ಅಲೋಕ (5) - ವೈತರಣೀ ದಡದಲ್ಲಿ
ಅಲೋಕ (5) - ವೈತರಣೀ ದಡದಲ್ಲಿ
ಕತೆ : ಅಲೋಕ
"ಬಾ" ಎನ್ನುವಂತೆ ಹೊರಗೆ ಕರೆದುಕೊಂಡು ಹೋದ.
ಶಾಂತನಾಗಿ ಅವನ ಹಿಂದೆ ನಡೆದೆ. ನನಗೆ ಅರಿವಿಲ್ಲದೆ ನನ್ನೊಳಗಿನ ಕೋಪ ನಾಶವಾಗಿ ಹೋಗಿತ್ತು. ಮನವನ್ನು ಯಾವುದೋ ನಿರಾಸಕ್ತಿ ಆವರಿಸಿತ್ತು. ಹೊರಗೆ ಕರೆದೋಯ್ದ ಅವನು ವಿಶಾಲ ಆವರಣ ಒಂದನ್ನು ಪ್ರವೇಶಿಸಿದ. ನಾನೀಗ ಮತ್ತೊಬ್ಬ ವ್ಯಕ್ತಿಯ ಎದುರಿಗೆ ನಿಂತಿದ್ದೆ.
"ನಿಮಗೀಗ ಮತ್ತೊಂದು ಕರ್ತವ್ಯ ಕಾದಿದೆ" ಆತ ನುಡಿದ.
"ಏನು" ಅನ್ನುವ ಕುತೂಹಲವು ನನ್ನಲ್ಲಿ ಹೊರಟುಹೋಗಿತ್ತು.
"ಹೇಳಿ" ಅನ್ನುವಂತೆ ಅವನ ಮುಖ ನೋಡಿದೆ. ಮಾತನಾಡಲು ಆಗದಂತೆ ನನ್ನ ನಾಲಿಗೆ ಕಿತ್ತುಹಾಕಿದ್ದರಲ್ಲ !
ಅವನು ನಿರ್ಲಿಪ್ತನಾಗಿ ನುಡಿದ
"ಇಲ್ಲಿ ಬಟ್ಟೆಗಳ ರಾಶಿ ಬಿದ್ದಿದೆ. ಅವೆಲ್ಲ ಇಲ್ಲಿರುವವರು ಉಪಯೋಗಿಸುವಂತದ್ದು. ಹೊರಗೆ ಹೋದಲ್ಲಿ ಒಂದು ನದಿಯು ಹರಿಯುತ್ತಿದೆ. ಈ ಬಟ್ಟೆಗಳನ್ನೆಲ್ಲ ಹೊರಗೋಯ್ದು ಶುಭ್ರಗೊಳಿಸಿ ಆರಿಸಿ ಪುನಃ ಇಲ್ಲಿ ತಂದು ಜೋಡಿಸಬೇಕು"
ಅಲ್ಲಿ ಬಿದ್ದಿರಬಹುದಾದ ರಾಶಿ ರಾಶಿ ಬಟ್ಟೆಗಳನ್ನು ಗಮನಿಸಿದೆ. ಹಲವರ ಬಟ್ಟೆಗಳು, ಕೆಲವು ಸ್ತ್ರೀಯರು ಧರಿಸುವಂತಹ ಸೀರೆಯಂತಹ ವಸ್ತ್ರವೂ ಕಾಣಿಸಿತು. ತೀರ ಚಿಕ್ಕ ವಯಸಿನಲ್ಲಿ ಬಟ್ಟೆಗಳನ್ನು ಒಗೆಯುತ್ತಿದ್ದೆ ಅನ್ನುವದನ್ನು ಬಿಟ್ಟರೆ, ಬಟ್ಟೆ ಒಗೆದ ಅಭ್ಯಾಸವೇ ಇಲ್ಲ. ಎಂದಿಗೂ ಬಟ್ಟೆ ಒಗೆದವನಲ್ಲ.
"ಆಗಲಿ" ಎನ್ನುವಂತೆ ತಲೆ ಆಡಿಸಿದೆ. ಮೊದಲಾದರೆ ಉರಿದುಬೀಳುತ್ತಿದ್ದೆನೇನೊ, ಯಾರದ್ಯಾರದೋ ಬಟ್ಟೆಗಳನ್ನು ನಾನು ಏಕೆ ಒಗೆಯಬೇಕು. ಒಗೆಯಲು ನನಗ್ಯಾವ ಗ್ರಹಚಾರ ಎಂದು. ಮೌನವಾಗಿ ಒಂದಿಷ್ಟು ಬಟ್ಟೆಗಳನ್ನೆಲ್ಲ ಸೇರಿಸಿ ಗಂಟುಕಟ್ಟಿಕೊಂಡೆ. ಎತ್ತಿ ತಲೆಯಮೇಲಿರಿಸಿಕೊಂಡು ಅವನು ತೋರಿಸಿದ್ದ ಹೊರಬಾಗಿಲಿನ ಮೂಲಕ ನಡೆದೆ.
