾಸ ಸಾಹಿತ್ಯದ ಕೊಡುಗೆಯೂ ಇದೆ ಎಂದು ಧಾರಾಳವಾಗಿ ಹೇಳಬಹುದು.”