ದೂರದಲ್ಲಿ ನದಿಯೊಂದು ಹರಿಯುವುದು ಕಾಣಿಸಿತು. ಮಂದ ಬೆಳಕಿನಲ್ಲಿ ನದಿಯ ಪಾತ್ರದತ್ತ ನಡೆದೆ. ತೀರ ಹತ್ತಿರ ಹೋದವನು ನಿಬ್ಬೆರಗಾಗಿ ನಿಂತುಬಿಟ್ಟೆ
ನಾನು ನಿರೀಕ್ಷೆ ಮಾಡಿದಂತೆ ಅದು ಸಾದಾರಣ ನದಿ ಆಗಿರಲಿಲ್ಲ. ರಕ್ತದ ಕೆಂಪುಬಣ್ಣದಿಂದ, ರಕ್ತ ಮಾಂಸ ಮಜ್ಜೆ ಗಳಲ್ಲದೆ. ಮಲಮೂತ್ರಗಳು ತುಂಬಿ ಹರಿಯುತ್ತಿದ್ದ ಯಮಲೋಕದ ನದಿ. ನಮ್ಮ ಬದುಕಿನ ಎಲ್ಲ ಕಲ್ಮಶಗಳನ್ನು ಕೊಚ್ಚಿಕೊಂಡೊಯ್ಯುವ ನರಕದ ನದಿ ಎಂದು ಕರೆಯಲ್ಪಡುವ … ವೈತರಣೀ !
ಇಂತಹ ಬೀಭಿತ್ಸ ನದಿಯ ನೀರಿನಿಂದ ಬಟ್ಟೆಗಳನ್ನು ಶುಭ್ರಗೊಳಿಸುವದಾದರು ಹೇಗೆ ?. ಕೇಳುವದಾದರು ಯಾರನ್ನು ?. ನನಗೆ ಸಹಾಯ ಮಾಡುವಂತಹವರು ಇಲ್ಲಿ ಯಾರು ಇಲ್ಲ. ನನಗೆ ವಹಿಸಿರುವ ಕರ್ತವ್ಯ ನಾನು ಹೇಗೆ ಪೂರ್ಣಗೊಳಿಸಬಲ್ಲೆ ?.
ಏನು ತೋಚದವನಾಗಿ ಬಟ್ಟೆಯ ಗಂಟನ್ನು ಅಲ್ಲಿದ್ದ ಕಲ್ಲುಹಾಸಿನ ಮೇಲಿರಿಸಿದೆ. ಹಾಗೆಯೆ ಅಲ್ಲಿದ್ದ ಕಲ್ಲಿನ ಪಾವಟಿಗೆಗಳ ಮೇಲೆ ಕುಳಿತೆ. ಸ್ವಲ್ಪಕಾಲ ನದಿಯನ್ನೆ ದಿಟ್ಟಿಸುತ್ತಿದ್ದೆ ರೌದ್ರ! ಬೀಭಿತ್ಸ!!. ರಕ್ತ ! ಮಾಂಸ !! ದೇಹದ ಎಲ್ಲ ಕಲ್ಮಶಗಳು ಅಲ್ಲಿ ಪ್ರವಾಹರೂಪದಲ್ಲಿ ಹರಿಯುತ್ತಿತ್ತು. ಹಾಗೆ ಗಗನವನ್ನು ದಿಟ್ಟಿಸಿದೆ.
ಇಲ್ಲಿಯದೊಂದು ಸದಾ ವಿಚಿತ್ರ. ಸೂರ್ಯನ ಸುಳಿವೇ ಇಲ್ಲ, ಸೂರ್ಯ ಭೂಮಿಗೆ ಮಾತ್ರ ಮೀಸಲೇನೊ. ಆದರೆ ಸೂರ್ಯ ಇಲ್ಲದಿರುವಾಗಲು ಆಕಾಶದ ಎಲ್ಲ ಭಾಗದಲ್ಲು ಶುಭ್ರ ಬೆಳಕು ಹರಡಿತ್ತು. ಅಲ್ಲಿಯ ಬೆಳಕಿನ ಪ್ರಭೆ ಪ್ರತಿಫಲನ ರೂಪದಲ್ಲಿ ಎಲ್ಲಡೆಯು ಹರಡಿ ನದಿ ಹಾಗು ಸುತ್ತಮುತ್ತಲಿನ ಗುಡ್ಡ ನೆಲವೆಲ್ಲ ಬೆಳಗುತ್ತಿತ್ತು. ಅಲ್ಲಿ ಮಣ್ಣಿದೆಯೋ ಇಲ್ಲವೋ ತಿಳಿಯಲಿಲ್ಲ.
ನಾನಂತೂ ತೀರ ಏಕಾಂಗಿ ಆಗಿಹೋಗಿದ್ದೆ. ಮಾನಸಿಕವಾಗಿ ಆಯಾಸಗೊಂಡಿದ್ದೆ. ನಿಧಾನವಾಗಿ ಕಣ್ಣುಮುಚ್ಚಿದೆ.
ನನಗೆ ಆಶ್ಚರ್ಯವೆನಿಸುತ್ತ ಇತ್ತು. ಭೂಮಿಯಲ್ಲಿ ನದಿಗಳೆಲ್ಲ ಕಲ್ಮಶಗೊಂಡಿವೆ , ಆದರೂ ಸಹ ಅಲ್ಲಿಯ ನದಿಗಳ ನೀರು ಉಪಯೋಗಿಸಬಹುದಾದ ಮಟ್ಟದಲ್ಲಿಯೇ ಇವೆ . ಈ ಪಿತೃಲೋಕದ ನದಿಯ ನೀರೇಕೆ ಹೀಗೆ ಆಗಿದೆ ?. ಇಂತಹ ನೀರನ್ನು ಹೇಗೆ ಇಲ್ಲಿರುವ ಎಲ್ಲರೂ ಉಪಯೋಗಿಸುವರು?.
ಅಷ್ಟಕ್ಕೂ ಭೂಮಿಗೆ ನೀರುಬಂದಿದ್ದೆ ಈ ದೇವಲೋಕಗಳಿಂದ ಅಲ್ಲವೆ ?. ದೇವಗಂಗೆಯೇ ಅಲ್ಲವೇ ಭೂಮಿಗೆ ಹರಿದುಬಂದಿದ್ದು. ಗಂಗೆಯ ನೀರು ಹಿಮಾಲಯದಲ್ಲಿ ಇಂದಿಗೂ ಶುಭ್ರವೆ. ಹಾಗೆ ಕಾವೇರಿ ಸಹ ಸಾವಿರ ಸಾವಿರ ವರ್ಷಗಳಿಂದ ಹರಿಯುತ್ತಲೇ ಇದ್ದಾಳೆ. ಗಂಗಾ ಕಾವೇರಿ ಅನ್ನುವಾಗ ಅದೇಕೊ ಪೂಜಾ ಸಮಯದಲ್ಲಿ ಹೇಳುವ ಮಂತ್ರವೊಂದು ನೆನಪಿಗೆ ಬಂದಿತು
ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ!
ನರ್ಮದಾ ಸಿಂಧೂ ಕಾವೇರಿ ಜಲೇಸ್ಮಿನ್ ಸನ್ನಿಧೀಂ ಕುರು!!
ಯಾವತ್ತೂ ಈ ಮಂತ್ರದ ಅರ್ಥದ ಬಗ್ಗೆ ಚಿಂತಿಸಲು ಹೋಗಿರಲಿಲ್ಲ. ಈಗ ಅದೇಕೊ ಈ ಮಂತ್ರದ ಅರ್ಥವನ್ನು ಮನ ಯೋಚಿಸುತ್ತಿತ್ತು. ಅದೇಕೊ ಕಣ್ಣು ಮುಚ್ಚಿರುವಂತೆ ಈ ಮಂತ್ರವನ್ನು ಮನ ಪಠಿಸುತ್ತಲೇ ಇತ್ತು . ಪಠಿಸುತ್ತಲೇ ಅದರ ಅರ್ಥವನ್ನು ಸಹ ಮನನ ಮಾಡುತ್ತಿದೆ.
ಗಂಗಾ ಯಮುನಾ ಸರಸ್ವತಿ ನರ್ಮದಾ ಸಿಂಧೂ ಹಾಗು ಕಾವೇರಿ ಎನ್ನುವ ಸಪ್ತನದಿಯ ದೇವತೆಗಳೆ ನನ್ನ ಎದುರಿಗೆ ಇರುವ ಈ ಕಳಸಪಾತ್ರೆಯಲ್ಲಿರುವ ನೀರಿನಲ್ಲಿ ನೆಲೆನಿಂತು ನನ್ನ ಪೂಜೆಯನ್ನು ಪೂರ್ಣಗೊಳಿಸಿ, ಸಹಕರಿಸಿ.
ಬಹಳಹೊತ್ತಿನವರೆಗೂ ನನ್ನ ಈ ಮಂತ್ರಪಠಣ ಹಾಗು ಅದರ ಅರ್ಥ ಮನನದ ಕಾರ್ಯ ನಡೆದೇ ಇತ್ತು.
ಕಡೆಗೊಮ್ಮೆ ಕಣ್ಣು ತೆರೆದೆ. ಸುತ್ತಲಿನ ಬೆಳಕು ಜಾಸ್ತಿ ಆಗಿರುವಂತೆ ಅನ್ನಿಸಿತು. ಇಲ್ಲಿಯದು ಅದೊಂದೆ ವಿಚಿತ್ರ ಸುತ್ತಲಿನ ಬೆಳಕು ತನ್ನಷ್ಟೆ ತಾನೆ ಜಾಸ್ತಿ ಆಗುತ್ತ ಕಡಿಮೆ ಆಗುತ್ತ ಇರುತ್ತದೆ. ಒಳಗೆ ಸಹ ಅಲ್ಲಿ ಮಲಗಿರುವವವರ ಸೇವೆ ಮಾಡುತ್ತ ಇರುವಾಗ ಕೆಲವರ ಕಾಲು ಒತ್ತುವಾಗ ಬೆಳಕು ತಾನಾಗೆ ಜಾಸ್ತಿ ಆಗುತ್ತಿತ್ತು. ಈಗ ಸಹ ನಾನು ಕಣ್ಣು ಮುಚ್ಚಿ ತೆರೆದಾಗ ಹೆಚ್ಚಾದ ಬೆಳಕನ್ನು ಗಮನಿಸುತ್ತ ಅದೇಕೋ ನದಿಯತ್ತ ದಿಟ್ಟಿಸಿದೆ.
ಈಗ ಮತ್ತೆ ಬೆರಗಾಗುವ ಸರದಿ ನನ್ನದಾಗಿತ್ತು.
ರಕ್ತ ಮಾಂಸಗಳಿಂದ ತುಂಬಿ ಕೆಂಪುವರ್ಣದಿಂದ ಹರಿಯುತ್ತಿದ್ದ ವೈತರಣೀ ಈಗ ಶುಭ್ರವಾಗಿ ಹರಿಯುತ್ತಲಿದ್ದಳು. ನೀರು ಅದೆಷ್ಟು ಶುಭ್ರವೆಂದರೆ ಹತ್ತು ಅಡಿಗಳಿಗಿಂತ ಹೆಚ್ಚಿನ ಆಳದಲ್ಲಿ ಇರುವ ನೀರ ಕೆಳಗಿನ ನೆಲ ಸಹ ಬೆಳಕಿನಲ್ಲಿ ಕಾಣುತ್ತಿತ್ತು. ನೀರಿನ ತಳಭಾಗದಲ್ಲಿ ಹರಡಿದ ಬಿಳಿಯ ಮರಳಿನ ಕಣಗಳು ಸ್ಪಟಿಕದಂತೆ ಹೊಳೆಯುತ್ತಿದ್ದವು.
ನನಗೆ ಸಹಾಯ ಮಾಡಿದ ಅಗೋಚರ ಶಕ್ತಿಗೆ ಮನದಲ್ಲಿ ವಂದಿಸಿದೆ. ಬಟ್ಟೆ ಶುಭ್ರಗೊಳಿಸಲು ಸೋಪು ಮುಂತಾದ ವಸ್ತುಗಳ ಅವಶ್ಯಕತೆ ಇದೇ ಎಂದು ಅನ್ನಿಸಲೇ ಇಲ್ಲ. ಒಂದೊಂದೆ ಬಟ್ಟೆಯನ್ನು ನೀರಿನಲ್ಲಿ ಅದ್ಧಿ ತೆಗೆದು ಅಲ್ಲಿದ್ದ ಕಲ್ಲಿನ ಮೇಲೆ ಕಸಗುತ್ತ ಒತ್ತುತ್ತ ಜಾಲಾಡಿಸುತ್ತ ಬಟ್ಟೆಗಳನ್ನೆಲ್ಲ ಶುಭ್ರಗೊಳಿಸಿದೆ.
ಮಲಿನ ಬಟ್ಟೆಗಳೆಲ್ಲ ನೀರಿನಲ್ಲಿ ಅದ್ದಿ ತೆಗೆದಮಾತ್ರಕ್ಕೆ ಶುಭ್ರವಾಗಿ ಮಿನುಗುತ್ತಿದ್ದವು. ಹಾಗೆ ಪಾವಣಿಗೆಗಳ ಮೇಲೆ ಒಗೆದಬಟ್ಟೆಗಳನ್ನೆಲ್ಲ ಹರವಿ ಒಣಗಿಸಿದೆ. ಒಳಗೆ ಹೋಗಿ ಮತ್ತೆ ಮತ್ತೆ ಬಟ್ಟೆಗಳನ್ನು ಹೊತ್ತು ತಂದು ಅವುಗಳನ್ನು ಅದೇ ರೀತಿ ಶುಭ್ರಗೊಳಿಸಿ ಒಣಗಿಸಿ, ಮತ್ತೆ ಒಳಗೆ ತಂದು ಜೋಡಿಸುತ್ತಿದ್ದೆ. ಕಾಲದ ಕಡೆಗೆ ನನ್ನ ಗಮನವೇ ಇರಲಿಲ್ಲ . ಎಲ್ಲ ಬಟ್ಟೆಗಳನ್ನು ಶುಭ್ರಗೊಳಿಸಿ ಆಯಿತು ಅನ್ನುವಾಗ ತೃಪ್ತಿಯಿಂದ ನಿಂತೆ.
ಮುಂದುವರೆಯುವುದು
Comments
ಉ: ಅಲೋಕ (5) - ವೈತರಣೀ ದಡದಲ್ಲಿ
ಸೇವಾ ಕರ್ಮದಿಂದ ಕಶ್ಮಲವನ್ನು ತೊಳೆದು ತೊಲಗಿಸುತ್ತಿರುವಂತಿದೆ... ಅಭೌತಿಕ ಅಸ್ತಿತ್ವದ ಭೌತಿಕ ರೀತಿಯಂತದ್ದೆ ನಡುವಳಿಕೆಯನ್ನು ಊಹಿಸಿಕೊಳ್ಳಲು ತುಸು ಕಷ್ಟಕರವಾದರು ಕೌತುಕಮಯವಾಗಿದೆ. ಬಹುಶಃ ಸೂಕ್ಷ್ಮರೂಪವೆಂದು ಭಾವಿಸಿಕೊಂಡರೆ ತುಸು ಸುಲಭ ಗ್ರಹಿಕೆಗೆ ಸಿಗುತ್ತದೇನೊ... ಸಾಗಲಿ ಕಥನ...!
In reply to ಉ: ಅಲೋಕ (5) - ವೈತರಣೀ ದಡದಲ್ಲಿ by nageshamysore
ಉ: ಅಲೋಕ (5) - ವೈತರಣೀ ದಡದಲ್ಲಿ
ಸರ್
ಈ ಕತೆಗೆ ಯಾವುದೇ ಧರ್ಮ ಪುಸ್ತಕ ತರ್ಕದ ಆದಾರಗಳಿಲ್ಲ.ಕಲ್ಪನೆ ಅಷ್ಟೇ ಆಧಾರ.
ಸದ್ಯಕ್ಕೆ ನಿಮ್ಮ ಪ್ರಶ್ನೆಗೆ ಉತ್ತರ ಹೌದು.ಏಕೆಂದರೆ ಹಾಗಿಲ್ಲದಿದ್ದರೆ ಕತೆಯ ನಿರೂಪಣೆ ಸಾಧ್ಯವಿಲ್ಲ
ಸತ್ತಿರುವ ವ್ಯಕ್ತಿ ಯ ಕಥೆ ಇದು ಅಲ್ಲವೇ
In reply to ಉ: ಅಲೋಕ (5) - ವೈತರಣೀ ದಡದಲ್ಲಿ by partha1059
ಉ: ಅಲೋಕ (5) - ವೈತರಣೀ ದಡದಲ್ಲಿ
ಕಂಡವರು ಯಾರಿಹರು ಜೀವ ಚೇತನವ
ತರ್ಕವನೆ ಮಾಡುವರು ಅವಿನಾಶಿಯೆನ್ನುವರು |
ವಾದಗಳ ಮುಂದಿರಿಸಿ ವಿನಾಶಿಯೆಂದಿಹರು
ಅನುಭಾವಿ ತಿಳಿದಾನು ಉತ್ತರವ ಮೂಢ ||
In reply to ಉ: ಅಲೋಕ (5) - ವೈತರಣೀ ದಡದಲ್ಲಿ by nageshamysore
ಉ: ಅಲೋಕ (5) - ವೈತರಣೀ ದಡದಲ್ಲಿ
ನಾಗೇಶ್ ಸರ್ , ಈ ರೀತಿಯ ಪ್ರಶ್ನೆಗಳು ನನಗೆ ಎದುರಾಗುತ್ತಿವೆ.
ಕತೆಯನ್ನು ಕಲ್ಪನೆಯ ಆದಾರದಲ್ಲಿ ಅಷ್ಟೆ ಪ್ರಾರಂಭಿಸಿದೆ , ಈಗ ಎದುರಾಗಿತ್ತಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಮುಂದಿನ ಕಂತುಗಳಲ್ಲಿ ಉತ್ತರಿಸಲು ಪ್ರಯತ್ನಿಸುತ್ತೇನೆ.
ನಿಮ್ಮನ್ನೆಲ್ಲ ಓದಿ ಚಿಂತಿಸುವಂತೆ ಮಾಡುತ್ತಿದೆ ಅನ್ನುವುದು ಸಂತಸ
ವಂದನೆಗಳೊಡನೆ
ಪಾರ್ಥಸಾರಥಿ
ಉ: ಅಲೋಕ (5) - ವೈತರಣೀ ದಡದಲ್ಲಿ
ಪಾರ್ಥಸಾರಥಿಯವರಿಗೆ ವಂದನೆಗಳು
ಅಲೋಕದ ಈ ಕಂತನ್ನು ಇಂದು ನೋಡಿದೆ, ನಮ್ಮಲ್ಲಿ ಈಗ ಎರಡು ವಾರಗಳಿಂದ ಅಡ್ಡ ಮಳೆ ಗಾಳಿ ಗುಡುಗು ಸಿಡಿಲುಗಳ ಆರ್ಬಟ, ಮುಗಿಲಲ್ಲಿ ಒಂದು ಮಿಂಚು ಕಾಣಿಸಿದರೂ ಇಲ್ಲ ಕರೆಂಟ್, ಮುಂತಾದ ಕಾರಣಗಳಿಂದ ಸಂಪದದ ಓದು ಸಾಧ್ಯವಾಗಿರಲಿಲ್ಲ. ಇಂದು ಅಲೋಕದ ಈ ಕಂತಿನ ಜೊತೆಗೆ ಇನ್ನುಳಿದ ಅಂಕಣಗಳನ್ನು ಓದಿದೆ, ಬಹಳ ಅದ್ಭುತವಾಗಿ ಅತ್ಮ ಅಂತರಾಳವನ್ನು ಬಿಡಿಸಿಟ್ಟಿದ್ದೀರಿ, ಭಿನ್ನ ಶೈಲಿಯ ಬರಹ ಸರಳತೆ ಮತ್ತು ಅವುಗಳ ಗಹನತೆಗಳು ಬರಹಗಳನ್ನು ಉನ್ನತ ಸ್ಥಾನಕ್ಕೆರಿಸಿವೆ, ಉತ್ತಮ ಸರಣಿ ಬರಹ ನೀಡುತ್ತಿದ್ದೀರಿ ಧನ್ಯವಾದಗಳು
In reply to ಉ: ಅಲೋಕ (5) - ವೈತರಣೀ ದಡದಲ್ಲಿ by H A Patil
ಉ: ಅಲೋಕ (5) - ವೈತರಣೀ ದಡದಲ್ಲಿ
ಪಾಟೀಲ್ ಸರ್
ಈ ಸಾರಿಯ ಅಡ್ಡ ಮಳೆ ಗಾಳಿಗಳು ಎಲ್ಲ ಕಡೆಯೂ ತೊಂದರೆಯನ್ನೊಡ್ಡಿವೆ
ಅಲೋಕದ ಬಗ್ಗೆ ತಮ್ಮ ಅಭಿಪ್ರಾಯಕ್ಕೆ ನನ್ನ ವಂದನೆಗಳು
ಪಾರ್ಥಸಾರಥಿ
ಉ: ಅಲೋಕ (5) - ವೈತರಣೀ ದಡದಲ್ಲಿ
:) ಮುಂದುವರೆಯಲಿ.